ಜಾತಿ, ಧರ್ಮ ಮೀರಿ ಬಾಂಧವ್ಯ ಬೆಸೆದ ಭಾಷೆ ತುಳು
Team Udayavani, Nov 4, 2018, 10:06 AM IST
ಪುತ್ತೂರು: ಜಾತಿ, ಧರ್ಮಗಳ ಮೇರೆಯನ್ನು ಮೀರಿ ಜಗತ್ತಿನ ಉದ್ದಕ್ಕೂ ಕಂಪು ಪಸರಿಸಿ ಬಾಂಧವ್ಯ ಬೆಸೆದ ಭಾಷೆ ತುಳು. ನಮ್ಮ ಕೃಷಿ ಜೀವನ, ಪ್ರಾಣಿಗಳು, ಜಲಮೂಲಗಳನ್ನು ಉಳಿಸಿಕೊಳ್ಳುವುದು ಅಗತ್ಯ. ಇವು ಉಳಿದುಕೊಳ್ಳದಿದ್ದರೆ ತುಳು ಸಂಸ್ಕೃತಿಯೂ ಉಳಿಯಲು ಸಾಧ್ಯವಿಲ್ಲ ಎಂದು ಪುತ್ತೂರು ತಾಲೂಕು ಪ್ರಥಮ ತುಳು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ವಿಶ್ರಾಂತ ಕುಲಪತಿ ಡಾ| ಬಿ.ಎ. ವಿವೇಕ್ ರೈ ಅಭಿಪ್ರಾಯಪಟ್ಟರು. ಮಂಜಲ್ಪಡ್ಪು ಸುದಾನ ವಸತಿಯುತ ಶಾಲೆಯ ಆವರಣದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ತುಳು ಸಾಹಿತ್ಯ ಸಮ್ಮೇಳನ ಸಮಿತಿ ಸಹಯೋಗದಲ್ಲಿ ನಡೆದ ‘ತುಳು ಪರ್ಬ -2018’ರ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತುಳು ಸಾಹಿತ್ಯ ಬೆಳೆಸಿದವರು
ತುಳು ಮಾತೃಭಾಷೆಯಾಗಿರುವ 40 ಜಾತಿಯವರಿದ್ದಾರೆ. ಗದ್ದೆಯಲ್ಲಿ ಶ್ರಮಿಸಿದವರೇ ತುಳು ಸಾಹಿತ್ಯಗಳನ್ನು ಉಳಿಸಿದವರು ಮತ್ತು ಬೆಳೆಸಿದವರು. ಶಾಲೆಗೆ ಹೋಗದವರೂ ಗಂಟೆಗಟ್ಟಲೆ ಹೇಳುವ ಸಂದಿಗಳನ್ನು ಕಟ್ಟಿದ್ದು ಮಹಾ ವಿಶೇಷ. ಸಂದಿ, ಪಾಡ್ಡನಗಳು ಮಣ್ಣಿ ನಲ್ಲಿ ಸೃಷ್ಟಿಯಾದವು. ಭಾಷೆ, ಸಾಹಿತ್ಯ, ಸಂಸ್ಕೃತಿ ಬೆಳೆಸಲು ಮನಸ್ಸಿದ್ದರೆ ಸಾಕು, ವಿದ್ವಾಂಸರಾಗಬೇಕಿಲ್ಲ ಎನ್ನುವುದನ್ನು ಸಾಧಿಸಿದ ಹೆಗ್ಗಳಿಕೆ ತುಳುವರಿಗೆ ಸಲ್ಲುತ್ತದೆ ಎಂದರು.
ತುಳು ಭಾಷೆ ಇಂದು ಸಿನಿಮಾ ಕ್ಷೇತ್ರದಲ್ಲೂ ಹೆಸರುವಾಸಿಯಾಗಿದೆ. ಇತರ ವಿಭಾಗಗಳಲ್ಲಿ ಬಳಕೆಯಾಗುವ ಮೂಲಕ ಜನಪ್ರಿಯತೆಯನ್ನು ಪಡೆಯುತ್ತಿವೆ. ನೀರ್ ದೋಸೆ, ಕಟ್ಟದ ಕೋರಿ ಹೆಸರಿನ ಸಿನಿಮಾಗಳೂ ಬಂದಿವೆ. ಮುಂದೆ ಬಂಗುಡೆ ಪುಳಿ ಮುಂಚಿ ಹೆಸರಿನ ಸಿನಿಮಾವೂ ಬರಬಹುದು ಎಂದು ಹಾಸ್ಯದ ಮೂಲಕ ವಿವರಿಸಿದ ಡಾ| ವಿವೇಕ್ ರೈ, ಬೆಂಡೆಕಾಯಿಗೆ ಲೇಡೀಸ್ ಫಿಂಗರ್, ಚಿಕನ್ ಚಿಲ್ಲಿಯಂತಹ ಪದಗಳನ್ನು ಬಳಕೆ ಮಾಡದೆ ನಿಜವಾದ ತುಳು ಶಬ್ದವನ್ನೇ ಬಳಕೆ ಮಾಡಬೇಕು. ತುಳು ಹೆಸರುಗಳ ಚಲಾವಣೆಗೆ ಬಂದಷ್ಟು ಭಾಷೆಯೂ ಪ್ರಸಿದ್ಧಿ ಪಡೆಯುತ್ತದೆ ಎಂದರು.
ತುಳುವಿನದ್ದೇ ಸಂಸ್ಕೃತಿ
ದೀಪ ಬೆಳಗಿಸಿ ಉದ್ಘಾಟಿಸಿದ ಪುತ್ತೂರು ಶಾಸಕ ಸಂಜೀವ ಮಠಂದೂರು, ಆದಿವಾಸಿ ಸಂಸ್ಕೃತಿ, ಕೃಷಿ ಸಂಸ್ಕೃತಿ, ಋಷಿ ಸಂಸ್ಕೃತಿಯಿಂದ ಬೆಳೆದ ತುಳುನಾಡು ಸಂಪದ್ಭರಿತವಾಗಿದೆ. ಇಲ್ಲಿ ನಮ್ಮದೇ ಸಂಸ್ಕೃತಿ ಇದೆ. ಎಲ್ಲಿ ಹೋದರೂ ಗುರುತಿಸಿಕೊಳ್ಳುವಂತೆ ಮಾಡುವ ಹೆಚ್ಚುಗಾರಿಕೆ ತುಳುವರದ್ದು. ತುಳುನಾಡಿನ ಪ್ರದೇಶಗಳ ಹೆಸರುಗಳನ್ನೇ ಇಂದು ಪಾಶ್ಚಾತ್ಯ ಭಾಷೆಗೆ ಬದಲಾಯಿಸಿದ್ದೇವೆ. ಇದನ್ನು ಮೂಲ ಹೆಸರಿನಲ್ಲೇ ಉಳಿಸಿಕೊಳ್ಳುವುದೇ ಭಾಷೆಯ ಉಳಿಕೆ ಎಂದು ಹೇಳಿದರು.
ವಿಭಾಗಗಳ ಉದ್ಘಾಟನೆ
ವಿವಿಧ ವಿಭಾಗಗಳನ್ನು ಉದ್ಘಾಟಿಸಿದ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಶುಭಹಾರೈಸಿದರು.
ಸಮ್ಮಾನ
ಪುತ್ತೂರು ತಾಲೂಕು ಪ್ರಥಮ ತುಳು ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಕರ್ನಾಟಕ ಮುಕ್ತ ವಿ.ವಿ. ವಿಶ್ರಾಂತ ಕುಲಪತಿ ಡಾ| ಬಿ.ಎ. ವಿವೇಕ ರೈ ಹಾಗೂ ಕೋಕಿಲಾ ರೈ ರೈ ದಂಪತಿಯನ್ನು ಸಮ್ಮಾನಿಸಲಾಯಿತು.
ಅಧ್ಯಕ್ಷರ ಆಶಯ
·ತುಳು ಭಾಷೆಯ ಬೆಳವಣಿಗೆಯ ಹಿನ್ನೆಲೆಯಲ್ಲಿ ಡಾ| ವಿವೇಕ್ ರೈ ಅವರು ತನ್ನ ಆಶಯಗಳನ್ನು ಭಾಷಣದಲ್ಲಿ ಪ್ರಸ್ತುತಪಡಿಸಿದರು.
· ತುಳು ಭಾಷೆಯ ಸಾಹಿತ್ಯ, ಕೃತಿಗಳು ಬೇರೆ ಭಾಷೆಗೆ ತರ್ಜುಮೆ ಆಗಬೇಕು.
· ತುಳುವನ್ನು ಬೇರೆ ಬೇರೆ ಲಿಪಿಗಳಲ್ಲಿ ಹಂಚುವ ಕೆಲಸವಾಗಲಿ.
· ತುಳು ಬರಹದ ಸಾಫ್ಟ್‌ವೇರ್ ಕನ್ನಡದಲ್ಲಿ, ರೋಮನ್ ಭಾಷೆಯಲ್ಲಿ ಆಗಬೇಕು.
· ಆಟ, ಕೂಟ, ತರ್ಜುಮೆ, ಸಂಶೋಧನೆ, ಕೃಷಿ ಎಲ್ಲದರಲ್ಲೂ ತುಳುವಿನ ಕಾರ್ಯಕ್ರಮಗಳು ನಡೆಯುವಂತಾಗಬೇಕು.
ತುಳುವಿಗೆ ವಿಶ್ವಮಾನ್ಯತೆ
ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನವಿತ್ತು, ಭಾಷೆ ಮತ್ತು ಸಂಸ್ಕೃತಿ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಇದು ಉಳಿದಲ್ಲಿ ಊರು, ನಾಡು ಉಳಿಯುತ್ತದೆ. ಇದಕ್ಕಾಗಿ ಶುದ್ಧತೆ ಕಾಪಾಡಿಕೊಳ್ಳುವುದೂ ಅಗತ್ಯ. ತುಳುವಿಗೆ ಇಂದು ವಿಶ್ವಮಾನ್ಯತೆ ಬಂದಿದೆ. ಈ ಭಾಗಕ್ಕೆ ತುಳುನಾಡು ಎನ್ನುವ ಹೆಸರಿಡಲೂ ಕಷ್ಟವಾಗದು. ತುಳುವನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವುದೂ ಸಾಧ್ಯವಾಗುತ್ತದೆ ಎಂದರು.
ಪುಸ್ತಕಗಳ ಬಿಡುಗಡೆ
ತುಳು ಸಾಹಿತಿ ಭಾಸ್ಕರ ರೈ ಕುಕ್ಕುವಳ್ಳಿ ಅವರ ಗಂಧಸಾಳೆ ಪುಸ್ತಕ, ಅಗ್ರಾಳ ನಾರಾಯಣ ರೈ ಅವರ ತುಳುವೆರೆ ಮರಪಂದಿ ನೆನಪುಲು ಪುಸ್ತಕ ಹಾಗೂ ಪೂವರಿ ತುಳು ಮಾಸ ಪತ್ರಿಕೆಯ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಗಣೇಶ್ ಕಲ್ಲರ್ಪೆ/ರಾಜೇಶ್ ಪಟ್ಟೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.