ಪುತ್ತೂರು: ‘ರೆಕಾರ್ಡ್ ರೂಂ’ ಸಮಸ್ಯೆಗೆ ಮುಕ್ತಿಯಿಲ್ಲ!
Team Udayavani, Jun 29, 2017, 10:26 PM IST
ಪುತ್ತೂರು: ಎನ್‌ಸಿಆರ್, ಒಡಿಆರ್, ಜಮೀನಿನ ಮೂಲ ದಾಖಲೆ ಸೇರಿದಂತೆ 2 ಲಕ್ಷ ಭೂ ದಾಖಲೆಗಳನ್ನು ಹೊಂದಿರುವ ಕಂದಾಯ ಇಲಾಖೆಯ ರೆಕಾರ್ಡ್ ರೂಂ (ಅಭಿಲೇಖಾಲಯ) ಅಸುರಕ್ಷಿತ ! ಒಂದೇ ಸೂರಿನಲ್ಲಿ ಎಲ್ಲ ಕಚೇರಿಗಳು ಕಾರ್ಯನಿರ್ವಹಿಸಬೇಕು ಎಂಬ ಉದ್ದೇಶದಿಂದ 2015ರಲ್ಲಿ ಸುಸಜ್ಜಿತ ಮಿನಿವಿಧಾನಸೌಧ ನಿರ್ಮಾಣಗೊಂಡಿತ್ತು. ಕಂದಾಯ ಇಲಾಖೆಯ ಎಲ್ಲ ವಿಭಾಗಗಳು ಅಲ್ಲಿಗೆ ಸ್ಥಳಾಂತರಗೊಂಡಿದ್ದರೂ ರೆಕಾರ್ಡ್ ರೂಂ ಬ್ರಿಟಿಷ್ ಕಾಲದ ಬಂದೀಖಾನೆ ಕಟ್ಟಡದೊಳಗೆ ಏಕಾಂಗಿಯಾಗಿ ಉಳಿದಿದೆ.
ಬಂದೀಖಾನೆಯೊಳಗೆ ಬಂಧನ!
ಈಗಿನ ರೆಕಾರ್ಡ್ ರೂಂ ಇರುವ ಕೋಣೆ ಮತ್ತು ಇಡೀ ಕಟ್ಟಡ ಸಮುಚ್ಚಯ ಬ್ರಿಟಿಷ್ ಕಾಲದ್ದು. ಸ್ವಾತಂತ್ರ್ಯಪೂರ್ವದಲ್ಲಿ ಇಲ್ಲಿ ಕೋರ್ಟ್ ಮತ್ತು ಬಂದೀಖಾನೆ ಇತ್ತು. ಅನಂತರ ಇದನ್ನು ತಾಲೂಕು ಕಚೇರಿ ಯಾಗಿ ಪರಿವರ್ತಿಸಿ ಕಂದಾಯ ವಿಭಾಗ, ಚುನಾವಣಾ ವಿಭಾಗ, ಆಹಾರ ಇಲಾಖೆಗಳನ್ನು ಸೇರಿಸಲಾಗಿತ್ತು. ಅಟಲ್‌ಜಿ ಜನಸ್ನೇಹಿ ಕೇಂದ್ರ, ಭೂಮಿ ಶಾಖೆಯೂ ಇತ್ತು. ಅದರೊಂದಿಗೆ ರೆಕಾರ್ಡ್ ರೂಂ ಕೂಡ ಸೂಕ್ತ ಭದ್ರತೆಯ ಕಣ್ಗಾವಲಿನಲ್ಲಿತ್ತು. 2015ರ ಮಾರ್ಚ್‌ನಲ್ಲಿ ರೆಕಾರ್ಡ್ ರೂಂ ಹೊರತುಪಡಿಸಿ ಉಳಿದೆಲ್ಲ ಕಚೇರಿಗಳು ಮಿನಿ ವಿಧಾನ ಸೌಧಕ್ಕೆ ಸ್ಥಳಾಂತರಗೊಂಡಿದ್ದವು. ಎರಡು ವರ್ಷ ಸಂದರೂ ರೆಕಾರ್ಡ್ ರೂಂ ಇಲ್ಲಿಂದ ಸ್ಥಳಾಂತರ ಆಗಿಲ್ಲ. ಹಾಗಾಗಿ ಅರ್ಧ ಶತಮಾನಗಳ ದಾಖಲೆಗಳು ಇಲ್ಲಿ ಬಂಧಿಯಾಗಿವೆೆ.
ಸುರಕ್ಷತೆಯ ಭೀತಿ
ಸುಭದ್ರ ಸ್ಥಿತಿಯಲ್ಲಿ ಇರಬೇಕಾದ ಅಮೂಲ್ಯ ದಾಖಲೆಗಳ ಸಂಗ್ರಹಾಗಾರದ ಒಳಗೆ ಯಾರಿಗೂ ಪ್ರವೇಶವಿಲ್ಲ ಎಂಬ ಫಲಕ ಅಳವಡಿಸಿದ್ದರೂ ಇಲ್ಲಿ ಕೆಲವೊಮ್ಮೆ ಸಿಬಂದಿಯೇ ಇರುವುದಿಲ್ಲ. ಕಾರ್ಯ ನಿಮಿತ್ತ ಇಲ್ಲಿನ ಸಿಬಂದಿ ತಾಲೂಕು ಕಚೇರಿಗೆ ತೆರಳಿದಾಗ ರೆಕಾರ್ಡ್ ರೂಂ ಅನಾಥ. ಆದರೂ ಸ್ಥಳಾಂತರಕ್ಕೆ ಮನಸ್ಸು ಮಾಡುತ್ತಿಲ್ಲ ಎಂಬುದು ಸಾರ್ವಜನಿಕರ ದೂರು.
ಕಂದಾಯ ಇಲಾಖೆ ವಿಭಾಗಗಳು ಮಿನಿವಿಧಾನ ಸೌಧಕ್ಕೆ ಸ್ಥಳಾಂತರಗೊಂಡ ಬೆನ್ನಲ್ಲೇ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜನ್ನು ಹಳೆ ತಾ| ಕಟ್ಟಡಕ್ಕೆ ತರಲಾಯಿತು. ಅದರ ಪಕ್ಕದಲ್ಲಿರುವ ಕೊಠಡಿಯಲ್ಲಿ ರೆಕಾರ್ಡ್ ರೂಂ ಇದೆ. ಒಂದಕ್ಕೊಂದು ಪರಸ್ಪರ ಸಂಬಂಧವೇ ಇರದ ಕಾಲೇಜು ಮತ್ತು ರೆಕಾರ್ಡ್ ರೂಂಗಳು ಒಂದೇ ಕಟ್ಟಡದಲ್ಲಿವೆ. ರೆಕಾರ್ಡ್ ರೂಂ ಅನ್ನು ಸ್ಥಳಾಂತರಗೊಳಿಸಿದರೆ, ಕಾಲೇಜಿಗೂ ಅನುಕೂಲವಾದೀತೆಂಬುದು ಸಾರ್ವಜನಿಕರ ಅಭಿಮತ.
ಬಿಎಂಸಿ ಯೋಜನೆ
ರೆಕಾರ್ಡ್ ರೂಂ ಸಾಮರ್ಥ್ಯ ಹೆಚ್ಚಿಸಲು 4 ವರ್ಷಗಳ ಹಿಂದೆ 5 ಲಕ್ಷ ರೂ. ಮಂಜೂರು ಮಾಡಲಾಗಿತ್ತು. ಮಿನಿ ವಿಧಾನಸೌಧಕ್ಕೆ ಸ್ಥಳಾಂತರವಾಗುವ ಹಿನ್ನೆಲೆಯಲ್ಲಿ ಯೋಜನೆ ಕೈ ಬಿಡಲಾಗಿತ್ತು. ಆದರೂ ಸುಸಜ್ಜಿತ ರೆಕಾರ್ಡ್ ರೂಂ ನಿರ್ಮಿಸುವ ಬಗ್ಗೆ ಅಧ್ಯಯನ ನಡೆಸಿ ಭೂಮಿ ಮಾನಿಟರಿಂಗ್ ಸೆಲ್(ಬಿಎಂಸಿ)ಗೆ ವರದಿ ಸಲ್ಲಿಸಲಾಗಿತ್ತು. ಆಗ ಅನುಮತಿ ಸಿಕ್ಕಿರಲಿಲ್ಲ. ಇಡೀ ರಾಜ್ಯದಲ್ಲಿ ಒಂದೇ ಮಾದರಿಯ ರೆಕಾರ್ಡ್ ರೂಂ ನಿರ್ಮಿಸಲಾಗುವ ಕಾರಣ ಸಮಗ್ರ ಮಾನದಂಡ ರಚಿಸಿ ಬಿಎಂಸಿ ಮಟ್ಟದಲ್ಲೇ ರೆಕಾರ್ಡ್ ರೂಂ ನಿರ್ಮಿಸಲಾಗುವುದು ಎಂದು ತಿಳಿಸಲಾಗಿತ್ತು. ಹೀಗಾಗಿ ಸ್ಥಳಾಂತರಗೊಳ್ಳಲಿಲ್ಲ ಎಂಬುದು ಕಂದಾಯ ಇಲಾಖೆ ನೀಡುವ ಮಾಹಿತಿ.
ಕೈ ಬರೆಹದ ದಾಖಲೆ
ನಾಲ್ಕು ವರ್ಷಗಳ ಹಿಂದೆ ರೆಕಾರ್ಡ್ ರೂಂನ 1.46 ಲಕ್ಷ ಕಡತಗಳನ್ನು ಗಣಕೀಕರಣ ಮಾಡಲಾಗಿತ್ತು. ತಾಲೂಕು ಕಚೇರಿ ಮಾಹಿತಿ ಪ್ರಕಾರ ಒಟ್ಟು 1,92,108 ಕಡತಗಳ ಇಂಡೆಕ್ಸಿಂಗ್ ಕ್ಯಾಟಲಾಗ್ ಆಗಿದೆ. 9,101 ಬಾಕಿ ಉಳಿದಿವೆ. ಕಡಬಕ್ಕೆ ವಿಶೇಷ ತಹಸೀಲ್ದಾರ್ ನೇಮಕಗೊಂಡ ಬಳಿಕ ಕಡಬ ಹೋಬಳಿಗೆ ಸಂಬಂಧಪಟ್ಟ ಜಮೀನು ದಾಖಲೆಗಳನ್ನು ಅಲ್ಲಿನ ನಾಡ ಕಚೇರಿಗೆ ಸ್ಥಳಾಂತರಿಸಲಾಗಿದೆ. ಭೂ ಮಸೂದೆ ಪ್ರಕರಣ ಪುತ್ತೂರಿನಲ್ಲೇ ನಡೆಯುತ್ತಿರುವ ಕಾರಣ ಅದರ ದಾಖಲೆಗಳು ಇಲ್ಲೇ ಇವೆ. 1968ರಿಂದ 2001ರ ವರೆಗಿನ ಎಲ್ಲ ಕೈ ಬರೆಹದ ದಾಖಲೆಗಳು ಇಲ್ಲಿವೆ.
ಜಾಗದ ಕೊರತೆಯಂತೆ…!
ಮಿನಿ ವಿಧಾನಸೌಧದಲ್ಲಿ ರೆಕಾರ್ಡ್ ರೂಂ ಮಾಡಲು ಕೊಠಡಿ ಇದೆ. ಅಲ್ಲಿರುವ ಸ್ಥಳಾವಕಾಶ ಯಾವುದಕ್ಕೂ ಸಾಲದು ಅನ್ನುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು, ಕಟ್ಟಡ ಉದ್ಘಾಟನೆಯಾದ ಬಳಿಕ ಎಂಬುವುದು ಅಚ್ಚರಿಯ ಸಂಗತಿ. ಹಾಗಾಗಿ ಆರಂಭದ ಯೋಜನೆಯೇ ಕ್ರಮ ಬದ್ಧವಾಗಿರದ ಕಾರಣ, ಅಸುರಕ್ಷತೆಯ ಭೀತಿ ಸೃಷ್ಟಿಯಾಗಿದೆ. ಹೊಸ ತಾಲೂಕು ಕಚೇರಿಗೆ ಬಂದವರು, ಭೂ ದಾಖಲೆ ನಕಲು ಪ್ರತಿಗೆ ಹಳೆ ತಾಲೂಕು ಕಚೇರಿಯತ್ತ ಅಲೆದಾಡುವ ಪರಿಸ್ಥಿತಿ ಉಂಟಾಗಿದೆ.
– ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.