Multiplex ಪ್ರಭಾತ್ ಥಿಯೇಟರ್: ನಾಳೆಯಿಂದ ಚಿತ್ರ ಪ್ರದರ್ಶನ
Team Udayavani, Aug 14, 2018, 4:05 AM IST
ಮಂಗಳೂರು: ಮಂಗಳೂರಿನ ಕೆ.ಎಸ್. ರಾವ್ ರಸ್ತೆಯಲ್ಲಿರುವ ಪ್ರಭಾತ್ ಥಿಯೇಟರ್ ಇದೀಗ ಅತ್ಯಾಧುನಿಕ ಸೌಕರ್ಯದೊಂದಿಗೆ ಮಲ್ಟಿಪ್ಲೆಕ್ಸ್ ಮಾದರಿಯಲ್ಲಿ ಚಿತ್ರಪ್ರದರ್ಶನಕ್ಕೆ ತೆರೆದುಕೊಂಡಿದೆ. ಸುಮಾರು ಎಂಟು ತಿಂಗಳ ಹಿಂದೆ ನವೀಕರಣದ ನಿಮಿತ್ತ ತಾತ್ಕಾಲಿಕವಾಗಿ ಬಂದ್ ಆಗಿದ್ದ ಪ್ರಭಾತ್ ಥಿಯೇಟರ್ ಮತ್ತೂಮ್ಮೆ ಹೊಸ ರೂಪದಲ್ಲಿ ಕರಾವಳಿಯ ಸಿನೆಮಾ ಪ್ರೇಮಿಗಳಿಗೆ ರಸದೌತಣವನ್ನು ಉಣಬಡಿಸಲಿದೆ.
ಉತ್ತಮ ಗುಣಮಟ್ಟದಲ್ಲಿ ಹಾಗೂ ಹವಾನಿಯಂತ್ರಣ ಸೌಲಭ್ಯದೊಂದಿಗೆ ಸಂಪೂರ್ಣ ಅಡ್ವಾನ್ಸ್‌ಡ್ ತಂತ್ರಜ್ಞಾನಗಳನ್ನು ಉಪಯೋಗಿಸಿ ನವೀಕರಣಗೊಂಡ ಪ್ರಭಾತ್ ಟಾಕೀಸ್ ಆ. 15ರಂದು ಆರಂಭಗೊಳ್ಳಲಿದೆ. ಚಿತ್ರಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ನಾರಾಯಣ್, ಮ್ಯಾನೇಜರ್ ಸುಬ್ರಾಯ ಪೈ ಸೇರಿದಂತೆ ಸಂಸ್ಥೆಯ ಪ್ರಮುಖರು ಭಾಗವಹಿಸಲಿದ್ದಾರೆ. ನವೀಕೃತಗೊಂಡ ಪ್ರಭಾತ್ ಚಿತ್ರಮಂದಿರದಲ್ಲಿ ಮೊದಲ ದಿನ ಹಿಂದಿಯ ‘ಸತ್ಯಮೇವ ಜಯತೆ’, ‘ಗೋಲ್ಡ್’ ಹಾಗೂ ತೆಲುಗಿನ ‘ಗೀತಾ ಗೋವಿಂದ’ ಪ್ರದರ್ಶನವಾಗಲಿದೆ.
ಅರುವತ್ತರ ದಶಕದಲ್ಲಿ ಆರಂಭವಾದ ಪ್ರಭಾತ್ ಟಾಕೀಸ್ ಸಿನೆಮಾ ಪ್ರೇಮಿಗಳಿಗೆ ಪ್ರಾದೇಶಿಕ ಭಾಷೆಯ ಸಿನೆಮಾಗಳಿಂದ ಹಿಡಿದು ವಿಶ್ವದರ್ಜೆಯ ವೈವಿಧ್ಯಮಯ ಸಿನೆಮಾಗಳನ್ನು ಪ್ರದರ್ಶಿಸುತ್ತ ಬಂದಿದೆ. ಕಳೆದ ವರ್ಷದವರೆಗೆ ಸಾಮಾನ್ಯ ಸಿಂಗಲ್ ಸ್ಕ್ರೀನ್ ಸಿನೆಮಾ ಥಿಯೇಟರ್ ನಂತಿದ್ದ ಪ್ರಭಾತ್ ಟಾಕೀಸ್‌ನ ಲುಕ್ ಕೇವಲ ಎಂಟು ತಿಂಗಳಲ್ಲಿ ಸಂಪೂರ್ಣ ಬದಲಾಗಿ ನವೀಕೃತಗೊಂಡಿದೆ.
ಬಿ.ಕೆ. ವಾಸುದೇವ ರಾವ್ 1958ರಲ್ಲಿ ‘ಪ್ರಭಾತ್’ ಎಂಬ ಹೆಸರಿನ ಚಿತ್ರಮಂದಿರ ಸ್ಥಾಪಿಸಿದರು. ಹಿಂದಿ ಚಿತ್ರನಟ ದೇವಾನಂದರ ‘ಕಾಲಾಪಾನಿ’ ಎಂಬ ಹಿಂದಿ ಚಿತ್ರದ ಪ್ರಥಮ ಪ್ರದರ್ಶನದ ಮೂಲಕ ಈ ಚಿತ್ರ ಮಂದಿರ ಆರಂಭವಾಗಿತ್ತು. ಎಲ್ಲ ಭಾಷೆಯ ಚಲನಚಿತ್ರ ಪ್ರದರ್ಶನವಾಗುತ್ತಿದ್ದ ಈ ಚಿತ್ರಮಂದಿರದಲ್ಲಿ ‘ಆನಂದ’ ಎಂಬ ಹೆಸರಿನ ಶಿವರಾಜ್ ಕುಮಾರ್ ಅವರ ಪ್ರಥಮ ಕನ್ನಡ ಚಿತ್ರ 100 ದಿನಗಳ ಕಾಲ ಪ್ರದರ್ಶನವಾಗಿತ್ತು.
ಹವಾನಿಯಂತ್ರಿತ ಪ್ರಭಾತ್!
ನವೀಕೃತ ಪ್ರಭಾತ್ ಚಿತ್ರಮಂದಿರದಲ್ಲಿ ಪ್ರೇಕ್ಷಕರಿಗೆ ಮಲ್ಟಿಪ್ಲೆಕ್ಸ್ ಚಿತ್ರಮಂದಿರದಲ್ಲಿ ಸಿಗುವ ಎಲ್ಲ ಸೌಲಭ್ಯಗಳು ದೊರೆಯಲಿವೆ. ವಿಶೇಷವಾಗಿ ಜೈಜೀನ್ ಸಿಲ್ವರ್ ಸ್ಕ್ರೀನ್‌ನ್ನು ಉಪಯೋಗಿಸಲಾಗಿದ್ದು, 4ಕೆ ಡಿಜಿಟಲ್ ಪ್ರೊಜೆಕ್ಷನ್ ಹಾಗೂ ಡಾಲ್ಬಿ ಆಟ್ಮಾಸ್ 64 ಸ್ಪೀಕರ್‌ಗಳನ್ನು ಅಳವಡಿಸಲಾಗಿದೆ. ಪ್ರೇಕ್ಷಕರಿಗೆ ಲೈವ್ ಅನುಭವ ನೀಡಲಿದೆ. ಹವಾನಿಯಂತ್ರಿತ ಚಿತ್ರಮಂದಿರದ ಬಾಲ್ಕನಿಯಲ್ಲಿ 145 ಹಾಗೂ ಕೆಳಗಡೆ 391 ಸೀಟ್ ವ್ಯವಸ್ಥೆ ಇದೆ. ಎಲ್ಲ ಸೀಟ್‌ಗಳು ಪುಶ್‌ಬ್ಯಾಕ್ ಸೌಲಭ್ಯವನ್ನು ಹೊಂದಿದೆ. ಸುಸಜ್ಜಿತ ಕ್ಯಾಂಟೀನ್ ಜತೆಗೆ ಪಾರ್ಕಿಂಗ್ ವ್ಯವಸ್ಥೆಯು ಉತ್ತಮವಾಗಿದೆ ಎನ್ನುತ್ತಾರೆ ಎಂಜಿನಿಯರ್ ಸುಧೀಂದ್ರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kotekar Robbery Case: ಮುಂಬಯಿ, ತಮಿಳುನಾಡಿನಲ್ಲಿ ಮತ್ತೆ ನಾಲ್ವರು ವಶಕ್ಕೆ?
Kotekar Robbery: ಮುರುಗೆಂಡಿಗೆ ಚಿನ್ನ ಮತ್ತು ಫಿಯೆಟ್‌ನದ್ದೇ ಮೋಹ !
Mangaluru: ಕೆನರಾ ಶಿಕ್ಷಣ ಸಂಸ್ಥೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ದಾರಿದೀಪ
Mangaluru: ವ್ಯವಹಾರ ಮನಸ್ತಾಪ: ಹಣಕ್ಕಾಗಿ ಬೆದರಿಕೆ, ದೂರು ದಾಖಲು
Karnataka Sports Meet: ಈಜು… ಚಿಂತನ್ ಶೆಟ್ಟಿ , ರಚನಾ ಬಂಗಾರ ಬೇಟೆ