ಆರೋಪ, ಬೆದರಿಕೆ ವಿರೋಧಿಸಿ ಪ್ರಸೂತಿ ತಜ್ಞರ ಮುಷ್ಕರ
Team Udayavani, Nov 11, 2018, 12:14 PM IST
ಪುತ್ತೂರು: ಪುತ್ತೂರಿನಲ್ಲಿ ಖಾಸಗಿ ಆಸ್ಪತ್ರೆ ಮತ್ತು ಪ್ರಸೂತಿ ತಜ್ಞರ ಮೇಲೆ ಕೆಲವು ಸಂಘಟನೆಗಳು ಮಾನಹಾನಿಕರ ಆರೋಪ ಮಾಡಿ, ಬೆದರಿಕೆ ಹಾಕುತ್ತಿರುವುದನ್ನು ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘದ ಪುತ್ತೂರು ಘಟಕ ನೀಡಿದ ಮುಷ್ಕರ ಕರೆಯಂತೆ ಖಾಸಗಿ ಆಸ್ಪತ್ರೆಗಳ ಪ್ರಸೂತಿ ತಜ್ಞರು ಶನಿವಾರ ಕರ್ತವ್ಯ ಸ್ಥಗಿತಗೊಳಿಸಿ ಪ್ರತಿಭಟನೆ ವ್ಯಕ್ತಪಡಿಸಿದರು.
ಶನಿವಾರ ಬೆಳಗ್ಗೆ 6 ಗಂಟೆಯಿಂದ ರವಿವಾರ ಬೆಳಗ್ಗೆ 6 ಗಂಟೆಯವರೆಗಿನ 24 ಗಂಟೆ ಅವಧಿಯಲ್ಲಿ ಪುತ್ತೂರು ತಾ| ವ್ಯಾಪ್ತಿಯ ಖಾಸಗಿ ಆಸ್ಪತ್ರೆಗಳ 10 ಮಂದಿ ಪ್ರಸೂತಿ ತಜ್ಞ ವೈದ್ಯರು ಕರ್ತವ್ಯ ಸ್ಥಗಿತಗೊಳಿಸಿದ್ದಾರೆ. ಪುತ್ತೂರು ನಗರ, ವಿಟ್ಲ, ನೆಲ್ಯಾಡಿ, ಉಪ್ಪಿನಂಗಡಿ, ಕಾಣಿಯೂರುಗಳ ವೈದ್ಯರು ಮುಷ್ಕರದಲ್ಲಿ ಪಾಲ್ಗೊಂಡರು. ಇತರ ವಿಭಾಗಗಳ ವೈದ್ಯರು ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಖಾಸಗಿ ಆಸ್ಪತ್ರೆಗಳಲ್ಲಿ ಪ್ರಸೂತಿ ತಜ್ಞರ ಮುಷ್ಕರದ ಕಾರಣದಿಂದ ಹೆರಿಗೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಪುತ್ತೂರು ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಬೆಳಗ್ಗೆ ಆಸ್ಪತ್ರೆಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಕೃಷ್ಣ ರಾವ್, ತಾ| ಆರೋಗ್ಯಾಧಿಕಾರಿ ಅಶೋಕ್ ಕುಮಾರ್ ರೈ ಭೇಟಿ ನೀಡಿ ಪೂರಕ ವ್ಯವಸ್ಥೆಗಳನ್ನು ಗಮನಿಸಿದರು. ಡಿಎಚ್‌ಒ ಅವರ ಸೂಚನೆಯಂತೆ ಮಂಗಳೂರು ಕಣಚೂರು ಆಸ್ಪತ್ರೆಯ ಓರ್ವ ಪ್ರಸೂತಿ ತಜ್ಞರು ಸೇರಿದಂತೆ 4 ವೈದ್ಯರು ಆಗಮಿಸಿ ಸ.ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಿದರು.
ಪುತ್ತೂರು ಸರಕಾರಿ ಆಸ್ಪತ್ರೆಗೆ ಖಾಸಗಿಯಿಂದ ನಿಯೋಜನೆ ಮೇರೆಗೆ ಪ್ರಸೂತಿ ತಜ್ಞೆಯನ್ನು ನೇಮಕ ಮಾಡಲಾಗಿದೆ. ಆದರೆ ಅವರು ಖಾಸಗಿ ಹಿನ್ನೆಲೆಯ ಕಾರಣದಿಂದ ಮುಷ್ಕರಕ್ಕೆ ಬೆಂಬಲಿಸಿ ಸರಕಾರಿ ಆಸ್ಪತ್ರೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿಲ್ಲ.
ಖಾಸಗಿ ಆಸ್ಪತ್ರೆಗಳ ಪ್ರಸೂತಿ ತಜ್ಞರ ಮುಷ್ಕರದಿಂದ ತುರ್ತುಸಮಸ್ಯೆಯಾಗದಂತೆ ತಾಲೂಕಿನಾದ್ಯಂತ 17 ಆ್ಯಂಬುಲೆನ್ಸ್‌ಗಳವ್ಯವಸ್ಥೆ ಮಾಡಿದ್ದೇವೆ. ಕೂರ್ನಡ್ಕವನ್ನು ಇದಕ್ಕೆ ಕೇಂದ್ರವಾಗಿಸಿದ್ದೇವೆ. ಬೆಳಗ್ಗೆ 11 ಗಂಟೆ ಸುಮಾರಿಗೇ ಹೆರಿಗೆಗೆ ಸಂಬಂಧಿಸಿದ ತುರ್ತು 3 ಪ್ರಕರಣಗಳನ್ನು ಗುರುತಿಸಿ ಆಂಬುಲೆನ್ಸ್ ಮೂಲಕ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದೇವೆ. ಅದರಲ್ಲಿ ಇಬ್ಬರನ್ನು ಮಂಗಳೂರಿಗೆ ಕಳುಹಿಸಲಾಗಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ಇದರ ಜತೆ ಕಾರ್ಯದರ್ಶಿ ಅಶ್ರಫ್ ಬಾವಾ ಹೇಳಿದ್ಧಾರೆ.
ತುರ್ತು ಆ್ಯಂಬುಲೆನ್ಸ್ ಸೇವೆ
ಖಾಸಗಿ ಆಸ್ಪತ್ರೆಯಲ್ಲಿ ಪ್ರಸೂತಿ ಸೇವೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ತುರ್ತು ಹೆರಿಗೆ ಸಂಬಂಧಿ ಪ್ರಕರಣಗಳಿಗೆ ಸಮಸ್ಯೆಯಾಗದಂತೆ ಸರಕಾರಿ ಆಸ್ಪತ್ರೆಯಲ್ಲಿ ವಿಶೇಷ ಆಂಬುಲೆನ್ಸ್ ವ್ಯವಸ್ಥೆಗಳು ಕಾರ್ಯನಿರ್ವಹಿಸಿದವು. ಉಪ್ಪಿನಂಗಡಿಯ 108, ಪುತ್ತೂರಿನ 108 ಆರೋಗ್ಯ ರಕ್ಷಾ ಕವಚ, ಸ.ಆಸ್ಪತ್ರೆಯ ಆಂಬುಲೆನ್ಸ್, ಕಣಚೂರು ಆಸ್ಪತ್ರೆಯ ಆ್ಯಂಬುಲೆನ್ಸ್, ಯುವ ಕಾಂಗ್ರೆಸ್,ಸಂಶುಲ್ ಉಲಾಮಾ, ಎಸ್‌ಡಿಪಿಐ, ಜೈ ಭಾರತ್ ಹಾಗೂ ಸಂಘಟನೆಗಳ ಕಡೆಯಿಂದ ತುರ್ತು ಆಂಬುಲೆನ್ಸ್ ವ್ಯವಸ್ಥೆಯನ್ನು ಮಾಡಲಾಗಿತ್ತು.
ಹೆರಿಗೆ ಸಂಬಂಧ 20 ಮಂದಿ ದಾಖಲು
ಸ್ಥಗಿತಗೊಳಿಸಿ ಮುಷ್ಕರ ನಡೆಸುವ ವಿಚಾರ ಪೂರ್ವನಿರ್ಧರಿತ ಹಾಗೂ ಈ ಕುರಿತ ಮಾಹಿತಿ ಹಂಚಿಕೆಯಾದ ಹಿನ್ನೆಲೆಯಲ್ಲಿ ಹೆಚ್ಚಿನ ತೊಂದರೆ ಉಂಟಾಗಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಈ ಕುರಿತ ಸಾರ್ವಜನಿಕರಿಗೆ ಸೂಚನೆಯ ಫಲಕವನ್ನೂ ಅಳವಡಿಸಲಾಗಿತ್ತು. ಪ್ರಸೂತಿ ವೈದ್ಯರನ್ನು ಹೊರತುಪಡಿಸಿ ಉಳಿದ ವೈದ್ಯರು ಕರ್ತವ್ಯದಲ್ಲಿದ್ದು, ರೋಗಿಗಳ ಸರಕಾರಿ ಆಸ್ಪತ್ರೆಯಲ್ಲಿ ಸಿಬಂದಿಯ ರಜೆ ಮೊಟಕುಗೊಳಿಸಿ ಎಲ್ಲರನ್ನೂ ಕರ್ತವ್ಯಕ್ಕೆ ಹಾಜರುಪಡಿಸಲಾಗಿತ್ತು. ಸರಕಾರಿ ಆಸ್ಪತ್ರೆಯಲ್ಲಿ 20 ಮಂದಿ ಹೆರಿಗೆ ಸಂಬಂಧಿಸಿದಂತೆ ದಾಖಲಾಗಿದ್ದು, 3 ಮಂದಿಗೆ ಸೂಸೂತ್ರ ಹೆರಿಗೆ ನಡೆಸಲಾಗಿದೆ. ಇಬ್ಬರನ್ನು ಹೆರಿಗೆಗೆ ನೋಂದಾಯಿಸಲಾಗಿದೆ ಎಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ| ವೀಣಾ ತಿಳಿಸಿದ್ದಾರೆ.
ನೋವಿನಿಂದ ಮುಷ್ಕರ
ನಿರ್ಲಕ್ಷ್ಯ ಎನ್ನುವ ಆಪಾದನೆಯ ನೋವಿನಿಂದ ಮುಷ್ಕರ ನಡೆಸಿದ್ದಾರೆ. ತೊಂದರೆಮಾಡುವ ಇರಾದೆ ನಮಗಿಲ್ಲ. ಮುಷ್ಕರಕ್ಕೆ ಭಾರತೀಯ ವೈದ್ಯಕೀಯ ಸಂಘದ ಜಿಲ್ಲೆಯ ಎಲ್ಲಾ ಘಟಕಗಳ ಬೆಂಬಲ ಹಾಗೂ ಸಹಕಾರವನ್ನು ನೀಡಿದ್ದಾರೆ. ಮುಷ್ಕರವು ಪೂರ್ವ ನಿರ್ಧರಿತವಾದುದರಿಂದ ಸಮಸ್ಯೆಯಾಗದಂತೆ ಆಸ್ಪತ್ರೆಗಳ ಇತರ ವೈದ್ಯರು ಕೆಲಸ ನಿರ್ವಹಿಸಿದ್ದಾರೆ. ಸರಕಾರಿ ಆಸ್ಪತ್ರೆಯಲ್ಲಿ ತುರ್ತು ಬದಲಿ ವ್ಯವಸ್ಥೆಗಳನ್ನು ಮಾಡಿಕೊಳ್ಳುವಂತೆ ಮನವಿ ಮಾಡಿದ್ದೇವೆ.
– ಡಾ| ಗಣೇಶ್ ಪ್ರಸಾದ್
ಅಧ್ಯಕ್ಷರು, ಐಎಂಎ, ಪುತ್ತೂರು
ಅಪಪ್ರಚಾರ ಬೇಡ
ಒಂದು ಅಥವಾ ಎರಡು ಸಾವಿರ ಹೆರಿಗೆಗಳನ್ನು ಮಾಡುವಾಗ ಅದರಲ್ಲಿ ಒಂದು ಕೈಮೀರಿ ತೊಂದರೆ ಆಗುವುದುಂಟು. ಇದು ನಿರ್ಲಕ್ಷ್ಯ ಅಥವಾ ಅಸಡ್ಡೆಯಿಂದ ಆಗುವುದಲ್ಲ. ಇಂತಹ ಸಂದರ್ಭದಲ್ಲಿ ಪ್ರತಿ ವೈದ್ಯರೂ ಶಕ್ತಿ ಮೀರಿ ಪ್ರಯತ್ನ ಮಾಡಿ ರೋಗಿಯನ್ನು ಬದುಕಿಸಲು ಖಂಡಿತಾ ಪ್ರಯತ್ನಿಸುತ್ತಾರೆ. ಒಂದು ಕೋಮಿನವರನ್ನು ಬೇಕೆಂದೇ ಹೀಗೆ ಮಾಡುತ್ತಾರೆ ಎನ್ನುವುದು ಅಸತ್ಯದ ಮಾತು ಮತ್ತು ಹಣ ನೋಡಿ ವೈದ್ಯರು ಚಿಕಿತ್ಸೆ ನೀಡುತ್ತಾರೆ ಎನ್ನುವುದೂ ತಪ್ಪು ಕಲ್ಪನೆ. ಇದನ್ನು ಜನರು ಅರ್ಥ ಮಾಡಿಕೊಂಡು ಸಹಕರಿಸಬೇಕು.
– ಡಾ| ಎಂ. ಕೆ. ಪ್ರಸಾದ್,
ಹಿರಿಯ ಸರ್ಜನ್, ಪುತ್ತೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.