ಜಸ್ಟೀಸ್ ಫಾರ್ ಕಾವ್ಯಾ : ಪಾರದರ್ಶಕ ತನಿಖೆಗೆ ಆಗ್ರಹಿಸಿ ಪ್ರತಿಭಟನೆ
Team Udayavani, Aug 10, 2017, 6:30 AM IST
ಮಹಾನಗರ: ನಗರದ ಪ್ರಮುಖ ಬೀದಿಗಳಲ್ಲಿ ಬುಧವಾರ ಬೆಳಗ್ಗೆ ದಿಢೀರನೆ ವಾಹನ ಸಂಚಾರ ಅಸ್ತವ್ಯಸ್ತ
ಗೊಂಡಿದ್ದು, ವಾಹನಗಳು ಸಿಕ್ಕ ಸಿಕ್ಕ ರಸ್ತೆಗಳಲ್ಲಿ ಸಂಚರಿಸಿದವು. ಶಾಲೆ, ಕಾಲೇಜು, ಕಚೇರಿಗಳಿಗೆ ಹೋಗುವವರು ತಡವಾಯಿತೆಂದು ಧಾವಂತದಿಂದ ಹೋಗುವುದು ಕಂಡು ಬಂದಿತ್ತು.
ಇದಕ್ಕೆ ಕಾರಣ ಜಸ್ಟಿಸ್ ಫಾರ್ ಕಾವ್ಯಾ ಹೋರಾಟ ಸಮಿತಿಯ ಆಶ್ರಯದಲ್ಲಿ ಆಯೋಜಿಸಿದ್ದ ಪ್ರತಿಭಟನೆ.
ಪ್ರತಿಭಟನೆಯಲ್ಲಿ ಭಾಗವಹಿಸಲು ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ನಾನಾ ಭಾಗಗಳಿಂದ ಬಸ್ಸುಗಳಲ್ಲಿ ಮತ್ತು ಪಾದಯಾತ್ರೆಯಲ್ಲಿ ಹೊರಟಿದ್ದ ಕಾರಣ ಸಂಚಾರ ಅಸ್ತವ್ಯಸ್ತಗೊಂಡಿತು. ವಿದ್ಯಾರ್ಥಿಗಳು ಘೋಷಣೆ ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿದರು.
ಬೆಳಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಸೇರುತ್ತಲೇ ಇದ್ದ ಕಾರಣ 45 ನಿಮಿಷ ತಡವಾಗಿ ಪ್ರತಿಭಟನಾ ಸಭೆ ಆರಂಭವಾಯಿತು.
ಜಿಲ್ಲಾಧಿಕಾರಿ ಕಚೇರಿ ಎದುರು ಹ್ಯಾಮಿಲ್ಟನ್ ಸರ್ಕಲ್ ತನಕವೂ ಪ್ರತಿಭಟ ನಾಕಾರರು ಜಮಾಯಿಸಿದ್ದು, ಸುಮಾರು 4000 ಮಂದಿ ಭಾಗವಹಿಸಿದ್ದರು. ಹಾಗಾಗಿ ಸ್ಟೇಟ್ ಬ್ಯಾಂಕ್ ಪರಿಸರದಲ್ಲಿ ಸುಮಾರು 3 ಗಂಟೆಕಾಲ ಸಂಚಾರ ಅಸ್ತವ್ಯಸ್ತಗೊಂಡಿತು.
ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್ ಆಟಗಾರ್ತಿ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಎಸೆಸೆಲ್ಸಿ ವಿದ್ಯಾರ್ಥಿನಿ ಕಾವ್ಯಾ ಅಸಹಜ ಸಾವು ಪ್ರಕರಣದ ಬಗ್ಗೆ ಪಾರದರ್ಶಕ ತನಿಖೆ ನಡೆಸಬೇಕು ಹಾಗೂ ನ್ಯಾಯ ಒದಗಿಸಬೇಕು, ಕಾವ್ಯಾ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕೆಂದು ಒತ್ತಾಯಿಸಿ ಪ್ರತಿಭಟನಾ ಕಾರರು ಘೋಷಣೆ ಕೂಗಿದರು.
ಪ್ರತಿಭಟನೆಯಲ್ಲಿ ವಿದ್ಯಾರ್ಥಿ ಸಂಘಟನೆಗಳು ಮತ್ತು ಇತರ ಸಾಮಾಜಿಕ ಸಂಘಟನೆ ಗಳ ಸಹಿತ 30 ಕ್ಕೂ ಅಧಿಕ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.
ಜಸ್ಟಿಸ್ ಫಾರ್ ಕಾವ್ಯಾ ಹೋರಾಟ ಸಮಿತಿಯ ಸಂಚಾಲಕ ಹಾಗೂ ವಕೀಲ ದಿನಕರ ಶೆಟ್ಟಿ ಪ್ರಸ್ತಾವನೆಗೈದರು. ದಲಿತ ಸಂಘಟನೆಯ ನಾಯಕ ರಘುವೀರ್ ಸೂಟರ್‌ಪೇಟೆ ಸ್ವಾಗತಿಸಿದರು. ಸಿಪಿಐಎಂ ನಗರ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಕಾರ್ಯಕ್ರಮ ನಿರ್ವಹಿಸಿದರು.
ಮೇಯರ್ ಕವಿತಾ ಸನಿಲ್, ವಿವಿಧ ಸಂಘಟನೆಗಳ ಪ್ರಮುಖರಾದ ದೀಪಕ್ ಶೆಟ್ಟಿಗಾರ್, ದೀಪಕ್ ಕೋಟ್ಯಾನ್, ಅನಿಲ್ ದಾಸ್, ನಿತಿನ್ ಕುತ್ತಾರ್, ನವೀನ್ ಚಂದ್ರ ಡಿ. ಸುವರ್ಣ, ರಶ್ಮಿ ಕರ್ಕೇರಾ, ಸುಧೀಶ್ ಶೆಟ್ಟಿ. ಸಂತೋಷ್ ಕುಮಾರ್ ಬಜಾಲ್, ರೋಬರ್ಟ್ ರೊಜಾರಿಯೋ, ರಘು ಎಕ್ಕಾರ್, ಶಾಶ್ವತ್ ಕೊಟ್ಟಾರಿ, ಮಾಜಿ ಮೇಯರ್ ಕೆ. ಅಶ್ರಫ್, ಪ್ರತಿಭಾ ಕುಳಾಯಿ, ಬೇಬಿ ಪೂಜಾರಿ, ಸುನಿಲ್ ಕುಮಾರ್ ಬಜಾಲ್, ಕ್ರೀಡಾಪಟು ಮಮತಾ ಪೂಜಾರಿ, ಸಾವುದ್, ಸೀತಾರಾಮ ಬೇರಿಂಜ, ವಸಂತ ಪೂಜಾರಿ, ಯಶವಂತ ಮರೋಳಿ, ಪ್ರತೀಕ್ ಪೂಜಾರಿ, ಆತ್ರಾಡಿ ಅಮೃತಾ ಶೆಟ್ಟಿ, ಗೀತಾ ಬಾಯಿ, ದೀಪಕ್ ಕುಮಾರ್, ಚಿತ್ತರಂಜನ್ ಶೆಟ್ಟಿ ಮಾತನಾಡಿದರು.
ಕಾವ್ಯಾ ಹೆತ್ತವರಾದ ಲೋಕೇಶ್ ಪೂಜಾರಿ ಮತ್ತು ಬೇಬಿ, ವಿವಿಧ ಸಂಘಟನೆಗಳ ಮುಖಂಡರಾದ ಅಶೋಕ್ ಕೊಂಚಾಡಿ, ವಿಷ್ಣು ಮೂರ್ತಿ, ಉದಯ ಕುಮಾರ್, ಉದಯ ಪೂಜಾರಿ, ರಾಕೇಶ್ ಪೂಜಾರಿ, ಯೋಗೀಶ್ ಜಪ್ಪಿನಮೊಗರು, ಚರಣ್ ಶೆಟ್ಟಿ, ಮಾಧುರಿ, ದೀಕ್ಷಿತ್, ಜೀವನ್, ಪಿ.ಬಿ.ಡೆ’ಸಾ, ಎಂ.ಎಸ್. ಕೋಟ್ಯಾನ್, ಎಚ್.ಎಸ್. ಸಾಯಿರಾಂ, ಪದ್ಮರಾಜ್, ಜಯಂತಿ ಬಿ. ಶೆಟ್ಟಿ ಭಾಗವಹಿಸಿದ್ದರು.
ಕಾವ್ಯಾ ಅಸಹಜ ಸಾವಿಗೆ ನ್ಯಾಯ ಸಿಗಬೇಕು, ಪಾರದರ್ಶಕ ರೀತಿಯಲ್ಲಿ ತನಿಖೆ ನಡೆಯಬೇಕು, ತನಿಖೆಗೆ ವಿಶೇಷ ತಂಡ ರಚಿಸಬೇಕು ಹಾಗೂ ಕಾವ್ಯಾ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕು, ಇದೇ ಶಿಕ್ಷಣ ಸಂಸ್ಥೆಯಲ್ಲಿ ಈ ಹಿಂದೆ ನಡೆದಿದೆ ಎನ್ನಲಾದ ಎಲ್ಲಾ 11 ಮಂದಿ ವಿದ್ಯಾರ್ಥಿಗಳ ಅಸಹಜ ಸಾವು ಪ್ರಕರಣಗಳ ತನಿಖೆ ನಡೆಸಬೇಕೆಂದು ಅವರು ಒತ್ತಾಯಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.