ತುಸು ಬಿಡುವು ನೀಡಿದ ವರುಣ; ತಗ್ಗದ ನೆರೆ
Team Udayavani, Aug 18, 2018, 2:00 AM IST
ಮಂಗಳೂರು/ಉಡುಪಿ: ಕಳೆದೆರಡು ದಿನಗಳಿಂದ ಅಬ್ಬರಿಸುತ್ತಿದ್ದ ಮಳೆ ಶುಕ್ರವಾರದ ವೇಳೆ ತುಸು ಕ್ಷೀಣಗೊಂಡಿದೆ. ತಗ್ಗು ಪ್ರದೇಶಗಳಲ್ಲಿ ನೆರೆ ಪ್ರಮಾಣ ತಗ್ಗಲಿಲ್ಲ. ಕಡಲಿನ ಅಬ್ಬರವೂ ಜೋರಾಗಿಯೇ ಇದೆ. ದ.ಕ.ದಲ್ಲಿ ಮಳೆ ಇಳಿಕೆ ಕಂಡಿದ್ದು, ಉಡುಪಿ ಜಿಲ್ಲೆಯಲ್ಲಿ ಕಡಿಮೆಯಾಗಿತ್ತು.
ನೇತ್ರಾವತಿಯಲ್ಲಿ ತಗ್ಗದ ನೆರೆ
ಪ್ರಮುಖ ನದಿ ನೇತ್ರಾವತಿಯಲ್ಲಿ ನೆರೆ ಪ್ರಮಾಣ ತಗ್ಗಿಲ್ಲ. ಉಳ್ಳಾಲ ಉಳಿಯ ಸಹಿತ ನದಿ ತೀರದ 50ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿಯೇ ಇವೆ. ಸುಬ್ರಹ್ಮಣ್ಯ ಪರಿಸರದಲ್ಲೂ ಮಳೆ ಮುಂದುವರಿದಿದೆ. ಕುಮಾರಧಾರಾ ನದಿಯಲ್ಲಿ ಶುಕ್ರವಾರ ನೆರೆ ಕೊಂಚ ಇಳಿದಿತ್ತು. ಸುಬ್ರಹ್ಮಣ್ಯ-ಮಂಜೇಶ್ವರ ಸೇತುವೆ ಮುಳುಗಡೆ ಸ್ಥಿತಿಯಲ್ಲಿತ್ತು. ಪಯಸ್ವಿನಿಯ ಮಟ್ಟ ಶುಕ್ರವಾರ ಇಳಿದಿದೆ. ಕೊಡಗು-ದ.ಕ. ಗಡಿಭಾಗದ ಅರಂತೋಡು, ಸಂಪಾಜೆ ಪರಿಸರದಲ್ಲಿ ಮಳೆ ಅಬ್ಬರ ತೀವ್ರ ಸ್ವರೂಪ ಪಡೆದುಕೊಂಡಿದೆ.
ಬಿಸಿಲೆ: ಸತತ ಭೂಕುಸಿತ
ರಾಜ್ಯ ಹೆದ್ದಾರಿ 27ರ ಬಿಸಿಲೆ ಘಾಟಿಯಲ್ಲಿ ನಿರಂತರ ಭೂಕುಸಿತ ಸಂಭವಿಸುತ್ತಿದೆ. ಶಿರಾಡಿ ಬದಲು ಬಿಸಿಲೆ ಮೂಲಕ ಸಂಚರಿಸುತ್ತಿದ್ದ ವಾಹನ ಸವಾರರಿಗೆ ಆತಂಕ ಸೃಷ್ಟಿಯಾಗಿದೆ. ಬಂಟ್ವಾಳ, ಪುತ್ತೂರು, ಉಪ್ಪಿನಂಗಡಿ, ಬೆಳ್ತಂಗಡಿ, ಗುರುವಾಯನಕೆರೆ, ಧರ್ಮಸ್ಥಳ, ಮಡಂತ್ಯಾರು, ಮಚ್ಚಿನ, ಮದ್ದಡ್ಕ, ಪೂಂಜಾಲಕಟ್ಟೆ, ಕಡಬ ಪರಿಸರದಲ್ಲಿ ಉತ್ತಮ ಮಳೆಯಾಗಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಇನ್ನೆರಡು ದಿನ ದ.ಕ. ಜಿಲ್ಲೆಯಲ್ಲಿ ಉತ್ತಮ ಮಳೆಯಾಗುವ ಸಂಭವವಿದೆ.
ನೇತ್ರಾವತಿ ನೆರೆ ಇಳಿಕೆ; ಗಂಜಿ ಕೇಂದ್ರ ಆಶ್ರಯಿತರಿಗೆ ಬೆಡ್‌ಶೀಟ್
ಬಂಟ್ವಾಳ: ನೇತ್ರಾವತಿ ನದಿಯಲ್ಲಿ ನೆರೆ ಪ್ರಮಾಣ ಶುಕ್ರವಾರ ಮುಂಜಾನೆಯಿಂದ ಇಳಿಯಲು ಆರಂಭವಾಗಿದ್ದು, ಸಂಜೆ ವೇಳೆಗೆ 8 ಮೀ.ಗಳಷ್ಟಿತ್ತು. ನೆರೆ ಸಂತ್ರಸ್ತರಾಗಿ ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಮನೆಮಂದಿಗೆ ಸರಕಾರದಿಂದ ಒದಗಿಸಿದ ಬೆಡ್ ಶೀಟ್‌ಗಳನ್ನು ಶಾಸಕ ರಾಜೇಶ್ ನಾೖಕ್ ವಿತರಿಸಿದರು. ನಾವೂರು ಹಿ.ಪ್ರಾ. ಶಾಲೆ, ಬಂಟ್ವಾಳ ಪ್ರವಾಸಿ ಬಂಗಲೆ, ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲೆಯಲ್ಲಿ ಗಂಜಿಕೇಂದ್ರವನ್ನು ಸ್ಥಳೀಯ ಆಡಳಿತ ವ್ಯವಸ್ಥೆ ಮಾಡಿತ್ತು.
ಒಟ್ಟು 62 ಮನೆಗಳ 150ಕ್ಕೂ ಅಧಿಕ ಮಂದಿ ಗಂಜಿ ಕೇಂದ್ರಕ್ಕೆ ಗುರುವಾರ ಆಗಮಿಸಿದ್ದು, ನೆರೆ ಇಳಿದ ಕಾರಣ ಹೆಚ್ಚಿನವರು ವಾಪಸಾಗಿರುವುದಾಗಿ ಬಂಟ್ವಾಳ ತಹಶೀಲ್ದಾರ್ ತಿಳಿಸಿದ್ದಾರೆ. ನೆರೆ ಸಂತ್ರಸ್ತ ಪ್ರದೇಶಗಳಿಗೆ ಶುಕ್ರವಾರ ಸಚಿವ ಖಾದರ್, ಬಂಟ್ವಾಳ ಶಾಸಕರು, ಜಿಲ್ಲಾ ನ್ಯಾಯಾಧೀಶರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಷ್ಟದ ಬಗ್ಗೆ ಅಧಿಕಾರಿಗಳು ವಿವರಗಳನ್ನು ಪಡೆಯುತ್ತಿದ್ದು ಸಮಗ್ರ ಲೆಕ್ಕವನ್ನು ಇನ್ನಷ್ಟೆ ಸಂಗ್ರಹಿಸಬೇಕಾಗಿದೆ ಎಂದಿದ್ದಾರೆ. ಎಎಂಆರ್ ಡ್ಯಾಂನಿಂದ ನೀರ ಹರಿವು ನಿಯಂತ್ರಣಕ್ಕೆ ಬಂದಿದೆ. ತುಂಬೆ ಡ್ಯಾಂ ಎಲ್ಲ ಗೇಟ್ ತೆರೆದು ನೀರು ಹರಿಯ ಬಿಡಲಾಗಿದೆ ಎಂದು ಮನಪಾ ಮೂಲಗಳು ತಿಳಿಸಿದೆ.
ಮೀನುಗಾರರಿಗೆ ಎಚ್ಚರಿಕೆ
ಅರಬ್ಬಿ ಸಮುದ್ರದಲ್ಲಿ ಅಲೆಗಳು 3.6ರಿಂದ 4 ಮೀಟರ್ ಎತ್ತರಕ್ಕೆ ದಡಕ್ಕೆ ಅಪ್ಪಳಿಸಲಿದ್ದು, ಶನಿವಾರ ಮೀನುಗಾರರು ಸಮುದ್ರಕ್ಕೆ ತೆರಳದಂತೆ ದ.ಕ. ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಸಹಾಯಕ್ಕಾಗಿ 1077 ಟೋಲ್ ಫ್ರೀ ಸಂಖ್ಯೆ ಸಂಪರ್ಕಿಸಬಹುದು ಎಂದು ದ.ಕ. ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಸೂಚಿಸಿದ್ದಾರೆ.
ಸಂಗಮಕ್ಕೆ ಬಂದವರಿಗೆ ಲಾಠಿ ರುಚಿ
ಉಪ್ಪಿನಂಗಡಿ: ಪಟ್ಟಣದ ಸಹಸ್ರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಗುರುವಾರ ನೇತ್ರಾವತಿ- ಕುಮಾರಧಾರಾ ನದಿಗಳ ಎರಡನೇ ಐತಿಹಾಸಿಕ ಸಂಗಮ ವೀಕ್ಷಿಸಲು ಬಂದಿದ್ದ ಭಕ್ತರನ್ನು ಪೊಲೀಸರು ಲಾಠಿ ಚಾರ್ಜ್ ಮೂಲಕ ಚದುರಿಸಿದ್ದಾರೆ ಎಂದು ಭಕ್ತರು ದೂರಿದ್ದಾರೆ. ಇದಕ್ಕೆ ಸ್ಪಷ್ಟನೆ ನೀಡಿರುವ ಪೊಲೀಸ್ ಇಲಾಖೆ, ತೀರ್ಥಸ್ನಾನಕ್ಕೆ ಅಡ್ಡಿ ಮಾಡಿಲ್ಲ. ಸಂಗಮ ಪೂಜೆ ನಡೆದ ಮೇಲೂ ನೆರೆ ಹೆಚ್ಚುತ್ತಿತ್ತು. ಈ ವೇಳೆ ಕೆಲವರು ತೀರ್ಥಸ್ನಾನ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸಿದ್ದಾರೆ. ಮನವಿಗೂ ಸ್ಪಂದಿಸದ ಕೆಲವರನ್ನು ನಿಯಂತ್ರಿಸಲು ಲಾಠಿ ಎತ್ತಬೇಕಾಯಿತು ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್ ಅಘಾಡಿಗೆ ಮುಖಭಂಗ
Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್
Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫನ್‌ರೈಡ್
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.