ಅಕ್ಟೋಬರ್‌ನಿಂದ ಕಾಲೇಜು ವಿದ್ಯಾರ್ಥಿಗಳಿಗೂ ಸ್ವಚ್ಛತೆಯ ಪಾಠ
Team Udayavani, Jul 1, 2018, 9:56 AM IST
ಮಹಾನಗರ: ವಿದ್ಯಾರ್ಥಿಗಳಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ರಾಮಕೃಷ್ಣ ಮಿಷನ್ ವತಿಯಿಂದ ಮಂಗಳೂರು ಸುತ್ತಮುತ್ತಲಿನ ಪ್ರೌಢ ಶಾಲೆಗಳಲ್ಲಿ ಆಯೋಜಿಸಲಾದ ‘ಸ್ವಚ್ಛ ಮನಸ್ಸು’ ಕಾರ್ಯಕ್ರಮವನ್ನು ಅಕ್ಟೋಬರ್‌ನಿಂದ ಕಾಲೇಜು ವಿದ್ಯಾರ್ಥಿಗಳಿಗೂ ವಿಸ್ತರಿಸಲು ರಾಮಕೃಷ್ಣ ಮಿಷನ್ ಮುಂದಾಗಿದೆ.
ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಾಮಕೃಷ್ಣ ಮಿಷನ್ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದರೂ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿದರೆ ಸ್ವಚ್ಛ ಸಮಾಜ ನಿರ್ಮಾಣವಾಗುವುದರಲ್ಲಿ ಸಂಶಯವಿಲ್ಲ ಎಂದು ರಾಮಕೃಷ್ಣ ಮಿಷನ್ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಹಂತಗಳಲ್ಲಿ ಸ್ವಚ್ಛತಾ ಜಾಗೃತಿಯನ್ನು ಆಯೋಜಿಸಿತು. ಅದರ ಮುಂದಿನ ಭಾಗವಾಗಿ ನಗರದ ಕಾಲೇಜು ವಿದ್ಯಾರ್ಥಿಗಳಿಗೂ ಇದನ್ನು ವಿಸ್ತರಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿದೆ. ಈ ಕಾರ್ಯಕ್ರಮ ಅಕ್ಟೋಬರ್ 2ರಿಂದ ಆಯ್ದ ಕಾಲೇಜುಗಳಲ್ಲಿ ಜಾರಿಗೆ ಬರಲಿದೆ.
108 ಶಾಲೆಗಳಲ್ಲಿ ಸ್ವಚ್ಛತಾ ಪಾಠ
2017 ನವೆಂಬರ್‌ನಲ್ಲಿ ಆರಂಭಿಸಿದ ‘ಸ್ವಚ್ಛ ಮನಸ್ಸು’ ಕಾರ್ಯಕ್ರಮವನ್ನು ನಗರದ ವಿವಿಧ ಪ್ರೌಢಶಾಲಾ ಮಕ್ಕಳಿಗೆ ಆಯೋಜಿಸಲಾಗಿತ್ತು. ಮಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳ 108 ಪ್ರೌಢ ಶಾಲೆಗಳ 10,757 ವಿದ್ಯಾರ್ಥಿಗಳಿಗೆ ವಿವಿಧ ರೀತಿಯಲ್ಲಿ ಸ್ವತ್ಛತೆಯ ಪಾಠ ಮಾಡಲಾಗಿತ್ತು.
ಇದರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ, ಚರ್ಚಾ ಸ್ಪರ್ಧೆಗಳು, ಚಿತ್ರಕಲಾ ಸ್ಪರ್ಧೆ, ಶ್ರಮದಾನಗಳ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗಿತ್ತು. ಇದಕ್ಕಾಗಿ 60 ಮಂದಿ ಸಂಪನ್ಮೂಲ ವ್ಯಕ್ತಿಗಳು ಕೈ ಜೋಡಿಸಿದ್ದರು. ಅವರು ಪ್ರತಿನಿತ್ಯ ಏಳು ಶಾಲೆಗಳಿಗೆ ಭೇಟಿ ನೀಡಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು
150 ಕಾಲೇಜುಗಳ ಆಯ್ಕೆ
ಪ್ರೌಢಶಾಲಾ ಮಕ್ಕಳಲ್ಲಿ ಸುಮಾರು ಒಂದು ವರ್ಷಗಳಿಂದ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ ಬಳಿಕ ರಾಮಕೃಷ್ಣ ಮಿಷನ್ ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲು ಮುಂದಾಗಿದೆ. ಇದಕ್ಕಾಗಿ ನಗರದ ಹಾಗೂ ಸುತ್ತಮುತ್ತಲಿನ ಸುಮಾರು 150 ಕಾಲೇಜುಗಳ 5,000ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದೆ. ಅವರಿಗೆ ಆಯ್ದ ಸಂಪನ್ಮೂಲ ವ್ಯಕ್ತಿಗಳಿಂದ ಸಂವಾದ ಕಾರ್ಯಕ್ರಮ, ಚರ್ಚಾಕೂಟ, ರಸ ಪ್ರಶ್ನೆಗಳನ್ನು ಆಯೋಜಿಸಲಾಗುತ್ತದೆ. ಈ ಮೂಲಕ ಅವರಿಗೆಸ್ವಚ್ಛತೆಯ ಪಾಠ ಬೋಧಿಸಲಾಗುತ್ತದೆ.
ಎಳವೆಯಿಂದಲೇ ಸ್ವಚ್ಛತೆಯ ಪಾಠ
ಸ್ವಚ್ಛತೆಯ ಬಗ್ಗೆ ರಾಮಕೃಷ್ಣ ಮಿಷನ್ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿತಾದರೂ ಎಳೆಯ ಮನಸ್ಸುಗಳಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಿದರೆ ಸ್ವಚ್ಛ ಸಮಾಜ ನಿರ್ಮಾಣವಾಗುವುದರಲ್ಲಿ ಸಂದೇಹವಿಲ್ಲ. ಈ ನಿಟ್ಟಿನಲ್ಲಿ 8ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ಸ್ವಚ್ಛತೆ ಪಾಠಗಳನ್ನು ಮಾಡಲಾಯಿತು. ಈ ವರ್ಷದಿಂದ ಕಾಲೇಜಿಗೂ ವಿಸ್ತರಿಸಲಾಗುತ್ತಿದೆ.
– ಏಕಗಮ್ಯಾನಂದ ಸ್ವಾಮೀಜಿ
ರಾಮಕೃಷ್ಣ ಮಠ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.