ಅಕ್ಕಿ ಧಾರಣೆ ಗಗನಕ್ಕೆ; ಬೆಳ್ತಿಗೆ, ಕುಚ್ಚಲು ದರ ಸಮಾನ!
Team Udayavani, Feb 22, 2017, 2:34 PM IST
ವಿಟ್ಲ: ಈ ತನಕ ಬೇಳೆಗಳ ಬೆಲೆ ಏರಿಕೆಯಾಗುತ್ತಿತ್ತು. ಸಕ್ಕರೆ, ಬೆಲ್ಲ, ತರಕಾರಿ ಧಾರಣೆ ಏರಿಕೆಯನ್ನು ಕಾಣುತ್ತಿತ್ತು. ಈಗ ನೇರವಾಗಿ ಹೊಟ್ಟೆಗೇ ಏಟು ಬಿದ್ದಿದೆ. ಅಂದರೆ ಹೊಟ್ಟೆಗೆ ಪ್ರಧಾನ ಆಹಾರವಾಗಿರುವ ಅಕ್ಕಿ ಧಾರಣೆ ಗಗನಕ್ಕೇರಿದೆ.
ಗಮನಿಸಲೇಬೇಕಾದ ಅಂಶವೆಂದರೆ ಈ ತನಕ ಬೆಳ್ತಿಗೆ ಮತ್ತು ಉತ್ತಮ ಕುಚ್ಚಲು ಅಕ್ಕಿ ಧಾರಣೆ ಒಂದೇ ಮಟ್ಟಕ್ಕೆ ತಲುಪಿದ್ದಿಲ್ಲ. ಸದಾ 6 ರೂ.ಗಳ ವ್ಯತ್ಯಾಸವನ್ನು ಹೊಂದಿರುತ್ತಿತ್ತು. ಪ್ರಸ್ತುತ ಸೋನಾ ಮಸೂರಿ ಬೆಳ್ತಿಗೆ ಮತ್ತು ಉತ್ತಮ ಕುಚ್ಚಲಕ್ಕಿ ಸಮಾನವಾಗಿ ಅಂದರೆ ಕೆ.ಜಿ.ಗೆ 44 ರೂ.ಗಳಿಗೇರಿದೆ. ಇದು ಇನ್ನಷ್ಟು ಏರಿಕೆಯನ್ನು ಕಾಣುವ ಸಾಧ್ಯತೆಯಿದೆ.
6 ರೂ. ವ್ಯತ್ಯಾಸ ಮಾಯ
ಸಾಮಾನ್ಯವಾಗಿ ಕೆ.ಜಿ.ಗೆ 23ರಿಂದ 25 ರೂ.ಗಳ ಇದ್ದ ಕುಚ್ಚಲಕ್ಕಿ ಧಾರಣೆ 32ಕ್ಕೇರಿದೆ. ಮಧ್ಯಮ ಧಾರಣೆಯನ್ನು ಹೊಂದಿದ್ದ ಅಕ್ಕಿಯೂ 36ರಿಂದ 38ಕ್ಕೇರಿದೆ. ಅಲ್ಲದೇ ಉತ್ತಮ ಗುಣಮಟ್ಟದ ಕುಚ್ಚಲಕ್ಕಿ ಬೆಲೆ 44 ರೂ.ಗಳಿಗೇರಿದೆ. ಈ ಧಾರಣೆ ಇತಿಹಾಸದಲ್ಲಿ ದೊಡ್ಡ ದಾಖಲೆಯಾಗಿದೆ. ಈ ತನಕವೂ ಸೋನಾ ಮಸೂರಿ ಬೆಳ್ತಿಗೆ ಮತ್ತು ಉತ್ತಮ ಕುಚ್ಚಲಕ್ಕಿಗೆ ಕೆ.ಜಿ.ಯಲ್ಲಿ 5ರಿಂದ 6ರೂ. ಗಳ ವ್ಯತ್ಯಾಸವಿರುತ್ತಿತ್ತು. ಇದು ಸಮಾನವಾಗಿ ಏರಿ ನಿಂತಿರುವುದು ಇದೇ ಮೊದಲ ಬಾರಿ.
ಕಳೆದ ಎರಡು ವಾರಗಳ ಬೆಳವಣಿಗೆಯಲ್ಲಿ ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲವಾಗಿದೆ. ಏಕಾಏಕಿ ಅಕ್ಕಿಯ ಧಾರಣೆಯಲ್ಲಿ ಏರಿಕೆ ಕಂಡುಬಂದಿದೆ. ಅಕ್ಕಿ ಮಿಲ್ಲುಗಳಲ್ಲಿ, ದಿನಸಿ ಅಂಗಡಿಗಳಲ್ಲಿ ಕೋಲಾಹಲವನ್ನೆಬ್ಬಿಸಿದೆ. ನೇರವಾಗಿ ಹೊಟ್ಟೆಗೇ ಏಟು ಬಿದ್ದಿದೆ ಎನ್ನಲಾಗುತ್ತಿದೆ. ಆದರೆ ಬೆಳ್ತಿಗೆ ಮಾತ್ರ ಮತ್ತೆ ಏರಿಕೆ ಕಂಡು 6 ರೂ.ಗಳ ವ್ಯತ್ಯಾಸವನ್ನು ಉಳಿಸಿಕೊಳ್ಳುವುದಕ್ಕೆ ಮಾರುಕಟ್ಟೆ ಸಜ್ಜಾಗುತ್ತಿದೆ ಎಂದು ಅಧಿಕೃತ ಮೂಲಗಳಿಂದ ಕೇಳಿ ಬರುತ್ತಿದೆ.
ಭತ್ತಕ್ಕೆ ಏರಿಕೆ, ಕೃಷಿಕರು ಖುಷ್
ಭತ್ತದ ಧಾರಣೆಯಲ್ಲಿಯೂ ಏರಿಕೆ ದಾಖಲಾಗಿದೆ. ಮಾರುಕಟ್ಟೆಯಲ್ಲಿ ಕಳೆದ ವರ್ಷದವರೆಗೂ ಸ್ಥಳೀಯ ಕೃಷಿಕರು ಬೆಳೆದ ಭತ್ತಕ್ಕೆ ಕೆ.ಜಿ.ಗೆ 17 ರೂ.ಗಳಿಗಿಂತ ಹೆಚ್ಚು ದರ ನೀಡಿ ಖರೀದಿಸುವವರಿರಲಿಲ್ಲ. ಇದು ಬೆಳೆಗಾರರಿಗೆ ನಷ್ಟವನ್ನುಂಟು ಮಾಡುತ್ತಿತ್ತು. ಕಾರ್ಮಿಕರ ಅಭಾವ, ಕೂಲಿ ಹೆಚ್ಚಳ, ಯಂತ್ರಗಳ ಬಾಡಿಗೆ ಇತ್ಯಾದಿ ಲೆಕ್ಕಾಚಾರವನ್ನು ಹಾಕಿದ ಭತ್ತದ ಬೆಳೆಗಾರ ಅಲ್ಲಿ ಅಡಿಕೆ ತೋಟ ಬೆಳೆದಿರುವುದು ಸುಳ್ಳಲ್ಲ. ಇನ್ನು ಕೆಲವೆಡೆ ಬೆಳೆ ಬೆಳೆಯದೇ ಗದ್ದೆಯನ್ನು ಹಡಿಲು ಬಿಟ್ಟಿದ್ದಾರೆ. ತರಕಾರಿಯನ್ನೂ ಬೆಳೆಯದೇ ಪೇಟೆಯಿಂದ ತರಕಾರಿ ಖರೀದಿಸಿ, ಉಪಯೋಗಿಸುವುದೇ ಲಾಭದಾಯಕವೆನಿಸಿತ್ತು. ಇತ್ತೀಚೆಗೆ ತರಕಾರಿ ಧಾರಣೆಯೂ ಗಗನಕ್ಕೇರಿದ ಬಳಿಕ ಕೆಲವರು ಮತ್ತೆ ತರಕಾರಿ ಬೆಳೆಯುವ ಆಸಕ್ತಿಯನ್ನು ತೋರಿದ್ದಾರೆ. ಆದರೆ ಈ ನಡುವೆ ನೀರಿನ ಅಭಾವವೂ ಉಂಟಾಗಿದೆ.
ಮಳೆ ಇಲ್ಲ
ಭತ್ತ ಬೆಳೆಯುವ ನಾಡಲ್ಲೆಲ್ಲ ಮಳೆ ಬೀಳಲಿಲ್ಲ. ನೀರಿಲ್ಲದೇ ಇರುವುದರಿದ ಎರಡನೇ ಬೆಳೆಯನ್ನು ಬೆಳೆಯಲಿಲ್ಲ. ತುಮಕೂರಿನ ಅಣೆಕಟ್ಟೆಗಳಲ್ಲಿ ನೀರಿಲ್ಲ. ಪರಿಣಾಮವಾಗಿ ಬೆಳೆ ಇಲ್ಲ. ಅದೇ ಕಾರಣಕ್ಕೆ ಅಲ್ಲಿಯ ಅಕ್ಕಿ ಬರುತ್ತಿಲ್ಲ. ಎಷ್ಟು ದರವನ್ನು ನೀಡಿಯಾದರೂ ಅಕ್ಕಿ ದಾಸ್ತಾನು ಮಾಡುವ ಆತುರ ಜನರಲ್ಲಿದೆ. ದಕ್ಷಿಣ ಭಾರತದಲ್ಲಿ ಅಕ್ಕಿಯೇ ಪ್ರಮುಖ ಆಹಾರವಾಗಿರುವುದರಿಂದ ಎಲ್ಲೆಡೆ ನಿರಂತರ ಬೇಡಿಕೆ ಇದೆ. ಇದನ್ನು ಅರಿತ ದೊಡ್ಡ ಕುಳಗಳು ಮಧ್ಯಪ್ರದೇಶ, ಒಡಿಶಾದಿಂದ ಅಕ್ಕಿ ಖರೀದಿಸಿ, ಕೃತಕ ಅಭಾವ ಸೃಷ್ಟಿಸಿ, ದರದಲ್ಲಿ ಇನ್ನಷ್ಟು ಏರಿಕೆಯನ್ನು ದಾಖಲಿಸುವ ಸಾಧ್ಯತೆಯಿದೆ. ಮಾರುಕಟ್ಟೆಯಲ್ಲಿ ಅಕ್ಕಿಯ ಅಭಾವವನ್ನು ಸೃಷ್ಟಿಸುವ ಸಾಧ್ಯತೆಯೂ ಇದೆ.
ಸಕ್ಕರೆ ಕಹಿಯಾಯಿತೇ ?
ಸಕ್ಕರೆ ಬೆಲೆಯೂ ಏರಿಕೆ ದಾಖಲಿಸುತ್ತಿದೆ. ಕೆ.ಜಿ.ಗೆ 38 ರೂ.ಗಳ ಧಾರಣೆಯಿದ್ದ ಸಕ್ಕರೆ ಈಗ 42 ರೂ.ಗಳಿಗೇರಿದೆ. ಹೊರಮಾರುಕಟ್ಟೆಯಲ್ಲಿ 45ಕ್ಕೇರಿದೆ. ಇದು 48ಕ್ಕೇರುವ ಸ್ಪಷ್ಟ ಸೂಚನೆ ಮಾರುಕಟ್ಟೆ ತಜ್ಞರದ್ದು. ಕೆ.ಜಿ.ಗೆ 30 ರೂ. ಧಾರಣೆಯಿದ್ದ ಹುರುಳಿ 60ಕ್ಕೇರಿದೆ. ಆಹಾರ ಉತ್ಪನ್ನಗಳ ಧಾರಣೆ ಏರಿಕೆಯು ಜನಜೀವನವನ್ನು ಅಸ್ತವ್ಯಸ್ತಗೊಳಿಸುವ ಸಾಧ್ಯತೆಯಿದೆ.
ಭತ್ತಕ್ಕೆ ಕೆ.ಜಿ.ಗೆ 22 ರೂ.
ಈ ವರ್ಷ ಭತ್ತದ ಇತಿಹಾಸದಲ್ಲೇ ದಾಖಲೆಯ ಏರಿಕೆ ಕಂಡುಬಂದಿದ್ದು, ಕೆ.ಜಿ.ಗೆ 22 ರೂ.ಗಳ ದರವನ್ನು ಕೃಷಿಕರು ಪಡೆಯುತ್ತಿದ್ದಾರೆ. ಇದು ಕೃಷಿಕರನ್ನು ಸಂತಸಪಡುವಂತೆ ಮಾಡಿದೆ. ಅಡಿಕೆ, ತೆಂಗು, ಕಾಳುಮೆಣಸು ಮೊದಲಾದ ಕೃಷ್ಯುತ್ಪನ್ನಗಳ ಧಾರಣೆ ಏರಿಕೆಯನ್ನು ದಾಖಲಿಸುತ್ತಿರುವುದರಿಂದ ಭತ್ತದ ದರವೂ ಅದೇ ಸಾಲಿನಲ್ಲಿರುವುದು ಸಹಜವಾಗಿ ಖುಷಿಯನ್ನು ತಂದಿದೆ.
ಕಾರಣವೇನು ?
ಏಕಾಏಕಿ ಇಷ್ಟೊಂದು ಏರಿಕೆಗೆ ಕಾರಣವೇನು ಎಂಬ ಕುತೂಹಲ ಸಹಜವಾಗಿ ಕೃಷಿಕರಲ್ಲೂ ಮೂಡಿದೆ. ಭತ್ತದ ಬೆಳೆ ಕುಸಿತ ಆಗಿರುವುದೇ ಕಾರಣ ಎನ್ನುವುದು ಹಲವರ ಅಭಿಪ್ರಾಯ. ಬರದ ಸಮಸ್ಯೆ ವ್ಯಾಪಿಸಿರುವುದರಿಂದ ನೀರಿಲ್ಲದೇ ಎಲ್ಲೂ ಬೆಳೆ ತೆಗೆಯಲಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಕೃಷಿಕರಿಗೆ ಕೈಗೆ ಬಂದ ತುತ್ತು ಬಾಯಿಗೆ ಇಲ್ಲವೆಂಬಂತೆ, ಬೆಳೆ ಇಲ್ಲದಾಗ ಬೆಲೆ ಏರಿ ಪ್ರಯೋಜನವಿಲ್ಲದಾಗಿದೆ ಎನ್ನುತ್ತಿದ್ದಾರೆ.
– ಉದಯಶಂಕರ್ ನೀರ್ಪಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.