ಪೈಲಟ್ ಸಮಯ ಪ್ರಜ್ಞೆ; ತಪ್ಪಿತು ವಿಮಾನ ದುರಂತ !
Team Udayavani, Sep 23, 2017, 8:32 AM IST
ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಿಂದ ಗುರುವಾರ ಸಂಜೆ 173 ಪ್ರಯಾಣಿಕರನ್ನು ಹೊತ್ತು ದೋಹಾಕ್ಕೆ ಹೊರಟಿದ್ದ ಏರ್‌ಇಂಡಿಯಾದ ವಿಮಾನ ದೊಡ್ಡ ಮಟ್ಟದ ತಾಂತ್ರಿಕ ದೋಷದಿಂದಾಗಿಯೇ ತುರ್ತು ಭೂಸ್ಪರ್ಶ ಮಾಡಿದೆ ಎನ್ನುವ ಗಂಭೀರ ವಿಚಾರ ಮೇಲ್ನೋಟಕ್ಕೆ ಕಂಡುಬಂದಿದೆ.
ಆದರೆ ಪೈಲಟ್ ಸಮಯ ಪ್ರಜ್ಞೆ, ಚಾಣಾಕ್ಷತನ ಹಾಗೂ ಆತ್ಮಸ್ಥೈರ್ಯದಿಂದ ಒಂದು ಎಂಜಿನ್‌ನಿಂದಲೇ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದ್ದು ಪ್ರಯಾಣಿಕರ ಪ್ರಾಣ ಉಳಿಸಿದೆ. ಇದು ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ. ಪೈಲಟ್ ಸೂಕ್ತ ಸಂದರ್ಭ ತಾಂತ್ರಿಕ ಕೌಶಲ ಬಳಸದೇ ಇದ್ದರೆ, ವಿಮಾನ ದುರಂತಕ್ಕೀಡಾಗುವ ಎಲ್ಲ ಸಾಧ್ಯತೆಗಳಿದ್ದವು. ವಿಮಾನ ತುರ್ತು ಭೂಸ್ಪರ್ಶದಿಂದ ಉಂಟಾದ ಆಘಾತದಿಂದ ಸಿಬಂದಿ ಇನ್ನೂ ಹೊರಬಂದಿಲ್ಲ ಎನ್ನಲಾಗುತ್ತಿದೆ.
ವಿಮಾನವು ಟೇಕ್‌ಆಫ್ ಆದ ಅರ್ಧಗಂಟೆ ಯಲ್ಲೇ ಒಂದು ಎಂಜಿನ್ ಕಾರ್ಯ ಸ್ಥಗಿತಗೊಡ ಬಗ್ಗೆ ಪೈಲಟ್‌ನಿಂದ ನಿಲ್ದಾಣದ ಎಟಿಎಸ್ ಕೇಂದ್ರಕ್ಕೆ ತುರ್ತು ಮಾಹಿತಿ ರವಾನೆಯಾಗಿತ್ತು. ಕೂಡಲೇ ಇಡೀ ನಿಲ್ದಾಣದಲ್ಲಿ ಆತಂಕದ ವಾತಾವರಣ ನಿರ್ಮಾಣಗೊಂಡಿತ್ತು. ಅಧಿಕಾರಿ ಗಳು ಬಜಪೆ ಪೊಲೀಸ್ ಠಾಣೆ ಸೇರಿದಂತೆ ಸಂಬಂಧಪಟ್ಟವರಿಗೆ ಮಾಹಿತಿ ರವಾನಿಸಿದ್ದಾರೆ. ಸಂಜೆ ಸುಮಾರು 6.20ಕ್ಕೆ ಬಜಪೆ ಪೊಲೀಸರಿಗೆ ವಿಮಾನ ತುರ್ತು ಭೂಸ್ಪರ್ಶ ಮಾಡಲಿರುವ ಸಂದೇಶ ಬಂದಿದ್ದು, ಪೊಲೀಸರು ತತ್‌ಕ್ಷಣ ನಿಲ್ದಾಣದತ್ತ ದೌಡಾಯಿಸಿದ್ದಾರೆ. ಜತೆಗೆ ನಗರದ ಉನ್ನತ ಮಟ್ಟದ ಅಧಿಕಾರಿಗಳು ಇಡೀ ಪರಿಸ್ಥಿತಿ ಮೇಲೆ ನಿಗಾ ವಹಿಸಿದ್ದರು.
ಏನೇ ಪರಿಸ್ಥಿತಿಗೂ ಸಿದ್ಧ: ವಿಮಾನ ತುರ್ತು ಭೂಸ್ಪರ್ಶ ಮಾಡುವ ವಿಷಯ ಘೋಷಣೆ ಯಾಗುತ್ತಿದ್ದಂತೆ ಮಂಗಳೂರು ನಿಲ್ದಾಣದಲ್ಲಿ ಯಾವುದೇ ತುರ್ತು ಪರಿಸ್ಥಿತಿಯನ್ನು ನಿಭಾಯಿಸುವುದಕ್ಕೂ ಬೇಕಾದ ಸಿದ್ಧತೆ ಮಾಡಿ ಕೊಳ್ಳಲಾಯಿತು. ವಿಮಾನ ಪರಿಣತರ ಪ್ರಕಾರ ಒಂದು ಎಂಜಿನ್ ಕೈಕೊಟ್ಟ ಸಂದರ್ಭದಲ್ಲಿ ಸುಮಾರು 173 ಪ್ರಯಾಣಿಕರು, ಲಗೇಜ್ ಹಾಗೂ ಸಿಬಂದಿಯನ್ನು ಒಳಗೊಂಡಿರುವ ಇಷ್ಟು ದೊಡ್ಡ ಗಾತ್ರದ ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡುವುದು ಅತ್ಯಂತ ಅಪಾಯಕಾರಿ. ಕೇವಲ ಒಂದೇ ಎಂಜಿನ್‌ನ ಕಾರ್ಯಾಚರಣೆ ಪೈಲಟ್‌ನ ವೃತ್ತಿ ಅನುಭವ ಹಾಗೂ ತಾಂತ್ರಿಕ ಕೌಶಲವನ್ನು ಅವಲಂಬಿಸಿರು ತ್ತದೆ. ಈ ಸಂದರ್ಭವನ್ನು ಮುಂಬಯಿ ಮೂಲದ ಪೈಲಟ್ ಅತೀಶ್ ಸಿಂಘೆ ಚಾಣಾಕ್ಷತೆ ಹಾಗೂ ಎಚ್ಚರಿಕೆಯಿಂದ ನಿಭಾಯಿಸಿದ್ದಾರೆ ಎನ್ನುವುದು ವಿಮಾನ ತಂತ್ರಜ್ಞರ ಅಭಿಪ್ರಾಯ.
ನಿಲ್ದಾಣದಲ್ಲಿದ್ದ ಕೆಲವು ಪ್ರತ್ಯಕ್ಷದರ್ಶಿಗಳ ಪ್ರಕಾರ, ವಿಮಾನವನ್ನು ಪೈಲಟ್ ಇನ್ನೇನು ತುರ್ತು ಭೂಸ್ಪರ್ಶ ಮಾಡಿಸಬೇಕು ಎನ್ನು ವಷ್ಟರಲ್ಲಿ ಗ್ರೀನ್ ಸಿಗ್ನಲ್ ಬದಲಿಗೆ ತಾಂತ್ರಿಕ ದೋಷದ ಸಿಗ್ನಲ್ ತೋರಿಸಿದೆ. (ಎರರ್ ಸಿಗ್ನಲ್). ಅಷ್ಟೇಅಲ್ಲ, ವಿಮಾನ ಕೂಡ ಕೊಂಚ ವಾಲಿಕೊಂಡು ನಿಯಂತ್ರಣ ಕಳೆದುಕೊಂಡಿರುವಂತೆ ಕಾಣುತ್ತಿತ್ತು. ಕೆಲವು ಪ್ರಯಾಣಿಕರು ಕೂಡ ಜೀವಭಯದಿಂದ ಕಿರುಚಾಡುತ್ತಿದ್ದ ಕಾರಣ ಗೊಂದಲ ಹಾಗೂ ಆತಂಕ ನಿರ್ಮಾಣವಾಗಿತ್ತು. ಇದ್ಯಾವುದನ್ನೂ ಲೆಕ್ಕಿಸದ ಪೈಲಟ್ ಕೇವಲ ಎಮರ್ಜೆನ್ಸಿ ಲ್ಯಾಂಡಿಂಗ್ ಆಗಬೇಕು ಎನ್ನುವ ಒಂದೇ ಗುರಿಯನ್ನಿಟ್ಟಿದ್ದರು ಹಾಗೂ ಅದರಲ್ಲಿ ಯಶಸ್ವಿಯೂ ಆಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಎಂಜಿನ್ ಫೈಲ್ ದೊಡ್ಡ ಅಪಾಯ
ದೇಶದ ಪ್ರತಿಷ್ಠಿತ ವಿಮಾನ ತಯಾರಿಕಾ ಕಂಪೆನಿಯ ತಾಂತ್ರಿಕ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಯೊಬ್ಬರು ಹೇಳುವಂತೆ, “ಯಾವುದೇ ನಾಗರಿಕಯಾನ ವಿಮಾನ ಹಾರಾಟದಲ್ಲಿರಬೇಕಾದರೆ ಎರಡು ಎಂಜಿನ್‌ಗಳ ಪೈಕಿ ಒಂದು ತಾಂತ್ರಿಕವಾಗಿ ನಿಷ್ಕ್ರಿಯಗೊಳ್ಳುವುದು ಅಂದರೆ ತಾಂತ್ರಿಕ ಭಾಷೆಯಲ್ಲಿ ದೊಡ್ಡ ಮಟ್ಟದ ಅಪಾಯದ ಪರಿಸ್ಥಿತಿಯಾಗಿರುತ್ತದೆ. ಏಕೆಂದರೆ, ಒಂದು ಎಂಜಿನ್ ಕೈಕೊಟ್ಟ ಮೇಲೆ ಕೇವಲ ಒಂದೇ ಎಂಜಿನ್ ಮೇಲೆ ಇಡೀ ವಿಮಾನದ ಹಾರಾಟ ಅವಲಂಬಿಸಿಕೊಂಡಿರುತ್ತದೆ. ಮತ್ತೂಂದು ಎಂಜಿನ್‌ನ ಭವಿಷ್ಯ ಕೂಡ ಡೋಲಾಯ ಮಾನವಾಗಬಹುದು. ಒಂದು ಎಂಜಿನ್ ವಿಫಲವಾದ ತತ್‌ಕ್ಷಣ ಅದರಿಂದ ಆಯಿಲ್ ಸೋರಿಕೆ, ಮತ್ತೇನೋ ತಾಂತ್ರಿಕ ದೋಷವೂ ಕಾಣಿಸಿಕೊಳ್ಳಬಹುದು. ಒಂದೇ ಎಂಜಿನ್‌ನಲ್ಲಿ ಆ ವಿಮಾನವನ್ನು ಎಷ್ಟು ದೂರಕ್ಕೆ, ಎಷ್ಟು ಹೊತ್ತು ಚಲಾಯಿಸಬಹುದು ಎನ್ನುವುದು ಆ ವಿಮಾನದ ಕಾರ್ಯಕ್ಷಮತೆ, ಈಗಾಗಲೇ ಎಷ್ಟು ಹಾರಾಟ ನಡೆಸಿದೆ ಹಾಗೂ ಎಷ್ಟು ಭಾರ ಹೊಂದಿದೆ ಎಂಬಿತ್ಯಾದಿ ಅಂಶಗಳ ಮೇಲೆ ಅವಲಂಬಿಸಿರುತ್ತದೆ. ಒಂದು ಎಂಜಿನ್ ಕೈಕೊಟ್ಟ ಕಾರಣ ಮತ್ತೂಂದು ಎಂಜಿನ್‌ನಲ್ಲೇ ಪೂರ್ಣವಾಗಿ ಮೇಲೆ ಚಲಾಯಿಸಬಹುದು ಎನ್ನಲು ಸಾಧ್ಯವಿಲ್ಲ’ ಎಂದು ಹೆಸರು ಹೇಳಲು ಇಚ್ಛಿಸದ ತಾಂತ್ರಿಕ ಪರಿಣತರು ವಿವರಿಸಿದ್ದಾರೆ.
ಏರ್ ಇಂಡಿಯಾವೇ ಹೊಣೆ
ಮಂಗಳೂರು ನಿಲ್ದಾಣದಲ್ಲಿ ವಿಮಾನ ತುರ್ತು ಭೂಸ್ಪರ್ಶ ಆದ ಘಟನೆ ಬಗ್ಗೆ “ಉದಯವಾಣಿ’ಗೆ ಪ್ರತಿಕ್ರಿಯಿಸಿರುವ ವಾಯುಸೇನೆಯ ನಿವೃತ್ತ ವಿಂಗ್ ಕಮಾಂಡರ್ ಜಿ.ಬಿ. ಅತ್ರಿ ಪ್ರಕಾರ, “ವಿಮಾನ ಹಾರಾಡುತ್ತಿರಬೇಕಾದರೆ, ಎಂಜಿನ್ ಆಫ್ ಆಗಿರುವುದು ಸಣ್ಣ ವಿಚಾರವೇನು ಅಲ್ಲ. ಯಾವುದೇ ವಿಮಾನ ಟೇಕ್‌ಅಫ್ ಆಗಬೇಕಾದರೆ, ತಾಂತ್ರಿಕವಾಗಿ ಚೆಕ್‌ಲಿಸ್ಟ್ ಆಗಬೇಕಾಗುತ್ತದೆ. ಒಂದುವೇಳೆ ಸರಿಯಾದ ತಾಂತ್ರಿಕ ಪರಿಶೀಲನೆ ನಡೆಸದಿದ್ದರೆ ಈ ರೀತಿಯ ಅಪಾಯ ಆಗುವ ಸಾಧ್ಯತೆಯೂ ಇರುತ್ತದೆ. ಸಾಮಾನ್ಯವಾಗಿ ದೊಡ್ಡ ಮಟ್ಟದ ತೊಂದರೆ ಕಾಣಿಸಿಕೊಂಡಾಗ ಮಾತ್ರ ಎಂಜಿನ್ ಕೆಟ್ಟು ಹೋಗುತ್ತದೆ. ಏರ್‌ಇಂಡಿಯಾವೇ ಈ ಘಟನೆಗೆ ಸಂಪೂರ್ಣ ಹೊಣೆಯಾಗಿದ್ದು, ಕೇವಲ ಪೈಲಟ್‌ನ ವೃತ್ತಿ ಕೌಶಲದಿಂದಾಗಿ ವಿಮಾನವು ಸುರಕ್ಷಿತವಾಗಿ ಲ್ಯಾಂಡಿಂಗ್ ಆಗಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.
ದೋಷಕ್ಕೆ ಕಾರಣ ನಿಗೂಢ
ಎಂಜಿನ್ ವೈಫಲ್ಯ ಬಗ್ಗೆ ಏರ್‌ಇಂಡಿಯಾ ಸಂಸ್ಥೆಯಾಗಲಿ ಅಥವಾ ಮಂಗಳೂರು ವಿಮಾಣ ನಿಲ್ದಾಣಗಳ ಪ್ರಾಧಿಕಾರದ ಅಧಿಕಾರಿಗಳು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಇದಕ್ಕೆ ಕಾರಣವೂ ಉನ್ನತ ಮಟ್ಟದ ತನಿಖೆಯಿಂದಷ್ಟೇ ಬೆಳಕಿಗೆ ಬರಬೇಕಿದೆ. ಇನ್ನು ವಿಮಾನ ಹಾರಾಟ ರದ್ದುಗೊಂಡು, ನಗರದ ಖಾಸಗಿ ಹೊಟೇಲ್‌ನಲ್ಲಿ ಉಳಿದುಕೊಂಡಿದ್ದ ಎಲ್ಲ 173 ಪ್ರಯಾಣಿಕರನ್ನು ಶುಕ್ರವಾರ ಬೆಳಗ್ಗೆ ಎರಡು ವಿಮಾನಗಳಲ್ಲಿ ದೋಹಾಕ್ಕೆ ಕಳುಹಿಸಲಾಗಿದೆ. ಈ ನಡುವೆ, ತಾಂತ್ರಿಕ ವೈಫಲ್ಯದ ವಿಮಾನವನ್ನು ಸದ್ಯ ಯಥಾಸ್ಥಿತಿಯಲ್ಲಿ ನಿಲ್ದಾಣದಲ್ಲೇ ಇಡಲಾಗಿದ್ದು, ಅದಕ್ಕೆ ಹೊಸ ಎಂಜಿನ್ ಅನ್ನು ತಿರುವನಂತಪುರದಿಂದ ತರಿಸಿ ಅಳವಡಿಸಿಕೊಂಡು, ಸೆ. 28ರೊಳಗೆ ಮತ್ತೆ ಕಾರ್ಯಾರಂಭಿಸುವ ಸಾಧ್ಯತೆಯಿದೆ. ಈ ಘಟನೆ ಬಗೆಗಿನ ತನಿಖೆ ಮುಂಬಯಿ ನಾಗರಿಕ ವಿಮಾನಯಾನ ನಿರ್ದೇಶ
ನಾಲಯ ನಡೆಯಲಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ವಾಪಸ್ ಬಂದಿದ್ದ ಸಂಬಂಧಿಕರು ವಿಮಾನ ತಾಂತ್ರಿಕ ವೈಫಲ್ಯಕ್ಕೊಳಗಾಗಿ ತುರ್ತು ಭೂಸ್ಪರ್ಶ ಆಗುವ ವಿಚಾರ ನಿಲ್ದಾಣಕ್ಕೆ ಕರೆತಂದು ಬಿಟ್ಟಿದ್ದ ಸಂಬಂಧಿಕರಿಗೂ ಗೊತ್ತಾಗಿತ್ತು. ವಿಮಾನ ಲ್ಯಾಂಡಿಂಗ್ ಆಗುವುದಕ್ಕೂ ಮೊದಲೇ ವಿಮಾನದಲ್ಲಿದ್ದ ಪ್ರಯಾಣಿಕರೇ ತಮ್ಮ ತಮ್ಮ ಸಂಬಂಧಿಕರಿಗೆ ಮೊಬೈಲ್ ಕರೆ ಮಾಡಿ ಅಪಾಯದಲ್ಲಿರುವ ವಿಷಯವನ್ನು ತಿಳಿಸಿದ್ದರು. ಹೀಗಾಗಿ ನಿಲ್ದಾಣಕ್ಕೆ ಬಿಟ್ಟು ಹೋಗಿದ್ದ ಕೆಲವು ಸಂಬಂಧಿಕರು ಮತ್ತೆ ನಿಲ್ದಾಣಕ್ಕೆ ದೌಡಾಯಿಸಿ ಬಂದಿದ್ದರು. ಈ ನಡುವೆ ವಿಮಾನದೊಳಗೆ ಪ್ರಯಾಣಿಕರು ಪ್ರಾಣ ಒತ್ತೆಯಿಟ್ಟು ದೇವರಲ್ಲಿ ಮೊರೆಯಿಡು ತ್ತಿದ್ದರು ಎನ್ನಲಾದ ಆಡಿಯೋ ತುಣಕು ಇದೀಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
ಸುರೇಶ್ ಪುದುವೆಟ್ಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.