ಮುದ ನೀಡಿದ ಲಗೋರಿ, ಕೊತ್ತಳಿಗೆ ಕ್ರಿಕೆಟ್!
Team Udayavani, Oct 22, 2018, 11:11 AM IST
ಪುತ್ತೂರು: ತುಳುನಾಡಿನ ಸಂಪ್ರ ದಾಯ, ಸಂಸ್ಕೃತಿ ಸಮ್ಮಿಳಿತ ತುಳು ಜನ ಪದ ಕ್ರೀಡಾಕೂಟ ರವಿವಾರ ತುಳುವರ ಪಾಲ್ಗೊಳ್ಳುವಿಕೆಯೊಂದಿಗೆ ಕೊಂಬೆಟ್ಟು ತಾ| ಕ್ರೀಡಾಂಗಣದಲ್ಲಿ ವಿಶಿಷ್ಟ ರೀತಿಯಲ್ಲಿ ನಡೆದು ಗಮನ ಸೆಳೆಯಿತು. ನ. 3ರಂದು ಪುತ್ತೂರಿನಲ್ಲಿ ನಡೆಯಲಿರುವ ತಾ| ತುಳು ಸಾಹಿತ್ಯ ಸಮ್ಮೇಳನದ ಪೂರ್ವಭಾವಿಯಾಗಿ ಈ ತುಳು ಜನಪದ ಕ್ರೀಡಾಕೂಟವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಕಾರದೊಂದಿಗೆ ತಾ| ತುಳು ಸಾಹಿತ್ಯ ಸಮ್ಮೇಳನ ಸಮಿತಿಯು ಆಯೋಜಿಸಿತು.
ತುಳು ಸಾಹಿತ್ಯ ಸಮ್ಮೇಳನದ ಧ್ವಜಾರೋಹಣ ನೆರವೇರಿಸುವ ಮೂಲಕ ಆರಂಭಗೊಂಡ ಕ್ರೀಡಾಕೂಟದಲ್ಲಿ ಲಗೋರಿ, ಕೊತ್ತಲಿಗೆ ಕ್ರಿಕೆಟ್, ಹಗ್ಗಜಗ್ಗಾಟ, ಚೆನ್ನೆಮಣೆ ಆಟ ಮೊದಲಾದ ಜನಪದ ಕ್ರೀಡಾ ಸ್ಪರ್ಧೆಗಳು ಮನರಂಜಿಸಿದವು. ತಾ|ನ ವಿವಿಧೆಡೆಯಿಂದ ಸ್ಪರ್ಧಾಳುಗಳು ತಂಡ ಕಟ್ಟಿಕೊಂಡು ಬಂದು ಕ್ರೀಡೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಸ್ಪರ್ಧೆಯಲ್ಲಿ ಹಿರಿಯ ನಾಗರಿಕರು ಭಾಗವಹಿಸಿದ್ದು ವಿಶೇಷ ಆಕರ್ಷಣೆಯಾಗಿತ್ತು.
ಉದ್ಘಾಟನೆ
ಕ್ರೀಡಾಕೂಟವನ್ನು ಉದ್ಘಾಟಿಸಿದ ಧ.ಗ್ರಾ. ಯೋಜನೆಯ ಪ್ರಾದೇಶಿಕ ನಿರ್ದೇಶಕ ಮಹಾವೀರ ಅಜ್ರಿ ಮಾತನಾಡಿ, ತಂತ್ರಜ್ಞಾನದ ವಿಪರೀತ ಬೆಳವಣಿಗೆಯಿಂದ ನಮ್ಮ ಮೂಲದಿಂದ ಬಂದ ಆಚರಣೆಗಳು ಮರೆಯಾಗುತ್ತಿವೆ. ಗತಕಾಲದ ತುಳುನಾಡಿನ ಜನಪದ ಕ್ರೀಡೆಗಳನ್ನು ನೆನಪಿಸುವ ಕಾರ್ಯಆಗುತ್ತಿರುವುದು ಮತ್ತು ಸಾಹಿತ್ಯ ಸಮ್ಮೇಳನ ಇದಕ್ಕೆ ಪ್ರೇರಣೆಯಾಗುತ್ತಿರುವುದು ಖುಷಿಯ ವಿಚಾರ.
ಕ್ರೀಡೆಯ ವಿಶೇಷ
1 ಅತಿಥಿ ಗಣ್ಯರು ಸಹಿತ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ತಾಲೂಕು ತುಳು ಸಾಹಿತ್ಯ ಸಮ್ಮೇಳನ ಹಾಗೂ ತುಳುಜನಪದ ಕ್ರೀಡಾಕೂಟ ಮುದ್ರೆಯ ಟೋಪಿ ವಿತರಿಸಲಾಯಿತು.
2 ಕ್ರೀಡಾ ಕೂಟದಲ್ಲಿ ಕೃಷಿ ಚಟುವಟಿಕೆಗಳನ್ನು ನೆನಪಿಸುವ ಅಡಿಕೆ ಮರದ ಹಾಳೆಯಲ್ಲಿ ಮಕ್ಕಳನ್ನು ಕೂರಿಸಿ ಎಳೆದೊಯ್ಯುವ ಆಟಕ್ಕೆ ಚಾಲನೆ ನೀಡಿದರು.
3 ಕ್ರೀಡಾ ಕೂಟದಲ್ಲಿ ಹಿರಿಯ ನಾಗರಿಕರಿಗೆ ನಡಿಗೆ ಸ್ಪರ್ಧೆ, ಪುರುಷ ಹಾಗೂ ಮಹಿಳೆಯರಿಗೆ ಲಗೋರಿ, ಹಗ್ಗಜಗ್ಗಾಟ, ಚೆನ್ನೆಮಣೆ, ಪುರುಷರಿಗೆ ಕೊತ್ತಲಿಗೆ ಬ್ಯಾಟ್ ಕ್ರಿಕೆಟ್, ಪ್ರಾಥಮಿಕ ಶಾಲಾ ಹುಡುಗರಿಗೆ ಹಾಳೆ ಎಳೆಯುವುದು, ಟೈರ್ ತಿರುಗಿಸುವುದು, ಲಗೋರಿ, ಹುಡುಗಿಯರಿಗೆ ಕಲ್ಲಾಟ, ಜುಬಿಲಿ, ನಾಯಿಮೂಳೆ ಆಟ, ಪ್ರೌಢಶಾಲಾ ಹುಡುಗರಿಗೆ ಟೈರ್ ತಿಗಿಸುವುದು, ಗೋಣಿಚೀಲ ಓಟ, ಲಗೋರಿ, ಹುಡುಗಿಯರಿಗೆ ಕಲ್ಲಾಟ, ಜುಬಿಲಿ, ನಾಯಿ ಮೂಳೆ ಆಟ ಜರಗಿದವು.
ತುಳುನಾಡಿಗೆ ವಿಶೇಷ ಮನ್ನಣೆ
ಡಾ| ಡಿ. ವೀರೇಂದ್ರ ಹೆಗ್ಗಡೆಯವರು ವಿಶ್ವ ತುಳು ಸಾಹಿತ್ಯ ಸಮ್ಮೇಳನದ ರೂವಾರಿಗಳು. ಅನಂತರದ ದಿನಗಳಲ್ಲಿ ಅಲ್ಲಲ್ಲಿ ತುಳು ಸಾಹಿತ್ಯ ಸಮ್ಮೇಳನ ಜರಗುವ ಮೂಲಕ ತುಳುನಾಡಿಗೆ ವಿಶೇಷ ಮನ್ನಣೆ ದೊರಕುತ್ತಿದೆ. ತುಳುನಾಡಿನ ವೈಶಿಷ್ಟ್ಯಗಳನ್ನು, ಧಾರ್ಮಿಕ, ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ತುಳು ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ. ಈಗಾಗಲೇ ಸುಳ್ಯ, ಬಂಟ್ವಾಳ ತಾ|ನಲ್ಲಿ ತುಳು ಸಾಹಿತ್ಯ ಸಮ್ಮೇಳನಗಳು ನಡೆದಿದ್ದು, ಪುತ್ತೂರಿನಲ್ಲಿ ನ.3ರಂದು ಮಂಜಲ್ಪಡ್ಪು ಸುದಾನ ವಸತಿಯುತ ಶಾಲಾ ವಠಾರದಲ್ಲಿ ವಿಜೃಂಭಣೆಯಿಂದ ನಡೆಯಲಿದೆ.
– ಪದ್ಮನಾಭ ಶೆಟ್ಟಿ,
ಸಂಚಾಲಕರು, ತುಳು ಜನಪದ ಕ್ರೀಡಾಕೂಟ -2018
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.