ಮಂಗಳೂರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಭೇಟಿ?
Team Udayavani, Sep 29, 2021, 6:30 AM IST
ಮಂಗಳೂರು: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಮುಂದಿನ ತಿಂಗಳು 3 ದಿನಗಳ ರಾಜ್ಯ ಪ್ರವಾಸದ ವೇಳೆ ಮಂಗಳೂರಿಗೆ ಆಗಮಿಸಿ ಎರಡು ರಾತ್ರಿ ವಾಸ್ತವ್ಯವಿರುವ ಸಾಧ್ಯತೆಗಳಿವೆ.
ರಾಷ್ಟ್ರಪತಿ ಅ. 6ರಿಂದ 3 ದಿನಗಳ ಕಾಲ ರಾಜ್ಯ ಪ್ರವಾಸ ನಡೆಸಲಿದ್ದಾರೆ. ಸದ್ಯದ ವೇಳಾ ಪಟ್ಟಿಯಂತೆ ಮೊದಲು ಬೆಂಗಳೂರು ಮತ್ತು ಬಿಳಿಗಿರಿರಂಗನ ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ. ಅನಂತರ ಮಂಗಳೂರಿಗೆ ಆಗಮಿಸಲಿದ್ದಾರೆ.
ರಾಷ್ಟ್ರಪತಿ ಕೋವಿಂದ್ ಅ. 7ರಂದು ಸಂಜೆ ಮಂಗಳೂರಿಗೆ ಆಗಮಿಸಿ ರಾತ್ರಿ ಸರ್ಕ್ಯೂಟ್ ಹೌಸ್‌ನಲ್ಲಿ ವಾಸ್ತವ್ಯವಿರುವ ಸಾಧ್ಯತೆಗಳಿವೆ. ಅ. 8ರಂದು ವಿಶೇಷ ಹೆಲಿಕಾಪ್ಟರ್ ಮೂಲಕ ಶೃಂಗೇರಿ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆಯಲಿದ್ದಾರೆ. ಬಳಿಕ ಮಂಗಳೂರಿಗೆ ವಾಪಸಾಗಿ ಸರ್ಕ್ಯೂಟ್ ಹೌಸ್‌ನಲ್ಲಿ ವಾಸ್ತವ್ಯವಿರಲಿದ್ದಾರೆ.
ವಾಸ್ತವ್ಯ ಸ್ಥಳ ಅಂತಿಮವಾಗಿಲ್ಲ
ರಾಷ್ಟ್ರಪತಿ ಮಂಗಳೂರಿಗೆ ಆಗಮಿಸುವುದು ಅಧಿಕೃತವಾಗಿ ಅಂತಿಮವಾಗಿಲ್ಲ. ಶೃಂಗೇರಿಗೆ ಭೇಟಿ ನೀಡುವ ಸಂದರ್ಭದಲ್ಲಿ ನಗರದಲ್ಲಿ ಅವರ ವಾಸ್ತವ್ಯಕ್ಕೆ ಕೈಗೊಳ್ಳಬೇಕಾದ ವ್ಯವಸ್ಥೆಗಳ ಕುರಿತು ಚರ್ಚೆ ನಡೆಯುತ್ತಿದೆ. ಸದ್ಯ ಭದ್ರತೆ, ವಾಸ್ತವ್ಯ ಮತ್ತು ಊಟೋಪಚಾರದ ಬಗ್ಗೆ ಪೂರ್ವಸಿದ್ಧತೆ ನಡೆಸಲಾಗುತ್ತದೆ. ದೇಶದ ಪ್ರಥಮ ಪ್ರಜೆಯ ಭೇಟಿಯಾಗಿರುವ ಕಾರಣ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಉನ್ನತ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.
ಇದನ್ನೂ ಓದಿ:ಅಭಿಪ್ರಾಯ ಸಂಗ್ರಹಿಸಿ ರಾಜ್ಯ ಸರ್ಕಾರಕ್ಕೆ ಶಿಫಾರಸು: ಕೆ.ಜಯಪ್ರಕಾಶ್ ಹೆಗ್ಡೆ
ಮೊದಲ ಬಾರಿ 2 ದಿನ ವಾಸ್ತವ್ಯ
ರಾಷ್ಟ್ರಪತಿಯವರು ಹಲವು ವರ್ಷಗಳ ಬಳಿಕ ಮಂಗಳೂರಿಗೆ ಆಗಮಿಸುವ ನಿರೀಕ್ಷೆಯಿದೆ. ಅಷ್ಟೇ ಅಲ್ಲ, ದೇಶದ ಪ್ರಥಮ ಪ್ರಜೆ ಮಂಗಳೂರಿ ನಲ್ಲಿ ಎರಡು ದಿನ ವಾಸ್ತವ್ಯವಿದ್ದರೆ ಅದು ನಗರದ ಇತಿಹಾಸದಲ್ಲಿ ಮೊದಲ ಬಾರಿಯ ದಾಗುತ್ತದೆ. ಈ ಹಿಂದೆ ಪ್ರಧಾನಿ ಮೋದಿ ಎರಡಕ್ಕೂ ಹೆಚ್ಚು ಬಾರಿ ಮಂಗಳೂರಿಗೆ ಆಗಮಿಸಿ ವಾಸ್ತವ್ಯವಿದ್ದರು.
ವಾಸ್ತವ್ಯ: ಮಹತ್ವದ ಸಭೆ
ರಾಮನಾಥ ಕೋವಿಂದ್ ರಾಷ್ಟ್ರಪತಿಯಾದ ಬಳಿಕ ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸುವ ನಿರೀಕ್ಷೆಯಿರುವ ಕಾರಣ ಅವರ ವಾಸ್ತವ್ಯಕ್ಕೆ ಭದ್ರತೆಯ ದೃಷ್ಟಿಯಿಂದ ಹೆಚ್ಚು ಸೂಕ್ತ ಸ್ಥಳ ಯಾವುದು ಎನ್ನುವ ಬಗ್ಗೆ ಅಧಿಕಾರಿಗಳ ಮಟ್ಟದಲ್ಲಿ ಮಾತುಕತೆಗಳು ನಡೆಯುತ್ತಿವೆ. ಖಾಸಗಿ ಹೊಟೇಲ್ ನಲ್ಲಿ ವಾಸ್ತವ್ಯ ವಿರುವುದಾದರೆ ಅಲ್ಲಿ ಏನೆಲ್ಲ ಸೌಲಭ್ಯ ಮತ್ತು ಭದ್ರತೆ ವ್ಯವಸ್ಥೆ ಕೈಗೊಳ್ಳಬೇಕು ಎಂಬ ಬಗ್ಗೆ ಮಾಹಿತಿ ಪಡೆಯಲಾಗಿದೆ.
ಖಾಸಗಿ ಹೊಟೇಲ್ ಅಥವಾ ಸರ್ಕ್ಯೂಟ್ ಹೌಸ್ ವಾಸ್ತವ್ಯದ ಬಗ್ಗೆ ಜಿಲ್ಲಾಡಳಿತದಿಂದ ವರದಿಯನ್ನು ಮೇಲಧಿಕಾರಿಗಳಿಗೆ ಕಳುಹಿಸಲಾಗುತ್ತದೆ. ರಾಷ್ಟ್ರಪತಿಭವನದ ಅಧಿಕಾರಿ ಗಳು ಮತ್ತುಭದ್ರತೆಯ ತಂಡದವರು ಅಂತಿಮವಾಗಿ ತೀರ್ಮಾನಿಸು ತ್ತಾರೆ ಎನ್ನಲಾಗಿದೆ.
ಹಿಂದೆಯೂ ಜಿಲ್ಲೆಗೆ ರಾಷ್ಟ್ರಪತಿಗಳ ಭೇಟಿ
1970ರ ಮೇ 16ರಂದು ಆಗಿನ ರಾಷ್ಟ್ರಪತಿ ವಿ.ವಿ. ಗಿರಿ ಅವರು ಮಂಗಳೂರಿಗೆ ಬಂದು ಅಲ್ಲಿಂದ ಧರ್ಮಸ್ಥಳ ಮತ್ತು ಉಡುಪಿಗೆ ಭೇಟಿ ನೀಡಿದ್ದರು. 2009ರ ಮೇ 10ರಂದು ಪ್ರತಿಭಾ ಪಾಟೀಲ್ ಅವರು ಮಂಗಳೂರು ಮೂಲಕ ಶೃಂಗೇರಿಗೆ ಭೇಟಿ ನೀಡಿದ್ದರು. ಅನಂತರ ಪ್ರಣವ್ ಮುಖರ್ಜಿ 2017ರ ಜೂ. 18ರಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ಕೊಲ್ಲೂರು ದೇವಸ್ಥಾನಕ್ಕೆ ತೆರಳಿದ್ದರು. ಈಗಿನ ರಾಷ್ಟ್ರಪತಿ ರಾಮನಾಥ ಕೋವಿಂದ್ 2018ರ ಡಿ. 27ರಂದು ಮಂಗಳೂರು ವಿಮಾನ ನಿಲ್ದಾಣದ ಮೂಲಕ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.