ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕೆ ಅನುಮತಿ: ಕೋಟ
ಜಿಲ್ಲಾಡಳಿತದ ಕಟ್ಟುನಿಟ್ಟಿನ ಆದೇಶಕ್ಕೆ ಉಸ್ತುವಾರಿ ಸಚಿವರ ಸ್ಪಷ್ಟನೆ
Team Udayavani, Mar 31, 2021, 10:08 AM IST
ಮಂಗಳೂರು, ಮಾ. 30: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಹಮ್ಮಿಕೊಂಡಿರುವ ಯಕ್ಷಗಾನ, ಕೋಲ, ನೇಮ, ಪೂಜೆ, ಪುನಸ್ಕಾರಗಳು ಹಾಗೂ ಸಾಂಪ್ರದಾಯಿಕ ಧಾರ್ಮಿಕ ಕಾರ್ಯಕ್ರಮಗಳನ್ನು ಕೋವಿಡ್ 19 ನಿಯಮಪಾಲನೆಯೊಂದಿಗೆ ನಡೆಸಬಹುದಾಗಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟನೆ ನೀಡಿದ್ದಾರೆ.
ದ.ಕ. ಜಿಲ್ಲೆಯಾದ್ಯಂತ ಎಲ್ಲಾ ಧಾರ್ಮಿಕ ಸ್ಥಳಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಜಾತ್ರೆ, ಸಭೆ, ಸಮಾರಂಭ ಹಾಗೂ ಆಚರಣೆಗಳಿಗೆ ನಿಷೇಧ ವಿಧಿಸಿ ಹಾಗೂ ಎಲ್ಲ ರೀತಿಯ ಧಾರ್ಮಿಕ ಆಚರಣೆಗಳನ್ನು ಸಾಂಕೇತಿಕವಾಗಿ ಆಚರಿಸುವಂತೆ ದ.ಕ. ಜಿಲ್ಲಾಡಳಿತ ಸೋಮವಾರ ರಾತ್ರಿ ಆದೇಶ ಹೊರಡಿಸಿತ್ತು. ಜತೆಗೆ 144(3) ಅನ್ವಯ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.
ಇದರಂತೆ ಜಿಲ್ಲೆಯಲ್ಲಿ ಜಾತ್ರೆ, ಯಕ್ಷಗಾನ, ನಾಟಕ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಆಯೋಜನೆ ವಿಷಯದಲ್ಲಿ ಸಾರ್ವಜನಿಕರಲ್ಲಿ ನಾನಾ ರೀತಿಯ
ಪ್ರಶ್ನೆ ಹಾಗೂ ಗೊಂದಲ ಮೂಡಿತ್ತು. ಈ ಹಿನ್ನೆಲೆಯಲ್ಲಿ ಸಚಿವರು ಮೇಲಿನ ಸ್ಪಷ್ಟನೆ ನೀಡಿದ್ದಾರೆ ಹಾಗೂ ಈ ಬಗ್ಗೆ ಜಿಲ್ಲಾಧಿಕಾರಿಯವರೊಂದಿಗೆ ಮಾತನಾಡುವುದಾಗಿ ತಿಳಿಸಿದ್ದಾರೆ.
ಬಯಲು/ಮೈದಾನ ಪ್ರದೇಶದಲ್ಲಿ ಗರಿಷ್ಠ 500 ಜನಕ್ಕಿಂತ ಜಾಸ್ತಿ ಸೇರುವಂತಿಲ್ಲ. ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಸಾರ್ವಜನಿಕರ ಜವಾಬ್ದಾರಿಯಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಮೂಲಕ ಜಿಲ್ಲಾಡಳಿತದ ಆದೇಶ ಹಾಗೂ ಅದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ನೀಡಿದ ಸ್ಪಷ್ಟನೆಯು ಇದೀಗ ಜಿಲ್ಲೆಯಲ್ಲಿ ಹಲವು ಬಗೆಯ ಚರ್ಚೆ, ವ್ಯಾಖ್ಯಾನಕ್ಕೆ ಕಾರಣವಾಗಿದೆ. ಇಂದು ಆರೋಗ್ಯ ಸಚಿವರ ಸಭೆ ಕೋವಿಡ್ ನಿಯಂತ್ರಣ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಕುರಿತಂತೆ ಆರೋಗ್ಯ ಸಚಿವ ಡಿ. ಸುಧಾಕರ್ ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಶೇಷ ಸಭೆ ಆಯೋಜಿಸಿದ್ದಾರೆ. ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭಾಗವಹಿಸಲಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.