ಗುಣಮಟ್ಟದ ಸೇವೆ: ಕೆಎಸ್‌ಆರ್‌ಟಿಸಿಗೆ ಅತ್ಯಧಿಕ ಪ್ರಶಸ್ತಿ
Team Udayavani, Jul 16, 2017, 3:30 AM IST
ಸುಳ್ಯ: ಗುಣಮಟ್ಟದ ಸೇವೆಗೋಸ್ಕರ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ದೇಶದಲ್ಲಿಯೇ ಅಗ್ರಸ್ಥಾನದಲ್ಲಿದ್ದು, ಈ ತನಕ 200ಕ್ಕೂ ಅಧಿಕ ರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿದೆ. ಕಳೆದ ಎರಡು ವರ್ಷಗಳಲ್ಲಿ 100 ಪ್ರಶಸ್ತಿ ಗಳಿಸಿದ ದೇಶದ ಏಕೈಕ ಸಾರಿಗೆ ಸಂಸ್ಥೆ ಇದಾಗಿದೆ ಎಂದು ರಾಜ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗ ವ್ಯಾಪ್ತಿಯ ಸುಳ್ಯದಲ್ಲಿ 3.5 ಕೋ.ರೂ. ವೆಚ್ಚದ ನೂತನ ಘಟಕವನ್ನು ಶನಿವಾರ ಲೋಕಾರ್ಪಣೆಗೊಳಿಸಿ, ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಳೆದ ನಾಲ್ಕೂವರೆ ವರ್ಷಗಳಲ್ಲಿ 76 ಹೊಸ ಬಸ್ ನಿಲ್ದಾಣ, 40 ಘಟಕ, 36 ನಗರ ಸಾರಿಗೆ ನಿಲ್ದಾಣ ಗಳನ್ನು ಒದಗಿಸಲಾಗಿದೆ. 1 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರದೇಶಗಳಲ್ಲಿ ನಗರ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಈ ತನಕದ ಅಂಕಿ-ಅಂಶದಲ್ಲಿ ದೇಶದಲ್ಲಿ ನಗರ ಸಾರಿಗೆ ವ್ಯವಸ್ಥೆ ಒದಗಿಸಿರುವ ರಾಜ್ಯ ಗಳಲ್ಲಿ ಕರ್ನಾಟಕ ಮುಂಚೂಣಿ ಯಲ್ಲಿದೆ ಎಂದು ಹೇಳಿದರು.
ಪ್ರಯಾಣಿಕರ ಹಿತ ಮುಖ್ಯ
ರಾಜ್ಯದಲ್ಲಿ 24,000 ಬಸ್‌ಗಳಿವೆ. 1.15 ಕೋಟಿ ಜನರು ದಿನಂಪ್ರತಿ ಸಂಚರಿಸುತ್ತಾರೆ. ಶೇ. 18ರಷ್ಟು ಬಸ್ ಲಾಭದಾಯಕವಾಗಿದ್ದರೆ, ಶೇ. 20 ಬಸ್ ಲಾಭ-ನಷ್ಟ ಸಮ ಪ್ರಮಾಣದಲ್ಲಿವೆ. ಶೇ. 40ರಷ್ಟು ಬಸ್‌ಗಳು ನಷ್ಟದಲ್ಲಿ ಓಡಾಡುತ್ತಿವೆ. ಕೆಎಸ್‌ಆರ್‌ಟಿಸಿ ಲಾಭದಲ್ಲಿದ್ದರೂ ಅದಕ್ಕೆ ಶೇ. 18ರಷ್ಟು ಬಸ್‌ಗಳಿಂದ ಬರುವ ಆದಾಯ ಕಾರಣ ಎಂದ ಸಚಿವರು, ನಷ್ಟದಲ್ಲಿ ಓಡುತ್ತದೆ ಎಂದು ನಾವು ಬಸ್ ಓಡಾಟವನ್ನು ಸ್ಥಗಿತಗೊಳಿಸಿಲ್ಲ. ನಮಗೆ ಲಾಭಕ್ಕಿಂತಲೂ ಪ್ರಯಾಣಿಕರ ಹಿತ ಮುಖ್ಯ ಎಂದರು.
ಮಂಗಳೂರು, ಉಡುಪಿಯಲ್ಲಿ
ಚಾಲಕರ ತರಬೇತಿ ಕೇಂದ್ರ
ಮಂಗಳೂರಿನಲ್ಲಿ 15 ಕೋ.ರೂ., ಉಡುಪಿಯಲ್ಲಿ 6 ಕೋ.ರೂ. ವೆಚ್ಚದಲ್ಲಿ ಚಾಲಕರ ತರಬೇತಿ ಕೇಂದ್ರ ನಿರ್ಮಿಸಲಾಗುವುದು. ಕರಾವಳಿ ಭಾಗದಲ್ಲಿ ಉಡುಪಿ, ಬೈಂದೂರು, ಬಂಟ್ವಾಳ ಮೊದಲಾದೆಡೆ ಸುಸಜ್ಜಿತ ಬಸ್ ನಿಲ್ದಾಣ, ಘಟಕದ ಬೇಡಿಕೆಗೆ ಸ್ಪಂದನೆ ನೀಡಿದ್ದು, ಅನುದಾನ ಮಂಜೂರುಗೊಳಿಸಲಾಗಿದೆ. ಪುತ್ತೂರು, ಸುಳ್ಯ ಪ್ರದೇಶದಲ್ಲಿ ವಿವಿಧ ಬೇಡಿಕೆ ಬಂದಿದ್ದು, ಅತೀ ಶೀಘ್ರವಾಗಿ ಸ್ಪಂದನೆ ನೀಡಲಾಗುವುದು ಎಂದು ಅವರು ಹೇಳಿದರು.
ಸಿಬಂದಿ ವಸತಿ ಗೃಹಕ್ಕೆ ಶಿಲಾನ್ಯಾಸ ನೆರವೇರಿಸಿದ ಅರಣ್ಯ ಸಚಿವ ರಮಾನಾಥ ರೈ ಮಾತನಾಡಿ, ಗುಣ
ಮಟ್ಟ ಹಾಗೂ ದಕ್ಷ ಕಾರ್ಯನಿರ್ವ ಹಣೆಯಿಂದ ಕೆಎಸ್‌ಆರ್‌ಟಿಸಿ ಸಂಸ್ಥೆ ಈಗ ಅತ್ಯುತ್ತಮ ಸೇವೆ ನೀಡುತ್ತಿದೆ. ಖಾಸಗಿ-ಸರಕಾರಿ ಬಸ್ ಮಧ್ಯೆ ಪೈಪೋಟಿಯಿಂದ ಈ ಗುಣಮಟ್ಟ ಸಾಧ್ಯವಾಗಿದೆ ಎಂದರು.
ಸಭಾಧ್ಯಕ್ಷತೆ ವಹಿಸಿದ್ದ ಶಾಸಕ ಎಸ್. ಅಂಗಾರ, ಜನರು ಅಭಿವೃದ್ಧಿ ಕೆಲಸಗಳಿಗೆ ಸಹಕಾರ ಕೊಡಬೇಕು. ಕೆಎಸ್‌ಆರ್‌ಟಿಸಿ ಬಸ್ ಓಡಾಟ ಮಾರ್ಗದಲ್ಲಿ ಸಮಯ ಪಾಲನೆಗೆ ಆದ್ಯತೆ ನೀಡುವುದಲ್ಲದೇ ಚಾಲಕರು, ನಿರ್ವಾಹಕರು ಉತ್ತಮ ಸೇವೆ ಒದಗಿಸಬೇಕು ಎಂದರು.
ಸಮ್ಮಾನ: ಕೆಎಸ್‌ಆರ್‌ಟಿಸಿ ಘಟಕ ನಿರ್ಮಾಣಕ್ಕೆ ಸ್ಥಳ ಒದಗಿಸಲು ಅವಿರತ ಶ್ರಮಿಸಿದ ಉಮೇಶ್ ವಾಗ್ಲೆ ಹಾಗೂ ಗುತ್ತಿಗೆದಾರ ಸುಧೀರ್ ಕುಮಾರ್ ಶೆಟ್ಟಿ ಅವರನ್ನು ಸಚಿವರು ಸಮ್ಮಾನಿಸಿದರು.
ವೇದಿಕೆಯಲ್ಲಿ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಶಾಸಕಿ ಶಕುಂತಳಾ ಟಿ. ಶೆಟ್ಟಿ, ಸುಳ್ಯ ನ.ಪಂ. ಅಧ್ಯಕ್ಷೆ ಶೀಲಾವತಿ ಮಾಧವ, ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ವಾರ್ಡ್ ಸದಸ್ಯ ಎನ್.ಎ. ರಾಮಚಂದ್ರ, ಜಿ.ಪಂ. ಸದಸ್ಯರಾದ ಎಸ್.ಎನ್. ಮನ್ಮಥ, ಪುಷ್ಪಾವತಿ ಬಾಳಿಲ, ಹರೀಶ್ ಕಂಜಿಪಿಲಿ, ಪಿ.ಪಿ. ವರ್ಗೀಸ್, ಪ್ರಮೀಳಾ ಜನಾರ್ದನ, ಮಂಡಳಿ ನಿರ್ದೇಶಕರಾದ ರಮೇಶ್ ಶೆಟ್ಟಿ, ಟಿ.ಕೆ. ಸುಧೀರ್, ಶೌಕತ್ ಆಲಿ, ಸಾರಿಗೆ ಇಲಾಖೆಯ ಜಗದೀಶ್ಚಂದ್ರ, ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜ ಶಿರಾಲಿ ಉಪಸ್ಥಿತರಿದ್ದರು.
ವಿಭಾಗೀಯ ವ್ಯವಸ್ಥಾಪಕ ವೆಂಕಟೇಶ್ ಸ್ವಾಗತಿಸಿ, ಉಪ ಮುಖ್ಯ ಕಾರ್ಮಿಕ ಕಲ್ಯಾಣಾಧಿಕಾರಿ ದಿವಾಕರ ವಂದಿಸಿದರು. ಸಂಚಾರ ಸಹಾಯಕ ರಮೇಶ್ ಶೆಟ್ಟಿ ನಿರೂಪಿಸಿದರು.
ಸಾರ್ವಜನಿಕ
ಅಹವಾಲು ಸ್ವೀಕರಿಸಿ
ಕೆಎಸ್‌ಆರ್‌ಟಿಸಿ ಜನರ ಸಂಸ್ಥೆ. ಪ್ರತಿ ಹಂತದ ಜನಪ್ರತಿನಿಧಿಗಳನ್ನು, ಸಾರ್ವ ಜನಿಕರನ್ನು ಸೇರಿಸಿ ಸಂಸ್ಥೆಯ ಬಲವರ್ಧನೆಗೆ ಅಗತ್ಯ ಸಲಹೆ-ಸೂಚನೆಗಳನ್ನು ಪಡೆದು ಕೊಳ್ಳಬೇಕು ಎಂದು ಸಚಿವ ರಾಮಲಿಂಗಾ ರೆಡ್ಡಿ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಉಚಿತ ಪಾಸ್: ವಿಸ್ತರಣೆಗೆ ಪ್ರಯತ್ನ
ಕರಾರಸಾ ನಿಗಮದ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಮಾತನಾಡಿ, ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ಕಲ್ಪಿಸಿರುವ
ಉಚಿತ ಬಸ್ ಪಾಸ್ ಸೌಲಭ್ಯವನ್ನು ಎಲ್ಲ ವಿದ್ಯಾರ್ಥಿಗಳಿಗೂ ವಿಸ್ತರಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಲಾಗಿದ್ದು, ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದರು. ಹಳೆ ಬಸ್ ಬದಲಾಯಿಸಿ ಹೊಸ ಬಸ್ ಒದಗಿಸಲು 1,700 ಹೊಸ ಬಸ್ ಹಾಗೂ 121 ವೋಲ್ವೋ ಬಸ್ ನೀಡುವ ಪ್ರಕ್ರಿಯೆಗೆ ಸದ್ಯದಲ್ಲೇ ಚಾಲನೆ ನೀಡಲಾಗುವುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Irrigation Development: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಅನುದಾನ: ವಿ.ಸೋಮಣ್ಣ
Power Prayers: ಡಿಸಿಎಂ ಟೆಂಪಲ್ ರನ್ ವಿಚಾರ; ಎಚ್‌ಡಿಕೆ ವ್ಯಂಗ್ಯ, ಡಿಕೆಶಿ ಪ್ರತ್ಯುತ್ತರ
BBK11: ದೈತ್ಯ ಸ್ಪರ್ಧಿಗಳನ್ನು ಸೋಲಿಸಿ ಫಿನಾಲೆಗೆ ಎಂಟ್ರಿ ಕೊಟ್ಟ ಹಳ್ಳಿಹೈದ ಹನುಮಂತು
Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ
POCO X7 5G; ಇದೀಗ ತಾನೆ ಬಿಡುಗಡೆಯಾದ ಫೋನ್ ನಲ್ಲಿ ಏನೇನಿದೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.