ಮುಜರಾಯಿ ಅಧೀನದಲ್ಲಿದ್ದರೂ ‘ಮೃತ್ಯುಂಜಯ’ಗೆ ಬಡತನ!
Team Udayavani, Nov 5, 2018, 10:48 AM IST
ಪುತ್ತೂರು: ಪುತ್ತೂರು ತಾಲೂಕಿನ ಮುಂಡೂರು ಗ್ರಾಮದಲ್ಲಿರುವ ಶ್ರೀ ಮೃತ್ಯುಂಜಯೇಶ್ವರ ದೇಗುಲ ಮುಜರಾಯಿ ಇಲಾಖೆಗೆ ಒಳಪಟ್ಟ ಏಕೈಕ ಮೃತ್ಯುಂಜಯೇಶ್ವರ ದೇವಾಲಯವೆನಿಸಿದೆ. ಕ್ಷೇತ್ರದ ಕುರಿತ ಕಾರಣೀಕ, ನಂಬಿಕೆ ಮತ್ತು ಹೆಗ್ಗಳಿಕೆಗೆ ಪೂರಕವಾದ ಸೌಕರ್ಯಗಳನ್ನು ಹೆಚ್ಚಿಸಿಕೊಳ್ಳಲು ಮಾತ್ರ ಇಲ್ಲಿ ಅನುದಾನದ ಕೊರತೆಯಾಗುತ್ತಿದೆ.
ಮೃತ್ಯು ಕಂಠಕವನ್ನು ದೂರ ಮಾಡುವ ನಂಬಿಕೆಯ ಮೃತ್ಯುಂಜಯೇಶ್ವರ ದೇಗುಲಗಳು ರಾಜ್ಯದಲ್ಲಿ ಎರಡು -ಮೂರು ಮಾತ್ರವಿದ್ದು, ಅದರಲ್ಲಿ ಮುಂಡೂರಿನ ದೇಗುಲವೂ ಒಂದು. ಪುತ್ತೂರು-ಸುಬ್ರಹ್ಮಣ್ಯ ಹೆದ್ದಾರಿಯಿಂದ ಅನತಿ ದೂರದಲ್ಲಿ ಅಡಿಕೆ, ತೆಂಗು ಬೆಳೆಗಳಿಂದ ಪ್ರಕೃತಿ ರಮಣೀಯ ತಾಣದಲ್ಲಿ ಈ ದೇಗುಲವಿದೆ. ಪ್ರಾಚೀನ ಶಿಲಾಶಾಸನದ ಪ್ರಕಾರ 950 ವರ್ಷಗಳ ಇತಿಹಾಸವನ್ನು ದೇಗುಲ ಹೊಂದಿದೆ.
ಮಂಡಿಯೂರಿದ ಸ್ಥಳ
ಪವಿತ್ರ ‘ಪುಷ್ಕರಿಣಿ’ ಇರುವ ಪ್ರಾಚೀನ ಕಾರಣಿಕ ಕ್ಷೇತ್ರವೂ ಆಗಿದೆ. ತ್ರೇತಾಯುಗದಲ್ಲಿ ಖರಾಸುರನೆಂಬ ರಾಕ್ಷಸನು ಶಿವನಿಂದ ವರವಾಗಿ ಪಡೆದ ಮೂರು ಶಿವಲಿಂಗಗಳ ಪೈಕಿ ನಾಲಿಗೆಯಲ್ಲಿ ಇರಿಸಿಕೊಂಡು ಬಂದಿದ್ದ ಶಿವಲಿಂಗವನ್ನು ಮುಂಡೂರಿ (ಮಂಡಿ ಊರಿ) ಇರಿಸಿದ ಸ್ಥಳವೇ ಮುಂಡೂರು ಆಗಿದೆ ಎನ್ನುವ ಇತಿಹಾಸವಿದೆ.
ಸಿಎಂ ಪೂಜೆ ಸಲ್ಲಿಸಿದ್ದರು
ಈ ಕ್ಷೇತ್ರದಲ್ಲಿ ಮೃತ್ಯುಂಜಯ ಹೋಮ, ಜಪ, ನವಗ್ರಹ ಶಾಂತಿ ಹೋಮ, ರುದ್ರಾಭಿಷೇಕ ವಿಶೇಷವಾಗಿ ನಡೆಯುತ್ತವೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೃದಯ ಸಂಬಂಧಿ ಅನಾರೋಗ್ಯ ಇದ್ದಾಗ ಇಲ್ಲಿಗೆ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ. ವಿದೇಶದಿಂದಲೂ ಭಕ್ತರು ಆಗಮಿಸುತ್ತಾರೆ.
ಅಳುಪರ ಕಾಲದ ದೇಗುಲ
ಮುಂಡೂರು ಮೃತ್ಯುಂಜಯೇಶ್ವರ ದೇಗುಲ ಅಳುಪ ಅರಸರ ಕಾಲದ ಶಿಲ್ಪ ಕಲಾಕೃತಿ ಹೊಂದಿದೆ. ಈ ದೇಗುಲದ ತೀರ್ಥ ಮಂಟಪ ಜಿಲ್ಲೆಯಲ್ಲೇ ದೊಡ್ಡದಾಗಿದೆ. ಅದರ ಮೇಲ್ಭಾಗದಲ್ಲಿ 12 ರಾಶಿಗಳ ಮರದ ಕೆತ್ತನೆಯಿದೆ. ದೇವಸ್ಥಾನದ ನೈಋತ್ಯ ದಿಕ್ಕಿನಲ್ಲಿ ಗಣಪತಿ ಮತ್ತು ಶಾಸ್ತಾವು ಗುಡಿ, ವಾಯವ್ಯ ಭಾಗದಲ್ಲಿ ದೇವಿ (ದುರ್ಗೆ) ಸನ್ನಿಧಿ, ಆಗ್ನೇಯ ಮೂಲೆಯಲ್ಲಿ ಪಿಲಿಚಾಮುಂಡಿ ದೈವ ಸನ್ನಿಧಿ, ಬಲಭಾಗದಲ್ಲಿ ತೀರ್ಥ ಬಾವಿ, ಹೊರಭಾಗದಲ್ಲಿ ನಾಗ ಸನ್ನಿಧಿಯಿದೆ.
ದೇವರ ನೀರು ಪುಷ್ಕರಿಣಿಗೆ
ಪಕ್ಕದಲ್ಲೇ ಪುಷ್ಕರಿಣಿ ಇದೆ. ಗರ್ಭ ಗುಡಿಯಲ್ಲಿ ದೇವರಿಗೆ ಮಾಡಿದ ಅಭಿಷೇಕ ನೀರು ತೀರ್ಥ ಬಾವಿಯ ಮೂಲಕ ಪುಷ್ಕರಿಣಿ ಸೇರುತ್ತದೆ. ಕಾಶಿ ಕ್ಷೇತ್ರವನ್ನು ಬಿಟ್ಟರೆ ದೇವಸ್ಥಾನದ ಈಶಾನ್ಯ ಭಾಗದಲ್ಲಿ ಪುಷ್ಕರಣಿ ಇರುವುದು ಮುಂಡೂರಿನಲ್ಲಿ ಮಾತ್ರ. ವರ್ಷವಿಡೀ ನೀರು ತುಂಬಿರುತ್ತದೆ. ದೇಗುಲಕ್ಕೆ ಸಂಬಂಧಿಸಿದ ಶಿಲಾಶಾಸನ ನಶಿಸಿ ಹೋಗಿದೆ.
ನವೀಕರಣಗೊಳಿಸಲಾಗಿತ್ತು
ಜೀರ್ಣಾವಸ್ಥೆಗೆ ತಲುಪಿದ್ದ ದೇಗುಲವನ್ನು 2008ರಲ್ಲಿ ಸ್ಥಳೀಯರೇ ಆದ ಬೆಂಗಳೂರಿನ ಉದ್ಯಮಿ ನಳಿನಿ ಲೋಕಪ್ಪ ಗೌಡ ಅವರ ಮುಂದಾಳತ್ವದಲ್ಲಿ ಊರ ಹಾಗೂ ಪರವೂರ ಭಕ್ತರು ಸೇರಿ ನವೀಕರಣಗೊಳಿಸಿ ಬ್ರಹ್ಮಕಲಶೋತ್ಸವ ನೆರವೇರಿಸಿದ್ದರು. ದೇಗುಲದ ದಕ್ಷಿಣ ಭಾಗದಲ್ಲಿ ಪಾಕಶಾಲೆ, ಭೋಜನ ಶಾಲೆ ಮತ್ತು ಸುಸಜ್ಜಿತ ಸಭಾ ಭವನ ನಿರ್ಮಾಣಗೊಂಡಿದೆ.
ದೋಷ ನಿವಾರಣೆ
ರುದ್ರಾಭಿಷೇಕ, ಕ್ಷೇತ್ರದಲ್ಲಿ ಮೃತ್ಯುಂಜ ಯೇಶ್ವರನೇ ಸ್ವತಃ ನೆಲೆ ನಿಂತಿರುವ ಕಾರಣ ಇಲ್ಲಿ ಜನ್ಮ ನಕ್ಷತ್ರ, ಜಾತಕ ಫಲ ದೋಷಾದಿಗಳಿಗೆ ಸಂಬಂಧಿಸಿದ ಪೂಜೆ ನೆರವೇರಿಸಿದಲ್ಲಿ ಮೃತ್ಯು ದೋಷ, ಮೃತ್ಯು ಕಂಟಕ, ಮೃತ್ಯು ಭಯ ನಿವಾರಣೆಯಾಗಿ ಆಯುಷ್ಯ ವೃದ್ಧಿಯಾಗುತ್ತದೆ ಎನ್ನುವುದು ನಂಬಿಕೆ.
ಯೋಜನೆ ರೂಪಿಸಲಾಗಿದೆ
ಅತ್ಯಂತ ಪವಿತ್ರವೆನಿಸಿರುವ ಪುಷ್ಕರಿಣಿ ಅಭಿವೃದ್ಧಿಗೆ 49 ಲಕ್ಷ ರೂ. ವೆಚ್ಚದ ಯೋಜನೆ ರೂಪಿಸಲಾಗಿದೆ. ದೂರದ ಊರುಗಳಿಂದ ಬರುವ ಭಕ್ತರ ಅನುಕೂಲಕ್ಕಾಗಿ ಸುಸಜ್ಜಿತ ವಸತಿಗೃಹ ನಿರ್ಮಿಸುವ ಹಾಗೂ ದೇಗುಲದಲ್ಲಿ ಪ್ರತೀ ಸೋಮವಾರ ಅನ್ನದಾನ ಸೇವೆ ನಡೆಸುವ ಚಿಂತನೆ ಇದೆ. ಅರ್ಚಕರ ಕೊಠಡಿ ನಿರ್ಮಾಣ, ಭಕ್ತರ ಅನುಕೂಲ ದೃಷ್ಟಿಯಿಂದ ಸುಸಜ್ಜಿತ ಶೌಚಾಲಯ ವ್ಯವಸ್ಥೆಯೂ ಆಗಬೇಕಿದೆ.
– ಮಹೇಶ್ಚಂದ್ರ ಸಾಲ್ಯಾನ್
ವ್ಯವಸ್ಥಾಪನ ಸಮಿತಿ ಅಧ್ಯಕ್ಷರು
ದೋಷ ನಿವಾರಣೆ ಮೂರ್ತಿ
ಇಲ್ಲಿನ ಮೃತ್ಯುಂಜಯೇಶ್ವರ ಸರ್ವಕಂಟಕ ದೋಷ ನಿವಾರಣಾ ಮೂರ್ತಿಯಾಗಿದೆ. ಪ್ರತಿ ದಿನ ಇಲ್ಲಿಗೆ ಹಲವು ಮಂದಿ ಭಕ್ತರು ಬಂದು ಜನ್ಮ ನಕ್ಷತ್ರ, ಜಾತಕ ಫಲ, ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದ ದೋಷಗಳಿಗೆ ಸಂಬಂಧಿಸಿದ ಪೂಜೆಗಳನ್ನು ಮಾಡಿಸುತ್ತಿದ್ದಾರೆ.
– ರಮೇಶ್ ಬೈಪಾಡಿತ್ತಾಯ ಅರ್ಚಕರು
ರಾಜೇಶ್ ಪಟ್ಟೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ನನ್ನನ್ನು ಸಾಬೀತು ಮಾಡಿಕೊಳ್ಳಲು ಅವಕಾಶ ಸಿಗಲಿಲ್ಲ: ದೊಡ್ಮನೆಯಲ್ಲಿ ಚೈತ್ರಾ ಅಳಲು..
Mangaluru: MCC ಬ್ಯಾಂಕ್ ಅಧ್ಯಕ್ಷರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಹೈಕೋರ್ಟ್ ತಡೆ
Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ
Kasaragod Crime News: ಬೀದಿ ನಾಯಿಗೆ ಹೆದರಿ ಓಡಿದ ಬಾಲಕ ಬಾವಿಗೆ ಬಿದ್ದು ಸಾವು
Alankaru: ಮನೆಯಲ್ಲಿ ಬೆಂಕಿ ದುರಂತ: ಎಲ್ಲ ವಸ್ತುಗಳು ಸುಟ್ಟು ಕರಕಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.