ಚುನಾವಣಾ ಪ್ರಚಾರಕ್ಕೆ ರಥಯಾತ್ರೆ !
Team Udayavani, Apr 16, 2018, 9:00 AM IST
ಸಾರ್ವತ್ರಿಕ ಚುನಾವಣೆಗಳ ಪ್ರಚಾರ ಕಾರ್ಯಕ್ಕೂ ಚುನಾವಣಾ ರಥಯಾತ್ರೆಗಳಿಗೂ ವಿಶೇಷವಾದ ನಂಟಿದೆ. ಚುನಾವಣಾ ಪ್ರಚಾರ ಕಾರ್ಯಗಳಿಗೆ ಒಂದಿಷ್ಟು ಆಕರ್ಷಕ ಸ್ಪರ್ಶ ಕೂಡ ಈ ಪ್ರಚಾರ ರಥಯಾತ್ರೆಗಳ ಮೂಲಕ ದೊರೆತಿದೆ. ರಾಷ್ಟ್ರೀಯ ನಾಯಕರು, ಮುಖ್ಯಮಂತ್ರಿ ಸಹಿತ ರಾಜ್ಯ ನಾಯಕರು ಈ ರೀತಿಯ ಶೈಲಿಯನ್ನು ಪ್ರಚಾರ ಕಾರ್ಯಕ್ಕೆ ಬಳಸಿದ ಅನೇಕ ದೃಷ್ಟಾಂತಗಳಿವೆ. ದಕ್ಷಿಣ ಕನ್ನಡ – ಉಡುಪಿ ಜಿಲ್ಲೆಗಳು ಅನೇಕ ಚುನಾವಣಾ ರಥಯಾತ್ರೆಗಳಿಗೆ ಸಾಕ್ಷಿಯಾಗಿವೆ.
ಅಂದಹಾಗೆ, ಮೊದಮೊದಲ ಚುನಾವಣೆಗಳಲ್ಲೆಲ್ಲ ಎತ್ತಿನಗಾಡಿ, ಸೈಕಲ್ ಇತ್ಯಾದಿಗಳನ್ನು ಪ್ರಚಾರದ ಸಂದರ್ಭದಲ್ಲಿ ಬಳಸಿಕೊಂಡದ್ದಿದೆ. ಈ ‘ವಾಹನ’ಗಳ ಮೂಲಕ ಅಭ್ಯರ್ಥಿಗಳು ಅಥವಾ ಕಾರ್ಯಕರ್ತರು ಮತದಾರರ ಬಳಿಗೆ ತೆರಳಿ, ಮತ ಯಾಚನೆ ಮಾಡುತ್ತಿದ್ದರು. ಸಂತೆ ಮುಂತಾದೆಡೆ ಜನ ಸೇರಿದಲ್ಲಿಯೂ ಪ್ರಚಾರ ಕಾರ್ಯ ನಡೆಯುತ್ತಿತ್ತು. ಆಧುನಿಕ ಸೌಲಭ್ಯಗಳು ಹೆಚ್ಚಿದಂತೆ, ಪ್ರಚಾರದ ಶೈಲಿಯಲ್ಲೂ ಬದಲಾವಣೆಗಳು ನಡೆದವು. ಧ್ವನಿವರ್ಧಕ ಇತ್ಯಾದಿಗಳ ಬಳಕೆ ಹೆಚ್ಚಾಯಿತು. ಇಂತಹ ಸಂದರ್ಭದಲ್ಲಿ ಆಂಧ್ರಪ್ರದೇಶದಲ್ಲಿ ಸುಪ್ರಸಿದ್ಧ ಚಿತ್ರನಟರಾಗಿದ್ದ ಎನ್.ಟಿ. ರಾಮರಾವ್ ಅವರು ತೆಲುಗು ದೇಶಂ ಪಕ್ಷ ಕಟ್ಟಿದರು. ಎರಡನೇ ಬಾರಿ ಸ್ಪರ್ಧಿಸಿದ 1984ರಲ್ಲಿ ತಮ್ಮ ಸೈಕಲ್ ಚಿಹ್ನೆಯ ಮೂಲಕ ಆಂಧ್ರದಾದ್ಯಂತ ಮಿಂಚಿನ ವೇಗದ ಪ್ರಚಾರ ಕಾರ್ಯ ನಡೆಸಿದರು. ತೆಲುಗರ ಸ್ವಾಭಿಮಾನವನ್ನು ಉದ್ದೀಪನಗೊಳಿಸುವ ರೀತಿಯಲ್ಲಿ ಅವರ ಪ್ರಚಾರ ಕಾರ್ಯ ನಡೆಯಿತು. ಅವರು ಅಭೂತಪೂರ್ವ ಯಶಸ್ಸು ಸಾಧಿಸಿದರು. ಅವರು ಪ್ರವಾಸ ಮತ್ತು ಪ್ರಚಾರಕ್ಕೆ ಬಳಸಿಕೊಂಡದ್ದು ರಥ ಸ್ವರೂಪದ ಮತ್ತು ರಥದ ಶೀರ್ಷಿಕೆಯ ವಾಹನ. ಇದು ಚುನಾವಣಾ ರಥಯಾತ್ರೆ ಪರಿಕಲ್ಪನೆಯ ಯಶಸ್ವೀ ಅನುಷ್ಠಾನವಾಗಿತ್ತು.
ಮುಂದೆ, ದೇಶದ ವಿವಿಧೆಡೆ ಈ ರೀತಿಯ ಪ್ರಯೋಗಗಳು ನಡೆಯಲಾರಂಭಿಸಿದವು. ವಿಶೇಷವಾಗಿ NTR ಬಳಿಕ ಈ ಶೈಲಿಯನ್ನು ಅಳವಡಿಸಿಕೊಂಡದ್ದು ಅವರ ಆಪ್ತರೂ ಆಗಿದ್ದ ಆಗಿನ ಕರ್ನಾಟಕದ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು. 1983ರಲ್ಲಿ ಜನತಾ ಪಕ್ಷಕ್ಕೆ ರಾಜ್ಯದಲ್ಲಿ ಅಧಿಕಾರ ದೊರೆಯಿತು. ಆದರೆ ಹೆಗಡೆ ಅನೇಕ ಸಮಸ್ಯೆಗಳನ್ನು ಎದುರಿಸಿದರು. ವಿಧಾನಸಭೆಯನ್ನು ವಿಸರ್ಜಿಸಿ 1985ರಲ್ಲಿ ಜನತೆಯ ಬಳಿಗೆ ತೆರಳಿದರು. ತಾನು ಮತ್ತು ತನ್ನ ಸರಕಾರ ಎದುರಿಸಿದ ‘ಸಮಸ್ಯೆ’ಗಳನ್ನು ಜನತೆಯ ಮುಂದೆ ಇರಿಸಿದರು. ಆಗ ಅವರು ಬಳಸಿದ್ದು ಈ ಚುನಾವಣಾ ರಥದ ಮಾದರಿ. ಚುನಾವಣಾ ಪ್ರಚಾರಕ್ಕೆಂದೇ ಸಿದ್ಧಪಡಿಸಿದ ವಿಶೇಷ ವಾಹನದಲ್ಲಿ ಅವರು ರಾಜ್ಯಾದ್ಯಂತ ಪ್ರವಾಸ ನಡೆಸಿದರು. ಪ್ರಚಾರ ಮಾಡಿದರು. ವಿಶೇಷವೆಂದರೆ ಬಹುಮತದಿಂದ ಗೆದ್ದರು. ಮುಂದೆ ಹರಿಯಾಣದಲ್ಲಿ ದೇವಿಲಾಲ್ ಅವರೂ ಇದೇ ಶೈಲಿಯನ್ನು ಅನುಸರಿಸಿದರು.
ಇಲ್ಲಿ ಉಲ್ಲೇಖೀಸಬೇಕಾದ ಇನ್ನೊಂದು ಮಹತ್ವದ ಸಂಗತಿ ಅಂದರೆ, ಬಿಜೆಪಿಯ ಹಿರಿಯ ನಾಯಕ ಲಾಲ್‌ಕೃಷ್ಣ ಆಡ್ವಾಣಿ ಅವರ ರಾಮರಥ ಯಾತ್ರೆ. 90ರ ದಶಕದ ಈ ಯಾತ್ರೆಯು ಶ್ರೀ ರಾಮಮಂದಿರ ನಿರ್ಮಾಣ ಕುರಿತಾದ ಜಾಗೃತಿಗೆ ಎಂದು ಘೋಷಿಸಲಾಗಿತ್ತು. ಆದರೆ ವಿಪಕ್ಷಗಳು ಇದು ರಾಜಕೀಯ ಪ್ರೇರಿತ ಯಾತ್ರೆ ಎಂದು ಟೀಕೆ ಮಾಡಿದ್ದವು!
ಅಂದ ಹಾಗೆ…
ಕಳೆದ ಬಾರಿಯ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ತಾನು ಸುಭದ್ರ ಸರಕಾರ ನೀಡುವುದಾಗಿ ಹೇಳಿಕೊಂಡಿತ್ತು. ಬಿಜೆಪಿಯವರೂ ಜನತಾ ದಳದವರೂ ಇದೇ ರೀತಿಯಲ್ಲಿ ಸುಭದ್ರತೆಯ ಬಗ್ಗೆ ಹೇಳುತ್ತಿದ್ದರು. ಇದನ್ನು ಕೇಳಿಸಿಕೊಂಡ ಓರ್ವ ಪಕ್ಷೇತರ ಅಭ್ಯರ್ಥಿ ಕೂಡ ಹೇಳುತ್ತಿದ್ದರು: ‘ನಾನು ಗೆದ್ದರೆ ಸುಭದ್ರ ಸರಕಾರ ನೀಡುತ್ತೇನೆ!’
— ಮನೋಹರ ಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Surathkal: ಅಡುಗೆ ಅನಿಲ ಸೋರಿಕೆ ಪ್ರಕರಣ; ಸುಧಾರಿಸದ ಗಾಯಾಳುಗಳ ಆರೋಗ್ಯ
Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು
Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ
Mangaluru: ನಂತೂರು ವೃತ್ತ; ಸಂಚಾರ ಸ್ವಲ್ಪ ನಿರಾಳ
Belthangady: ಕ್ರಿಸ್ಮಸ್ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.