ಅಡಕೆಗೆ ಔಷಧ ಸಿಂಪಡಿಸಲೂ ಅವಕಾಶ ನೀಡುತ್ತಿಲ್ಲ ಮಳೆ!
Team Udayavani, Aug 13, 2018, 10:29 AM IST
ಆಲಂಕಾರು: ಮಳೆಗಾಲ ಅಬ್ಬರದ ಆರಂಭವನ್ನೇ ಪಡೆದಿದ್ದು, ನದಿ ಪಾತ್ರದ ರೈತರನ್ನು ಹೈರಾಣಾಗಿಸಿದೆ. ನೆರೆ ನೀರು ಬಂದು ತಿಂಗಳು ಕಳೆದರೂ ಇಳಿಕೆಯಾಗಿಲ್ಲ. ತಮ್ಮ ಪಾಲಿನ ಗದ್ದೆಗಳಿಗೆ ನಾಟಿ ಮಾಡಲಾಗದೆ ರೈತರು ಹತಾಶರಾಗಿದ್ದಾರೆ.
ಆರಂಭದಲ್ಲಿ ನಿಧಾನಗತಿಯಲ್ಲಿದ್ದ ಮಳೆ ದಿನ ಕಳೆದಂತೆ ಬಿರುಸು ಪಡೆ ದಿದೆ. ನದಿ ದಂಡೆಯ ರೈತರ ತೋಟಗಳಲ್ಲಿ ತಿಂಗಳುಗಟ್ಟಲೆ ನೀರು ನಿಂತು ಕೊಳೆ ರೋಗದಿಂದ ಅಡಿಕೆ ಬೆಳೆಯನ್ನು ಸಂಪೂರ್ಣವಾಗಿ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಗದ್ದೆಗಳಿಗಳಲ್ಲಿ ಬೇಸಾಯ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಔಷಧ ಸಿಂಪಡಣೆಗೂ ಅವಕಾಶ ಸಿಕ್ಕಿಲ್ಲ
ಈ ವರ್ಷ ಜನವರಿ ತಿಂಗಳಲ್ಲೇ ಭಾರೀ ಬಿರುಗಾಳಿಯೊಂದಿಗೆ ಮಳೆ ಆರಂಭವಾಗಿತ್ತು. ಆಗಲೇ ಹಲವು ಕೃಷಿಕರು ಅಡಿಕೆ ಮರ, ತೆಂಗಿನ ಮರ, ರಬ್ಬರ್, ಬಾಳೆ ಸಹಿತ ಪ್ರಮುಖ ಬೆಳೆ ನಾಶ ಅನುಭವಿಸಿದ್ದಾರೆ. ಈಗ ನದಿ ಪಾತ್ರದ ಜನ ನೆರೆ ನೀರಿನಿಂದ ಕೃಷಿಯನ್ನು ಸಂಪೂರ್ಣವಾಗಿ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಕರಾವಳಿಯಲ್ಲಿ ಭತ್ತ ಬೇಸಾಯ ಹಾಗೂ ಅಡಿಕೆ ಪ್ರಮುಖ ಬೆಳೆಗಳು. ಬಿಡುವು ಕೊಡದೆ ಮಳೆ ಸುರಿಯುತ್ತಿರುವುದರಿಂದ ಅಡಿಕೆ ಗಿಡಗಳಿಗೆ ಪ್ರಥಮ ಹಂತದ ಔಷಧ ಸಿಂಪಡಿಸಲೂ ಅವಕಾಶ ನೀಡಿಲ್ಲ. ಇದರ ಪರಿಣಾಮ ನೆರೆ ನೀರು ನಿಲ್ಲದ ತೋಟಗಳಿಗೂ ಕೊಳೆರೋಗದ ಭೀತಿ ಎದುರಾಗಿದೆ.
ಅಡಿಕೆ ಕೃಷಿಗೆ ಪ್ರತೀ 30ರಿಂದ 45 ದಿನಗಳ ಅವಧಿಯಲ್ಲಿ ಬೋರ್ಡೋ ದ್ರಾವಣ ಸಿಂಪಡಣೆ ಮಾಡಬೇಕಾಗುತ್ತದೆ. ಆದರೆ ನಿರಂತರ ಮಳೆಯ ಕಾರಣ ಜೂನ್ ತಿಂಗಳ ಪ್ರಥಮ ಹಂತದ ಔಷಧ ಸಿಂಪಡಣೆಯೇ ಇನ್ನೂ ಆಗಿಲ್ಲ. ಅಡಿಕೆಯೊಂದಿಗೆ ಉಪ ಕೃಷಿಗಳಾದ ಕರಿಮೆಣಸು, ಬಾಳೆಗಿಡಗಳ ಉಳಿಯುವಿಗಾಗಿ ಶತ ಪ್ರಯತ್ನದಲ್ಲಿದ್ದಾರೆ. ನದಿ ಪಾತ್ರದಲ್ಲಿರುವ ಗದ್ದೆಗಳಿಗೆ ನೆರೆ ನೀರು ಆವರಿಸಿ ತಿಂಗಳಾಗುತ್ತ ಬಂದಿರುವ ಕಾರಣ ಭತ್ತ ನಾಟಿ ಮಾಡಲಾಗದೆ ಒದ್ದಾಡುತ್ತಿದ್ದಾರೆ. ಇದರಿಂದಾಗಿ ಜೂನ್ ತಿಂಗಳಲ್ಲಿ ನಾಟಿ ಮಾಡಲಾಗುವ ಒಂದು ಬೆಳೆಯನ್ನೇ ರೈತರು ಕಳೆದುಕೊಳ್ಳುವ ಭೀತಿ ಆವರಿಸಿದೆ.
ವೇತನ ಪದ್ಧತಿ ಬದಲು
ಔಷಧ ಸಿಂಪಡಣೆಯ ಕೂಲಿ ಕಾರ್ಮಿಕರು ಗ್ರಾಮದಲ್ಲಿ ಬೆರಳೆಣಿಕೆಯಷ್ಟಿರುವ ಕಾರಣ ಸಿಂಪಡಣೆ ಮಾಡುವ ಕೂಲಿ ಕಾರ್ಮಿಕರಿಗೆ ಎಲ್ಲಿಲ್ಲದ ಬೇಡಿಕೆಯಿದೆ. ಕಳೆದ ವರ್ಷ 1200 ರೂ. ದಿನದ ಸಂಬಳವಿತ್ತು. ಆದರೆ ಈ ವರ್ಷ 1500 ರೂ.ಗೂ ಅಧಿಕ ಸಂಬಳ ನೀಡಿದರೂ ಕೂಲಿ ಕಾರ್ಮಿಕರ ಕೊರತೆಯಾಗಿದೆ. ಇದ್ದವರಿಗೂ ಮಳೆ ಕಾರಣ ಕೆಲಸ ಕಾರ್ಯಗಳಿಗೆ ತೊಡಕಾಗಿದೆ. ಈ ಕಾರಣಕ್ಕಾಗಿ ಡ್ರಂ ಔಷಧಿ ಸಿಂಪಡಣೆಯ ಆಧಾರದಲ್ಲಿ ಸಂಬಳ ನೀಡುವ ಪದ್ಧತಿ ಜಾರಿಗೆ ಬಂದಿದೆ. ಗ್ರಾಮೀಣ ಪ್ರದೇಶದಲ್ಲಿ ಒಂದು ಡ್ರಂಗೆ 600 ರೂ. ವೇತನ ನೀಡಲಾಗುತ್ತಿದೆ.
ಗೊಬ್ಬರ ನೀರುಪಾಲು
ಆರಂಭದಲ್ಲಿ ಬಿರುಗಾಳಿ, ಸಿಡಿಲಿನೊಂದಿಗೆ ಪ್ರವೇಶ ಪಡೆದ ಮುಂಗಾರು, ಪುತ್ತೂರು, ಸುಳ್ಯ, ಬಂಟ್ವಾಳ, ಬೆಳ್ತಂಗಡಿ ತಾಲೂಕಿನ ರೈತರ ಅಪಾರ ಪ್ರಮಾಣದ ಅಡಿಕೆ, ಬಾಳೆ, ತೆಂಗು ಕೃಷಿಯನ್ನು ನಾಶ ಮಾಡಿತ್ತು. ಸಿಡಿಲು ರೈತರ ಜೀವ ಬಲಿಯನ್ನೂ ಪಡೆದುಕೊಂಡಿತ್ತು. ಇದೀಗ ಭಾರಿ ಪ್ರಮಾಣದ ಮಳೆ ಅಳಿದುಳಿದ ಕೃಷಿಯನ್ನು ನಾಶ ಮಾಡಲು ಪಣತೊಟ್ಟಂತಿದೆ. ಮಳೆ ಆರಂಭದಿಂದ ಈ ವರೆಗೆ ತೋಟಗಳಿಗೆ ಹಟ್ಟಿ ಗೊಬ್ಬರ, ರಸಗೊಬ್ಬರ ಹಾಕಲೂ ಅವಕಾಶ ನೀಡಿಲ್ಲ. ಹಾಲಿ ಬೆಳೆಯ ಆಸೆಯನ್ನೇ ರೈತರು ಬಿಟ್ಟಿದ್ದಾರೆ. ಮುಂದಿನ ಸಲವೂ ಒಳ್ಳೆಯ ಫಸಲು ಬರುವುದು ಅನುಮಾನ ಎನ್ನುತ್ತಿದ್ದಾರೆ. ನದಿ ಪಾತ್ರದ ತೊಟಗಳಲ್ಲಿ ನೆರೆ ನೀರು ನಿಂತಿದ್ದರೆ, ಗುಡ್ಡಗಾಡು ಬಯಲು ಪ್ರದೇಶದ ತೋಟಗಳಲ್ಲಿ ಮಳೆ ನೀರಿಗೆ ಗೊಬ್ಬರ ಕೊಚ್ಚಿ ಹೋಗುತ್ತಿದೆ. ಕೃಷಿಗಾಗಿ ಖರ್ಚು ಮಾಡಿದ್ದೂ ಕೈಬಿಟ್ಟು ಹೋಗುವಂತಾಗಿದೆ.
ಬೆಂಬಲ ಬೆಲೆ ಘೋಷಿಸಿ
ಆಡಳಿತ ವ್ಯವಸ್ಥೆಯೂ ಕರಾವಳಿಯ ರೈತರನ್ನು ಹಿಡಿದು ಆಟವಾಡಿಸಿದೆ. ಕರಾವಳಿ ಭಾಗದಲ್ಲಿ ಅಡಿಕೆ ಪ್ರಮುಖ ಬೆಳೆ. ಜಿಲ್ಲೆಯ ರೈತರಿಗೆ ಸರಕಾರ ಸಾಲ ಮನ್ನಾದ ಬದಲು ಅಡಿಕೆಗೆ ಬೆಂಬಲ ಬೆಲೆಯೊಂದಿಗೆ ಹವಾಮಾನ ಆಧಾರಿತ ಬೆಳೆ ವಿಮೆಯನ್ನು ಶೀಘ್ರವೇ ಘೋಷಿಸುತ್ತಿದ್ದರೆ ಸಾವಿರಾರು ರೈತರು ಸಂಕಷ್ಟದಿಂದ ಪಾರಾಗುತ್ತಿದ್ದರು. ಆದರೆ ಸಾಲ ಮನ್ನಾ ಎಂಬ ವಿಚಾರದಲ್ಲಿ ಮುಂಗೈಗೆ ಬೆಣ್ಣೆ ಸವರಿ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದೆ. ನೆರೆ ನೀರಿನಿಂದ ಕೃಷಿಯನ್ನು ಕಳೆದುಕೊಂಡ ರೈತರ ಬಗ್ಗೆ ಸಮರ್ಪಕ ಮಾಹಿತಿ ಪಡೆದುಕೊಂಡು ಜನಪ್ರತಿನಿಗಳು ಸದನದಲ್ಲಿ ಸರಕಾರಕ್ಕೆ ಮನ ವ ರಿಕೆ ಮಾಡಿಕೊಟ್ಟು, ರೈತರಿಗೆ ನ್ಯಾಯ ದೊರಕಿಸಬೇಕಿದೆ. ಅಡಿಕೆಗೆ ಸರಕಾರ ಬೆಂಬಲ ಬೆಲೆ ಘೋಷಿಸುವಂತೆ ಒತ್ತಡ ಹೇರಬೇಕಾಗಿದೆ.
ಭತ್ತಕ್ಕೆ ಪರಿಹಾರ ಸಾಧ್ಯ
ಪ್ರಾಕೃತಿಕ ವಿಕೋಪದಡಿ ಭತ್ತದ ಕೃಷಿಗೆ ಪರಿಹಾರ ನೀಡಲು ಸಾಧ್ಯವಿದೆ. ಬೆಳೆ ಯಾವ ಹಂತದಲ್ಲಿ ನೆರೆ ನೀರಿಗೆ ಬಲಿಯಾಗಿದೆ ಎಂಬ ಆಧಾರದಲ್ಲಿ ಪರಿಹಾರ ಮೊತ್ತವನ್ನು ನಿರ್ಧರಿಸಲಾಗುತ್ತದೆ. ಭತ್ತದ ಕೃಷಿಯ ಬಗ್ಗೆ ಪಹಣಿ ಪತ್ರದಲ್ಲಿ ನೋಂದಣಿ ಆಗಿರಬೇಕು. ಎಕ್ರೆಗೆ 1,000 ರೂ. ಪರಿಹಾರ ನೀಡಲಾಗುತ್ತದೆ. ಈ ಬಗ್ಗೆ ಸವಿಸ್ತಾರವಾಗಿ ತಹಶೀಲ್ದಾರ್‌ಗೆ ಅರ್ಜಿ ಸಲ್ಲಿಸಬೇಕು. ಕೊಳೆ ರೋಗಕ್ಕೆ ಪರಿಹಾರ ಘೋಷಿಸಿದ ಬಳಿಕ ತೋಟಗಾರಿಕಾ ಇಲಾಖೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.
– ತಿಮ್ಮಪ್ಪ ಗೌಡ, ಸಹಾಯಕ ಕೃಷಿ ಅಧಿಕಾರಿ, ಕಡಬ
ಒಂದೇ ಬೆಳೆ ಸಾಧ್ಯ
ಈ ಬಾರಿಯ ಮಳೆಯಿಂದಾಗಿ ನಾಟಿ ಮಾಡಿದ ಒಂದೂವರೆ ಎಕ್ರೆ ಗದ್ದೆಯ ನೇಜಿ ನೆರೆ ನೀರಿನಲ್ಲಿ ಕೊಚ್ಚಿ ಹೋಗುವ ಭೀತಿ ಎದುರಾಗಿದೆ. ಈಗಾಗಲೇ ಭಾರಿ ನೆರೆ ನೀರು ಬಂದಿರುವುದರಿಂದ ಸುಮಾರು 10 ಎಕ್ರೆ ಭತ್ತದ ಗದ್ದೆ ನಾಟಿ ಮಾಡಲಾಗದ ಪರಿಸ್ಥಿತಿಗೆ ತಲುಪಿದೆ. ಈ ಗದ್ದೆಯಲ್ಲಿ ಒಂದು ಬೆಳೆಯನ್ನು ಮಾತ್ರ ಪಡೆಯಲು ಸಾಧ್ಯ.
- ರಾಮಣ್ಣ ಗೌಡ ಪಜ್ಜಡ್ಕ, ಆಲಂಕಾರು
ಸದಾನಂದ ಆಲಂಕಾರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.