ಕರಾವಳಿಯ ವಿವಿಧೆಡೆ ಮಳೆ; ಸಿಡಿಲಿನಿಂದ ಹಾನಿ
Team Udayavani, Jun 7, 2019, 10:02 AM IST
ಮಂಗಳೂರು/ಉಡುಪಿ: ಕರಾವಳಿಯ ವಿವಿಧೆಡೆ ಬುಧವಾರ ತಡರಾತ್ರಿ ಉತ್ತಮ ಮಳೆಯಾಗಿದೆ. ಗಾಳಿ-ಮಳೆಯೊಂದಿಗೆ ಸಿಡಿಲಿನ ಆರ್ಭಟವೂ ಇದ್ದು ಹಲವು ಮನೆಗಳಿಗೆ ಹಾನಿ ಸಂಭವಿಸಿದೆ. ವಿದ್ಯುತ್ ಉಪಕರಣಗಳಿಗೆ ಹಾನಿಯಾಗಿದೆ.
ವಿಟ್ಲ, ಬಂಟ್ವಾಳ, ಮಂಗಳೂರು ಬೆಳ್ತಂಗಡಿ, ಪುತ್ತೂರು, ಮೂಡುಬಿದಿರೆ ಸೇರಿದಂತೆ ಬಹುತೇಕ ಕಡೆಗಳಲ್ಲಿ ರಾತ್ರಿ ಸುಮಾರು 12.30ರಿಂದ ಗುಡುಗು, ಸಿಡಿಲು ಹಾಗೂ ಗಾಳಿ ಸಹಿತ ಆರಂಭಗೊಂಡ ಮಳೆ ಸುಮಾರು ಒಂದೂವರೆ ತಾಸು ಸುರಿದಿದ್ದು ತೋಡುಗಳಲ್ಲಿ ನೀರು ಹರಿದಿದೆ. ಗುರುವಾರ ಬೆಳಗ್ಗೆ ಮೂಡಬಿದಿರೆ, ಹಳೆಯಂಗಡಿ ಮಂಗಳೂರು ಸೇರಿದಂತೆ ಕೆಲವು ಕಡೆ ಹನಿಹನಿ ಮಳೆಯಾಗಿದೆ. ಉಡುಪಿ ಜಿಲ್ಲೆಯ ಪಡುಬಿದ್ರಿ, ಮೂಲ್ಕಿ, ಕಾಪು, ಬೆಳ್ಮಣ್, ಶಿರ್ವ, ಬ್ರಹ್ಮಾವರ, ಹಾಲಾಡಿ, ಕೋಟೇಶ್ವರ, ಬೀಜಾಡಿ, ಶಿರೂರು, ಬೈಂದೂರು ಮೊದಲಾದೆಡೆ ಸಾಧಾರಣ ಮಳೆಯಾಗಿದೆ.
ಗೋಡೆ ಬಿರುಕು
ಬಂಟ್ವಾಳ: ಬುಧವಾರ ತಡರಾತ್ರಿ ಸುರಿದ ಮಳೆ ಸಿಡಿಲಾಘಾತಕ್ಕೆ ಸಜೀಪ ಮುನ್ನೂರು ಗ್ರಾಮ ನಿವಾಸಿ ರುಕ್ಮಯ ಪೂಜಾರಿ ಅವರ ಪುತ್ರ ಭರತ್ ಕುಮಾರ್ ಮನೆಗೆ ಹಾನಿಯಾಗಿದೆ. ವಿದ್ಯುತ್ ವಯರಿಂಗ್ ಸುಟ್ಟಿದ್ದು, ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ತೆಂಗಿನ ಮರಕ್ಕೂ ಹಾನಿಯಾಗಿದೆ. ಹಟ್ಟಿಯಲ್ಲಿದ್ದ ಜಾರುವಾರುಗಳಿಗೆ ಸಿಡಿಲಿನ ಅಘಾತ ಅಗಿದೆ ಎಂದು ಮನೆಯವರು ತಿಳಿಸಿದ್ದಾರೆ.
ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ನಷ್ಟದ ಬಗ್ಗೆ ಬಂಟ್ವಾಳ ತಹಶೀಲ್ದಾರ್‌ಗೆ ವರದಿ ಸಲ್ಲಿಸಿದ್ದಾರೆ.
ಮನೆಗೆ ಹಾನಿ
ತೆಕ್ಕಟ್ಟೆ: ತೆಕ್ಕಟ್ಟೆ ಪರಿಸರದಲ್ಲಿ ಬುಧವಾರ ತಡರಾತ್ರಿ ಸಿಡಿಲು ಸಹಿತ ಉತ್ತಮ ಮಳೆಯಾಗಿದ್ದು, ಹವ್ಯಾಸಿ ಯಕ್ಷಗಾನ ಕಲಾವಿದ ಅರೆಬೈಲು ರಾಮಕೃಷ್ಣ ಹೆಬ್ಟಾರ್ ಅವರ ಮನೆಗೆ ಬುಧವಾರ ತಡರಾತ್ರಿ ಸಿಡಿಲು ಬಡಿದು ಹಾನಿ ಸಂಭವಿಸಿದೆ. ವಿದ್ಯುತ್ ಉಪಕರಣಗಳು ಮತ್ತು ಸೋಲಾರ್ ವ್ಯವಸ್ಥೆ ಸಂಪೂರ್ಣ ಹಾನಿಗೀಡಾಗಿವೆ. ಮನೆಯ ಹಿಂಬದಿಯ ಗೋಡೆ ಬಿರುಕು ಬಿಟ್ಟಿದೆ. ಮನೆಯ ವರು ಅಪಾಯದಿಂದ ಪಾರಾಗಿದ್ದಾರೆ. ಸಿಡಿಲು ಮನೆಯ ಗೋಡೆಯನ್ನು ಸೀಳಿಕೊಂಡು ಸಾಗಿದೆ. ಛಿದ್ರಗೊಂಡ ಕಲ್ಲುಗಳು ನಿದ್ರಿಸುತ್ತಿದ್ದವರ ಮೇಲೆ ಬಿದ್ದು ಎಚ್ಚರಗೊಂಡರು. ಒಮ್ಮೆಲೇ ಆಘಾತಗೊಂಡು ಎದ್ದು ನೋಡಿದಾಗ ಸಂಪೂರ್ಣ ಮನೆಯನ್ನು ಹೊಗೆ ಆವರಿಸಿತ್ತು ಎಂದು ಗೃಹಿಣಿ ವಂದನಾ ಹೆಬ್ಟಾರ್ ಪತ್ರಿಕೆಗೆ ತಿಳಿಸಿದ್ದಾರೆ. 30 ಸಾವಿರ ರೂ.ಗಳಿಗೂ ಅಧಿಕ ಮೊತ್ತದ ಹಾನಿ ಅಂದಾಜಿಸಲಾಗಿದೆ.ಘಟನೆ ತಿಳಿಯುತ್ತಿದ್ದಂತೆ ಗ್ರಾ.ಪಂ.ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ತೆಕ್ಕಟ್ಟೆ ಗ್ರಾಮ ಲೆಕ್ಕಿಗ ದೀಪಿಕಾ ಶೆಟ್ಟಿ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ವಿದ್ಯುತ್ ಪರಿಕರಗಳಿಗೆ ಹಾನಿ
ಸವಣೂರು ; ಬುಧವಾರ ರಾತ್ರಿ ಉತ್ತಮ ಮಳೆ ಸುರಿದಿದ್ದು, ಇಲ್ಲಿನ ಮನೆಯೊಂದಕ್ಕೆ ಸಿಡಿಲು ಬಡಿದು ಅಪಾರ ಹಾನಿ ಸಂಭವಿಸಿದೆ. ಪಾಲ್ತಾಡಿ ಗ್ರಾಮದ ಚೆನ್ನಾವರ ಪಟ್ಟೆ ಚಂದ್ರಹಾಸ ರೈ ಅವರ ಮನೆಗೆ ಸಿಡಿಲು ಬಡಿದಿದ್ದು, ವಿದ್ಯುತ್ ಮೀಟರ್, ಫ್ಯಾನ್ ಸೇರಿದಂತೆ ಹಲವು ವಿದ್ಯುತ್ ಪರಿಕರಗಳು ಸುಟ್ಟು ಹೋಗಿವೆ. ಕಳೆದ ಮಳೆಗಾಲದಲ್ಲಿ ಇವರ ಕೃಷಿ ತೋಟಕ್ಕೆ ಸಿಡಿಲು ಬಡಿದು ಹಲವು ಅಡಿಕೆ ಮರಗಳು ನಾಶವಾಗಿದ್ದವು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.