Fraud: ಸೈಬರ್ ವಂಚಕರಿಂದ ” ರ್‍ಯಾಟ್’ ವಂಚನೆ; ಮೊಬೈಲ್‌ಗೆ ಲಿಂಕ್ ಕಳುಹಿಸಿ ಹಣ ವರ್ಗಾವಣೆ
Team Udayavani, May 26, 2024, 6:50 AM IST
![Fraud: ಸೈಬರ್ ವಂಚಕರಿಂದ ” ರ್‍ಯಾಟ್’ ವಂಚನೆ; ಮೊಬೈಲ್‌ಗೆ ಲಿಂಕ್ ಕಳುಹಿಸಿ ಹಣ ವರ್ಗಾವಣೆ](https://www.udayavani.com/wp-content/uploads/2024/05/39-1-620x372.jpg)
![Fraud: ಸೈಬರ್ ವಂಚಕರಿಂದ ” ರ್‍ಯಾಟ್’ ವಂಚನೆ; ಮೊಬೈಲ್‌ಗೆ ಲಿಂಕ್ ಕಳುಹಿಸಿ ಹಣ ವರ್ಗಾವಣೆ](https://www.udayavani.com/wp-content/uploads/2024/05/39-1-620x372.jpg)
ಮಂಗಳೂರು: ಸೈಬರ್ ವಂಚಕರು ಬ್ಯಾಂಕ್ ಖಾತೆಗಳಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್‌ಗಳಿಗೆ ಲಿಂಕ್ ಕಳುಹಿಸಿ ಹಣ ವರ್ಗಾಯಿಸಿಕೊಳ್ಳುವ ಅಪಾಯವಿದ್ದು ಈ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸುವಂತೆ ಪೊಲೀಸರು ಸೂಚಿಸಿದ್ದಾರೆ.
ವಂಚಕರು ‘(Remote Access Tools) ಬಳಸಿಕೊಂಡು APK ಓ ಫೈಲ್/ಆ್ಯಂಡ್ರಾಯ್ಡ ಆ್ಯಪ್ ಸಿದ್ಧಪಡಿಸಿ ವಾಟ್ಸ್‌ಆ್ಯಪ್/ಟೆಕ್ಸ್ಟ್ ಮೆಸೇಜ್ ಮುಖಾಂತರ ಬ್ಯಾಂಕ್ ಖಾತೆಗಳಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್‌ಗಳಿಗೆ ಕಳುಹಿಸಿ ಕೊಡುತ್ತಾರೆ. ಅದು ಎಪಿಕೆ ಫೈಲ್ ಅಥವಾ ಲಿಂಕ್ ರೂಪದಲ್ಲಿರುತ್ತದೆ. ಅದನ್ನು ತೆರೆದರೆ ಮೊಬೈಲ್‌ಗೆ ಬರುವ ಎಲ್ಲ ಟೆಕ್ಸ್ಟ್ ಮೆಸೇಜ್‌ಗಳು ವಂಚಕರ ಮೊಬೈಲ್‌ಗಳಿಗೆ “ಆಟೋಮ್ಯಾಟಿಕಲಿ ಮೆಸೇಜ್ ಫಾರ್ವರ್ಡಿಂಗ್’ ಆಗುತ್ತದೆ. ಆ ಮೂಲಕ ವಂಚಕರು ಸುಲಭವಾಗಿ ಒಟಿಪಿ ಪಡೆದುಕೊಂಡು ಇಂಟರ್‌ನೆಟ್ ಮೊಬೈಲ್ ಬ್ಯಾಂಕಿಂಗ್ ಸೌಲಭ್ಯ ಅಳವಡಿಸಿಕೊಂಡು ಕ್ಷಣ ಮಾತ್ರದಲ್ಲಿ ಅವರ ಖಾತೆಗಳಿಗೆ ಹಣ ವರ್ಗಾಯಿಸಿಕೊಳ್ಳುತ್ತಾರೆ.
ಏನು ಮಾಡಬೇಕು? ಏನು ಮಾಡಬಾರದು?
ಈ ರೀತಿಯ ವಂಚನೆಯಿಂದ ಪಾರಾಗಬೇಕಾದರೆ ಸಾರ್ವಜನಿಕರು..
ಬ್ಯಾಂಕ್ ಖಾತೆಗಳಿಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗಳಿಗೆ ವಾಟ್ಸ್ ಆ್ಯಪ್ ಅಥವಾ ಟೆಕ್ಸ್ಟ್ ಮೆಸೇಜ್ ಮುಖಾಂತರ ಬರುವ ಎಪಿಕೆ ಫೈಲ್ ಅಥವಾ ಆ್ಯಂಡ್ರಾಯ್ಡ ಆ್ಯಪ್ ಲಿಂಕ್‌ಗಳನ್ನು ಕ್ಲಿಕ್ ಮಾಡಬಾರದು.
ಆ್ಯಂಡ್ರಾಯ್ಡ ಮೊಬೈಲ್‌ಗಳಲ್ಲಿ ಇನ್‌ಸ್ಟಾಲ್ ಅನ್‌ನೋನ್ ಆ್ಯಪ್ಸ್‌ನ್ನು ಡಿಸೇಬಲ್ ಮಾಡಬೇಕು.
ಒಂದು ವೇಳೆ ನಿರ್ಲಕ್ಷ್ಯದಿಂದ ಅಂತಹ ಲಿಂಕ್‌ಗಳನ್ನು ಕ್ಲಿಕ್ ಮಾಡಿದರೆ ತತ್‌ಕ್ಷಣ ಮೊಬೈಲ್‌ನ್ನು ಏರೋಪ್ಲೇನ್ ಮೋಡ್‌ಗೆ ಹಾಕಬೇಕು ಅಥವಾ ಸ್ವಿಚ್ ಆಫ್ ಮಾಡಿಕೊಂಡು ಬ್ಯಾಂಕ್‌ಗೆ ಸಂಪರ್ಕಿಸಿ ಬ್ಯಾಂಕ್ ಖಾತೆ ಸ್ಥಗಿತಗೊಳಿಸಬೇಕು.
ಖಾತೆಯಿಂದ ಹಣ ವರ್ಗಾವಣೆಗೊಂಡಿದ್ದರೆ ಸೈಬರ್ ಕ್ರೈಂ ಹೆಲ್ಪ್ಲೈನ್ 1930ಗೆ ಕರೆ ಮಾಡಿ ದೂರು ದಾಖಲಿಸಬೇಕು.