ಗ್ರಾಮೀಣ ಯುವಕನ ಸಾಧನೆ: ತೋಟದ ನಡುವೆ ಸಾಗುವ ಮಿನಿ ಟಿಪ್ಪರ್ ಆವಿಷ್ಕಾರ !
Team Udayavani, Sep 22, 2020, 5:31 PM IST
ಸವಣೂರು: ದಕ್ಷಿಣ ಕನ್ನಡ ಹೇಳಿ ಕೇಳಿ ಹೆಚ್ಚು ಕೃಷಿ ಚಟುವಟಿಕೆಗಳನ್ನು ನೆಚ್ಚಿಕೊಂಡಿರುವ ಪ್ರದೇಶ. ಕೆಲಸದಾಳುಗಳ ಕೊರತೆಯಿಂದ ಕೃಷಿ ಕೆಲಸ ಕಾರ್ಯಗಳನ್ನು ನಡೆಸಲು ಸಮಸ್ಯೆ ಎದುರಿಸುವ ಪ್ರಮೇಯವೇ ಹೆಚ್ಚು. ಇದಕ್ಕಾಗಿ ದ.ಕ.ದ ಗ್ರಾಮೀಣ ಪ್ರದೇಶದ ಯುವಕನೋರ್ವ ತೋಟದ ನಡುವೆ ಸಾಗುವ ಮಿನಿ ಟಿಪ್ಪರ್ ಆವಿಷ್ಕಾರ ಮಾಡಿ ಎಲ್ಲರಿಂದಲೂ ಮೆಚ್ಚುಗೆ ಪಡೆದುಕೊಂಡಿದ್ದಾರೆ.
ಕಡಬ ತಾಲೂಕಿನ ಸವಣೂರು ಸಮೀಪದ ಪಾಲ್ತಾಡಿ ಗ್ರಾಮದ ಬಂಬಿಲ ನಿವಾಸಿ ಪುರುಷೋತ್ತಮ್ ಎಂಬ 23ರ ಯುವಕ ಸಣ್ಣ ಟಿಪ್ಪರ್ ನ ಆವಿಷ್ಕಾರ ಮಾಡಿದ್ದಾನೆ.
ಯಮಹಾ ಸ್ಕೂಟರ್ ಒಂದನ್ನು ಮಾರ್ಪಾಡು ಮಾಡಿ ಈ ಟಿಪ್ಪರ್ ಸಿದ್ಧ ಮಾಡಲಾಗಿದೆ. ತೋಟದ ನಡುವೆ ಸಾಗುವ ಈ ವಾಹನವನ್ನು, ತೋಟಕ್ಕೆ ಮಣ್ಣು ಹಾಕಲು, ಅಡಿಕೆ ಲೋಡ್ ಮಾಡಲು ಹೀಗೆ ವಿವಿಧ ಕೆಲಸಗಳಿಗೆ ಬಳಸಬಹುದು.
ಗಿಡ ಹಾಗೂ ಇತರ ಬೆಳೆಗಳಿರುವ ತೋಟದ ಮಧ್ಯೆ ಲಾರಿಗಳು ಸಂಚರಿಸುವುದು ಸಾಧ್ಯವಿಲ್ಲ. ಹೀಗಾಗಿ ಈ ಟಿಪ್ಪರ್ ಲಾರಿಯ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಲಿದೆ ಎನ್ನುವುದು ಮಿನಿ ಟಿಪ್ಪರ್ ಸಿದ್ಧಗೊಳಿಸಿದ ಪುರುಷೋತ್ತಮ್ ಬಂಬಿಲ ಅವರ ಅಭಿಪ್ರಾಯ.
130 ಸಿಸಿ ಇಂಜಿನ್ ಹೊಂದಿರುವ ಸ್ಕೂಟರ್ ಅನ್ನು ತನಗೆ ಬೇಕಾದ ರೀತಿಯಲ್ಲಿ ಮಾರ್ಪಾಡು ಮಾಡಿಕೊಂಡಿರುವ ಇವರು ಸ್ಕೂಟರ್ಗೆ ಹಲವು ಎಕ್ಸ್ಟ್ರಾ ಫಿಟ್ಟಿಂಗ್ ಕೂಡಾ ಮಾಡಿಕೊಂಡಿದ್ದಾರೆ. ಟಿಪ್ಪರ್ ಹಿಂದೆ ಮುಂದೆ ಸಲೀಸಾಗಿ ಸಾಗುವಂತೆ ಮಾಡಲು ಗೇರ್ ಬಾಕ್ಸ್ ಅಳವಡಿಸಲಾಗಿದೆ. ಅಲ್ಲದೆ ಇದಕ್ಕೆ ರಿವರ್ಸ್ ಗೇರ್ ಅನ್ನೂ ಫಿಟ್ ಮಾಡಲಾಗಿದ್ದು, 3 ಫೀಟ್ ಅಗಲದ ಬಾಡಿಯನ್ನೂ ನಿರ್ಮಿಸಲಾಗಿದ್ದು, ಎರಡು ಕ್ವಿಂಟಾಲ್ ತೂಕ ಹೊರುವ ಸಾಮರ್ಥ್ಯವನ್ನೂ ಹೊಂದಿದೆ.
ಪಾಲ್ತಾಡಿ ಗ್ರಾಮದ ಬಂಬಿಲ ನಿವಾಸಿ ಬಾಬು ಶೆಟ್ಟಿ ಹಾಗೂ ಯಮುನಾ ದಂಪತಿಯ ಮಗನಾಗಿರುವ ಪುರುಷೋತ್ತಮ ಈ ಹಿಂದೆಯೂ ಹಲವು ಆವಿಷ್ಕಾರ ಮಾಡಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರೇ ಖುದ್ದು ಇವರ ಆವಿಷ್ಕಾರಕ್ಕೆ ಪ್ರೋತ್ಸಾಹ ನೀಡಿ ಹರಸಿದ್ದಾರೆ.
ನಿಂತಿಕಲ್ಲು ಕೆ.ಎಸ್.ಗೌಡ ಐಟಿಐ ನಲ್ಲಿ ಕಲಿತಿರುವ ಪುರುಷೋತ್ತಮ್ ಇದೀಗ ಸದ್ಯಕ್ಕೆ ಉಜಿರೆಯ ಎಸ್.ಡಿ.ಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಜೆಕ್ಟ್ ವರ್ಕ್ ಮಾಡಿಕೊಂಡಿದ್ದಾರೆ.
ಶಾಸಕ ಅಂಗಾರರಿಂದ ಮೆಚ್ಚುಗೆ
ಅನ್ಯ ಕಾರ್ಯಕ್ರಮದ ನಿಮಿತ್ತ ಸೆ, 29ರ ಶನಿವಾರ ಸವಣೂರಿಗೆ ಬಂದ ಸುಳ್ಯ ಶಾಸಕ ಅಂಗಾರ ಅವರು ಈ ಯುವಕನ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
-ಪ್ರವೀಣ್ ಚೆನ್ನಾವರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.