ಪುತ್ತೂರು ಮಹಾಲಿಂಗೇಶ್ವರನಿಗೆ ನೂತನ ರಾಜಗೋಪುರ
Team Udayavani, Nov 29, 2017, 4:17 PM IST
ಪುತ್ತೂರು: ‘ಎ’ ಶ್ರೇಣಿಯಲ್ಲಿರುವ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೊಂದು ರಾಜಗೋಪುರಬೇಕೆಂಬ ಕನಸು ಈಡೇರುತ್ತಿದೆ. ಇನ್ನೆರಡು ತಿಂಗಳಲ್ಲಿ ರಾಜಗೋಪುರ ಕಾಮಗಾರಿ ಪೂರ್ಣಗೊಳ್ಳಲಿದೆ.
ವಿಶಾಲ ಗದ್ದೆ, ಐತಿಹಾಸಿಕ ಕೆರೆ, ಹತ್ತೂರಿಗೂ ಚಾಚಿರುವ ಖ್ಯಾತಿ, ಕಾಶಿಗೆ ಪರ್ಯಾಯ ಎಂಬ ನಂಬಿಕೆ ಈ ಪಟ್ಟಿಗೆ ಹೊಸ ಸೇರ್ಪಡೆ ರಾಜಗೋಪುರ. ಮಧುರೈ ಶೈಲಿಯ ಆಕರ್ಷಕ ರಾಜಗೋಪುರದ ಕಾಮಗಾರಿ 10 ತಿಂಗಳಿಂದ ಪ್ರಗತಿಯಲ್ಲಿದ್ದು, ಸದ್ಯ ಅಂತಿಮ ಹಂತದಲ್ಲಿದೆ. ಹಲವು ವಿಶೇಷತೆಗಳನ್ನು ಒಳಗೊಂಡಿರುವ ಈ ರಾಜಗೋಪುರ ದೇವಸ್ಥಾನಕ್ಕೆ ಹೊಸ ಶೋಭೆಯನ್ನು ನೀಡಲಿದೆ.
ದೇವಸ್ಥಾನ ಭಕ್ತಿ- ಶ್ರದ್ಧೆಯ ಆಲಯ. ವಾಹನದಲ್ಲಿ ಸಂಚರಿಸುವಾಗ ದೇವಾಲಯದ ಗೋಪುರ ಕಂಡಾಗಲೇ ಕೈಮುಗಿದು, ನಮಸ್ಕರಿಸುವವರು ಹಲವರು. ಪುರುಸೊತ್ತು ಇದ್ದವರು ದೇವಸ್ಥಾನದ ಗರ್ಭಗುಡಿಯ ಮುಂಭಾಗ ನಿಂತು ಭಕ್ತಿಯಿಂದ ಬೇಡಿಕೊಳ್ಳುತ್ತಾರೆ. ಅಷ್ಟು ಕಾಲಾವಕಾಶ ಇಲ್ಲದವರು ರಾಜಗೋಪುರದ ಬಳಿ ನಿಂತು ಕೈಮುಗಿದರೆ, ನೇರವಾಗಿ ದೇವರಿಗೆ ಸಂದಾಯವಾಗುತ್ತದೆ. ಏಕೆಂದರೆ, ದೇವರು ಮಲಗಿರುವಾಗ ತಲೆ ಗರ್ಭಗುಡಿ ಬಳಿ ಇದ್ದರೆ, ಕಾಲು ರಾಜಗೋಪುರದ ಬಳಿ ಇರುತ್ತದೆ ಎಂಬ ನಂಬಿಕೆಯಲ್ಲಿ ಭಕ್ತರು ದೇವರ ಕಾಲು ಇರುವ ಪ್ರದೇಶ ರಾಜಗೋಪುರ ಬಳಿ ನಮಸ್ಕಾರ ಸಲ್ಲಿಸುತ್ತಾರೆ.
ಯಾಕಾಗಿ ರಾಜಗೋಪುರ?
ಪ್ರತಿ ದೇವಾಲಯಕ್ಕೂ ರಾಜಗೋಪುರ ಇದ್ದರೆ ಮಾತ್ರ ಶೋಭೆ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ರಾಜಗೋಪುರ ಇರಲಿಲ್ಲ. ಕೆಲ ವರ್ಷಗಳ ಹಿಂದೆ ದೇಗುಲದ ಹಿಂಭಾಗದ ಮುಖ್ಯ ರಸ್ತೆಗೆ ತಾಗಿಕೊಂಡಂತೆ ಗೋಪುರ ರಚಿಸಲಾಯಿತು. ಮುಂಭಾಗವೂ ಗೋಪುರ ನಿರ್ಮಾಣ ಮಾಡಬೇಕೆಂಬ ಪ್ರಸ್ತಾವ ಕೇಳಿ ಬಂದಿತು. ದೇಗುಲದ ಮುಂಭಾಗ ಇದ್ದ ಧ್ಯಾನಸ್ಥ ಶಿವನ ಬೃಹತ್ ಮೂರ್ತಿಯನ್ನು, ಗದ್ದೆಯ ಅಂಚಿಗೆ ಕೊಂಡೊಯ್ದು ಇಡಲಾಯಿತು. ಮೂರ್ತಿ ಇದ್ದ ಜಾಗದಲ್ಲಿ ಹೊಸ ಗೋಪುರ ನಿರ್ಮಾಣ ಮಾಡಲು ವ್ಯವಸ್ಥಾಪನ ಸಮಿತಿ ಮುಂದಾಯಿತು.
ದೇವಸ್ಥಾನದ ವಿಚಾರದಲ್ಲಿ ಏಕಾಏಕಿ ಯಾವುದೇ ನಿರ್ಧಾರ ಕೈಗೊಳ್ಳುವಂತಿಲ್ಲ. ಈ ದೃಷ್ಟಿಯಿಂದ ತಾಂಬೂಲ ಪ್ರಶ್ನೆಯನ್ನಿಟ್ಟಾಗ, ರಾಜಗೋಪುರ ನಿರ್ಮಾಣ ದೇವರಿಗೆ ಪ್ರಿಯ ಎಂದು ತಿಳಿದುಬಂತು. ಇದರ ಪ್ರಕಾರ, ಭಕ್ತರ ಅಭೀಷ್ಟೆಯ ರಾಜಗೋಪುರ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.
ವಿಶೇಷತೆಗಳು
ಮಧುರೈ ಶೈಲಿಯ ಈ ರಾಜಗೋಪುರವನ್ನು ಐದು ಅಂತಸ್ತಿನಲ್ಲಿ ರಚಿಸಲಾಗುತ್ತಿದೆ. ಇದರ ಎತ್ತರ 47 ಅಡಿ. ಗೋಪುರದ ವಿವಿಧ ಮೂಲೆಗಳಲ್ಲಿ 120 ಮೂರ್ತಿಗಳನ್ನು ನಿರ್ಮಿಸಲಾಗುತ್ತಿದೆ. ಗೋಪುರದ ಸುತ್ತಳತೆ 19 ಅಡಿ. ಗೋಪುರದ ತುದಿಯಲ್ಲಿ 5 ಕಲಶಗಳನ್ನು ಇಡಲಾಗುವುದು. ಈ ಮೊದಲು ಗೋಪುರದ ಎರಡೂ ಬದಿ ಕಟ್ಟೆ ನಿರ್ಮಿಸಿದ್ದು, ಜಾತ್ರೆಯ ಸಂದರ್ಭ ಇದರಲ್ಲಿ ಕುಳಿತು ದೇವರ ಉತ್ಸವ ಬಲಿ ನೋಡಲು ಅನುಕೂಲವಾಗಿತ್ತು. ಬಳಿಕ ಇದನ್ನು ತೆಗೆದಿದ್ದು, ಮತ್ತೂಮ್ಮೆ ಅದೇ ಮಾದರಿಯಲ್ಲಿ ನಿರ್ಮಿಸುವ ಯೋಜನೆ ಇದೆ.
ಭಕ್ತರ ದೇಣಿಗೆ
ರಾಜಗೋಪುರಕ್ಕೆ ಯಾವುದೇ ಸರಕಾರದ ಅನುದಾನಗಳನ್ನು ನಂಬಿಕೊಂಡು ಕುಳಿತಿಲ್ಲ. ಪ್ರತ್ಯೇಕ ಕೌಂಟರ್ ವ್ಯವಸ್ಥೆ ಮಾಡಿದ್ದು, ಭಕ್ತರು ನೀಡಿದ ದೇಣಿಗೆಯನ್ನು ಸ್ವೀಕರಿಸಲಾಯಿತು. 1 ಕೋಟಿ ರೂ. ವೆಚ್ಚ ಎಂದು ಅಂದಾಜಿಸಲಾಗಿದೆ. ಇದರಲ್ಲಿ ರಾಜಗೋಪುರ ಅಲ್ಲದೆ, ಎರಡೂ ಬದಿಯೂ ಆಕರ್ಷಕ ಕಮಾನುಗಳನ್ನು ರಚಿಸಲಾಗುವುದು.
ರಾಮಕಿಶನ್ ಕೆ.ವಿ.
ಉದಯವಾಣಿ ವಿದ್ಯಾರ್ಥಿ ಪತ್ರಕರ್ತ ಯೋಜನೆ-ಶಿಕ್ಷಣಾರ್ಥಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.