ಪ್ರೀಪೇಯ್ಡ್ ಆಟೋ ರಿಕ್ಷಾ ಚಾಲಕನಿಂದ ಹೆಚ್ಚು ಹಣ ವಸೂಲಿ:ನಾಗರಿಕರ ಆರೋಪ
Team Udayavani, Apr 14, 2018, 10:07 AM IST
ಮಹಾನಗರ: ಮಂಗಳೂರು ಜಂಕ್ಷನ್ ರೈಲು ನಿಲ್ದಾಣದ ಪ್ರೀಪೇಯ್ಡ ಆಟೋ ರಿಕ್ಷಾಗಳು ಹಗಲು ಹೊತ್ತಿನಲ್ಲಿ ಒಂದೂವರೆ ಪಟ್ಟು ಹೆಚ್ಚು ಬಾಡಿಗೆ ದರ ವಸೂಲಿ ಮಾಡುತ್ತಿರುವ ಬಗ್ಗೆ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಶುಕ್ರವಾರ ನಡೆದ ಫೋನ್- ಇನ್ ಕಾರ್ಯಕ್ರಮದಲ್ಲಿ ನಾಗರಿಕರೊಬ್ಬರು ದೂರಿದರು.
ಇತ್ತೀಚೆಗೆ ತಾನು ಸಂಜೆ 4.30ರ ವೇಳೆಗೆ ರೈಲು ನಿಲ್ದಾಣದಲ್ಲಿ ಇಳಿದು ಪಂಜಿಮೊಗರಿಗೆ ಪ್ರೀಪೇಯ್ಡ ಆಟೋವನ್ನು ಗೊತ್ತುಪಡಿಸಿದ್ದೆ. ಆದರೆ ವಾಪಸ್ ಬರುವಾಗ ಬಾಡಿಗೆ ಇಲ್ಲ ಎಂಬ ಕಾರಣಕ್ಕೆ ಆಟೋ ಚಾಲಕ ಒಂದೂವರೆ ಪಟ್ಟು ಹೆಚ್ಚು ಬಾಡಿಗೆ ನೀಡುವಂತೆ ಆಗ್ರಹಿಸಿದ್ದನು. ಅದರಂತೆ ನಾನು ದುಬಾರಿ ಬಾಡಿಗೆ ನೀಡಿದ್ದೇನೆ. ಬಾಡಿಗೆ ವಸೂಲಿ ಮಾಡಿದ ಸ್ವೀಕೃತಿ ಪತ್ರವೂ ನನ್ನಲ್ಲಿದೆ ಎಂದು ದೂರುದಾರರು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕಮಿಷನರ್ ಟಿ.ಆರ್. ಸುರೇಶ್, ವಾಪಸ್ ಬರುವಾಗ ಬಾಡಿಗೆ ಇಲ್ಲ ಎಂದು ಹೆಚ್ಚು ಬಾಡಿಗೆ ವಸೂಲಿ ಮಾಡಲಾಗದು. ಇದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ. ಹಾಗೆ ಮಾಡುವುದಾದರೆ ಪ್ರೀಪೇಯ್ಡ ರಿಕ್ಷಾ ಕೌಂಟರಿನ ಆವಶ್ಯಕತೆ ಏನಿದೆ? ಆಟೋದವರು ನೀಡಿದ ಸ್ವೀಕೃತಿ ಪತ್ರವನ್ನು ನಮಗೆ ಸಲ್ಲಿಸಿ. ಅಂಥ ಆಟೋ ರಿಕ್ಷಾ ಚಾಲಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸ್ಮಾರ್ಟ್ ಬಸ್ ನಿಲ್ದಾಣ
ರಸ್ತೆ ಸುರಕ್ಷೆ ಹಾಗೂ ಸ್ಮಾರ್ಟ್ ಸಿಟಿಯ ಬಗ್ಗೆ ಕಾಳಜಿ ವಹಿಸುವವರು ಸ್ಮಾರ್ಟ್ ಬಸ್ ನಿಲ್ದಾಣ ನಿರ್ಮಾಣ ಮಾಡುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಬಿ.ಎಸ್. ಹಸನಬ್ಬ ಅಮ್ಮೆಂಬಳ ಅವರು ಆಗ್ರಹಿಸಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ಬಸ್ ತಂಗುದಾಣ ಹಾಗೂ ಬಸ್‌ಬೇ ಇಲ್ಲದೆ ಬಸ್‌ಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಲಾಗುತ್ತಿದೆ. ಇದ ರಿಂದ ಪ್ರಯಾಣಿಕರು ಕೂಡ ಪರದಾಡುವಂತಾಗಿದೆ. ಇದನ್ನು ಮಹಾನಗರ ಪಾಲಿಕೆಯ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಜನ ನಿಬಿಡ ಪ್ರದೇಶಗಳಲ್ಲಿ ವಾಹನಗಳ ಮಿತಿ ಮೀರಿದ ವೇಗಕ್ಕೆ ಕಡಿವಾಣ ಹಾಕಲು ರಸ್ತೆಗೆ ಹಂಪ್ ಹಾಕಿಸಬೇಕು ಎಂದವರು ಮನವಿ ಮಾಡಿದರು.
ಅಪಘಾತ ನಿಯಂತ್ರಣಕ್ಕೆ ಬ್ಯಾರಿಕೇಡ್
ರಾಷ್ಟ್ರೀಯ ಹೆದ್ದಾರಿ 66ರ ಮಂಗಳೂರು ತಲಪಾಡಿ ಮಧ್ಯೆ ಅಲ್ಲಲ್ಲಿ ಬ್ಯಾರಿಕೇಡ್ ಗಳನ್ನು ಅಳವಡಿಸಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿದೆ ಎಂದು ನಾಗರಿಕರೊಬ್ಬರು ತಿಳಿಸಿದರು.
ಇದಕ್ಕೆ ಉತ್ತರಿಸಿದ ಕಮಿಷನರ್, ವಾಹನಗಳ ವೇಗಕ್ಕೆ ಕಡಿವಾಣ ಹಾಕಲು ಈ ಕ್ರಮ ಕೈಗೊಳ್ಳಲಾಗಿದೆ. ಈ ಮೊದಲು ಹಲವಾರು ವಾಹನ ಅಪಘಾತಗಳು ನಡೆದು, ಸಾವು, ನೋವು ಸಂಭವಿಸಿವೆ. ಬ್ಯಾರಿಕೇಡ್ ಅಳವಡಿಸಿದ ಬಳಿಕ ಅಪಘಾತಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿವೆ. ಬ್ಯಾರಿಕೇಡ್‌ನಿಂದಾಗಿ ಝಿಗ್ ಜ್ಯಾಗ್ ಮಾದರಿಯಲ್ಲಿ ವಾಹನ ಸಂಚರಿಸಬೇಕಾಗಿರುವುದರಿಂದ ಚಾಲಕರಿಗೆ ಸ್ವಲ್ಪ ಸಮಸ್ಯೆ ಆಗಬಹುದು. ಆದರೆ ಇದರಿಂದಾಗಿ ಹಲವು ಮಂದಿಯ ಜೀವ ಹಾನಿ ತಪ್ಪಿದೆ ಎಂದರು.
ಪ್ರೇಮ ಸಲ್ಲಾಪಕ್ಕೆ ತಡೆ ಹಾಕಿ
ಕದ್ರಿ ಪಾರ್ಕಿನಲ್ಲಿ ಬೆಳಗ್ಗೆ 9ರಿಂದ ಸಂಜೆ 7 ಗಂಟೆವರೆಗೆ ಪ್ರೇಮಿಗಳು ಸರಸ ಸಲ್ಲಾಪ ನಡೆಸುತ್ತಿದ್ದಾರೆ. ಇದರಿಂದ ಪಾರ್ಕಿಗೆ ಬರುವ ಮಹಿಳೆಯರಿಗೆ ಹಾಗೂ ಮಕ್ಕಳು ಮುಜುಗರ ಎದುರಿಸುವಂತಾಗಿದೆ. ಪಾರ್ಕ್‌ನಲ್ಲಿ ಸಿಸಿ ಕೆಮರಾ ಅಥವಾ ಪ್ರೇಮಿಗಳಿಗೆ ಎಚ್ಚರಿಕೆ ನೀಡುವ ಫಲಕಗಳನ್ನು ಅಳವಡಿಸಿಲ್ಲ. ಅಲ್ಲದೆ ಕಾವಲು ಸಿಬಂದಿಯೂ ಇಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರೊಬ್ಬರು ದೂರಿದರು.
ಇದಕ್ಕೆ ಸ್ಪಂದಿಸಿದ ಕಮಿಷನರ್ ಅವರು, ಈ ಕುರಿತಂತೆ ಸಂಬಂಧ ಪಟ್ಟ ಇಲಾಖೆಯ ಗಮನಕ್ಕೆ ತರಲಾಗುವುದು.
ಅಲ್ಲದೆ ಮಫ್ತಿಯಲ್ಲಿ ಪೊಲೀಸರನ್ನು ನಿಯೋಜಿಸಲಾಗುವುದು ಎಂದರು.
ಲೇಡಿಗೋಷನ್ ಆಸ್ಪತ್ರೆ ಬಳಿ ಕಾಮುಕರ ಉಪಟಳ
ನಗರದ ಲೇಡಿಗೋಷನ್ ಆಸ್ಪತ್ರೆಯ ಬಳಿ ನಿತ್ಯವೂ ಕಾಮುಕರ ಉಪಟಳ ಇರುತ್ತದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಮಹಿಳೆಯೊಬ್ಬರು ಮನವಿ ಮಾಡಿದರು. ಅಲ್ಲಿಯೂ ಮಫ್ತಿಯಲ್ಲಿ ಪೊಲೀಸರನ್ನು ನಿಯೋಜಿಸಲಾಗುವುದು ಎಂದು ಕಮಿಷನರ್ ತಿಳಿಸಿದರು.
ಜ್ಯೋತಿ ಜಂಕ್ಷನ್- ಬಲ್ಮಠ ರಸ್ತೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾಕರು ಉಪಟಳ ನೀಡುತ್ತಿದ್ದಾರೆ. ಪಾದಚಾರಿಗಳ ತಲೆಯ ಮೇಲೆ ಕೈ ಇಟ್ಟು ಹಣಕ್ಕಾಗಿ ಪೀಡಿಸುತ್ತಿದ್ದಾರೆ ಎಂದು ವ್ಯಕ್ತಿಯೊಬ್ಬರು ದೂರಿದರು. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಕಮಿಷನರ್ ವಿವರಿಸಿದರು.
ರಸ್ತೆ ಬದಿ ಪಾರ್ಕಿಂಗ್
ಬಿಕರ್ನಕಟ್ಟೆಯಲ್ಲಿ ಪ್ರತಿ ಗುರುವಾರ ಪ್ರಾರ್ಥನೆಯ ವೇಳೆ ರಸ್ತೆ ಬದಿ ವಾಹನಗಳನ್ನು ಮೂರು ಸಾಲಿನಲ್ಲಿ ನಿಲುಗಡೆಗೊಳಿಸಲಾಗುತ್ತಿದೆ. ಇದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ನಾಗರಿಕರೊಬ್ಬರು ದೂರಿದರು. ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು ಎಂದು ಕಮಿಷನರ್ ಭರವಸೆ ನೀಡಿದರು. ಸುರತ್ಕಲ್‌ನ ಸೂರಜ್ ಹೊಟೇಲ್- ಬಂಟರ ಭವನ ರಸ್ತೆಯಲ್ಲಿ ವಾಹನಗಳು ವೇಗವಾಗಿ ಸಂಚರಿಸುತ್ತಿವೆ. ಇಲ್ಲಿ ಹಂಪ್ ಹಾಕಬೇಕು ಎಂಬ ಬೇಡಿಕೆ ಕೇಳಿಬಂತು.
ಪಾವಂಜೆ ದೇವಸ್ಥಾನದ ಬಳಿ ಬ್ಯಾರಿಕೇಡ್ ಅಳವಡಿಸಬೇಕು. ಕಂಕನಾಡಿ ಯಲ್ಲಿ ಎಲ್ಲೆಂದರಲ್ಲಿ ಬಸ್‌ಗಳನ್ನು ನಿಲ್ಲಿಸಿ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಚುನಾವಣೆ ನೀತಿ ಸಂಹಿತೆ ಪಾಲನೆಗೆ ಅಳವಡಿಸಿರುವ ಚೆಕ್ ಪೋಸ್ಟ್ ಗಳಲ್ಲಿ
ಹೆಲ್ಮೆಟ್ ಧರಿಸದವರ ತಪಾಸಣೆಯೂ ನಡೆಸಲಾಗುತ್ತಿದೆ. ಇದಕ್ಕೆ ವಿನಾಯಿತಿ ನೀಡಬೇಕು ಮತ್ತಿತರ ದೂರುಗಳು
ಜನರಿಂದ ಕೇಳಿ ಬಂದವು.
ಇದು 78ನೇ ಫೋನ್ ಇನ್ ಕಾರ್ಯಕ್ರಮವಾಗಿದ್ದು, ಒಟ್ಟು 26 ಕರೆಗಳು ಬಂದವು. ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್ ಡಿಸಿಪಿಗಳಾದ ಹನುಮಂತರಾಯ ಮತ್ತು ಉಮಾ ಪ್ರಶಾಂತ್, ಟ್ರಾಫಿಕ್ ವಿಭಾಗದ ಎಸಿಪಿ ಮಂಜುನಾಥ ಶೆಟ್ಟಿ, ಸಿಸಿಆರ್‌ಬಿ ಎಸಿಪಿ ಜಿ.ಟಿ. ನಾಯ್ಕ, ಟ್ರಾಫಿಕ್ ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ಕುಮಾರ ಸ್ವಾಮಿ ಮತ್ತು ಸುನಿಲ್ ಕುಮಾರ್, ಎಎಸ್‌ಐ ಯೂಸುಫ್, ಹೆಡ್‌ಕಾನ್ಸ್‌ಟೆಬಲ್ ಪುರುಷೋತ್ತಮ ಅವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.