ಇಂದು ಮಂಗಳೂರಿಗೆ ರಾಷ್ಟ್ರಪತಿ; ವ್ಯಾಪಕ ಭದ್ರತೆ
ನಗರದಲ್ಲಿ ವಾಸ್ತವ್ಯ; ಶುಕ್ರವಾರ ಬೆಳಗ್ಗೆ ಶೃಂಗೇರಿ ಭೇಟಿ
Team Udayavani, Oct 7, 2021, 5:45 AM IST
ಮಂಗಳೂರು: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಗುರುವಾರ ಸಂಜೆ ಮಂಗಳೂರಿಗೆ ಆಗಮಿಸಿದ್ದಾರೆ. ನಗರದ ಸರ್ಕೀಟ್ ಹೌಸ್ ನಲ್ಲಿ ವಾಸ್ತವ್ಯ ಹೂಡಲಿರುವ ಅವರು ಶುಕ್ರವಾರ ಬೆಳಗ್ಗೆ ಶ್ರೀ ಕ್ಷೇತ್ರ ಶೃಂಗೇರಿಗೆ ತೆರಳಲಿದ್ದಾರೆ.
ರಾಷ್ಟ್ರಪತಿಗಳ ಮಂಗಳೂರು ಭೇಟಿ ಹಿನ್ನೆಲೆಯಲ್ಲಿ ನಗರ ದಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು ಸರ್ಕೀಟ್ ಹೌಸ್ ಅನ್ನು ಸರ್ವ ರೀತಿಯಲ್ಲಿ ಸಜ್ಜುಗೊಳಿಸಲಾಗಿದೆ. ದೇಶದ ಪ್ರಥಮ ಪ್ರಜೆ ಮಂಗಳೂರಿನಲ್ಲಿ ವಾಸ್ತವ್ಯ ಮಾಡುತ್ತಿರುವುದು ಇದೇ ಮೊದಲು.
ವಿಶೇಷ ವಿಮಾನದ ಮೂಲಕ ಗುರುವಾರ ಸಂಜೆ 6.15ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ರಾಷ್ಟ್ರಪತಿಯವರನ್ನು ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಅವರು ಬರಮಾಡಿಕೊಳ್ಳಲಿದ್ದಾರೆ. ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮೇಯರ್ ಪ್ರೇಮಾನಂದ ಶೆಟ್ಟಿ, ಜಿಲ್ಲಾಧಿಕಾರಿ ಡಾ|ರಾಜೇಂದ್ರ ಕೆ.ವಿ, ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮುಂತಾದವರು ಉಪಸ್ಥಿತರಿರಲಿದ್ದಾರೆ. ಆ ಬಳಿಕ ಅವರು ರಾಜ್ಯಪಾಲರ ಜತೆ ಕದ್ರಿ ಸರ್ಕೀಟ್ ಹೌಸ್ ಗೆ ಆಗಮಿಸಿ ವಾಸ್ತವ್ಯ ಹೂಡಲಿದ್ದಾರೆ.
ಅ. 8ರ ಶುಕ್ರವಾರ ಬೆಳಗ್ಗೆ ಸರ್ಕೀಟ್ ಹೌಸ್ ನಿಂದ ಹೊರಡಲಿರುವ ರಾಷ್ಟ್ರಪತಿ ಹಾಗೂ ರಾಜ್ಯಪಾಲರು 10.55ಕ್ಕೆ ಹೆಲಿಕಾಪ್ಟರ್ ಮೂಲಕ ಶೃಂಗೇರಿಗೆ ತೆರಳಲಿದ್ದಾರೆ. ಇದಕ್ಕಾಗಿ ಮೂರು ಹೆಲಿಕಾಪ್ಟರ್‌ಗಳನ್ನು ಸಿದ್ಧಪಡಿಸಲಾಗಿದೆ. ಶೃಂಗೇರಿಯಿಂದ ಸಂಜೆ 4.55ಕ್ಕೆ ಮಂಗಳೂರಿಗೆ ವಾಪಸಾಗುವ ರಾಷ್ಟ್ರಪತಿಗಳು 5.10ಕ್ಕೆ ಹೊಸದಿಲ್ಲಿಗೆ ತೆರಳಲಿದ್ದಾರೆ. ರಾಜ್ಯಪಾಲರು ರಾತ್ರಿ ಬೆಂಗಳೂರಿಗೆ ತೆರಳಲಿದ್ದಾರೆ.
ಸಿಂಗಾರವಾದ ಸರ್ಕೀಟ್ ಹೌಸ್
ರಾಷ್ಟ್ರಪತಿ ವಾಸ್ತವ್ಯದ ಹಿನ್ನೆಲೆಯಲ್ಲಿ ಸರ್ಕೀಟ್ ಹೌಸ್ ಸಿಂಗಾರಗೊಳಿಸಲಾಗಿದೆ. ಜತೆಗೆ ವಿಮಾನ ನಿಲ್ದಾಣದಿಂದ ಸರ್ಕಿಟ್‌ಹೌಸ್‌ಗೆ ತೆರಳುವ ರಸ್ತೆಯನ್ನು ದುರಸ್ತಿಗೊಳಿಸಲಾಗಿದೆ.
ಸರ್ಕೀಟ್ ಹೌಸ್ ನಲ್ಲಿ ನಡೆಸಿರುವ ಸಿದ್ಧತೆಗಳ ಬಗ್ಗೆ ಹಾಗೂ ಎಚ್ಚರಿಕಾ ಕ್ರಮಗಳ ಕುರಿತು ಬುಧವಾರ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ., ಸಿಇಒ ಡಾ| ಕುಮಾರ್, ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್ ಸೇರಿದಂತೆ ಉನ್ನತ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ:ಕೋವಿಡ್ ಲಸಿಕೆ ಭೀತಿ ಇರುವವರ ಸಂಖ್ಯೆ ಶೇ.7ಕ್ಕೆ ಇಳಿಕೆ
ಸಿದ್ದಗೊಳ್ಳಲಿದೆ ಬಗೆ ಬಗೆಯ ಖಾದ್ಯಗಳು!
ರಾಷ್ಟ್ರಪತಿಯವರ ಊಟೋಪಚಾರದ ಹಿನ್ನೆಲೆಯಲ್ಲಿ ಮುಖ್ಯ ಬಾಣಸಿಗ ದಿಲ್ಲಿಯಿಂದ ಮಂಗಳೂರಿಗೆ ಆಗಮಿಸಿದ್ದಾರೆ. ಅವರ ಜತೆ ನಗರದ ಖಾಸಗಿ ಹೊಟೇಲ್‌ನ 15 ಮಂದಿ ಅಡುಗೆ ಸಿಬಂದಿ ಸಹಕರಿಸಲಿದ್ದಾರೆ. ರಾಷ್ಟ್ರಪತಿಯವರಿಗೆ ಗುರುವಾರ ರಾತ್ರಿ ಗ್ರೀನ್ ಸಲಡ್, ಪರ್ವಾಲ್ ಸಬ್ಜಿ, ಹಾಗಲಕಾಯಿ ಪಲ್ಯ, ಬೇಳೆ ಸಾರು, ಮೊಸರು ದಾಲ್, ರೋಟಿ, ಚಪಾತಿ, ಅನ್ನ ಮೆನು ಸಿದ್ಧಗೊಂಡಿದೆ. ಮರುದಿನ ಬೆಳಗ್ಗಿನ ಉಪಹಾರವಾಗಿ ಇಡ್ಲಿ, ಉತ್ತಪ್ಪಮ್, ಚಟ್ನಿ, ಸಾಂಬಾರ್, ಚಾ/ಕಾಫಿ ಇರಲಿದೆ. ಹಾಲು, ಹಣ್ಣು-ಹಂಪಲು ಸೇರಿದಂತೆ ಇತರ ಕೆಲವು ತಿಂಡಿ-ತಿನಿಸು ಇರಲಿದೆ. ರಾಷ್ಟ್ರಪತಿಯವರ ಪತ್ನಿ ಅವರಿಗೆ ಸಂಜೀರ, ಮದ್ದೂರು ವಡ, ಬಾಳೆಹಣ್ಣು ಪೋಡಿ, ನೀರುದೋಸೆ ಸೇರಿದಂತೆ ಹಲವು ಖಾದ್ಯಗಳನ್ನು ಸಿದ್ಧಪಡಿಸಲಾಗುತ್ತದೆ.
ಎಡಿಜಿಪಿ ಉಸ್ತುವಾರಿಯಲ್ಲಿ ಪೊಲೀಸ್ ಬಂದೋಬಸ್ತ್
ಮಂಗಳೂರು: ಮಂಗಳೂರಿಗೆ ರಾಷ್ಟ್ರಪತಿಯವರು ಆಗಮಿಸುವ ಹಿನ್ನೆಲೆಯಲ್ಲಿ ಗರಿಷ್ಠ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಬುಧವಾರ ಪೊಲೀಸ್ ಸೇರಿದಂತೆ ರಾಷ್ಟ್ರಪತಿಯವರ ಬೆಂಗಾವಲು ವಾಹನಗಳಿಂದ ಬಜಪೆಯಲ್ಲಿರುವ ಮಂಗಳೂರು ವಿಮಾನ ನಿಲ್ದಾಣ ಮತ್ತು ಕದ್ರಿಯ ಸರ್ಕೀಟ್ ಹೌಸ್ ವರೆಗೆ ತಾಲೀಮು ನಡೆಯಿತು. ರಾಜ್ಯ ಅಪರಾಧ ವಿಭಾಗದ ಎಡಿಜಿಪಿ ಹಿತೇಂದ್ರ ಅವರು ಭದ್ರತಾ ವ್ಯವಸ್ಥೆಯ ಉಸ್ತುವಾರಿ ವಹಿಸಲಿದ್ದಾರೆ.
ಸಂಚಾರ ಬದಲಾವಣೆ ಇಲ್ಲ
ರಾಷ್ಟ್ರಪತಿಯವರು ಗುರುವಾರ ಸಂಜೆ ವೇಳೆ ವಿಮಾನ ನಿಲ್ದಾಣದಿಂದ ಸರ್ಕೀಟ್ ಹೌಸ್ ಗೆ ಆಗಮಿಸುವ ಕೆಲವು ನಿಮಿಷಗಳ ಮೊದಲು ಆ ರಸ್ತೆಯಲ್ಲಿ ಸಾರ್ವಜನಿಕ ವಾಹನ ಸಂಚಾರ ನಿರ್ಬಂಧಿಸಿ “ಝೀರೋ ಟ್ರಾಫಿಕ್’ ವ್ಯವಸ್ಥೆ ಮಾಡಲಾಗುತ್ತದೆ. ಸಾರ್ವಜನಿಕರಿಗೆ ತೊಂದರೆ ಯಾಗದಂತೆ ಗರಿಷ್ಠ ಎಚ್ಚರಿಕೆ ವಹಿಸಲಾಗುವುದು. ಸಂಚಾರ ಮಾರ್ಪಾಡು ಮಾಡುವುದಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನ ನಿಲ್ದಾಣ ರಸ್ತೆಯಲ್ಲಿ ಸಂಚಾರ ವ್ಯತ್ಯಯ ಸಾಧ್ಯತೆ
ಮಂಗಳೂರು ನಗರದಿಂದ ವಿಮಾನ ನಿಲ್ದಾಣವರೆಗಿನ ರಸ್ತೆಯಲ್ಲಿ ಸಂಜೆ ವೇಳೆ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಗಳಿರುವುದರಿಂದ ವಿಮಾನ ನಿಲ್ದಾಣಕ್ಕೆ ತೆರಳುವವರು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಹೊರಡುವುದು ಉತ್ತಮ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.