ಸಂರಕ್ಷಿತ ಸ್ಮಾರಕ ತಾಣ ‘ಸುಲ್ತಾನ್ ಬತ್ತೇರಿ’ಗೆ ಬೇಕಿದೆ ರಕ್ಷಣೆ !
Team Udayavani, Sep 26, 2018, 10:23 AM IST
ಮಹಾನಗರ: ಪ್ರವಾಸಿಗರ ಪ್ರೇಕ್ಷಣೀಯ ತಾಣಗಳಲ್ಲಿ ಪ್ರಮುಖವಾಗಿರುವ ಸುಲ್ತಾನ್ ಬತ್ತೇರಿ ಕೋಟೆ ಇದೀಗ ಮದ್ಯಪಾನ, ಧೂಮಪಾನ ಸೇವನೆ ಸೇರಿದಂತೆ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಇದಕ್ಕೆ ಸಾಕ್ಷಿ ಎಂಬಂತೆ, ಈಗ ಈ ಐತಿಹಾಸಿಕ ಪಾರಂಪರಿಕ ಕೋಟೆಯಲ್ಲಿ ಸಿಗರೇಟ್ ಪ್ಯಾಕೇಟ್, ಬಿಯರ್ ಬಾಟಲ್ ಗಳು ಬಿದ್ದಿದ್ದು, ಪ್ರವಾಸೋದ್ಯಮ ಇಲಾಖೆಯ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿದೆ.
ತಣ್ಣೀರುಬಾವಿ ಬೀಚ್ ವೀಕ್ಷಣೆಗೆಂದು ದಿನಂಪ್ರತಿ ದೇಶ-ವಿದೇಶಗಳಿಂದ ಸಾವಿರಾರು ಮಂದಿ ಪ್ರವಾಸಿಗರು ಬರುತ್ತಿದ್ದು, ಹೆಚ್ಚಿನ ಮಂದಿ ಬೋಳೂರಿನಲ್ಲಿರುವ ಸುಲ್ತಾನ್ ಬತ್ತೇರಿ ಕೋಟೆ ವೀಕ್ಷಣೆ ಮಾಡುತ್ತಾರೆ. ಗುರುಪುರ ನದಿಗೆ ಯುದ್ಧ ನೌಕೆಗಳು ಬರುವುದು ತಪ್ಪಿಸಲು ಟಿಪ್ಪು ಸುಲ್ತಾನ್ ಕಾವಲು ಕೋಟೆಯಾಗಿ ಈ ಕೋಟೆಯನ್ನು ನಿರ್ಮಾಣ ಮಾಡಿದ್ದ. ಆದರೆ, ಹಲವು ವರ್ಷಗಳ ಇತಿಹಾಸವಿರುವ ಈ ಕೋಟೆ ಈಗ ಕೊಂಪೆಯಾಗಿರುವುದು ಬೇಸರದ ಸಂಗತಿ.
ಭದ್ರತಾ ಸಿಬಂದಿಗಳಿಲ್ಲ
ಕೋಟೆಯನ್ನು ಪ್ರವೇಶಿಸಬೇಕಾದರೆ ಯಾವುದೇ ತಪಾಸಣೆಯಿಲ್ಲ. ಏಕೆಂದರೆ ಕೋಟೆಗೆ ಭದ್ರತಾ ಸಿಬಂದಿಗಳಿಲ್ಲ. ಗೇಟು ಹಗಲು-ರಾತ್ರಿ ತೆರೆದಿದ್ದು, ಯಾರ ಅನುಮತಿಯೂ ಇಲ್ಲದೆ ಸರಾಗವಾಗಿ ಕೋಟೆ ಹತ್ತಬಹುದು. ಕೋಟೆಯೊಳಗೆ ಬಿಯರ್ ಬಾಟಲ್, ಸಿಗರೇಟ್ ಪ್ಯಾಕೇಟ್ ಬಿದ್ದಿದೆ. ಗೋಡೆಯಲ್ಲೆಲ್ಲ ಅಶ್ಲೀಲ ಶಬ್ದಗಳನ್ನು ಗೀಚಿದ್ದು, ಪ್ಲಾಸ್ಟಿಕ್ ಬಾಟಲ್, ಚೀಲಗಳಿವೆ. ಕೋಟೆಯೊಳಗೆ ಕುಳಿತುಕೊಳ್ಳಲು ಇರುವ ನಾಲ್ಕು ಬೆಂಚುಗಳು ಮುರಿದಿದ್ದು, ಅಪಾಯಕ್ಕೆ ಎಡೆಮಾಡಿಕೊಡುತ್ತಿದೆ.
ಅರೆ ಬರೆ ರಸ್ತೆ ಕಾಮಗಾರಿ
ಉರ್ವ ಮಾರುಕಟ್ಟೆಯಿಂದ ಸುಲ್ತಾನ್ ಬತ್ತೇರಿಗೆ ತೆರಳುವ ರಸ್ತೆಯ ಗತಿಯಂತೂ ಹೇಳತೀರದು. ಈ ರಸ್ತೆ ಮೂಲಕ ದಿನಂಪ್ರತಿ ಹತ್ತಾರು ವಾಹನಗಳು ಬರುತ್ತಿದ್ದು, ಅರೆ ಬರೆ ರಸ್ತೆ ಕಾಮಗಾರಿ ನಡೆದಿದೆ. ಚರಂಡಿ ಮ್ಯಾನ್ ಹೋಲ್‌ಗಳು ರಸ್ತೆಯ ಮೇಲೆ ಇದೆ. ಒಂದು ಮಳೆ ಬಂದರೆ ರಸ್ತೆ ತುಂಬೆಲ್ಲಾ ಕೃತಕ ನೆರೆ ಆವರಿಸುತ್ತದೆ. ವಾಹನ ಸವಾರರಂತೂ ಅಪಾಯದಿಂದ ವಾಹನ ಚಲಾಯಿಸುತ್ತಿದ್ದಾರೆ.
ಅಪಾಯ ಸ್ಥಿತಿಯಲ್ಲಿದೆ ಸಿಮೆಂಟ್ ಬೆಂಚ್
ಸುಲ್ತಾನ್ ಬತ್ತೇರಿಯಲ್ಲಿ ಇತ್ತೀಚೆಗೆಯಷ್ಟೇ ಮೀನಿನ ಜೆಟ್ಟಿ ಉದ್ಘಾಟನೆಗೊಂಡಿದ್ದು, ಸುತ್ತಲೂ ಸಣ್ಣ ಉದ್ಯಾನವನ ನಿರ್ಮಿಸಲಾಗಿದೆ. ಕುಳಿತುಕೊಳ್ಳಲು ಸಿಮೆಂಟ್‌ನ ಬೆಂಚುಗಳಿದ್ದು, ಇದು ಅಪಾಯ ಸ್ಥಿತಿಯಲ್ಲಿದೆ. ಸಿಮೆಂಟ್ ಬೆಂಚ್ ಬಿರುಕು ಬಿಟ್ಟಿದ್ದು, ಕಬ್ಬಿಣದ ರಾಡ್‌ಗಳು ಕಾಣುತ್ತಿದೆ.
ಸಣ್ಣ ಗೇಟಿಗೆ ಬೀಗ
ಕೋಟೆ ಎಡ ಬದಿಯಲ್ಲಿರುವ ಸಣ್ಣ ಗೇಟಿಗೆ ಈಗಾಗಲೇ ಬೀಗ ಜಡಿಯಲಾಗಿದೆ. ಈ ಗೇಟಿನ ಒಳಗಿರುವ ಸಣ್ಣ ಕೋಣೆಯಲ್ಲಿ ಕಬ್ಬಿಣದ ಸಾಮಗ್ರಿಗಳು ಸೇರಿದಂತೆ ಕೆಲವೊಂದು ಚೀಲಗಳನ್ನು ಇಡಲಾಗಿದೆ. ಸ್ಥಳೀಯರು ಹೇಳುವ ಪ್ರಕಾರ ಯಾರು ಕೂಡ ಈ ಕೋಣೆಯ ಒಳಗೆ ಹೋಗುವ ಪ್ರಯತ್ನ ಮಾಡಲಿಲ್ಲ. ಈ ವಿಚಾರವಾಗಿ ಸ್ಥಳೀಯರಿಗೆ ಇನ್ನೂ ಕುತೂಹಲವಿದೆಯಂತೆ.
ಹೆಸರಿಗೆ ಮಾತ್ರ ಕಾನೂನು
ಸುಲ್ತಾನ್ ಬತ್ತೇರಿ ಸುರಕ್ಷಿತ ಸ್ಮಾರಕದ ಪ್ರವೇಶ ದ್ವಾರದಲ್ಲಿ ಭಾರತೀಯ ಪುರಾತತ್ವ ಇಲಾಖೆ ಸೂಚನೆ ನೀಡಿದ್ದು, ‘ಪುರಾತತ್ವ ಸ್ಥಳ ಹಾಗೂ ಅವಶೇಷಗಳ ಅಧಿನಿಯಮ 2010’ ರ ಪ್ರಕಾರ ಯಾರಾದರೂ ಸ್ಮಾರಕವನ್ನು ನಾಶ ಮಾಡಿದರೆ, ಸ್ಥಳಾಂತರಗೊಳಿಸಿದರೆ, ಹಾನಿಯುಂಟುಮಾಡಿದರೆ, ಬದಲಿಸಿದ್ದಲ್ಲಿ, ವಿಕೃತಗೊಳಿಸಿದರೆ, ದುರುಪಯೋಗಗೊಳಿಸಿದರೆ ಎರಡು ವರ್ಷಗಳ ಕಾಲ ಕಾರಾಗೃಹ ಶಿಕ್ಷೆ ಅಥವಾ ಒಂದು ಲಕ್ಷ ರೂ. ದಂಡ ವಿಧಿಸಬಹುದಾಗಿದೆ.
ಭದ್ರತಾ ಸಿಬಂದಿ ನಿಯೋಜನೆಗೆ ಚಿಂತನೆ
ಸುಲ್ತಾನ್‌ಬತ್ತೇರಿ ಕೋಟೆಯನ್ನು ಸಂರಕ್ಷಿಸಬೇಕಾದದ್ದು, ನಮ್ಮೆಲ್ಲರ ಕರ್ತವ್ಯ. ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಸ್ಥಳೀಯ ಪೊಲೀಸರ ಗಮನಕ್ಕೆ ತರುತ್ತೇನೆ. ದಿನಂಪ್ರತಿ ಭದ್ರತಾ ಸಿಬಂದಿ ನಿಯೋಜನೆ ಮಾಡುವ ಬಗ್ಗೆ ಚಿಂತಿಸಲಾಗುವುದು.
- ಭಾಸ್ಕರ್ ಕೆ., ಮೇಯರ್
ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.