ಬೇಸಗೆಯ ನೀರಿನ ತಾಪತ್ರಯಕ್ಕೆ ಮಳೆಗಾಲದಲ್ಲೆ ಮದ್ದು!
Team Udayavani, Apr 30, 2018, 8:40 AM IST
ಸುಬ್ರಹ್ಮಣ್ಯ: ಮಳೆಗಾಲದಲ್ಲಿ ನೀರಿನ ಅಗತ್ಯದ ನೆನಪಿರುವುದಿಲ್ಲ. ಅದರ ಬಿಸಿ ತಟ್ಟುವುದು ಬೇಸಗೆಯಲ್ಲಿ, ನೀರಿಗೆ ಅಲೆದಾಟ ಶುರುವಾದಾಗಲೇ. ಆದರೆ ಇವರು ಹಾಗಲ್ಲ. ಬೇಸಗೆಯಲ್ಲಿ ನೀರಿನ ತಾಪತ್ರಯ ಬರಬಾರದೆಂದು ಮಳೆಗಾಲದಲ್ಲೆ ಸಿದ್ಧತೆ ನಡೆಸುತ್ತಾರೆ. ಹೀಗಾಗಿ, ಐದು ವರ್ಷಗಳಿಂದ ಬೇಸಿಗೆಯನ್ನು ಚೆನ್ನಾಗಿಯೇ ಕಳೆದಿದ್ದಾರೆ. ಸುಬ್ರಹ್ಮಣ್ಯ – ಜಾಲ್ಸೂರು ರಾಜ್ಯ ಹೆದ್ದಾರಿಯ ಗುತ್ತಿಗಾರು ಬಳಿಯ ಮಲ್ಕಜೆ ಎಂಬಲ್ಲಿ ಕೃಷಿಕ ಬಿಟ್ಟಿ ಬಿ. ನೆಡುನೀಲಂ ಅವರು ತಮ್ಮ ಮನೆಯಲ್ಲಿ ಇಂತಹದ್ದೊಂದು ವ್ಯವಸ್ಥೆ ಅಳವಡಿಸಿಕೊಂಡಿದ್ದಾರೆ. ಹಿಂದೆಲ್ಲ ಬೇಸಗೆಯಲ್ಲಿ ಇವರ ಮನೆಯ ಬಾವಿಯಲ್ಲಿ ನೀರು ಬತ್ತಿ ಹೋಗಿ ಕುಡಿಯುವ ನೀರಿಗೂ ಪರದಾಟ ನಡೆಸಬೇಕಿತ್ತು. ಕೊನೆಗೆ ಕೊಳವೆಬಾವಿಯಿಂದ ಅಥವಾ ಸಮೀಪದ ಕೆರೆಯಿಂದ ನೀರು ತಂದು, ಫಿಲ್ಟರ್ ಮಾಡಿ ಕುಡಿದು ದಣಿವಾರಿಸಿಕೊಳ್ಳುವ ಸ್ಥಿತಿ ಇತ್ತು. ಕೃಷಿ ಚಟುವಟಿಕೆಗೂ ತೋಟಕ್ಕೂ ನೀರಿನ ಕೊರತೆ ಉಂಟಾಗುತ್ತಿತ್ತು.
ನಾಲ್ಕು ವರ್ಷಗಳ ಹಿಂದೆ ಕೊಡಗಿನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳಿದ್ದಾಗ ಅವರ ಕಣ್ಣಿಗೆ ಕುತೂಹಲದ ವಿಚಾರ ಬಿದ್ದಿದೆ. ಅಲ್ಲಿಯ ಸಭಾಭವನ ಒಂದರಲ್ಲಿ ಛಾವಣಿ ನೀರನ್ನು ಬಾವಿಗೆ ಬಿಟ್ಟಿರುವುದು ಗಮನಕ್ಕೆ ಬಂದಿತ್ತು. ಈ ಬಗ್ಗೆ ಕಟ್ಟಡದ ಮಾಲಕರಲ್ಲಿ ವಿಚಾರಿಸಿದಾಗ ನೀರಿನ ಸಮಸ್ಯೆ ಪರಿಹಾರಕ್ಕೆ ಈ ವ್ಯವಸ್ಥೆ ಅಳವಡಿಸಿಕೊಂಡಿದ್ದಾಗಿ ಅವರು ತಿಳಿಸಿದರು. ತಮ್ಮ ಮನೆಯ ಬಾವಿಗೂ ಇಂಥದೇ ವ್ಯವಸ್ಥೆ ಮಾಡಿದರೆ ಹೇಗೆ ಎಂಬ ಯೋಚನೆ ಹೊಳೆದಿದೆ. ಊರಿಗೆ ಮರಳಿದ ಮೇಲೆ ಅದನ್ನು ಕಾರ್ಯರೂಪಕ್ಕೂ ತಂದರು.
ಮನೆಯ ಛಾವಣಿ ನೀರನ್ನು 200 ಲೀಟರ್ ಬ್ಯಾರೆಲ್ ಗೆ ಹಾಯಿಸಿ ಅಲ್ಲಿ ನೀರನ್ನು ಮರಳು, ಜಲ್ಲಿ, ಮಸಿಯ ಮೂಲಕ ಸೋಸಿ ಬಾವಿಗೆ ರೀಚಾರ್ಜ್ ಮಾಡಲು ಆರಂಭಿಸಿದರು. ಮನೆಯ ಛಾವಣಿಗೆ ಬಿದ್ದ ನೀರು ಸೋಸಿ ಬಾವಿಗೆ ಇಳಿಯತೊಡಗಿತು. ಮಳೆಗಾಲ ಅರ್ಧ ಭಾಗ ಬಾವಿಯ ಮೂಲಕ ನೀರು ಅಂತರ್ಜಲಕ್ಕೆ ಸೇರ್ಪಡೆಯಾಗುತ್ತದೆ. ಆ ಬಳಿಕ ಬಾವಿಯಲ್ಲಿ ಮೇಲ್ಭಾಗದಲ್ಲೇ ನೀರು ಲಭ್ಯವಾಗುತ್ತದೆ. ನಾಲ್ಕು ವರ್ಷಗಳಿಂದ ನಿರಂತರವಾಗಿ ಈ ಪ್ರಯೋಗ ಮಾಡಿದ್ದರ ಫಲವಾಗಿ ಈಗ ಇವರಿಗೆ ಕಡು ಬಿಸಿಲ ಬೇಗೆಯಲ್ಲೂ ನೀರಿಗೆ ಬರವಿಲ್ಲ. ಬಾವಿಯಲ್ಲಿ ಈಗ ಸಾಕಷ್ಟು ನೀರಿದೆ. ಬೇಸಿಗೆ ಎಷ್ಟೆ ಪ್ರಖರವಾಗಿದ್ದರೂ ನೀರಿನ ಕುರಿತು ಚಿಂತಿಸುವ ಸ್ಥಿತಿ ಬಾರದು ಎನ್ನುವ ವಿಶ್ವಾಸದಲ್ಲಿದ್ದಾರೆ. ಅಷ್ಟಲ್ಲದೆ, ಮನೆಯ ಸಮೀಪದ ಕೆರೆಯಲ್ಲೂ ತೋಟಕ್ಕೆ ನೀರುಣಿಸಲು ಸಾಧ್ಯವಾಗುತ್ತಿದೆ. ಈ ಹಿಂದೆಲ್ಲ ಅರ್ಧ ಗಂಟೆಯಲ್ಲಿ ಖಾಲಿಯಾಗುತ್ತಿದ್ದ ನೀರು ಈಗ ಒಂದು ತಾಸು ಬಳಕೆಗೆ ಸಿಗುತ್ತದೆ. ಆಸುಪಾಸಿನ ಬಾವಿಗಳಲ್ಲೂ ನೀರಿನ ಮಟ್ಟ ಜಾಸ್ತಿಯಿದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಬಿಟ್ಟಿ ಬಿ. ನೆಡುನೀಲಂ.
ಪ್ರತಿ ವರ್ಷವೂ ಬ್ಯಾರೆಲ್ ಗೆ ಹಾಕಿರುವ ಮಸಿ ಇತ್ಯಾದಿಗಳನ್ನು ಬದಲಿಸುತ್ತಾರೆ. ಅಲ್ಲದೆ, ಪ್ರತಿ ಬೇಸಗೆಯಲ್ಲೂ ನೀರಿನ ಗುಣಮಟ್ಟವನ್ನು ಪರೀಕ್ಷೆಗೆ ಒಳಪಡಿತ್ತಾರೆ. ಇದುವರೆಗೆ ನೀರು ಕಲುಷಿತಗೊಂಡ ಉದಾಹರಣೆ ಇಲ್ಲ. ಪ್ರತಿ ಮನೆಯಲ್ಲಿ ಇಂತಹದೊಂದು ವ್ಯವಸ್ಥೆ ಅಳವಡಿಸಿಕೊಂಡರೆ ನೀರಿನ ಬವಣೆ ಯಾರಿಗೂ ಬರಲಿಕ್ಕಿಲ್ಲ. ಒಂದು ಪ್ರದೇಶದ 10 ಮನೆಗಳಲ್ಲಿ ಈ ಪದ್ಧತಿ ಅಳವಡಿಸಿಕೊಂಡರೆ ಉತ್ತಮ ಎಂಬ ಸಲಹೆಯನ್ನು ಕೊಡುತ್ತಾರೆ.
ಎಲ್ಲರೂ ಅಳವಡಿಸಿಕೊಳ್ಳಿ
ಮಳೆಗಾಲದಲ್ಲಿ ಶೇ. 95ರಷ್ಟು ಪ್ರಮಾಣದ ನೀರನ್ನು ಹಳ್ಳಕ್ಕೆ ಬಿಡುತ್ತೇವೆ. ಸ್ವಲ್ಪ ಶ್ರಮ ವಹಿಸಿದರೆ ಸರಳವಾಗಿ ಮಳೆ ನೀರನ್ನು ಸದುಪಯೋಗಪಡಿಸಿಕೊಂಡು ನಮ್ಮ ಪ್ರಯೋಜನಕ್ಕೆ ಬಳಸಿಕೊಳ್ಳಬಹುದು. ಮುಂದಿನ ಬೇಸಗೆಗೆ ಈಗಲೇ ಸಿದ್ಧತೆ ಮಾಡಿಕೊಳ್ಳಬೇಕು. ನಮಗೆ ಈ ಬಾರಿ ನೀರಿಗೆ ಬರ ಬಂದಿಲ್ಲ. ಸತತ 4 ವರ್ಷಗಳಿಂದ ಮನೆ ಬಾವಿಗೆ ಛಾವಣಿ ನೀರನ್ನು ರೀಚಾರ್ಜ್ ಮಾಡಿದ್ದೆ ಇದಕ್ಕೆ ಕಾರಣ. ಬೇಸಗೆಯಲ್ಲಿ ನೀರಿಗಾಗಿ ಅಲೆದಾಡುವುದು ತಪ್ಪಿದೆ.
– ಬಿಟ್ಟಿ ಬಿ. ನೆಡುನೀಲಂ, ಕೃಷಿಕ
— ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.