ಪುಂಜಾಲಕಟ್ಟೆ : ಸ್ಥಳಾವಕಾಶ ದೊರಕಿಸಿಕೊಂಡು ಬೆಳೆದರೆ ಅಭಿವೃದ್ಧಿ
Team Udayavani, Aug 6, 2018, 11:02 AM IST
ಪುಂಜಾಲಕಟ್ಟೆ: ಬಂಟ್ವಾಳ-ವಿಲ್ಲುಪುರಂ ರಾ.ಹೆ. ಮತ್ತು ಮಂಗಳೂರು-ಧರ್ಮಸ್ಥಳ ರಸ್ತೆಗಳು ಕೂಡುವ ಪುಂಜಾಲಕಟ್ಟೆ ಪೇಟೆಯ ಜಂಕ್ಷನ್ ಸಾಕಷ್ಟು ಚಟುವಟಿಕೆಯ ಸ್ಥಳ. ಇಲ್ಲಿರುವ ಸ್ಥಳಾವಕಾಶದ ಕೊರತೆಯನ್ನು ನೀಗಿಕೊಂಡು ಬೆಳೆಯುವುದು ಅಗತ್ಯ.
ಕೆಲವು ಮೂಲ ಸೌಕರ್ಯಗಳು ಇದ್ದರೂ ಈ ಜಂಕ್ಷನ್ ಹಿಂದೆ ಉಳಿದಿದೆ. ಧರ್ಮಸ್ಥಳದೆಡೆಗೆ ಸಾಗುವ ಬದಿ ಬಸ್ ತಂಗುದಾಣ ತುರ್ತಾಗಿ ಬೇಕು. ಮಂಗಳೂರು, ಮೂಡಬಿದಿರೆ, ವೇಣೂರು ಕಡೆಗೆ ತೆರಳುವ ಜನರಿಗೆ ಬಸ್ ತಂಗುದಾಣವಿದ್ದರೂ ಅಲ್ಲಿ ಮೂಲ ಸೌಕರ್ಯಗಳಿಲ್ಲ. ಕುಡಿಯುವ ನೀರಿಗೆ ಹೊಟೇಲ್‌ಗಳೇ ಆಶ್ರಯ. ಜಂಕ್ಷನ್‌ಗೆ ಹೈಮಾಸ್ಟ್ ದೀಪ ಅಳವಡಿಸಲಾಗಿದೆ.
ವಿಸ್ತರಣೆ ಆಗಬೇಕು
ಈ ಜಂಕ್ಷನ್ ಮೂಲಕ ಬೆಳ್ತಂಗಡಿ, ಉಜಿರೆ, ಧರ್ಮಸ್ಥಳ, ದಿಡುಪೆ, ಚಿಕ್ಕಮಗಳೂರು, ಹಾಸನ, ದಾವಣಗೆರೆ, ಶಿವಮೊಗ್ಗ, ಕಡೂರು, ಮಂಗಳೂರು ಕಡೆಗೆ ನೂರಕ್ಕೂ ಮಿಕ್ಕಿ ಸರಕಾರಿ ಬಸ್ ಸಂಚರಿಸುತ್ತವೆ. ವಾಮದಪದವು, ಮೂಡಬಿದಿರೆ, ಬಿ.ಸಿ. ರೋಡ್, ವೇಣೂರು, ನಾರಾವಿ ಕಡೆಗೆ ಸುಮಾರು ಹತ್ತು ಖಾಸಗಿ ಬಸ್ ಟ್ರಿಪ್ ನಡೆಸುತ್ತವೆ. ಎರಡೂ ಕಡೆಯ ಬಸ್‌ಗಳು ನಿಲ್ಲುವುದು ಒಂದೇ ಕಡೆಯಾದುದರಿಂದ ಟ್ರಾಫಿಕ್ ಜಾಮ್ ಮಾಮೂಲಿ, ಬೆಳಗ್ಗೆ ಮತ್ತು ಸಂಜೆ ಹೆಚ್ಚು. ಖಾಸಗಿ ಬಸ್‌ಗಳಿಗೆ ನಿಲುಗಡೆ ಸ್ಥಳವಿಲ್ಲದೆ ಬೆರ್ಕಳ ರಸ್ತೆಯಲ್ಲಿ ನಿಲ್ಲಿಸಬೇಕಾಗುತ್ತದೆ. ಆಗ ಸಾರ್ವಜನಿಕರು ರಸ್ತೆ ದಾಟಲು ಹರಸಾಹಸ ಪಡಬೇಕಾಗುತ್ತದೆ.
ಇಲ್ಲಿ ಎರಡು ಯುವಕ ಸಂಘಗಳಿದ್ದು, ವರ್ಷದುದ್ದಕ್ಕೂ ಸದಾ ಚಟುವಟಿಕೆ ನಡೆಸುತ್ತಿರುತ್ತವೆ. ಆದರೆ ವಾಹನ ಪಾರ್ಕಿಂಗ್‌ಗೆ ಅವಕಾಶ ಇಲ್ಲದಿರುವುದು ಕೊರತೆ.
ಏನೇನಿದೆ?
ರೇಷನ್ ಅಂಗಡಿ ಸಹಿತ ಸೇವಾ ಸಹಕಾರಿ ಬ್ಯಾಂಕ್, ಗ್ರಾ.ಪಂ. ಕಚೇರಿ, ಗ್ರಾಮಕರಣಿಕರ ಕಚೇರಿ, ದೇಗುಲ, 2 ಸಭಾಂಗಣಗಳು, ಅಂಗನವಾಡಿ, ರಾಷ್ಟ್ರೀಕೃತ ಬ್ಯಾಂಕ್, ಮೆಡಿಕಲ್ ಶಾಪ್, ಗ್ರಂಥಾಲಯ, ಸಾರ್ವಜನಿಕ ರಂಗಮಂದಿರ, ಮೈದಾನ, ಪೊಲೀಸ್ ಠಾಣೆ, 10 ವಾಣಿಜ್ಯ ಸಂಕೀರ್ಣಗಳು ಪುಂಜಾಲಕಟ್ಟೆ ಜಂಕ್ಷನ್‌ನ ಸುತ್ತಮುತ್ತ ಇವೆ. ಸರಕಾರಿ ಆಸ್ಪತ್ರೆ, ಭಜನ ಮಂದಿರ, ಪೆಟ್ರೋಲ್ ಪಂಪ್, ಸರಕಾರಿ ಶಾಲೆ- ಕಾಲೇಜುಗಳು ಸ್ವಲ್ಪ ದೂರದಲ್ಲಿವೆ. ದಿನಕ್ಕೆ ಸುಮಾರು ಎರಡರಿಂದ ಮೂರು ಸಾವಿರ ಜನ ಈ ಜಂಕ್ಷನ್ ಬಳಸುತ್ತಾರೆ.
ತ್ಯಾಜ್ಯ ವಿಲೇಗೆ ಜಂಕ್ಷನ್‌ನಲ್ಲಿ ಗ್ರಾ.ಪಂ. ಕಸದ ತೊಟ್ಟಿ ಇರಿಸಿದೆ. ಜಿ.ಪಂ. ಅನುದಾನದ ಸಹಕಾರದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಒಳ್ಳೆಯ ಕ್ರಮ. ಆದರೆ ಚರಂಡಿ ವ್ಯವಸ್ಥೆ ಸರಿಯಿಲ್ಲದೆ ಮಳೆಗಾಲ ರಸ್ತೆಯಲ್ಲಿ ನೀರು ಹರಿಯುತ್ತದೆ. ಹೆದ್ದಾರಿ ಪಕ್ಕದ ಗೂಡಂಗಡಿಗಳ ಬಗ್ಗೆ ಗ್ರಾಮ ಸಭೆಗಳಲ್ಲಿ ದೂರು ದಾಖಲಾಗಿದ್ದು, ರಸ್ತೆ ಅಗಲಗೊಳಿಸುವ ಸಂದರ್ಭದಲ್ಲಿ ರಾ.ಹೆ. ಇಲಾಖೆ ತೆರವುಗೊಳಿಸಲಿದೆ ಎಂದು ಗ್ರಾ.ಪಂ. ಹೇಳಿದೆ.
ಗ್ರಾ. ಪಂ. ಕಟ್ಟಡದಲ್ಲಿ ಕೇವಲ ನಾಲ್ಕು ಅಂಗಡಿ ಕೊಠಡಿಗಳು ಮಾತ್ರ ಇರುವುದರಿಂದ ಆರ್ಥಿಕ ಸಂಪನ್ಮೂಲ ಮಿತವಾಗಿದೆ. ರಸ್ತೆ ಅಗಲಗೊಂಡು ಬಸ್ ತಂಗುದಾಣ ಮತ್ತು ವಾಣಿಜ್ಯ ಕಟ್ಟಡ ನಿರ್ಮಾಣವಾದಲ್ಲಿ ಪುಂಜಾಲಕಟ್ಟೆ ಜಂಕ್ಷನ್ ಬೆಳೆಯುವುದರ ಜತೆಗೆ ಪಂಚಾಯತ್‌ಗೆ ಆರ್ಥಿಕ ಸಂಪನ್ಮೂಲವೂ ಒದಗುತ್ತದೆ. ಆದು ಗ್ರಾಮದ ಬೆಳವಣಿಗೆಗೆ ಸಹಕಾರಿ.
ನೂರಾರು ಜನ ಬಳಕೆಯ ಸ್ಥಳ
ಬೆಳ್ತಂಗಡಿ ತಾಲೂಕಿನ ಕುಕ್ಕಳ ಗ್ರಾಮದ ಬೆರ್ಕಳ, ನರ್ಸಿಕುಮೇರು, ಮಾಲಾಡಿ ಗ್ರಾಮದ ಪುರಿಯ, ಬಂಟ್ವಾಳ ತಾಲೂಕಿನ ಬಡಗಕಜೆಕಾರು ಗ್ರಾಮದ ಪಾಂಡವರಕಲ್ಲು, ಉಳಿ ಗ್ರಾಮದ ಕಕ್ಯಪದವು, ಕಟ್ಟದಪಡ್ಪು, ಕಾವಳಮೂಡೂರು ಗ್ರಾಮದ ಕೊಂಬೇಲು, ಪಿಲಾತಬೆಟ್ಟು ಗ್ರಾಮದ ದೈಕಿನಕಟ್ಟೆ, ನಿನ್ಯಾರು,
ಕೊಳಕ್ಕೆಬೈಲು, ನೇರಳಕಟ್ಟೆ, ನಯನಾಡು, ಮೂಡುಪಡುಕೋಡಿ ಗ್ರಾಮದ ಕಲಾಬಾಗಿಲು, ಇರ್ವತ್ತೂರು
ಗ್ರಾಮದ ಇರ್ವತ್ತೂರು, ಎಡೂ¤ರುಪದವು ಮೊದಲಾದ ಊರುಗಳ ಜನತೆ ವಿವಿಧ ವ್ಯವಹಾರಗಳಿಗೆ ಪುಂಜಾಲಕಟ್ಟೆ ಜಂಕ್ಷನ್ ಆಶ್ರಯಿಸಿದ್ದಾರೆ. ರಸ್ತೆಯ ಒಂದು ಬದಿ ಬಂಟ್ವಾಳ ತಾಲೂಕು ಮತ್ತು ಇನ್ನೊಂದು ಬದಿ ಬೆಳ್ತಂಗಡಿ
ತಾಲೂಕಿಗೆ ಸೇರಿರುವುದು ಇಲ್ಲಿನ ವಿಶೇಷ. ಬೆಳ್ತಂಗಡಿ ತಾಲೂಕಿನವರಿಗೆ ಇದು ಕೆಳಗಿನ ಪೇಟೆ.
ಸಹಕಾರಿ
ಜಂಕ್ಷನ್ ಅಭಿವೃದ್ಧಿಗೊಂಡಲ್ಲಿ ಗ್ರಾ.ಪಂ.ಗೂ ಸಹಕಾರಿ. ಸರಕಾರಿ ಜಾಗವಿಲ್ಲದೆ ಸುಸಜ್ಜಿತ ಬಸ್ ತಂಗುದಾಣ ನಿರ್ಮಿಸಲು ಅಸಾಧ್ಯವಾಗಿದೆ. ಧರ್ಮಸ್ಥಳ ಕಡೆಗೆ ಸಾಗುವ ಬಸ್‌ಗಳ ನಿಲುಗಡೆ ಬೇರೆಡೆ ನಡೆಸಲು ಅವಕಾಶವಾದರೆ ಟ್ರಾಫಿಕ್ ಜಾಮ್ ತಪ್ಪುತ್ತದೆ. ಆದರೆ ಇದು ಬೆಳ್ತಂಗಡಿ ತಾಲೂಕಿಗೆ ಸಂಬಂಧಪಟ್ಟದ್ದು. ತ್ಯಾಜ್ಯ ವಿಲೇವಾರಿಗೆ ಸೂಕ್ತ ಕ್ರಮ
ಕೈಗೊಳ್ಳಲಾಗಿದೆ.
-ಚಂದ್ರಶೇಖರ ಶೆಟ್ಟಿ
ಪಿಲಾತಬೆಟ್ಟು ಗ್ರಾ.ಪಂ. ಅಧ್ಯಕ್ಷರು
ಟ್ರಾಫಿಕ್ ಜಾಮ್
ರಸ್ತೆ ಬದಿ ಬಸ್ ನಿಲ್ಲುವುದರಿಂದ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಸಿಬಂದಿ ನಿಯೋಜನೆ ಮೂಲಕ ಇದನ್ನು ನಿಭಾಯಿಸಲಾಗುತ್ತಿದೆ. ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡದಂತೆ ಸೂಚನೆ ನೀಡಿದ್ದೇವೆ.
– ಸತೀಶ್ ಬಲ್ಲಾಳ್
ಎಸ್ಐ, ಪುಂಜಾಲಕಟ್ಟೆ ಠಾಣೆ
ರತ್ನದೇವ್ ಪುಂಜಾಲಕಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.