ಪೇಜಾವರ ಶ್ರೀಗಳು ಕಲಿತ, ಅವರ ಹುಟ್ಟೂರು ರಾಮಕುಂಜದ ಹೆಮ್ಮೆಯ ಶಾಲೆ
100 ವರ್ಷಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಬೆಳಕು ನೀಡಿದ ವಿದ್ಯಾ ದೇಗುಲ
Team Udayavani, Nov 8, 2019, 5:32 AM IST
19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.
1919 ಶಾಲೆ ಆರಂಭ
ಪ್ರಸ್ತುತ 350 ಮಕ್ಕಳ ಕಲಿಕೆ
ಕಡಬ: ಯತಿ ಶ್ರೇಷ್ಠ ಉಡುಪಿಯ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಶ್ರೀಗಳ ಹುಟ್ಟೂರು ರಾಮಕುಂಜ. ಶ್ರೀಗಳು ತಮ್ಮ ಆರಂಭಿಕ ಶಿಕ್ಷಣವನ್ನು ಪಡೆದ, ಪ್ರಸ್ತುತ ಅವರದೇ ಅಧ್ಯಕ್ಷತೆಯಲ್ಲಿ ಮುನ್ನಡೆಯುತ್ತಿರುವ ರಾಮಕುಂಜದ ಶ್ರೀ ರಾಮಕುಂಜೇಶ್ವರ ಅನುದಾನಿತ ಸಂಸ್ಕೃತ ಹಿರಿಯ ಪ್ರಾಥಮಿಕ ಶಾಲೆ ಇದೀಗ ಶತಮಾನೋತ್ಸವವನ್ನು ಪೂರೈಸಿದ ಸಂಭ್ರಮದಲ್ಲಿದೆ. 100 ವರ್ಷಗಳ ಹಿಂದೆ ಸಂಸ್ಕೃತ ಶಿಕ್ಷಣಕ್ಕಾಗಿ ಬೆರಳೆಣಿಕೆಯ ವಿದ್ಯಾರ್ಥಿಗಳೊಂದಿಗೆ ಮುಷ್ಟಿ ಫಂಡ್ ಯೋಜನೆಯೊಂದಿಗೆ ಗುರುಕುಲ ಮಾದರಿಯಲ್ಲಿ ಶ್ರೀ ರಾಮಕುಂಜೇಶ್ವರ ದೇವಸ್ಥಾನದ ಗೋಪುರದಲ್ಲಿ ಆರಂಭವಾದ ಈ ವಿದ್ಯಾಲಯ ಸುಮಾರು 60 ವರ್ಷಗಳ ಕಾಲ ಅಲ್ಲಿಯೇ ಕಾರ್ಯ ನಿರ್ವಹಿಸಿತ್ತು. ರಾಮಕುಂಜದ ಈ ಶಾಲೆಯಲ್ಲಿ ವಿದ್ಯೆ ಕಲಿತ ಪೇಜಾವರ ಶ್ರೀಗಳು ವಿಶ್ವ ಪ್ರಸಿದ್ಧರಾಗಿದ್ದರೆ ಇನ್ನೂ ಹಲವರು ದೇಶ ವಿದೇಶಗಳಲ್ಲಿ ಉನ್ನತ ಉದ್ಯೋಗದಲ್ಲಿದ್ದಾರೆ. 27 ನಕ್ಷತ್ರಗಳಿಗೆ ಅನ್ವಯಿಸುವ ಔಷಧೀಯ ಗುಣಗಳ ವೃಕ್ಷಗಳನ್ನು ಹೊಂದಿರುವ ಈ ಶಾಲೆಯ ನಕ್ಷತ್ರವನ ಅತ್ಯಂತ ವಿಶಿಷ್ಟವಾಗಿದೆ.
ಪೇಜಾವರ ಶ್ರೀಗಳು ಕಲಿತ ಶಾಲೆ
ಶಾಲೆಯು ಶ್ರೀ ರಾಮಕುಂಜೇಶ್ವರ ದೇವಸ್ಥಾನದ ಗೋಪುರದಲ್ಲಿದ್ದಾಗ (1938) ಪೇಜಾವರ ಶ್ರೀಗಳು ಇಲ್ಲಿ ವೆಂಕಟ್ರಾಮ ಎನ್ನುವ ತಮ್ಮ ಪೂರ್ವಾಶ್ರಮದ ಹೆಸರಿನಲ್ಲಿ ಆರಂಭಿಕ ಶಿಕ್ಷಣ ಪಡೆದಿದ್ದರು. ಇಂದು ಬೃಹದಾಕಾರವಾಗಿ ಬೆಳೆದಿರುವ ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆಯಲ್ಲಿ ಪ್ರಾಥಮಿಕ ಶಿಕ್ಷಣದಿಂದ ಪದವಿ ತನಕ ಕನ್ನಡ ಹಾಗೂ ಆಂಗ್ಲ ಮಾಧ್ಯಮದಲ್ಲಿ 2,500ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ವಿವಿಧೆಡೆಯಿಂದ ಬಂದು ಶಿಕ್ಷಣ ಪಡೆಯುತ್ತಿದ್ದಾರೆ. ಇಲ್ಲಿ ಸುದೀರ್ಘ ಕಾಲ ಶಿಕ್ಷಕರಾಗಿ, ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಟಿ. ನಾರಾಯಣ ಭಟ್ ರಾಜ್ಯ, ರಾಷ್ಟ್ರಪ್ರಶಸ್ತಿ ಪುರಸ್ಕೃತರಾಗುವ ಮೂಲಕ ಶಾಲೆಯ ಹಿರಿಮೆಗೆ ಮತ್ತೂಂದು ಗರಿ ಮೂಡಿಸಿದವರು. ಕನ್ನಡ ಮಾಧ್ಯಮ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಭೀತಿಯನ್ನು ಎದುರಿಸುತ್ತಿರುವ ಇಂದಿನ ಕಾಲಘಟ್ಟದಲ್ಲಿ ಈ ಶಾಲೆಯಲ್ಲಿ ಇಂದಿಗೂ ಅತೀ ಹೆಚ್ಚು ವಿದ್ಯಾರ್ಥಿಗಳಿರುವುದು ಹೆಮ್ಮೆಯ ಸಂಗತಿ. ದ್ರಾವಿಡ ಬ್ರಾಹ್ಮಣ ವಿದ್ಯಾವರ್ಧಕ ಸಭಾದಿಂದ ಆರಂಭಗೊಂಡ ಈ ಶಾಲೆ ಕಾಲಕ್ಕೆ ತಕ್ಕಂತೆ ಹಂತ ಹಂತವಾಗಿ ಬೆಳೆದು ಬಂದು ಇಂದು ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾ ಎನ್ನುವ ನೋಂದಾಯಿತ ಸಂಸ್ಥೆಯ ಅಧೀನದಲ್ಲಿ ಶೈಕ್ಷಣಿಕ ಸೇವೆಯನ್ನು ಯಶಸ್ವಿಯಾಗಿ ನೀಡುತ್ತಾ ಮುನ್ನಡೆಯುತ್ತಿದೆ. ಆರಂಭಿಕ ತ್ರಾಸದ ದಿನಗಳಲ್ಲಿ ಸಂಸ್ಥೆಯ ಬೆಳವಣಿಗೆಗೆ ಶ್ರಮಿಸಿದ ಎರಟಾಡಿ, ಈರಕೀ ಮಠ, ಇಜ್ಜಾವು, ಅರ್ಬಿ, ಮೀಯಾಳ, ಕಲ್ಲೇರಿ ಮುಂತಾದ ಮನೆಗಳ ಹಿರಿಯರ ಸೇವೆ ಇಲ್ಲಿ ಉಲೇಖನೀಯ.
ಸೇವೆ ಸಲ್ಲಿಸಿದ ಶಿಕ್ಷಕರು
ಮುಖ್ಯಪ್ರಾಣ ತಂತ್ರಿ, ಅಲೆವೂರು ಸೀತಾರಾಮ ಆಚಾರ್, ಶ್ಯಾಮ ಪಾಂಗಣ್ಣಾಯ, ಶ್ರೀನಿವಾಸ ಶಾಸ್ತ್ರೀ, ಶಂಕರ ತೋಳ್ಪಾಡಿತ್ತಾಯ, ಕೇದಗೆ ನಾರಾಯಣ ಆಚಾರ್, ಅನಂತಕೃಷ್ಣ ಭಟ್ಟ 1950ರ ಮೊದಲು ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರೆ, ಬಳಿಕ ಕೆ. ಕೃಷ್ಣ ಉಪಾಧ್ಯಾಯ ಕೋಡಿಲ, ಎಂ. ಕೃಷ್ಣಾಚಾರ್ ಮರಕ್ಕೂರು, ಪಿ. ಮಹಾಬಲ ಭಟ್, ಕೆ. ರಾಮಕೃಷ್ಣ ಎಡಪಡಿತ್ತಾಯ, ಎಂ. ರಾಮಚಂದ್ರ ಆಚಾರ್ ಮರಕ್ಕೂರು, ಕೆ. ರಾಮ ಉಪಾಧ್ಯಾಯ ಕೋಡಿಲ, ಕೆ. ರಘುಪತಿ ಭಟ್ ಬೆದ್ರಮಾರ್, ಕೆ. ನರಸಿಂಹ ಆಚಾರ್, ಕೆ. ನಾರಾಯಣ ಆಚಾರ್, ಬಿ. ರಾಮರಾವ್, ಮೋಹನ ಶಬರಾಯ, ಗೋಪಾಲಕೃಷ್ಣ ಆಚಾರ್ ಕಾರ್ಕಳ, ವಿಷ್ಣುಮೂರ್ತಿ ಹೆಬ್ಟಾರ್, ನಾರಾಯಣ ಕಾರಂತ, ರಾಮಕೃಷ್ಣ ಕಾರಂತ, ಎಸ್. ಪದ್ಮನಾಭ ಕಲ್ಲೂರಾಯ, ಗೋಪಾಲಕೃಷ್ಣ ಶಗ್ರಿತ್ತಾಯ, ಇ. ರಮೇಶ ಉಪಾಧ್ಯಾಯ, ಎಂ. ನಾರಾಯಣ ಆಚಾರ್, ಸುಬ್ರಾಯ ಕಲ್ಲೂರಾಯ, ವೆಂಕಟ್ರಮಣ ಉಪಾಧ್ಯಾಯ, ಎಂ.ಜಿ. ವಸಂತಿ ಬಾೖ, ಕೆ. ನಾರಾಯಣ ಮುಚ್ಚಿಂತಾಯ, ಟಿ. ನಾರಾಯಣ ಭಟ್, ಸುಶೀಲಾ, ನಿರ್ಮಲಾ ದೇವಿ ಎಂ., ಸಂಧ್ಯಾ ಎಂ., ಇಂದಿರಾ, ರೇಖಾ ಎಸ್. ಹಾಗೂ ವೀರಪ್ಪ ಎಸ್.ವಿ. ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.
ಉತ್ತಮ ಶಿಕ್ಷಣದಿಂದ ಮಾತ್ರ ಸಂಸ್ಕಾರವಂತ ವ್ಯಕ್ತಿಗಳನ್ನು ರೂಪಿಸಲು ಸಾಧ್ಯ. ಪಟ್ಟಣ ಪ್ರದೇಶಕ್ಕೆ ಸರಿಸಾಟಿಯಾದ ಗುಣಮಟ್ಟದ ಶಿಕ್ಷಣದೊಂದಿಗೆ ಗ್ರಾಮೀಣ ಭಾಗದಲ್ಲಿ ಮೌಲ್ಯಾಧಾರಿತ ಮತ್ತು ಸಂಸ್ಕಾರಯುತ ಶಿಕ್ಷಣ ನೀಡುವ ಉದ್ದೇಶದಿಂದ ಆರಂಭಗೊಂಡ ಈ ಶಿಕ್ಷಣ ಸಂಸ್ಥೆಯು ಇಂದು ಎಲ್ಲರ ಸಹಕಾರದೊಂದಿಗೆ ಬೃಹದಾಕಾರವಾಗಿ ಬೆಳೆದು ಶತಮಾನೋತ್ಸವವನ್ನು ಸಂಭ್ರಮದಿಂದ ಆಚರಿಸಿಕೊಂಡಿರುವುದು ಸಂತಸದ ಸಂಗತಿ.
-ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಸಂಸ್ಥೆಯ ಅಧ್ಯಕ್ಷರು
ಹಳ್ಳಿಯ ಬಡ ಮಕ್ಕಳು ಕೂಡ ಕಡಿಮೆ ಖರ್ಚಿನಲ್ಲಿ ಗುಣಮಟ್ಟದ ಶಿಕ್ಷಣ ಪಡೆಯಬೇಕೆಂಬ ಪ್ರೇಜಾವರ ಶ್ರೀಗಳ ಆಶಯದಂತೆ ಕನ್ನಡ ಮಾಧ್ಯಮದಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ನಮ್ಮ ಶಾಲೆಯು ಶತಮಾನೋತ್ಸವ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಿದೆ. ಪ್ರೇಜಾವರ ಶ್ರೀಗಳಂತಹ ವಿಶ್ವಮಾನ್ಯರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಈ ಸಂಸ್ಥೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ಲಭಿಸಿರುವುದು ನಮ್ಮ ಪೂರ್ವ ಜನ್ಮದ ಪುಣ್ಯವೇ ಸರಿ.
-ಸುಶೀಲಾ, ಮುಖ್ಯಶಿಕ್ಷಕಿ
-ನಾಗರಾಜ್ ಎನ್.ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.