‘ಕುಕ್ಕೆ ಜಾತ್ರೆ ಸುಸೂತ್ರವಾಗಿಸಲು ಸಿದ್ಧತೆ ಪೂರ್ಣ’
Team Udayavani, Nov 17, 2017, 3:33 PM IST
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನ. 15ರಿಂದ ಜಾತ್ರೆ ಆರಂಭಗೊಂಡಿದ್ದು, ಡಿ. 1ರ ತನಕ ನಡೆಯಲಿದೆ. ಜಾತ್ರೆ ಸುಸೂತ್ರವಾಗಿ ನೆರವೇರಿಸಲು ಸಕಲ ಸಿದ್ಧತೆ ನಡೆಸಲಾಗಿದೆ ಎಂದು ಕುಕ್ಕೆ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹೇಳಿದರು.
ದೇಗುಲದ ಕಚೇರಿ ಸಭಾಂಗಣದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಜಾತ್ರೆಗೆ ನಾಡಿನ ಎಲ್ಲ ಕಡೆಯಿಂದ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸುವರು. ಈ ವೇಳೆ ಅವರ ಅನುಕೂಲಕ್ಕಾಗಿ ದೇಗುಲದ ವತಿಯಿಂದ ವಿಶೇಷ ಸೌಕರ್ಯ ಕಲ್ಪಿಸಲಾಗುತ್ತಿದೆ ಎಂದರು.
1 ಲಕ್ಷ ದೀಪ
ಲಕ್ಷದೀಪೋತ್ಸವದ ದಿನ ದೇಗುಲದ ವತಿಯಿಂದ ಭಕ್ತರ ನೆರವು ಪಡೆದು ಮಣ್ಣಿನ ಹಣತೆಯ 1 ಲಕ್ಷ ದೀಪಗಳನ್ನು ರಥಬೀದಿಯಿಂದ ಕಾಶಿಕಟ್ಟೆ ಗಣಪತಿ ದೇವಸ್ಥಾನದ ತನಕ ಹಚ್ಚಲಾಗುವುದು. ಒಂದೇ ದೀಪದಲ್ಲಿ ಎರಡು ಬತ್ತಿ ಉರಿಸಲು ಅನುಕೂಲವಾಗುವಂತಹ 50,000 ಮಣ್ಣಿನ ಹಣತೆಗಳನ್ನು ಖರೀದಿಸಲಾಗಿದೆ. ಹಣತೆಯನ್ನು ಉರಿಸಲು ಸ್ಥಳೀಯ ಭಕ್ತ ವೃಂದ ಸಮಿತಿ ದೇಗುಲದ ಜತೆ ಸಹಕರಿಸಲಿದೆ ಎಂದು ಹೇಳಿದರು.
ಲಕ್ಷದೀಪ, ಚೌತಿ ಮತ್ತು ಪಂಚಮಿಯಂದು ಸುಡುಮದ್ದು ಪ್ರದರ್ಶನವಿದೆ. ಜಾತ್ರೆ ಸಮಯದಲ್ಲಿ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಿದ್ದು, ಅಲ್ಲಲ್ಲಿ ಡಸ್ಟ್‌ಬಿನ್‌ಗಳನ್ನು ಇಡಲಾಗಿದೆ. ತಾತ್ಕಾಲಿಕ ಶೌಚಾಲಯಗಳ ಸಂಖ್ಯೆ ಹೆಚ್ಚಿಸಲಾಗಿದೆ. ಜಾತ್ರೆ ಅವಧಿಯಲ್ಲಿ ಭಕ್ತರ ಅನ್ನಸಂತರ್ಪಣೆಗಾಗಿ ಅಂಗಡಿಗುಡ್ಡೆಯಲ್ಲಿ ಹೆಚ್ಚುವರಿ ವ್ಯವಸ್ಥೆ ಕಲ್ಪಿಸಲಾಗಿದೆ.
ಪಾರ್ಕಿಂಗ್, ಭದ್ರತೆಗೆ ಆದ್ಯತೆ
ಕುಮಾರಧಾರೆಯಿಂದ ಕಾಶಿಕಟ್ಟೆ ತನಕದ ಮುಖ್ಯ ರಸ್ತೆಯ ವಿಸ್ತರಣ ಸ್ಥಳಗಳಲ್ಲಿ, ಜೂನಿಯರ್ ಕಾಲೇಜು ಮೈದಾನ, ಈಗ ಇರುವ ಪಾರ್ಕಿಂಗ್ ಸ್ಥಳಗಳಲ್ಲಿ ವಾಹನ ಪಾರ್ಕಿಂಗ್‌ಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಭದ್ರತೆ ದೃಷ್ಟಿಯಿಂದ ದೇಗುಲದ ಸಿ.ಸಿ. ಕೆಮರಾಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ. ಜಾತ್ರೆ ವೇಳೆ ಹೆಚ್ಚುವರಿ ಪೊಲೀಸ್ ಸಿಬಂದಿ ನಿಯೋಜಿಸಲು ಇಲಾಖೆಗೆ ಸೂಚಿಸಲಾಗಿದೆ ಎಂದರು.
ಚಂಪಾಷಷ್ಠಿ ದಿನ ಬ್ರಹ್ಮರಥ ಸೇವೆ ಸಲ್ಲಿಸುವ ಭಕ್ತರಿಗೆ ವಿಶೇಷವಾಗಿ ಪಾಸ್ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ. ರಥ ಎಳೆಯುವ ವೇಳೆ, ಜಾತ್ರೆ ಅವಧಿಯಲ್ಲಿ ಯಾವುದೇ ಗೊಂದಲಗಳು ಉಂಟಾಗದಂತೆ ಸಂಬಂಧಿಸಿದ ವಿಭಾಗವಾರು ವ್ಯವಸ್ಥೆ ಮಾಡಲಾಗಿದೆ. ಪ್ರತಿ ವಿಭಾಗದಲ್ಲೂ ಸಕಲ ವ್ಯವಸ್ಥೆ ಸಿದ್ಧಗೊಳಿಲಾಗಿದೆ. ಭಕ್ತರಿಗೆ ಯಾವುದೇ ಕೊರತೆ ಆಗದಂತೆ ಎಚ್ಚರ ವಹಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವ್ಯವಸ್ಥಾಪನ ಸಮಿತಿ ಸದಸ್ಯರಾದ ಕೃಷ್ಣಮೂರ್ತಿ ಭಟ್ ಮಹೇಶ್ ಕರಿಕ್ಕಳ, ಬಾಲಕೃಷ್ಣ ಬಳ್ಳೇರಿ,
ಮಾಧವ ಡಿ, ದಮಯಂತಿ ಕೆ.ಎಸ್. ಹಾಗೂ ಶಿವರಾಮ ರೈ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.