ಪ್ರವೀಣ್ ಹತ್ಯೆ ಪ್ರಕರಣ: ಕೋಳಿ ಕತ್ತರಿಸಿದ ಅನುಭವದಲ್ಲಿ ಕೊಲೆಗೆ ಮುಂದಾದ ಆರೋಪಿ!
Team Udayavani, Aug 12, 2022, 7:10 AM IST
ಪುತ್ತೂರು: ಪ್ರವೀಣ್ ಹಂತಕರ ಪೈಕಿ ಪ್ರಮುಖ ಆರೋಪಿ ರಿಯಾಜ್ ಅಂಕತಡ್ಕ ನಿವಾಸಿ ಯಾಗಿದ್ದು, ಇದು ಪ್ರವೀಣ್ ಮನೆಯಿಂದ 3 ಕಿ.ಮೀ. ದೂರದಲ್ಲಿದೆ. ಆತ ಪ್ರವೀಣ್ ಚಲನ ವಲನಗಳನ್ನು ಚೆನ್ನಾಗಿ ಬಲ್ಲವನಾಗಿದ್ದ. ಕೃತ್ಯ ನಡೆದ ದಿನ ಉಳಿದ ಇಬ್ಬರು ಹಂತಕರಿಗೆ ಈತನೇ ಮಾರ್ಗ ದರ್ಶಿ ಆಗಿದ್ದನೆಂಬುದು ಬೆಳಕಿಗೆ ಬಂದಿದೆ.
ಬೆಳ್ಳಾರೆ-ಕುಂಬ್ರ ರಸ್ತೆಯಲ್ಲಿ ನೆಟ್ಟಾರು ಮತ್ತು ಅಂಕತಡ್ಕ ಪ್ರದೇಶ ಇದೆ. 3 ಕಿ.ಮೀ. ದೂರದಲ್ಲಿ ನೆಟ್ಟಾರು, ಅಲ್ಲಿಂದ 2 ಕಿ.ಮೀ. ದೂರದಲ್ಲಿ ಮಾಸ್ತಿಕಟ್ಟೆ ಇದೆ. ಈ ಎರಡು ಪ್ರದೇಶಗಳನ್ನು ದಾಟಿ ಬೆಳ್ಳಾರೆಗೆ ತೆರಳಬೇಕು. ಆರೋಪಿ ರಿಯಾಜ್ ನೆಟ್ಟಾರು, ಮಾಸ್ತಿಕಟ್ಟೆ ಮೂಲಕ ಬೆಳ್ಳಾರೆಗೆ ತೆರಳುವವನಾಗಿದ್ದು, ಮಸೂದ್ ಹತ್ಯೆಯ ಅನಂತರ ಪ್ರವೀಣ್ ಚಲನವಲನಗಳ ಬಗ್ಗೆ ನಿಗಾ ಇರಿಸಿದ್ದ ಎನ್ನಲಾಗಿದೆ.
ಕೋಳಿ ಕತ್ತರಿಸುತ್ತಿದ್ದ:
ಆರೋಪಿಯು ಸ್ವಲ್ಪ ಸಮಯದ ಹಿಂದೆ ಅಂಕತಡ್ಕದಲ್ಲಿ ತನ್ನ ಸಂಬಂಧಿಯ ಚಿಕನ್ ಸೆಂಟರ್‌ನಲ್ಲಿ ಕೋಳಿ ಮಾಂಸ ಮಾಡುವ ಕೆಲಸ ನಿರ್ವಹಿಸಿದ್ದ. ಅನಂತರ ಆಟೋರಿಕ್ಷಾ ಡ್ರೈವರ್ ಕೂಡ ಆಗಿದ್ದ. ಆ ಬಳಿಕ ಲೈನ್ ಸೇಲ್ ಕೆಲಸ ಮಾಡುತ್ತಿದ್ದ. ಹರಿತವಾದ ಆಯುಧದಿಂದ ಕೋಳಿ ಮಾಂಸ ಮಾಡುವುದನ್ನು ಕರಗತ ಮಾಡಿಕೊಂಡಿದ್ದ ರಿಯಾಜ್ ಅದೇ ಧೈರ್ಯದಲ್ಲಿ ಪ್ರವೀಣ್ ಹತ್ಯೆಗೆ ಒಪ್ಪಿಕೊಂಡಿದ್ದ ಎನ್ನುವ ಅಂಶ ತಿಳಿದು ಬಂದಿದೆ.
ಮೌನಿ: ರಿಯಾಜ್ ಮೌನಿಯಾಗಿರುತ್ತಿದ್ದು, ಹೆಚ್ಚು ಮಾತನಾಡುತ್ತಿರಲಿಲ್ಲ. ಮತೀಯವಾದಿ ಸಂಘಟನೆ ಯೊಂದರ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ. ಕಳಂಜದ ಮಸೂದ್ ಹತ್ಯೆಯ ಬಗ್ಗೆ ಆಕ್ರೋಶ ಹೊಂದಿದ್ದ ಎನ್ನಲಾಗಿದೆ. ಈತ ಪ್ರವೀಣ್ ಹತ್ಯೆಯ ಯೋಜನೆ ರೂಪಿಸಿದ್ದ ತಂಡಕ್ಕೆ ಹತ್ಯೆ ತಾನು ನಡೆಸುವುದಾಗಿ ಒಪ್ಪಿಗೆ ನೀಡಿದ್ದ ಎನ್ನುವ ಅಂಶ ಬೆಳಕಿಗೆ ಬಂದಿದೆ.
ಮೊಬೈಲ್ ಮನೆಯಲ್ಲಿಟ್ಟು ಕೃತ್ಯಕ್ಕೆ ತೆರಳಿದ್ದ:
ಪ್ರವೀಣ್ ಹಂತಕರನ್ನು ಶೋಧಿಸುತ್ತಿದ್ದ ಪೊಲೀಸರ ತಂಡಕ್ಕೆ ಕೆಲವು ಆರೋಪಿಗಳ ಬಂಧನದ ಬಳಿಕ ಹತ್ಯೆಯಲ್ಲಿ ರಿಯಾಜ್ ಭಾಗಿಯಾಗಿರುವ ಸುಳಿವು ದೊರೆತಿತ್ತು. ಹೀಗಾಗಿ ಅಂಕತಡ್ಕ ಕೇಂದ್ರಿತವಾಗಿಯೂ ತನಿಖೆ ನಡೆಯುತ್ತಿತ್ತು. ರಿಯಾಜ್‌ನ ಅಂಕತಡ್ಕ ನಿವಾಸದ ಮೇಲೆ ಕಣ್ಣಿಡಲಾಗಿತ್ತು. ಈತನಿಗೆ ಆಶ್ರಯ ನೀಡಿದ ಕಾರಣಕ್ಕಾಗಿ ಸ್ಥಳೀಯ ಪರಿಸರದ ಒಂದಿಬ್ಬರನ್ನು ವಶಕ್ಕೆ ಪಡೆಯಲಾಗಿತ್ತು. ಈ ಮಧ್ಯೆ ಆರೋಪಿಯು ಕೃತ್ಯ ನಡೆದ ದಿನ ತನ್ನ ಮೊಬೈಲನ್ನು ಮನೆಯಲ್ಲಿ ಇರಿಸಿ ಕೃತ್ಯದ ಸ್ಥಳಕ್ಕೆ ತೆರಳಿದ್ದ. ಕೃತ್ಯ ನಡೆದ ವೇಳೆ ತಾನು ಮನೆಯಲ್ಲೇ ಇದ್ದೆ ಎನ್ನುವಂತೆ ಬಿಂಬಿಸುವ ಸಲುವಾಗಿ ಈ ತಂತ್ರ ಹೂಡಿದ್ದ ಎನ್ನುವ ಸಂಗತಿ ಬೆಳಕಿಗೆ ಬಂದಿದೆ.
ಖಾತೆಗೆ ಹಣ ಜಮೆ:
ರಿಯಾಜ್ ಮನೆಯಲ್ಲಿ ಇರಿಸಿದ್ದ ಮೊಬೈಲನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಮೊಬೈಲ್ ಪರಿಶೀಲನೆ ವೇಳೆ ಈತ ಕೃತ್ಯದಲ್ಲಿ ಭಾಗಿಯಾಗಿರುವುದಕ್ಕೆ ಪುರಾವೆ ಲಭಿಸಿತ್ತು. ಆರೋಪಿಯು ತನ್ನ ಬ್ಯಾಂಕ್ ಖಾತೆಗೆ ಇದೇ ಮೊಬೈಲ್ ನಂಬರ್ ಲಿಂಕ್ ಮಾಡಿದ್ದ. ಕೃತ್ಯ ಎಸಗಿದ ಅನಂತರ ಬೇರೆ ಬೇರೆ ಕಡೆಗಳಿಂದ ಈತನ ಖಾತೆಗೆ ಹಣ ಸಂದಾಯ ಆಗಿರುವುದು ಕೂಡ ಬೆಳಕಿಗೆ ಬಂದಿದೆ. ಮೊಬೈಲ್‌ಗೆ ಹಣ ಜಮೆಯಾದ ಬಗ್ಗೆ ಸಂದೇಶಗಳು ಬರುತ್ತಿದ್ದವು ಎನ್ನಲಾಗಿದ್ದು, ಈ ಎಲ್ಲ ಅಂಶಗಳು ರಿಯಾಜ್‌ನ ಕೃತ್ಯವನ್ನು ದೃಢೀಕರಿಸಿವೆ.
ಸಂಬಂಧಿಯ ನೆರಳಲ್ಲಿ ಪಳಗಿದ್ದ ಆರೋಪಿ?:
ಬಂಧಿತ ರಿಯಾಜ್‌ನ ಸಂಬಂಧಿಯೊಬ್ಬ ಕೆಲವು ವರ್ಷಗಳ ಹಿಂದೆ ಹಿಂದೂ ಯುವತಿಯೊಬ್ಬಳನ್ನು ಪ್ರೀತಿಸುವ ನಾಟಕವಾಡಿ ಆಕೆಯನ್ನು ಕೇರಳದ ಕಣ್ಣೂರಿಗೆ ಕರೆದೊಯ್ದು ಮತಾಂತರ ಮಾಡಲು ಯತ್ನಿಸಿದ್ದ. ಅವರು ತೆರಳುತ್ತಿದ್ದ ದಾರಿಯಲ್ಲಿ ಹಿಂದೂ ಸಂಘಟನೆಯವರು ಕಾರನ್ನು ತಡೆದು ಯುವತಿಯನ್ನು ರಕ್ಷಿಸಿದ್ದರು. ಈತನ ನೆರಳಲ್ಲೇ ರಿಯಾಜ್ ಪಳಗಿದ್ದ ಎನ್ನುವ ಅಂಶ ಬೆಳಕಿಗೆ ಬಂದಿದ್ದು, ಈ ಬಗ್ಗೆಯೂ ಪೊಲೀಸ್ ತನಿಖೆಯ ಕಣ್ಣು ಬಿದ್ದಿರುವ ಮಾಹಿತಿ ಸ್ಥಳೀಯವಾಗಿ ಲಭಿಸಿದೆ.
ಅಂಕತಡ್ಕ, ಮಾಸ್ತಿಕಟ್ಟೆಯಲ್ಲಿ ಸ್ಥಳ ಮಹಜರು :
ಪುತ್ತೂರು/ಬೆಳ್ಳಾರೆ: ಪ್ರವೀಣ್ ನೆಟ್ಟಾರು ಹತ್ಯೆ ನಡೆಸಿರುವ ಮೂವರು ಆರೋಪಿಗಳನ್ನು ಗುರುವಾರ ಸಂಜೆ ಅಂಕತಡ್ಕ, ಮಾಸ್ತಿಕಟ್ಟೆಯಲ್ಲಿ ಸ್ಥಳ ಮಹಜರಿಗೆ ಹಾಜರುಪಡಿಸಲಾಯಿತು.
ಆರೋಪಿ ಕಡಬ ತಾಲೂಕಿನ ಪಾಲ್ತಾಡಿ ಗ್ರಾಮದ ಅಂಕತಡ್ಕ ನಿವಾಸಿ ರಿಯಾಜ್‌ನ ಅಂಕತಡ್ಕ ಮನೆಯಲ್ಲಿ ಮಹಜರು ನಡೆಸಲಾಗಿದೆ. ಅನಂತರ ಜು. 26ರಂದು ಪ್ರವೀಣ್‌ನನ್ನು ಹತ್ಯೆ ನಡೆಸಲಾದ ಮಾಸ್ತಿಕಟ್ಟೆಯ ಅಕ್ಷಯ್ ಚಿಕನ್ ಸೆಂಟರ್ ಮುಂಭಾಗದಲ್ಲಿ ಸ್ಥಳ ಮಹಜರು ನಡೆಯಿತು. ಡಿವೈಎಸ್ಪಿ ಗಾನಾ ಪಿ. ಕುಮಾರ್ ನೇತೃತ್ವದಲ್ಲಿ ಮಹಜರು ಪ್ರಕ್ರಿಯೆ ನಡೆಯಿತು.
ಬಿಗಿ ಬಂದೋಬಸ್ತ್:
ಆರೋಪಿಗಳನ್ನು ಸ್ಥಳಕ್ಕೆ ಕರೆ ತರಲಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಕುತೂಹಲಿಗಳು ದೂರದಿಂದ ನಿಂತು ವೀಕ್ಷಿಸುತ್ತಿದ್ದದ್ದು ಕಂಡುಬಂತು.
ಹತ್ಯೆಯ ದಿನ ಅಂಕತಡ್ಕ ಕೇಂದ್ರ ಸ್ಥಾನ:
ಪ್ರವೀಣ್ ಮೇಲೆ ದಾಳಿ ನಡೆಸಿದ್ದು ಶಿಹಾಬುದ್ದೀನ್, ರಿಯಾಜ್ ಸಹಾಯಕನಾಗಿದ್ದ. ಹತ್ಯೆಯ ಅನಂತರ ಆರೋಪಿಗಳು ಅಂಕತಡ್ಕದ ರಿಯಾಜ್ ನಿವಾಸಕ್ಕೆ ತೆರಳಿದ್ದರು ಎಂಬ ಅನುಮಾನದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಬಲ್ಲ ಮೂಲಗಳ ಪ್ರಕಾರ, ಹತ್ಯೆಯ ದಿನ ಆರೋಪಿಗಳು ಅಂಕತಡ್ಕದ ರಿಯಾಜ್ ನಿವಾಸವನ್ನೇ ಕೇಂದ್ರವಾಗಿಸಿ ಸಂಚು ರೂಪಿಸಿದ್ದರು. ಹತ್ಯೆಯ ಬಳಿಕ ಆರೋಪಿಗಳು ಮಾಸ್ತಿಕಟ್ಟೆ- ಪೆರುವಾಜೆ- ಚೆನ್ನಾವರ-ಪಾಲ್ತಾಡಿ-ಅಂಕತಡ್ಕ ಅಥವಾ ಮಾಸ್ತಿಕಟ್ಟೆ-ಪೆರುವಾಜೆ-
ಮುಕ್ಕೂರು-ಬಂಬಿಲ ಮಾರ್ಗವಾಗಿ ಅಂಕತಡ್ಕಕ್ಕೆ ತೆರಳಿ ಅಲ್ಲಿಂದ ಕೇರಳಕ್ಕೆ ಸಂಚರಿಸಿರಬಹುದೇ ಎಂಬ ಅನುಮಾನ ಇದೆ. ಮಾಸ್ತಿಕಟ್ಟೆ-ನೆಟ್ಟಾರು-ಅಂಕತಡ್ಕ ಪ್ರಮುಖ ಸಂಪರ್ಕ ರಸ್ತೆ ಆಗಿದ್ದು, ಇಲ್ಲಿಂದ ತೆರಳಿದರೆ ಸಿಕ್ಕಿ ಬೀಳಬಹುದು ಎಂಬ ಕಾರಣದಿಂದ ಒಳ ರಸ್ತೆಯನ್ನೇ ಆಶ್ರಯಿಸಿರಬಹುದು ಎನ್ನಲಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮೂವರು ಆರೋಪಿಗಳಿಗೆ ಪೊಲೀಸ್ ಕಸ್ಟಡಿ:
ಪುತ್ತೂರು/ ಸುಳ್ಯ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಗುರುವಾರ ಬಂಧಿಸಲಾಗಿರುವ ಮೂವರು ಆರೋಪಿಗಳನ್ನು ಆಯಾ ಸ್ಥಳಗಳಲ್ಲಿ ಮಹಜರು ಪ್ರಕ್ರಿಯೆ ನಡೆಸಿ ವೈದ್ಯಕೀಯ ಪರೀಕ್ಷೆಯ ಅನಂತರ ಸಂಜೆ ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಆರೋಪಿಗಳಿಗೆ ಆ. 16ರ ತನಕ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ.
ಪ್ರವೀಣ್ ಹತ್ಯೆ ನಡೆಸಿರುವ ಪ್ರಮುಖ ಆರೋಪಿಗಳಾದ ಸುಳ್ಯದ ಶಿಯಾಬ್, ರಿಯಾಜ್ ಅಂಕತ್ತಡ್ಕ, ಬಶೀರ್ ಎಲಿಮಲೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಆರೋಪಿಗಳಿಗೆ ಪೊಲೀಸ್ ಕಸ್ಟಡಿ ವಿಧಿಸಿದೆ.
ಮೂವರು ಆರೋಪಿಗಳನ್ನು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadaga: ನರಿ-ನಾಯಿ, ತೋಳ-ನಾಯಿ ಮಿಶ್ರ ತಳಿ ಪತ್ತೆ!
Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ
ADGP V/s HDK: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್ ಐಆರ್ ದಾಖಲು-HDK ಎ1
Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್
MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.