46 ಗ್ರಾ.ಪಂ.ಗಳಲ್ಲಿ ಮಾತ್ರ ಖಾಯಂ ಪಿಡಿಒಗಳು!
ಬಂಟ್ವಾಳ: 12 ಕಡೆಗಳಲ್ಲಿ ಪ್ರಭಾರಿಗಳಿಗೆ ಹೊಣೆ; ಅಭಿವೃದ್ಧಿಗೆ ಅಡ್ಡಿ
Team Udayavani, Dec 24, 2019, 6:06 AM IST
ಸಾಂದರ್ಭಿಕ ಚಿತ್ರ
ಬಂಟ್ವಾಳ: ಹಳ್ಳಿಗಳ ಸರಕಾರವಾಗಿ ಗುರುತಿಸಿ ಕೊಂಡಿರುವ ಗ್ರಾಮ ಪಂಚಾಯತ್‌ಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಿದಾಗಲೇ ಹಳ್ಳಿಗಳ ಉದ್ಧಾರ ಸಾಧ್ಯ ವಾಗಿದ್ದು, ಗ್ರಾ.ಪಂ.ಗಳಲ್ಲಿ ಅಧಿಕಾರಿ ಮುಖ್ಯಸ್ಥ ಹುದ್ದೆ ಎನಿಸಿಕೊಂಡಿರುವ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಇದ್ದಾಗಲೇ ಹೆಚ್ಚಿನ ಕೆಲಸ ಸಾಧ್ಯವಾಗುತ್ತದೆ. ಪ್ರಸ್ತುತ ಬಂಟ್ವಾಳ ತಾಲೂಕಿನ 58 ಗ್ರಾ.ಪಂ.ಗಳ ಪೈಕಿ 46 ಕಡೆಗಳಲ್ಲಿ ಮಾತ್ರ ಪಿಡಿಒಗಳು ಖಾಯಂ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಬಂಟ್ವಾಳ ತಾಲೂಕಿನ ಗ್ರಾ.ಪಂ.ಗಳು ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳಿಗೆ ವಿಸ್ತರಿಸಿಕೊಂಡಿದ್ದು, ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ 39 ಗ್ರಾ.ಪಂ., ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರದಲ್ಲಿ 10 ಹಾಗೂ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 9 ಗ್ರಾ.ಪಂ.ಗಳಿವೆ. ಒಟ್ಟು 58 ಗ್ರಾ.ಪಂ.ಗಳಲ್ಲಿ ಸದ್ಯಕ್ಕೆ 46 ಖಾಯಂ ಪಿಡಿಒಗಳಿದ್ದು, ಉಳಿದಂತೆ ಪ್ರಭಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಗ್ರಾಮದ ಅಭಿವೃದ್ಧಿ ದೃಷ್ಟಿಯಿಂದ ಸರಕಾರ ಉದ್ಯೋಗ ಖಾತರಿ, ಹಣಕಾಸು ಯೋಜನೆಗಳನ್ನು ಪ್ರಕಟಿಸುತ್ತಿದ್ದು, ಇವುಗಳನ್ನು ಅನುಷ್ಠಾನಗೊಳಿಸುವಲ್ಲಿ ಪಿಡಿಒ ಗಳ ಪಾತ್ರ ಮಹತ್ತರವಾಗಿರುತ್ತದೆ. ಹೀಗಾಗಿ ತಾ|ನಲ್ಲಿ ಬಾಕಿ ಉಳಿದಿರುವ ಗ್ರಾ.ಪಂ.ಗಳಿಗೆ ಪಿಡಿಒಗಳನ್ನು ನೇಮಿಸಲು ಸರಕಾರ ಕ್ರಮ ಕೈಗೊಳ್ಳಬೇಕಿದೆ.
ಒಟ್ಟು 49 ಮಂದಿ ಇದ್ದಾರೆ!
ಬಂಟ್ವಾಳ ತಾಲೂಕಿಗೆ ಒಟ್ಟು 49 ಮಂದಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಾಗಿ ನಿಯೋಜನೆಗೊಂಡಿದ್ದಾರೆ. ಆದರೆ ಅದರಲ್ಲಿ ಮೂವರು ಸಿಬಂದಿ ನಿಯೋಜನೆಯ ಮೇಲೆ ಇತರ ಹುದ್ದೆಗಳನ್ನು ನಿರ್ವಹಿಸುತ್ತಿದ್ದಾರೆ. ಹೀಗಾಗಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುವುದಕ್ಕೆ 46 ಮಂದಿ ಮಾತ್ರ ಸಿಗುತ್ತಿದ್ದಾರೆ.
58 ಗ್ರಾ.ಪಂ.ಗಳಲ್ಲಿ 46 ಪಿಡಿಒಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಉಳಿದಂತೆ 12 ಗ್ರಾ.ಪಂ.ಗಳಲ್ಲಿ ಪ್ರಭಾರ ನೆಲೆಯ ಪಿಡಿಒ ಗಳಿದ್ದಾರೆ. ಅಂದರೆ ಕೆಲವೊಂದು ಗ್ರಾ.ಪಂ.ಗಳ ಪಿಡಿಒಗಳಿಗೆ ಎರಡೆರಡು ಪಂಚಾಯತ್‌ಗಳ ಜವಾ ಬ್ದಾರಿಯಿದ್ದರೆ, ಉಳಿದಂತೆ ಕಾರ್ಯದರ್ಶಿಗಳೇ ಪಿಡಿಒ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.
ಕೆಲಸದ ಒತ್ತಡ
ಗ್ರಾ.ಪಂ.ಗಳಲ್ಲಿ ಪಿಡಿಒ ಇಲ್ಲದಿದ್ದಾಗ ಗ್ರಾಮದ ಅಭಿವೃದ್ಧಿಯ ದೃಷ್ಟಿಯಲ್ಲಿ ಪ್ರಭಾರ ಪಿಡಿಒಗಳಿರುವುವಲ್ಲಿ ಮಾತ್ರ ತೊಂದರೆ ಆಗುವುದಲ್ಲ. ಬದಲಾಗಿ ಪ್ರಭಾರ ಪಿಡಿಒ ಗಳಿಗೆ ತಮ್ಮ ಖಾಯಂ ಪಂಚಾಯತ್‌ಗಳ ಕೆಲಸ ಮಾಡುವು ದಕ್ಕೂ ತೊಂದರೆಯಾಗುತ್ತದೆ. ಅಂದರೆ ವಾರ ದಲ್ಲಿ ಒಂದಷ್ಟು ದಿನಗಳ ಕಾಲ ಅಲ್ಲಿ-ಇಲ್ಲಿ ಎಂದು ಕೆಲಸ ಮಾಡಬೇಕಿದ್ದು, ಅವರ ಕೆಲಸವೂ ಒತ್ತಡದಿಂದ ಕೂಡಿರುತ್ತದೆ.
35 ಗ್ರಾ.ಪಂ. ಕಾರ್ಯದರ್ಶಿಗಳು
ತಾ.ಪಂ.ನ ಅಧಿಕಾರಿಗಳು ಹೇಳುವ ಪ್ರಕಾರ, ಗ್ರಾ.ಪಂ.ಗಳ ಜನಸಂಖ್ಯೆ ಹಾಗೂ ವಿಸ್ತೀರ್ಣದ ಆಧಾರದಲ್ಲಿ ಗ್ರೇಡ್-1, ಗ್ರೇಡ್-2 ಗ್ರಾ.ಪಂ.ಗಳೆಂದು ವಿಂಗಡಿಸಲಾಗಿರುತ್ತದೆ. ಗ್ರೇಡ್-1 ಗ್ರಾ.ಪಂ.ಗಳಲ್ಲಿ ಪಿಡಿಒಗಳ ಜತೆಗೆ ಕಾರ್ಯದರ್ಶಿಗಳು, ದ್ವಿತೀಯ ದರ್ಜೆ ಸಹಾಯಕರು (ಎಸ್‌ಡಿಎ) ಕರ್ತವ್ಯ ನಿರ್ವಹಿಸಬಹುದಾಗಿದೆ. ಪ್ರಸ್ತುತ ಬಂಟ್ವಾಳ ತಾಲೂಕಿನಲ್ಲಿ 19 ಗ್ರಾ.ಪಂ.ಗಳು ಗ್ರೇಡ್-1 ಆಗಿದ್ದು, 39 ಗ್ರಾ.ಪಂ.ಗಳು ಗ್ರೇಡ್-2ಗೆ ಸೇರಿವೆ. ತಾಲೂಕಿನಲ್ಲಿ 16 ಮಂದಿ ಗ್ರೇಡ್-1 ಕಾರ್ಯದರ್ಶಿಗಳು, 19 ಮಂದಿ ಗ್ರೇಡ್-2 ಕಾರ್ಯದರ್ಶಿಗಳು ಹಾಗೂ 6 ಮಂದಿ ಎಸ್‌ಡಿಎಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮೂವರ ನಿಯೋಜನೆ
ತಾಲೂಕಿನಲ್ಲಿ ಹಾಲಿ 49 ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳಿದ್ದು, ಈ ಪೈಕಿ ಮೂವರನ್ನು ಇತರ ಹುದ್ದೆಗಳಿಗೆ ನಿಯೋಜನೆ ಮಾಡಲಾಗಿದೆ. ಹೀಗಾಗಿ ಪ್ರಸ್ತುತ 46 ಮಂದಿ ಗ್ರಾ.ಪಂ.ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಉಳಿದೆಡೆ ಪಕ್ಕದ ಪಿಡಿಒಗಳಿಗೆ ಚಾರ್ಜ್ ನೀಡಲಾಗಿದೆ.
- ರಾಜಣ್ಣ, ಇಒ, ಬಂಟ್ವಾಳ ತಾ.ಪಂ.
– ಕಿರಣ್ ಸರಪಾಡಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.