ಪಿಎಂ ಕಿಸಾನ್ ಸಮ್ಮಾನ್ 1.55 ಲಕ್ಷ ರೈತರಿಗೆ ನೇರ ಪಾವತಿ: ಸಂಸದ ನಳಿನ್
Team Udayavani, Oct 18, 2022, 6:35 AM IST
ಮಂಗಳೂರು: ಪಿಎಂಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ದ.ಕ. ಜಿಲ್ಲೆಯ 1,55,542 ಮಂದಿ ರೈತರ ಖಾತೆಗಳಿಗೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಒಟ್ಟು 405 ಕೋಟಿ ರೂ. ಖಾತೆಗೆ ನೇರ ಪಾವತಿ ಮಾಡಲಾಗಿದೆ ಎಂದು ಸಂಸದ ನಳಿನ್ ಹೇಳಿದರು.
ಸೋಮವಾರ ಹೊಸದಿಲ್ಲಿಯಲ್ಲಿ ಆಯೋಜಿಸಲಾಗಿದ್ದ ಪಿಎಂ-ಕಿಸಾನ್ ಸಮ್ಮೇಳನ -2022 ಅಂಗವಾಗಿ ಮಂಗಳೂರಿನ ಎಕ್ಕೂರಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾದ ರೈತರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯೋಜನೆಯಡಿ ಕೇಂದ್ರ ಸರಕಾರ ವಾರ್ಷಿಕ 6 ಸಾವಿರ ರೂ. ಮೂಲಧನ ಮತ್ತು ರಾಜ್ಯ ಸರಕಾರ 4 ಸಾವಿರ ರೂ. ಸೇರಿ ಒಟ್ಟು 10 ಸಾವಿರ ರೂ. ಖಾತೆಗೆ ವರ್ಗಾವಣೆಯಾಗುತ್ತದೆ. ಅದರಂತೆ ಕೇಂದ್ರ ಸರಕಾರದ 277.118 ಕೋಟಿ ರೂ. ಮತ್ತು ರಾಜ್ಯ ಸರಕಾರ 128.286 ಕೋಟಿ ರೂ. ಈಗಾಗಲೇ ವರ್ಗಾವಣೆ ಮಾಡಲಾಗಿದೆ ಎಂದರು.
ಜಿಲ್ಲೆಯ ರೈತರು ಸ್ವಾಭಿಮಾನಿಗಳು:
ದ.ಕ ಜಿಲ್ಲೆಯ ರೈತರು ಸ್ವಾಭಿಮಾನಿ ಮತ್ತು ಸ್ವಾವಲಂಬಿಗಳಾಗಿದ್ದಾರೆ. ಜಿಲ್ಲೆಯಲ್ಲಿ ಅತೀ ಹೆಚ್ಚು ಭತ್ತ ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿ ಬೆಳೆಯಲಾಗುತ್ತಿತ್ತು. ಕಳೆದರೆಡು ವರ್ಷಗಳಲ್ಲಿ ಬಂಟ್ವಾಳ, ಪುತ್ತೂರು ತಾಲೂಕಿನಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಬೆಳೆಯಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪಡಿತರ ಅಂಗಡಿಗಳಲ್ಲಿ ಬಿಪಿಎಲ್ ಕಾರ್ಡ್‌ದಾರರಿಗೆ ಕುಚ್ಚಲಕ್ಕಿ ದೊರೆಯಲಿರುವುದರಿಂದ ಕುಚ್ಚಲಕ್ಕಿಗೆ ಬೇಡಿಕೆ ಬರಲಿದೆ ಎಂದರು.
ಶಾಸಕ ಡಿ.ವೇದವ್ಯಾಸ ಕಾಮತ್ ಮಾತನಾಡಿದರು. ಉಪಮೇಯರ್ ಪೂರ್ಣಿಮಾ, ಕಾರ್ಪೊರೇಟರ್ ಭರತ್ ಕುಮಾರ್ ಎಸ್., ಕೃಷಿಕರಾದ ದಯಾನಂದ ಕುಲಾಲ್ ದೇಲಂತಬೆಟ್ಟು, ಜಾಸ್ಮಿನ್ ಅರಾನ್ಹ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಡಾ.ಸೀತಾ ಎಂ.ಸಿ. ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯಿಂದ ಕೃಷಿಕ ಭವಾನಿಶಂಕರ್ ಪ್ರಧಾನಿಯ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಟಿ.ಜೆ.ರಮೇಶ ಸ್ವಾಗತಿಸಿದರು. ವಾದಿರಾಜ ನಿರೂಪಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.