ಕೆರೆಗಳ ಅಭಿವೃದ್ಧಿಗೆ ಸಿಎಸ್‌ಆರ್ ನಿಧಿ ಒದಗಿಸಿ
Team Udayavani, Apr 30, 2017, 11:51 AM IST
ಸುರತ್ಕಲ್: ನಮ್ಮ ಪರಿಸರದ ಸಜೀವ ಕೆರೆಗಳ ಅಭಿವೃದ್ಧಿಗೆ ಕೈಗಾರಿಕೆಗಳು ತಮ್ಮ ಸಿಎಸ್‌ಆರ್ ನಿಧಿಯಿಂದ ಹಣಕಾಸಿನ ನೆರವು ನೀಡುವ ಮೂಲಕ ಸಹಕರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಅವರು ಶನಿವಾರ ಬೈಕಂಪಾಡಿಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನೂತನ ಪ್ರಾದೇಶಿಕ ಪರಿಸರ ಪ್ರಯೋಗ ಶಾಲೆ ಹಾಗೂ ಹಿರಿಯ ಪರಿಸರ ಅಧಿಕಾರಿ ಕಚೇರಿ ಕಟ್ಟಡದ ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿದರು.
ನೂತನ ಪ್ರಯೋಗ ಶಾಲೆಯ ಆರಂಭದಿಂದ 3 ಜಿಲ್ಲೆಗಳ ಪರಿಸರ ರಕ್ಷಣೆಗೆ ಹೆಚ್ಚಿನ ಆದ್ಯತೆ ವಹಿಸಿ ಕೆಲಸ ಮಾಡಲು ಸಾಧ್ಯವಿದೆ. ಕೈಗಾರಿಕೆಗಳು ಪರಿಸರ ಸ್ನೇಹಿಯಾಗಿ ಉತ್ಪಾದನೆ ಮಾಡುವ ಮೂಲಕ ಕಾರ್ಯನಿರ್ವಹಿಸಬೇಕು. ಮಂಗಳೂರು ವಾಸಕ್ಕೆ ಯೋಗ್ಯವಾದ ಒಂದನೇ ಸ್ಥಾನದಲ್ಲಿದೆ; ಇದು ಸಂತಸದಾಯಕವಾದರೂ ಮಾಲಿನ್ಯ ಸಂಪೂರ್ಣ ಹತೋಟಿಗೆ ತರಲು ನಾವಿನ್ನೂ ಹೆಚ್ಚಿನ ಶ್ರಮ ಪಡಬೇಕಾಗಿದೆ ಎಂದರು.
ಲೈಸನ್ಸ್ ರದ್ದು ಎಚ್ಚರಿಕೆ
ಮಂಡಳಿಯ ಅಧ್ಯಕ್ಷ ಲಕ್ಷ್ಮಣ್ ಮಾತನಾಡಿ, ಕೈಗಾರಿಕೆಗಳಿಂದ ಆಗುತ್ತಿರುವ ಮಾಲಿನ್ಯ ನಿಯಂತ್ರಣಕ್ಕೆ ಸುಪ್ರೀಂಕೋರ್ಟ್ ಕಟ್ಟುನಿಟ್ಟಿನ ಆದೇಶ ನೀಡಿದೆ. ಮೂರು ತಿಂಗಳ ಒಳಗಾಗಿ ಪ್ರತೀ ಕೈಗಾರಿಕೆ ಪ್ರಾಥಮಿಕ ಕಲ್ಮಶ ಸಂಸ್ಕರಣ ಘಟಕವನ್ನು ಸ್ಥಾಪಿಸಬೇಕು. ಇಲ್ಲದಿದ್ದಲ್ಲಿ ಪರವಾನಿಗೆ ರದ್ದುಪಡಿಸಲು ಸ್ಪಷ್ಟ ಆದೇಶವಾಗಿದೆ ಎಂದರು.
ಆದಷ್ಟು ಶೀಘ್ರ ಸಂಸ್ಕರಣ ಘಟಕಗಳನ್ನು ಸ್ಥಾಪಿಸ ಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಮನಪ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧಕ್ಕೆ ಗಂಭೀರ ಪ್ರಯತ್ನ ಸಾಗಿದೆ. ಆದರೆ ಕೇವಲ ದಾಳಿ ಮಾಡಿ ಮಾಲಿನ್ಯ ನಿಯಂತ್ರಣ ಮಂಡಳಿಗೆ ಹಸ್ತಾಂತರಿಸುವುದಷ್ಟೇ ನಮ್ಮ ಕೆಲಸ. ಆದರೆ ಬಳಿಕ ಯಾವುದೇ ಕ್ರಮಗಳು ಜರಗುತ್ತಿಲ್ಲ. ಪ್ಲಾಸ್ಟಿಕ್‌ನಿಂದಲೇ ಬಹುತೇಕ ಮಾಲಿನ್ಯ ಉಂಟಾಗುತ್ತಿದ್ದು ಗಂಭೀರ ಕ್ರಮ ಅಗತ್ಯ ಎಂದು ಮೇಯರ್ ಕವಿತಾ ಸನಿಲ್ ಅವರು ಪ್ರತಿಪಾದಿಸಿದರು.
ಮಾಜಿ ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಮಂಡಳಿ ಸದಸ್ಯ ಕಾರ್ಯದರ್ಶಿ ಎಸ್. ಶಾಂತಪ್ಪ, ಮಂಡಳಿಯ ಸದಸ್ಯ ಜೆ. ಕಾವೇರಿಯಪ್ಪ, ಮುಖ್ಯ ಪರಿಸರ ಸಂರಕ್ಷಣಾಧಿಕಾರಿ ರಮೇಶ್, ಪಾಲಿಕೆ ಆಯುಕ್ತ ಮೊಹಮ್ಮದ್ ನಜೀರ್ ಮತ್ತಿತರರು ಉಪಸ್ಥಿತರಿದ್ದರು.
ರಾಜಶೇಖರ್ ಪುರಾಣಿಕ್ ಸ್ವಾಗತಿಸಿ ದರು. ಜಯಪ್ರಕಾಶ್ ವಂದಿಸಿದರು. ನರೇಶ್ ಸಸಿಹಿತ್ಲು ನಿರ್ವಹಿಸಿದರು.
ಅತ್ಯಾಧುನಿಕ ಪ್ರಯೋಗಾಲಯ
ಸುಮಾರು 3.87 ಕೋ.ರೂ ವೆಚ್ಚದಲ್ಲಿ ಈ ಸುಸಜ್ಜಿತ ಕಟ್ಟಡ ನಿರ್ಮಾಣವಾಗಲಿದ್ದು ಪ್ರಾದೇಶಿಕ ಅಧಿಕಾರಿ ಮಟ್ಟದ ಹುದ್ದೆ ಸಹಿತ ಅತ್ಯಾಧುನಿಕ ಪ್ರಯೋಗಾಲಯ ನಿರ್ಮಾಣವಾಗಲಿದೆ. ವಾಯು, ಜಲ, ಭೂಮಿ ಎಲ್ಲ ಮಾದರಿಯ ಮಾಲಿನ್ಯವನ್ನು ಈ ಪ್ರಯೋಗಾಲಯದ ಮೂಲಕ ಪರೀಕ್ಷೆ ನಡೆಸ ಬಹುದಾಗಿದೆ. ಪಶ್ಚಿಮ ಘಟ್ಟದ ವ್ಯಾಪ್ತಿ ಸೂಕ್ಷ್ಮ ಪರಿಸರ ವಾತಾವರಣ ಹೊಂದಿದ್ದು ಸರಕಾರ ಈ ಪ್ರದೇಶದಲ್ಲಿ ಹೆಚ್ಚಿನ ನಿಗಾ ಇಡಲು ಮುಂದಾಗಿದೆ. 11 ತಿಂಗಳಲ್ಲಿ ಕಟ್ಟಡ ನಿರ್ಮಾಣ ಸಂಪೂರ್ಣಗೊಳ್ಳಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.