ಪುತ್ತೂರು: ನಾಳೆ ಜನಜಾಗೃತಿ ಸಮಾವೇಶ
Team Udayavani, Oct 2, 2017, 3:13 PM IST
ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ಗಾಂಧಿ ಜಯಂತಿಯ ಅಂಗವಾಗಿ ರಾಜ್ಯದ ವಿವಿಧ ಕಡೆಗಳಲ್ಲಿ ಜನಜಾಗೃತಿ ಸಮಾವೇಶ ನಡೆಯಲಿದೆ. ಅ. 3ರಂದು ಪುತ್ತೂರಿನಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಸಮಾವೇಶ ನಡೆಯುವುದು ವಿಶೇಷ.
ಗ್ರಾಮೀಣಾಭಿವೃದ್ಧಿ, ಸಾಮಾಜಿಕ ಸ್ವಾಸ್ಥ್ಯದ ಪರಿಕಲ್ಪನೆಯಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರ ದೃಷ್ಟಿಕೋನದಿಂದ ಹುಟ್ಟಿಕೊಂಡ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮದ್ಯಪಾನಾದಿ ದುಶ್ಚಟಗಳಿಂದಾಗಿ ಮನೆ, ಕುಟುಂಬ, ಹೆಂಡತಿ-ಮಕ್ಕಳಿಂದ ಮಾನಸಿಕವಾಗಿ, ದೈಹಿಕವಾಗಿ ದೂರವಾದ ಜನರನ್ನು ದುಶ್ಚಟ ಮುಕ್ತಗೊಳಿಸಿ ಅವರ ಬದುಕಿನಲ್ಲೂ ಸಂತೃಪ್ತಿಯ ಬೆಳಕನ್ನು ಮೂಡಿಸುತ್ತಿದೆ. ಸಾರ್ವಜನಿಕ ಜನಜಾಗೃತಿಯ ಎಲ್ಲ ಅವಕಾಶಗಳನ್ನು ಬಳಸಿಕೊಂಡು ಸಾಮಾಜಿಕ ನೆಲೆಯಲ್ಲಿ ಜನಜಾಗೃತಿ ವೇದಿಕೆ ಮುಖ್ಯ ಸ್ತರದಲ್ಲಿ ಗುರುತಿಸಿಕೊಂಡಿದೆ.
ತಾಲೂಕಿನಲ್ಲಿ ಜನಜಾಗೃತಿ
ಪುತ್ತೂರು ತಾಲೂಕಿನಲ್ಲಿ ಜನಜಾಗೃತಿ ಕಾರ್ಯಕ್ರಮವು 2002ರಿಂದ ಅನುಷ್ಠಾನಗೊಂಡು ನಿರಂತರ ಸಾಮಾಜಿಕ ಕಾರ್ಯ ಚಟುವಟಿಕೆ ನಡೆಯುತ್ತಿದೆ. ಪ್ರಸಕ್ತ ಸಾಲಿನಲ್ಲಿ ತಾಲೂಕಿನಲ್ಲಿ 50 ಮದ್ಯವರ್ಜನ ಶಿಬಿರಗಳು ಆಯೋಜನೆಗೊಂಡು 3,420 ಶಿಬಿರಾರ್ಥಿಗಳು ಮದ್ಯ ಮುಕ್ತರಾಗಿದ್ದಾರೆ. ಸುಮಾರು 6,686 ನವಜೀವನ ಸಮಿತಿಗಳ ಸಭೆ ನಡೆಸಲಾಗಿದೆ.
5367 ಮನೆ ಭೇಟಿ ಮಾಡಿಕೊಂಡು 233 ಸಮಿತಿ ರಚನೆ ಮಾಡಲಾಗಿದೆ. 162 ಸಮಾವೇಶ, ಜಾಥಾ, ಬೀದಿನಾಟಕ ಮತ್ತು ಮಾಹಿತಿ ಕಾರ್ಯಕ್ರಮಗಳು, 1056 ಗ್ರಾಮ ಸಮಿತಿಗಳ ಸಭೆ, ವಿದ್ಯಾರ್ಥಿಗಳಿಗೆ ದುಶ್ಚಟದ ವಿರುದ್ಧ ಅರಿವು ಮೂಡಿಸುವ ನಿಟ್ಟಿನಲ್ಲಿ 271 ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡಿದ್ದು, ಸುಮಾರು 41,142 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.
ಸಮಾಜಕ್ಕೆ ಅರಿವು
ಮಹಾತ್ಮ ಗಾಂಧೀಜಿಯವರ 18 ರಚನಾತ್ಮಕ ಅಂಶಗಳಲ್ಲಿ ಪಾನ ನಿಷೇಧವೂ ಒಂದಾಗಿದ್ದು, ಮದ್ಯಮುಕ್ತ ಭಾರತದ ಕನಸನ್ನು ಜನರಿಗೆ ನೆನಪು ಮಾಡಿಕೊಡುವ ಉದ್ದೇಶದಿಂದ ಅ. 2 ಗಾಂಧಿ ಜಯಂತಿಯಂದು ಜನಜಾಗೃತಿ ವೇದಿಕೆ ಸಮಾವೇಶಗಳನ್ನು ಸಂಘಟಿಸುತ್ತಿದೆ. ಸಮಾವೇಶದ ಮೂಲಕ ಮದ್ಯಪಾನ ದುರಂತಗಳ ಅರಿವು ಮೂಡಿಸುವ, ಮದ್ಯಮುಕ್ತರಿಗೆ ಅಭಿನಂದನೆ ಸಲ್ಲಿಸುವ, ಸಮಾಜದ ಗಣ್ಯರನ್ನು ಚಳವಳಿಯತ್ತ ಸೆಳೆಯುವ ದೃಷ್ಟಿಕೋನವನ್ನು ಹೊಂದಲಾಗಿದೆ.
ಜನಜಾಗೃತಿ ಸಮಾವೇಶ, ಅಭಿನಂದನೆ
ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪುತ್ತೂರು ಹಾಗೂ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ವತಿಯಿಂದ ಗಾಂಧಿ ಜಯಂತಿ ಸಂಭ್ರಮಾಚರಣೆಯ ಪ್ರಯುಕ್ತ ಅ. 3ರಂದು ಪುತ್ತೂರು ಪುರಭವನದಲ್ಲಿ ಜನಜಾಗೃತಿ ಸಮಾವೇಶ ಮತ್ತು ನವಜೀವನ ಸಮಿತಿ ಸದಸ್ಯರ ಅಭಿನಂದನ ಸಮಾರಂಭ ನಡೆಯಲಿದೆ.
ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಲಿದ್ದು, ಸಂಸದೀಯ ಕಾರ್ಯದರ್ಶಿ ಹಾಗೂ ಪುತ್ತೂರು ಶಾಸಕಿ ಶಕುಂತಳಾ ಟಿ.ಶೆಟ್ಟಿ ಉದ್ಘಾಟಿಸಲಿದ್ದಾರೆ. ಒಡಿಯೂರು ಶ್ರೀ ಗುರು ದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸಭೆಗೆ ಮೊದಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಿಂದ ಜಾಗೃತಿ ಜಾಥಾ ನಡೆಯಲಿದೆ.
ಖುಶಿಯ ವಿಚಾರ
ಧರ್ಮಸ್ಥಳ ಧರ್ಮಾಧಿಕಾರಿಗಳ ಪ್ರೇರಣೆಯಿಂದ ಕಾರ್ಯ ನಿರ್ವಹಿಸುತ್ತಿರುವ ಜನಜಾಗೃತಿ ವೇದಿಕೆಯ ಮೂಲಕ ಸಾವಿರಾರು ಮಂದಿ ಮದ್ಯ ವ್ಯಸನಮುಕ್ತರಾದ ಸಂತೃಪ್ತಿ ನಮಗಿದೆ. ಡಾ| ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆಯಲ್ಲಿ ಪುತ್ತೂರಿನಲ್ಲಿ ಸಮಾವೇಶ ನಡೆಯುತ್ತಿರುವುದು ನಮಗೆಲ್ಲ ಖುಶಿಯ ವಿಚಾರ. ಎಲ್ಲ ಸಿದ್ಧತೆಗಳನ್ನು ಮಾಡಿ ಕೊಂಡಿದ್ದೇವೆ.
ಪದ್ಮನಾಭ ಶೆಟ್ಟಿ, ಅಧ್ಯಕ್ಷರು,
ಜನಜಾಗೃತಿ ವೇದಿಕೆ ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್ ಶುರು?
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್ ಬಾಬಾ…ರುದ್ರಾಕ್ಷಾ!
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.