ಅಕ್ಕಿಯಲ್ಲಿ ಹುಳ: ವಸತಿ ನಿಲಯದ ಮೇಲ್ವಿಚಾರಕಿ ತರಾಟೆಗೆ
Team Udayavani, Jan 23, 2019, 6:13 AM IST
ಉಪ್ಪಿನಂಗಡಿ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಕ್ಕೆ ಪುತ್ತೂರು ತಾಲೂಕು ಪಂಚಾಯಿತಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ದಿಢೀರ್ ಭೇಟಿ ನೀಡಿ, ಅಲ್ಲಿನ ಅವ್ಯವಸ್ಥೆಯ ಬಗ್ಗೆ ನಿಲಯದ ಮೇಲ್ವಿಚಾರಕಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ಸೋಮವಾರ ನಡೆಯಿತು.
ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ ಬೋರ್ಕರ್, ದಾಸ್ತಾನು ಕೊಠಡಿಯನ್ನು ಪರಿಶೀಲಿಸಿದಾಗ ಸುಮಾರು 40ಕ್ಕೂ ಅಧಿಕ ಮೂಟೆಗಳಲ್ಲಿ ಅಕ್ಕಿ ದಾಸ್ತಾನು ಇದ್ದು, ಇವುಗಳು ಸಂಪೂರ್ಣವಾಗಿ ಕಳಪೆ ಗುಣಮಟ್ಟದಲ್ಲಿದ್ದು, ಹುಳ, ಗುಗ್ಗುರು ಕಂಡು ಬಂದಿದೆ. ಬಹುತೇಕ ಅಕ್ಕಿ ಮೂಟೆಯನ್ನು ಹೆಗ್ಗಣಗಳು ಬಗೆದು ಹಾಕಿದ್ದು, ಅಕ್ಕಿ ಎಲ್ಲೆಡೆ ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡಿರುವುದು ಕಂಡು ಬಂದಿದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಇಲ್ಲಿ 20 ಮೂಟೆ ಅಕ್ಕಿ ದಾಸ್ತಾನು ಇರಬೇಕಾಗಿದ್ದು, ಆದರೆ ಇಲ್ಲಿ 40 ಮೂಟೆ ಅಕ್ಕಿ ಪತ್ತೆ ಆಗಿದೆ ಎಂದು ಹೇಳಲಾಗಿದ್ದು, ಅಕ್ಕಿ ದಾಸ್ತಾನು ಇದ್ದ ಕೊಠಡಿಯಲ್ಲಿ ಹಳೇ ಬಟ್ಟೆ, ಗೋಣಿ ಚೀಲಗಳ ತುಂಡು ಇತ್ಯಾದಿ ಕಸವೂ ತುಂಬಿ ಗಲೀಜಾಗಿದ್ದುದು ಕಂಡುಬಂತು.
ಇಲ್ಲಿನ ಅವ್ಯವಸ್ಥೆಯ ಬಗ್ಗೆ ಸ್ಥಳದಲ್ಲಿದ್ದ ನಿಲಯದ ಮೇಲ್ವಿಚಾರಕಿ ಶೋಭಾ ಅವರನ್ನು ತರಾಟೆಗೆ ತೆಗದುಕೊಂಡ ಅಧ್ಯಕ್ಷರು, ಮಕ್ಕಳಿಗೆ ನೀಡುವ ಊಟದ ಗುಣಮಟ್ಟದ ಬಗ್ಗೆ ವಿಚಾರಿಸಿ, ಇದೇ ಅಕ್ಕಿಯಿಂದ ಊಟ ಮಾಡಿ ಬಡಿಸುವುದಕ್ಕೆ ಹೇಗಾದರೂ ಮನಸ್ಸು ಬರುತ್ತದೆ ಎಂದ ಪ್ರಶ್ನಿಸಿದರು. ನಿಲಯದಲ್ಲಿ ಶುಚಿತ್ವ ಕಾಪಾಡಿಕೊಳ್ಳುವಂತೆ ಸೂಚನೆ ನೀಡಿದರು.
ಇದೇ ವೇಳೆ ಸ್ಥಳಕ್ಕೆ ಬಂದ ವಿದ್ಯಾರ್ಥಿನಿಯರು, ಹಲವು ಸಮಯದಿಂದ ಈ ಅಕ್ಕಿಯಿಂದಲೇ ಅನ್ನ ಮಾಡಿ ಕೊಡುತ್ತಿದ್ದಾರೆ. ಊಟ ಮಾಡಲು ಆಗುತ್ತಿಲ್ಲ. ಬಾಯಿಗೆ ಇಡುವಾಗ ವಾಸನೆ ಬರುತ್ತಿದೆ. ಈ ಬಗ್ಗೆ ವಾರ್ಡನ್ ಅವರಿಗೆ ಹಲವು ಬಾರಿ ಹೇಳಿದ್ದೆವು. ಆದರೆ ಅವರು ನಮ್ಮ ಮಾತು ಕೇಳುತ್ತಿರಲಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಅಧ್ಯಕ್ಷರೊಂದಿಗೆ ತಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಹರೀಶ್ ಬಿಜತ್ರೆ, ಉಪ್ಪಿನಂಗಡಿ ತಾ.ಪಂ. ಸದಸ್ಯೆ ಸುಜಾತಾ ಕೃಷ್ಣ ಆಚಾರ್ಯ ಇದ್ದರು.
ಸಮಗ್ರ ತನಿಖೆ ಆಗಬೇಕು
ಪತ್ರಕರ್ತರೊಂದಿಗೆ ಮಾತನಾಡಿದ ಬೋರ್ಕರ್, ಇಲ್ಲಿ 20 ಮೂಟೆ ಅಕ್ಕಿ ಇರಬೇಕಿತ್ತು. 40 ಮೂಟೆಗಳು ಎಲ್ಲಿಂದ ಬಂದವು ಎಂಬುದೇ ಯಕ್ಷಪ್ರಶ್ನೆ. ಈ ಅಕ್ಕಿ ಮೂಟೆಗಳನ್ನು ಹೆಗ್ಗಣಗಳು ತಿನ್ನುವಂತೆ ಇಡಲಾಗಿದೆ. ಹುಳ, ಗುಗ್ಗುರುಗಳೂ ತುಂಬಿವೆ. ನಿರ್ವಹಣೆಯಲ್ಲಿ ಬೇಜವಾಬ್ದಾರಿ ಕಾಣಿಸುತ್ತಿದೆ. ಇಲ್ಲಿನ ಅವ್ಯವಸ್ಥೆ ಕುರಿತು ಸಮಗ್ರ ತನಿಖೆ ಆಗಬೇಕು ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.