ಅಡಿಕೆ ಧಾರಣೆ ; ಇನ್ನಷ್ಟು ಏರಿಕೆಯ ನಿರೀಕ್ಷೆಯಲ್ಲಿ ಬೆಳೆಗಾರ
Team Udayavani, Feb 3, 2017, 3:45 AM IST
ಪುತ್ತೂರು: ಮಂಗಳೂರು ಚಾಲಿ ಅಡಿಕೆಯ ಧಾರಣೆಯಲ್ಲಿ ಚೇತರಿಕೆ ಕಂಡುಬರುತ್ತಿದೆ. ಜನವರಿ ಅಂತ್ಯಕ್ಕೆ ಸಿಂಗಲ್ ಚೋಲ್ ಮತ್ತು ಹೊಸ ಅಡಿಕೆ ಧಾರಣೆಯಲ್ಲಿ 15ರಿಂದ 40 ರೂ.ನಷ್ಟು ಏರಿಕೆ ಕಂಡಿದೆ.
ಮಾರುಕಟ್ಟೆ ಲೆಕ್ಕಾಚಾರದ ಪ್ರಕಾರ, ಹಳೆ ಮತ್ತು ಹೊಸ ಅಡಿಕೆ ಧಾರಣೆಯಲ್ಲಿ ಇನ್ನಷ್ಟು ಏರಿಕೆ ಕಾಣಲಿದೆ. ನೋಟು ನಿಷೇಧದ ಬಳಿಕ ಇತ್ತೀಚೆಗೆ ಹಣದ ಹರಿವು ಹೆಚ್ಚಳವಾಗಿ, ಪೂರೈಕೆ ವ್ಯವಸ್ಥೆಯಲ್ಲಿ ಸುಧಾರಣೆ ಕಂಡಿರುವುದು ಧಾರಣೆ ಏರಿಕೆಗೆ ಕಾರಣ ಅನ್ನುತ್ತಾರೆ ಕೃಷಿ ಮಾರುಕಟ್ಟೆ ತಜ್ಞರು.
ಹೊಸ ಅಡಿಕೆಗೆ ಏರಿದ ಧಾರಣೆ
ಕ್ಯಾಂಪ್ಕೋದಲ್ಲಿ ಕಳೆದ ವಾರ ಸಿಂಗಲ್ ಚೋಲ್‌ಗೆ 250 ರೂ. ಧಾರಣೆ ಇತ್ತು. ಪ್ರಸ್ತುತ ಧಾರಣೆ 265 ರೂ.ಗೆ ತಲುಪಿದೆ. ಜನವರಿ 2ನೇ ವಾರ ಹೊಸ ಅಡಿಕೆಗೆ 150ರಿಂದ 175ಕ್ಕೆ ಏರಿತ್ತು. ಮೂರನೇ ವಾರ ತಲಾ 5 ರೂ. ಏರಿಕೆ ಕಂಡು, ಧಾರಣೆ 185ಕ್ಕೆ ಜಿಗಿದಿತ್ತು. ಅನಂತರ 3 ದಿನ ತಲಾ 5 ರೂ. ಏರಿಕೆ ಕಂಡು ಈಗ 210 ರೂ.ಗೆ ತಲುಪಿದೆ. ಡಬ್ಬಲ್ ಚೋಲ್ ಧಾರಣೆ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ಹೊರ ಮಾರು ಕಟ್ಟೆಗಳಲ್ಲಿ ಸಿಂಗಲ್ ಚೋಲ್‌ಗೆ 275 ರೂ. ಇದ್ದರೆ, ಹೊಸ ಅಡಿಕೆಗೆ 215 ರೂ. ನಲ್ಲಿ ಖರೀದಿ ಆಗುತ್ತಿದೆ.
ನೋಟು ನಿಷೇಧದ ಪರಿಣಾಮ, ಕಳೆದ ನವೆಂಬರ್‌ನಿಂದ ಅಡಿಕೆ ಧಾರಣೆ ಸ್ಥಿರವಾಗಿತ್ತು. ಧಾರಣೆಯಲ್ಲಿ ವ್ಯತ್ಯಾಸ ಕಾಣದಿದ್ದರೂ ಖರೀದಿ ಪ್ರಕ್ರಿಯೆಯಲ್ಲಿ ಶೇ. 85ರಷ್ಟು ಸ್ಥಗಿತವಾಗಿತ್ತು. ಕ್ಯಾಂಪ್ಕೋ,ಎಪಿಎಂಸಿ ಮತ್ತು ಹೊರ ಮಾರುಕಟ್ಟೆ ಗಳಲ್ಲಿ ಖರೀದಿ ಪ್ರಕ್ರಿಯೆ ಕುಸಿತ ಕಂಡಿತ್ತು. ವಾರಕ್ಕೆ 20 ಸಾವಿರ ರೂ. ತನಕ ಚೆಕ್ ರೂಪದಲ್ಲಿ ಖರೀದಿ ಮಾಡಲಾಗುತ್ತಿತ್ತು. ಕ್ಯಾಂಪ್ಕೋ ತಿಂಗಳಿಗೆ ಓರ್ವ ಸದಸ್ಯ ಬೆಳೆಗಾರನಿಂದ ಐದು ಕಿಂಟ್ವಾಳ್ ಅಡಿಕೆ ಖರೀದಿಸುತ್ತಿದ್ದು, ಆ ಮಿತಿ ಬದಲಾಯಿಸಿ ಈಗ ಮಿತಿ ರಹಿತ ಅಡಿಕೆ ಖರೀದಿಯಲ್ಲಿ ತೊಡಗಿದೆ. ಎಪಿಎಂಸಿ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಅಷ್ಟಾಗಿ ವೇಗ ಪಡೆದಿಲ್ಲ. ಹೊರ ಮಾರುಕಟ್ಟೆಗಳಲ್ಲಿಯೂ ಅಡಿಕೆ ಖರೀದಿ ಏರಿಕೆ ಕಂಡಿದೆ.
ಇಳಿಕೆಯೆಂಬ ತಂತ್ರ!
ನೋಟು ನಿಷೇಧದ ಅನಂತರ, ಖರೀದಿ ಮತ್ತು ಮಾರಾಟ ಪ್ರಕ್ರಿಯೆ ಯಲ್ಲಿ ಕುಸಿತ ಕಂಡಿತ್ತು. ಹೊರ ಮಾರುಕಟ್ಟೆಗಳಲ್ಲಿ ನೋಟು ನಿಷೇಧದ ಕಾರಣವೊಡ್ಡಿ, ಖರೀದಿ ಪ್ರಕ್ರಿಯನ್ನು ತಡೆ ಹಿಡಿಯಲಾಗಿತ್ತು. ಮುಂದೆ ಅಡಿಕೆ ಧಾರಣೆ ಪಾತಾಳಕ್ಕೆ ಇಳಿಯಬಹುದು ಎಂಬ ಆತಂಕದಿಂದ, ಕೆಲವು ಬೆಳೆಗಾರರು ಬಿಳಿ ಚೀಟಿ ಖರೀದಿದಾರರಿಗೆ ಕಡಿಮೆ ಧಾರಣೆಗೆ ಅಡಿಕೆ ಮಾರಾಟ ಮಾಡಿದ್ದಾರೆ. ಇನ್ನು ಕೆಲವರು ಹಣದ ಅಭಾವದಿಂದ ಸಿಕ್ಕಿದಷ್ಟು ಲಾಭ ಎಂದು ಮಾರಿದ್ದಾರೆ.
ಆದರೆ ಹೆಚ್ಚಿನ ಬೆಳೆಗಾರರು ಇಂತಹ ತಂತ್ರಕ್ಕೆ ಸಿಲುಕದೆ ಅಡಿಕೆಯನ್ನು ಮಾರುಕಟ್ಟೆಗೆ ಬಿಟ್ಟಿರಲಿಲ್ಲ. ಪರಿಣಾಮ ಧಾರಣೆ ಇಳಿಸುವ ತಂತ್ರಗಾರಿಕೆ ಈಡೇರಿಲ್ಲ. ಈಗ ತನ್ನಿಂತಾನೆ ಬೇಡಿಕೆಯೂ ಹೆಚ್ಚಾಗಿದೆ. ಅದಕ್ಕೆ ತಕ್ಕಂತೆ ಧಾರಣೆಯೂ ಏರುಮುಖವಾಗಿದೆ. ಮಾರುಕಟ್ಟೆಯ ಸ್ಥಿತಿಗತಿ ಅರಿತು ಬೆಳೆಗಾರರು ಜಾಣ್ಮೆಯ ನಿರ್ಧಾರ ತೆಗೆದುಕೊಂಡಲ್ಲಿ ಖರೀಧಿದಾರರ ಇಳಿಕೆಯೆಂಬ ತಂತ್ರಗಾರಿಕೆ ಮೇಲುಧಿಗೈ ಸಾಧಿಸಲು ಸಾಧ್ಯವಾಗದು.
250 ರೂ. ಗಡಿ ದಾಟಲಿದೆ?
ಮಾರುಕಟ್ಟೆ ಲೆಕ್ಕಾಚಾರ ಪ್ರಕಾರ ಹೊಸ ಅಡಿಕೆ ಧಾರಣೆ ಸದ್ಯದಲ್ಲೇ 250 ರೂ. ದಾಟಲಿದೆ. ಹೊರ ರಾಜ್ಯದ ಮಾರುಕಟ್ಟೆಗಳಲ್ಲಿ ಅಡಿಕೆಗೆ ಬೇಡಿಕೆ ಹೆಚ್ಚಾದ ಕಾರಣ, ಈ ಧಾರಣೆ ಏರಿಕೆಗೆ ಕಾರಣ ಎನ್ನಲಾಗಿದೆ. ನೋಟು ನಿಷೇಧದ ಅನಂತರ ನಿರೀಕ್ಷಿತ ಪ್ರಮಾಣದ ಅಡಿಕೆ ಪೂರೈಕೆ ಆಗಿರಲಿಲ್ಲ. ಪರಿಣಾಮ, ಅಡಿಕೆ ಆಧಾರಿತ ಉತ್ಪನ್ನಗಳ ತಯಾರಿಗೂ ಹೊಡೆತ ಬಿದ್ದಿತ್ತು. ಎಟಿಎಂನಿಂದ ಹಣ ಡ್ರಾ ಮಾಡುವ ಮಿತಿಯನ್ನು ತೆರವುಗೊಳಿಸಿರುವುದು ಹಾಗೂ ಇತರ ಕೆಲವು ಪೂರಕ ಕ್ರಮಗಳನ್ನು ತೆಗೆದುಕೊಂಡಿರುವುದರಿಂದ ಆರ್ಥಿಕ ಸ್ಥಿತಿಯೂ ಸುಧಾರಣೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಅಡಿಕೆ ಉತ್ಪನ್ನಗಳಿಗೂ ಬೇಡಿಕೆ ಕಂಡು ಬಂದಿದೆ. ಹಾಗಾಗಿ ಅಡಿಕೆ ಖರೀದಿಯಲ್ಲೂ ಬೇಡಿಕೆ ಹೆಚ್ಚಿದೆ ಎನ್ನುತ್ತಾರೆ ಅಡಿಕೆ ಮಾರುಕಟ್ಟೆ ತಜ್ಞರು.
– ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.