ಪಡಿತರ ಚೀಟಿ ಇ-ಕೆವೈಸಿಗೆ ಸೆ. 30ರ ಗಡುವು
Team Udayavani, Sep 19, 2021, 8:00 AM IST
ಮಂಗಳೂರು: ಪಡಿತರ ಚೀಟಿದಾರರಿಗೆ “ಇ- ಕೆವೈಸಿ’ ಮಾಡಿಸಲು ವಿಧಿಸಿದ್ದ ಗಡುವನ್ನು ರಾಜ್ಯ ಸರಕಾರ ಸೆಪ್ಟಂಬರ್ 30ರ ತನಕ ವಿಸ್ತರಿಸಿದೆ. ಇದಕ್ಕಾಗಿ ಪಡಿತರ ಚೀಟಿದಾರರು ತಮ್ಮ ಮೂಲ ನ್ಯಾಯಬೆಲೆ ಅಂಗಡಿಗೇ ತೆರಳಬೇಕು.
ನ್ಯಾಯಬೆಲೆ ಅಂಗಡಿಗಳಲ್ಲಿ 10ನೇ ತಾರೀಕಿನ ಬಳಿಕ ಪಡಿತರ ಸಾಮಗ್ರಿ ವಿತರಣೆ ನಡೆಯುವುದರಿಂದ ಇ- ಕೆವೈಸಿಗೆ ಮಧ್ಯಾಹ್ನ 12ರಿಂದ ಸಂಜೆ 4ರ ತನಕ ಸಮಯ ನಿಗದಿ ಪಡಿಸಲಾಗಿದೆ. ಈ ಹಿಂದೆ ಸೆ. 10ರ ಗಡುವು ಇತ್ತು. ಗುರಿ ಸಾಧನೆ ಆಗದ ಕಾರಣ ವಿಸ್ತರಿಸಲಾಗಿದೆ.
ಏನಿದು ಇ – ಕೆವೈಸಿ:
ಇ-ಕೆವೈಸಿ ಎಂದರೆ “ಎಲೆಕ್ಟ್ರಾನಿಕ್- ನೊ ಯುವರ್ ಕಸ್ಟಮರ್’ ಎಂದರ್ಥ. ನ್ಯಾಯಬೆಲೆ ಅಂಗಡಿದಾರರು ಪಡಿತರ ಚೀಟಿಯಲ್ಲಿ ಹೆಸರು ಇರುವವರನ್ನು ವಿದ್ಯುನ್ಮಾನ ಮೂಲಕ ತಿಳಿಯುವ ವ್ಯವಸ್ಥೆ ಇದು. ಕಾರ್ಡಿನಲ್ಲಿ ಹೆಸರಿರುವ ಎಲ್ಲರೂ ಪಡಿತರ ಚೀಟಿ, ಆಧಾರ್ ಕಾರ್ಡ್, ಗ್ಯಾಸ್ ಸಂಪರ್ಕದ ವಿವರಗಳೊಂದಿಗೆ ರೇಶನ್ ಅಂಗಡಿಗೆ ತೆರಳಿ ಬೆರಳಚ್ಚು ಕೊಡಬೇಕು. ಆಧಾರ್‌ಗೆ ನೋಂದಾಯಿಸಿರುವ ಮೊಬೈಲ್ ಸಂಖ್ಯೆಯನ್ನೇ ನೀಡಬೇಕು. ಬೆರಳಚ್ಚು ತೆಗೆದುಕೊಳ್ಳದಿದ್ದರೆ ಇ-ಕೆವೈಸಿ ಅಸಾಧ್ಯ. ಅಂಥವರು ಆಧಾರ್ ಕೇಂದ್ರಕ್ಕೆ ತೆರಳಿ ಪುನಃ ಬಯೋಮೆಟ್ರಿಕ್ (ಬೆರಳಚ್ಚು) ನೀಡಿ ಅದು ಆಧಾರ್‌ನಲ್ಲಿ ಅಪ್‌ಡೇಟ್ ಆದ ಬಳಿಕ ನ್ಯಾಯಬೆಲೆ ಅಂಗಡಿಗೆ ತೆರಳಿ ಇ-ಕೆವೈಸಿ ಮಾಡಬೇಕು.
ದೂರದ ಊರಲ್ಲಿ ಇರುವವರ ಸಂಕಷ್ಟ:
ಮೂಲ ನ್ಯಾಯಬೆಲೆ ಅಂಗಡಿಯಲ್ಲಿಯೇ ಇ- ಕೆವೈಸಿ ಮಾಡಬೇಕೆಂಬ ನಿಯಮದ ಬದಲು ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಮಾಡಿಸಲು ಅವಕಾಶ ಇದ್ದರೆ ಅನುಕೂಲ ಎನ್ನುವುದು ಹಲವರ ಅಭಿಪ್ರಾಯ.
ಆಧಾರ್‌ನಲ್ಲಿ ಭಾಷಾ ಸಮಸ್ಯೆ! :
ಹೊರ ರಾಜ್ಯಗಳಿಂದ ಬಂದು ಕರ್ನಾಟಕದಲ್ಲಿ ನೆಲೆಸಿ ಪಡಿತರ ಚೀಟಿಯನ್ನು ಇಲ್ಲಿ ಹೊಂದಿದ್ದರೂ ಅದಕ್ಕೆ ಜೋಡಣೆ ಆಗಿರುವ ಆಧಾರ್ ಕಾರ್ಡನ್ನು ಈ ಮೊದಲಿದ್ದ ರಾಜ್ಯದಲ್ಲಿ ಮಾಡಿಸಿದ್ದರೆ ಇ- ಕೆವೈಸಿಗೆ ಸಮಸ್ಯೆಯಾಗುತ್ತಿದೆ. ಹೊರ ರಾಜ್ಯದಲ್ಲಿ ಮಾಡಿಸಿರುವ ಕಾರ್ಡ್‌ನಲ್ಲಿ ವ್ಯಕ್ತಿಯ ಹೆಸರು
ಅಲ್ಲಿನ ಭಾಷೆಯಲ್ಲಿ ಇರುತ್ತದೆ. ಇದು ಕರ್ನಾಟಕ ದಲ್ಲಿ ಪಡಿತರ ಚೀಟಿಯ ಇ- ಕೆವೈಸಿಗೆ ಅಡ್ಡಿ ಆಗುತ್ತದೆ. ಇ-ಕೆವೈಸಿ ಆಗಿದೆಯೇ ಇಲ್ಲವೇ ಎಂದು ತಿಳಿಯಲು ಆಹಾರ ಇಲಾಖೆ ವೆಬ್‌ಸೈಟ್‌ನಲ್ಲಿ ಪಡಿತರ ಚೀಟಿ ಸಂಖ್ಯೆ ದಾಖಲಿಸಿ ನೋಡಬಹುದು.
ಮಾಡಿಸದಿದ್ದರೆ ಪಡಿತರ ಸಿಗದು :
ಇ- ಕೆವೈಸಿ ಮಾಡಿಸದಿದ್ದರೆ ಪಡಿತರ ವಿತರಣೆ ನಿಲ್ಲಿಸಲಾಗುತ್ತದೆ ಎಂದು ಸರಕಾರ ತಿಳಿಸಿದೆ. ಇ-ಕೆವೈಸಿ ಮಾಡಿಸದ ಸದಸ್ಯರ ಹೆಸರನ್ನು ಪಡಿತರ ಚೀಟಿಯಿಂದ ತೆಗೆದು ಹಾಕಲಾಗುತ್ತದೆಯೇ ಎನ್ನುವ ಕುರಿತು ಸರಕಾರ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗಳು ಉದಯವಾಣಿಗೆ ತಿಳಿಸಿದ್ದಾರೆ.
ಇ- ಕೆವೈಸಿ ಒಂದು ಬಾರಿ ಮಾಡಿದರೆ ಬ್ಯಾಂಕ್ ಖಾತೆಯ ರೀತಿಯಲ್ಲಿ ಅದರ ಅವಧಿ ಜೀವನ ಪರ್ಯಂತ ಇರುತ್ತದೆ. ಬ್ಯಾಂಕಿನಲ್ಲಿ ಖಾತೆ ತೆರೆದ ಶಾಖೆಯಲ್ಲಿಯೇ ಕೆವೈಸಿ ಮಾಡಲಾಗುತ್ತಿದ್ದು, ಅದೇ ರೀತಿ ಪಡಿತರ ಚೀಟಿಗೆ ಅದರ ಮೂಲ ನ್ಯಾಯ ಬೆಲೆ ಅಂಗಡಿಯಲ್ಲಿ ಇ- ಕೆವೈಸಿ ಮಾಡಬೇಕು. – ರಮ್ಯಾ ಸಿ.ಆರ್., ಉಪ ನಿರ್ದೇಶಕರು, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ, ದ.ಕ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.