ಏರ್‌ಪೋರ್ಟ್‌ಗೆ ಕೆಎಸ್ಸಾರ್ಟಿಸಿ ಕಡತದಲ್ಲಿಯೇ ಬಾಕಿಯಾದ ಬಸ್ ಸೇವೆ !
Team Udayavani, Feb 17, 2020, 5:42 AM IST
ಮಹಾನಗರ: ರಾಜ್ಯದ ಎರಡನೇ ಅತೀ ದೊಡ್ಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾದ ಬಜಪೆಯ ಮಂಗಳೂರು ವಿಮಾನ ನಿಲ್ದಾಣಕ್ಕೆ ಕರಾವಳಿಯ ವಿವಿಧ ಕಡೆಗಳಿಂದ ಕೆಎಸ್ಸಾರ್ಟಿಸಿ ಬಸ್ ಸಂಪರ್ಕ ವ್ಯವಸ್ಥೆ ಕಲ್ಪಿಸುವ ಹಲವು ಪ್ರಸ್ತಾವಗಳು ಇದೀಗ ಕೆಎಸ್ಸಾರ್ಟಿಸಿ ಕಡತದಲ್ಲೇ ಬಾಕಿಯಾಗಿವೆ.
ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಬೆಂಗಳೂರು ಕೆಂಪೇಗೌಡ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಈಗಾಗಲೇ ವೋಲ್ವೋ ಬಸ್ ಸಂಪರ್ಕ ವ್ಯವಸ್ಥೆ ಇದೆ. ಅದೇ ರೀತಿಯಲ್ಲಿ ಮಂಗ ಳೂರಿ ನಲ್ಲಿಯೂ ಬಸ್ ನಿಲ್ದಾಣ ದಿಂದ ವಿಮಾನ ನಿಲ್ದಾಣಕ್ಕೆ ಬಸ್ ಕಾರ್ಯಾ ಚರಣೆ ನಡೆಸಬೇಕು ಎಂಬ ಸಲಹೆ ಸಾರ್ವ ಜನಿ ಕರಿಂದ ಬಂದಿತ್ತು. ಈ ನಿಟ್ಟಿನಲ್ಲಿ ಕೆಎಸ್ಸಾರ್ಟಿಸಿ ಈಗಾಗಲೇ ಸರ್ವೆಯನ್ನೂ ನಡೆಸಿದೆ. ಇದಾದ ಬಳಿಕ ಕೆಎಸ್ಸಾ ರ್ಟಿಸಿಗೆ ಹಲವಾರು ಮಂದಿ ವಿಭಾಗ ನಿಯಂತ್ರಣಾಧಿಕಾರಿಗಳು ಆಗಮಿಸಿದ್ದು, ಪರಿಣಾಮ ಈ ಪ್ರಸ್ತಾವ ಮುನ್ನೆಲೆಗೆ ಬಂದಿಲ್ಲ.
ಕೆಲವು ದಿನ ಸಂಚರಿಸಿತ್ತು
ಕೃಷ್ಣ ಜೆ. ಪಾಲೆಮಾರ್ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವೇಳೆ ನಡೆಸಿದ ಪ್ರಗತಿ ಪರಿಶೀಲನ ಸಭೆಯಲ್ಲಿ ಈ ಪ್ರಸ್ತಾವ ಮುನ್ನೆಲೆಗೆ ಬಂದಿತ್ತು. ಬಳಿಕ ಮಂಗಳೂರು ಕೆಎಸ್ಸಾರ್ಟಿಸಿ ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ ಬಸ್‌ಗಳು ಓಡಾಡುತ್ತಿದ್ದವು. ಆದರೆ ಆದಾಯವಿಲ್ಲ ಎಂಬ ನೆಪವೊಡ್ಡಿ ಕೆಲವೇ ದಿನಗಳಲ್ಲಿ ಈ ಸೇವೆಯನ್ನು ಸ್ಥಗಿತ ಗೊಳಿಸಲಾಗಿತ್ತು. ಇದಾದ ಬಳಿಕ ಈ ವರೆಗೆ ಸರ್ವೆಗಳು ನಡೆದಿವೆ ಬಿಟ್ಟರೆ ಯಾವುದೇ ರೀತಿಯ ಬಸ್ ಸಂಚಾರ ಆರಂಭಗೊಂಡಿಲ್ಲ.
ಎರಡು ವರ್ಷಗಳ ಹಿಂದೆ ರಾಜ್ಯದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಅವರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ ವೇಳೆ ನಗರ ಹಾಗೂ ಜಿಲ್ಲೆಯ ವಿವಿಧ ಸ್ಥಳಗಳಿಗೆ ಬಸ್ ಸೇವೆ ಆರಂಭಿಸುವಂತೆ ಕೆಎಸ್ಸಾ ರ್ಟಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಬೆಂಗಳೂರಿನಲ್ಲಿ ವಿಮಾನ ನಿಲ್ದಾಣಕ್ಕೆ ಬಿಎಂಟಿಸಿ ಬಸ್ ಸಂಚಾರ ಯಶಸ್ವಿಯಾಗಿರುವುದರಿಂದ ಇದೇ ಮಾದರಿಯನ್ನು ಮಂಗಳೂರು ವಿಮಾನ ನಿಲ್ದಾಣದಿಂದಲೂ ಜಾರಿಗೊಳಿ ಸುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಮಂಗಳೂರು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಸರ್ವೆ ನಡೆಸಿದ್ದರು.
ಭಟ್ಕಳ ಬಸ್ ಕೂಡ ಇಲ್ಲ !
ಭಟ್ಕಳದಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಸಲುವಾಗಿ ಕೆಎಸ್ಸಾರ್ಟಿಸಿ ನೂತನವಾಗಿ ವೋಲ್ವೋ ಬಸ್ ಸೇವೆ ಪರಿ ಚ ಯಿಸುವ ನಿಟ್ಟಿನಲ್ಲಿಯೂ ಎರಡು ವರ್ಷಗಳ ಹಿಂದೆ ಮಾತುಕತೆ ನಡೆದಿತ್ತು. ಭಟ್ಕಳ, ಕುಂದಾಪುರ, ಮಣಿಪಾಲ, ಉಡುಪಿ ಸುತ್ತಮುತ್ತಲಿನ ಪ್ರಯಾಣಿಕರಿಗೆ ವಿಮಾನ ನಿಲ್ದಾಣಕ್ಕೆ ಆಗಮಿಸಲು ಅನುಕೂಲ ಕಲ್ಪಿಸುವ ಉದ್ದೇಶದಿಂದ ಕೆಎಸ್ಸಾರ್ಟಿಸಿ ಅಧಿಕಾರಿಗಳು ವಿಮಾನ ನಿಲ್ದಾಣದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದರು. ಬಳಿಕ ಸರ್ವೆ ಕಾರ್ಯ ಆರಂಭ ವಾಗಿತ್ತಾದರೂ ಬಸ್ ಸಂಚರಿಸಲಿಲ್ಲ.
ಅಧಿಕಾರಿಗಳ
ಜತೆ ಚರ್ಚಿಸಿ ತೀರ್ಮಾನ
ಮಂಗಳೂರು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ ಬಸ್ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಈ ಹಿಂದೆ ಯಾವೆಲ್ಲ ರೀತಿಯ ಪ್ರಗತಿ ಆಗಿದೆ ಎಂಬುವುದರ ಬಗ್ಗೆ ಅಧಿಕಾರಿಗಳ ಜತೆ ಚರ್ಚೆ ನಡೆಸುತ್ತೇನೆ. ಬಳಿಕ ತೀರ್ಮಾನ ಕೈಗೊಳ್ಳಲಾಗುವುದು.
– ಎಸ್.ಎನ್. ಅರುಣ್, ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ
ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.