ಸಮುದ್ರದಲ್ಲಿ ಮುಳುಗಿರುವ ಪ್ರಿನ್ಸೆಸ್ ಮಿರಾಲ್‌ಗೆ “ಆರೆಸ್ಟ್’ ಆದೇಶ!
ಹಡಗಿನ ಬಾಕಿ ಪಾವತಿಗಾಗಿ ಹೈಕೋರ್ಟ್ ಮೊರೆ ಹೋದ ಯುಎಇ ಸಂಸ್ಥೆ
Team Udayavani, Oct 31, 2022, 8:46 AM IST
ಮಂಗಳೂರು : ಉಳ್ಳಾಲದ ಬಟ್ಟಪ್ಪಾಡಿ ಬಳಿ ಸಮುದ್ರದಲ್ಲಿ ಮುಳುಗಿರುವ ಪ್ರಿನ್ಸೆಸ್ ಮಿರಾಲ್ ಹಡಗನ್ನು “ಆರೆಸ್ಟ್’ ಮಾಡಬೇಕು!
ರಾಜ್ಯ ಹೈಕೋರ್ಟ್ ಹೀಗೊಂದು ಆದೇಶ ನೀಡಿರುವ ವಿಚಾರ ತಿಂಗಳ ಬಳಿಕ ಬಹಿರಂಗಗೊಂಡಿದೆ. ಒಂದೆಡೆ ಹಡಗಿನಲ್ಲಿರುವ ತೈಲ ಹೊರತೆಗೆಯುವುದಕ್ಕೆ ವೇದಿಕೆ ಸಜ್ಜಾಗುತ್ತಿರುವಾಗಲೇ ಹೈಕೋರ್ಟ್‌ನಲ್ಲಿ ನಡೆದ ಈ ಬೆಳವಣಿಗೆಯಿಂದ ಜಿಲ್ಲಾಡಳಿತದ ಯತ್ನ ಹಿನ್ನಡೆ ಕಾಣುವಂತಾಗಿದೆ.
ಯುಎಇಗೆ ಸೇರಿದ ಮೊಂಜಾಸಾ ಡಿಎಂಸಿಸಿ ಎಂಬ ಕಂಪೆನಿಯು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ತನಗೆ ಶಿಪ್ ಬಂಕರಿಂಗ್ (ತೈಲ ಪೂರೈಕೆ) ಕುರಿತು ತನಗೆ ಬರಬೇಕಾದ 1,71,301 ಅಮೆರಿಕನ್ ಡಾಲರ್ (ಸುಮಾರು 1.39 ಕೋಟಿ ರೂ.) ಮೊತ್ತ ಬಂದಿಲ್ಲ, ಅದು ಬರುವ ವರೆಗೆ ಈ ಹಡಗನ್ನು ಆರೆಸ್ಟ್ ಮಾಡದಿದ್ದರೆ ತನಗೆ ನಷ್ಟ ಉಂಟಾಗಲಿದೆ, ಎನ್‌ಎಂಪಿಎ ವ್ಯಾಪ್ತಿಯಲ್ಲಿರುವ ಈ ಹಡಗನ್ನು ಅದರ ಭಾಗಗಳಾದ ಹಲ್, ಗಿಯರ್, ಬಂಕರ್ ಮಷಿನರಿ, ಫರ್ನಿಚರ್ ಸಹಿತ ಆರೆಸ್ಟ್ ಮಾಡುವಂತೆ ವಾರಂಟ್ ಹೊರಡಿಸಬೇಕು ಹಾಗೂ ಅದನ್ನು ಮಾರಾಟ ಮಾಡಿ ಬರುವ ಮೊತ್ತದಿಂದ ತನ್ನ ನಷ್ಟವನ್ನು ಭರಿಸುವಂತೆ ಆದೇಶಿಸಬೇಕು ಎಂದು ಕೇಳಿಕೊಂಡಿತ್ತು. ಅದರಂತೆ ವಿಚಾರಣೆ ನಡೆಸಿರುವ ಹೈಕೋರ್ಟ್ ಕಳೆದ ತಿಂಗಳು ಆದೇಶ ನೀಡಿ ಹಡಗನ್ನು ಆರೆಸ್ಟ್ ಮಾಡುವಂತೆ ನವಮಂಗಳೂರು ಬಂದರು ಪ್ರಾಧಿಕಾರಕ್ಕೆ ಆದೇಶ ನೀಡಿದೆ. ಆದೇಶದಲ್ಲಿ ಅಡ್ಮಿರಾಲ್ಟಿ (ಜುರಿಸ್ಟಿಕ್ಷನ್ಸ್ ಆ್ಯಂಡ್ ಸೆಟ್ಲ ಮೆಂಟ್ ಆಫ್ ಮೆರಿಟೈಂ ಕ್ಲೇಮ್ಸ್) ಕಾಯಿದೆ 2017ಯನ್ನು ಪ್ರಸ್ತಾವಿಸಲಾಗಿದೆ.
ಪ್ರಸ್ತುತ ಎನ್‌ಎಂಪಿಎ ಹೇಳುವ ಪ್ರಕಾರ ಈ ನೌಕೆ ಅದರ ವ್ಯಾಪ್ತಿಯಲ್ಲಿಲ್ಲ; ಬದಲಾಗಿ ಹಳೆ ಬಂದರು (ರಾಜ್ಯ ಸರಕಾರ ಅಧೀನ) ವ್ಯಾಪ್ತಿಯಲ್ಲಿದ್ದು, ಜಿಲ್ಲಾಡಳಿತ ಈ ಕುರಿತು ಕ್ರಮ ಕೈಗೊಳ್ಳಬೇಕಾಗುತ್ತದೆ.
ಇದನ್ನೂ ಓದಿ : ನವೀಕರಣಗೊಂಡ ನಾಲ್ಕೇ ದಿನಕ್ಕೆ ಕುಸಿದು ಬಿದ್ದ ಸೇತುವೆ :132 ಮಂದಿ ಸಾವು, 177 ಮಂದಿಯ ರಕ್ಷಣೆ
ಹೈಕೋರ್ಟ್‌ಗೆ ಮನವಿ ಮಾಡಲು ತೀರ್ಮಾನ
ಹಡಗಿನ ಆರೆಸ್ಟ್ ಆದೇಶವೀಗ ಅದರ ತೆರವಿಗಾಗಿ ಮುಂದುವರಿಯುತ್ತಿದ್ದ ನೌಕಾಯಾನ ಮಹಾ ನಿರ್ದೇಶಕರ ಕಚೇರಿ, ದ.ಕ. ಜಿಲ್ಲಾಡಳಿತಕ್ಕೆ ತಾತ್ಕಾಲಿಕ ಆಘಾತ ತಂದೊಡ್ಡಿದೆ.
ಹಡಗಿನಲ್ಲಿರುವ ಸುಮಾರು 220 ಟನ್ ತೈಲವು ಸೋರಿಕೆಯಾದರೆ ಸಮುದ್ರ, ಪರಿಸರಕ್ಕೆ ತುಂಬಲಾರದ ನಷ್ಟ, ಅಪಾಯ ತಂದೊಡ್ಡಬಹುದು ಎಂದು ಸರಕಾರಕ್ಕೆ ಪತ್ರ ಬರೆದು, ಸರಕಾರದ ಮೂಲಕ ಹೈಕೋರ್ಟ್‌ಗೆ ತೈಲ ತೆರವಿಗೆ ಅವಕಾಶ ಕೋರಿ ಮನವಿ ಮಾಡಿಕೊಳ್ಳಲಾಗುವುದು ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.
ಇದಕ್ಕೆ ಮೊದಲು ಹಡಗಿನಲ್ಲಿರುವ ತೈಲ ತೆರವಿಗೆ ಸಾಕಷ್ಟು ಸಿದ್ಧತೆ ನಡೆಸಲಾಗಿತ್ತು. ಹಿಂದೆ ಎರಡು ಸಂಸ್ಥೆಗಳು ಇದರಲ್ಲಿನ ತೈಲ ಹೊರತೆಗೆ ಯುವುದಾಗಿ ಹೇಳಿದ್ದರೂ ಸಾಕಷ್ಟು ಸಿದ್ಧತೆ, ತಂತ್ರಜ್ಞಾನ ಇಲ್ಲದ ಕಾರಣ ಹಿಂಜರಿದಿದ್ದವು. ಈಗ ಮೂರನೇ ಸಂಸ್ಥೆ ಗುಜರಾತ್ ಮೂಲದ ಬನ್ಸಾಲ್ ಎಂಡೆವರ್ ಅಂತಿಮಗೊಂಡಿದೆ. ಒಂದೆಡೆ ಹವಾಮಾನವೂ ಸೂಕ್ತವಾಗಿರುವುದರಿಂದ ತೈಲ ತೆರವಿಗೆ ಡಿಜಿ ಶಿಪ್ಪಿಂಗ್ ಹಾಗೂ ಜಿಲ್ಲಾಡಳಿತ ಶ್ರಮಿಸುತ್ತಿದ್ದವು. ತೈಲ ತೆರವಿಗೆ ಪೂರ್ವಭಾವಿಯಾಗಿ ಅಂಡರ್‌ವಾಟರ್ ಸರ್ವೆ ನಡೆಸಿ ಸಿದ್ಧತೆಗಳನ್ನು ಕೈಗೊಳ್ಳಲಾಗಿತ್ತು.
ಜೂನ್‌ನಲ್ಲಿ ಮುಳುಗಿದ್ದ ಹಡಗು
ಇದೇ ವರ್ಷ ಜೂ. 21ರಂದು ಉಳ್ಳಾಲ ಬಟ್ಟಪ್ಪಾಡಿ ಸಮುದ್ರದಲ್ಲಿ ಪ್ರಿನ್ಸೆಸ್ ಮಿರಾಲ್ ಅಪಾಯಕ್ಕೆ ಸಿಲುಕಿತ್ತು. ಅದರಲ್ಲಿ ರಂಧ್ರ ಕಾಣಿಸಿಕೊಂಡು ನೀರು ಒಳಸೇರಿತ್ತು. ಅದರಲ್ಲಿದ್ದ 15 ಸಿರಿಯನ್ ನಾವಿಕರನ್ನು ಕೋಸ್ಟ್ ಗಾರ್ಡ್ ರಕ್ಷಿಸಿತ್ತು. ಆ ಬಳಿಕ ಬಟ್ಟಪ್ಪಾಡಿಯಲ್ಲಿ ಹಡಗಿನ ತಳವು ನೆಲಕ್ಕೆ ತಾಗಿ ನಿಂತಿದ್ದು, ಚಲಿಸುವ ಸಾಧ್ಯತೆ ಇಲ್ಲದೆ ಮುಕ್ಕಾಲು ಭಾಗ ಮುಳುಗಿದ ಸ್ಥಿತಿಯಲ್ಲಿದೆ. ಅದರಲ್ಲಿ 160 ಟನ್ ಫರ್ನೆಸ್ ಆಯಿಲ್ ಹಾಗೂ 60 ಟನ್ ಡೀಸೆಲ್ ಇರುವುದಾಗಿ ಮಾಹಿತಿ ಇದೆ. ಚೀನದಿಂದ ಲೆಬನಾನ್‌ಗೆ 8,000 ಟನ್ ತೂಕದ ಸ್ಟೀಲ್ ಕಾಯಿಲ್ ಸಾಗಿಸುತ್ತಿದ್ದ ಹಡಗು ಇದಾಗಿತ್ತು.
– ವೇಣುವಿನೋದ್ ಕೆ.ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.