ಹೊಸ ಅರ್ಜಿದಾರರಿಗೆ ತಿಂಗಳೊಳಗೆ ಪಡಿತರ ಚೀಟಿ: ಸಚಿವ ಖಾದರ್
Team Udayavani, Jul 16, 2017, 3:40 AM IST
ಮಂಗಳೂರು: ಹೊಸದಾಗಿ ಅರ್ಜಿ ಸಲ್ಲಿಸಿದವರಿಗೆ ಪಡಿತರ ಚೀಟಿ ವಿತರಣೆ ಕಾರ್ಯ ಮುಂದಿನ ಒಂದು ತಿಂಗಳೊಳಗೆ ಪ್ರಾರಂಭವಾಗಲಿದೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ತಿಳಿಸಿದರು.
ನಗರದ ಸಕೀìಟ್ ಹೌಸ್‌ನಲ್ಲಿ ಶನಿವಾರ ಪತ್ರಿಕಾಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಅವರು, 14.70 ಲಕ್ಷ ಮಂದಿ ರಾಜ್ಯದಲ್ಲಿ ಹೊಸದಾಗಿ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇವುಗಳನ್ನು ಪರಿಶೀಲಿಸಿ ಚೆಕ್‌ಲಿಸ್ಟ್ ತಯಾರಿಸಿ ಇಲಾಖೆಯ ವೆಬ್‌ಸೈಟ್ ಮೂಲಕ ಜನಸ್ನೇಹಿ ಕೇಂದ್ರಗಳಿಗೆ ಕಳುಹಿಸಲಾಗಿದೆ. ಗ್ರಾಮ ಲೆಕ್ಕಿಗರು ಇದರ ಪ್ರತಿಯನ್ನು ಪಡೆದುಕೊಂಡು ಪರಿಶೀಲನೆ ನಡೆಸುತ್ತಾರೆ.
ಆಧಾರ್ ನಂಬರ್, ಕುಟುಂಬ ನಕ್ಷೆ ಹಾಗೂ ಆದಾಯ ವಾರ್ಷಿಕ 1.20 ಲಕ್ಷ ರೂ. ಇದೆಯೇ ಪರಿಶೀಲಿಸಿ ಖಾತ್ರಿ ಪಡಿಸುತ್ತಾರೆ. ಬಿಪಿಎಲ್ ಪಡಿತರ ಚೀಟಿಗೆ ಇದ್ದ ವಿದ್ಯುತ್ ಬಿಲ್ ಹಾಗೂ ಮನೆ ವಿಸ್ತೀರ್ಣ ಮಾನದಂಡವನ್ನು ಕೈಬಿಡಲಾಗಿದೆ. ಪರಿಶೀಲನೆ ಕಾರ್ಯ 15 ದಿನಗಳೊಳಗೆ ಮುಗಿಯಲಿದ್ದು ಬಳಿಕ ಆಹಾರ ಇಲಾಖೆ ಪಡಿತರ ಚೀಟಿಯನ್ನು ಮುದ್ರಿಸಿ ಸ್ಪೀಡ್‌ಪೋಸ್ಟ್ ಮೂಲಕ ಅರ್ಜಿದಾರರ ಮನೆಗೆ ತಲುಪಿಸುತ್ತದೆ ಎಂದರು.
ಗ್ರಾಮ ಮಟ್ಟದಲ್ಲಿ ಪರಿಶೀಲನೆ ಯಾರು ಮಾಡುತ್ತಾರೆ ಎಂಬ ಬಗ್ಗೆ ಗೊಂದಲವೇರ್ಪಟ್ಟ ಕಾರಣದಿಂದ ಪಡಿತರ ಚೀಟಿ ವಿತರಣೆ ಪ್ರಕ್ರಿಯೆ ಯಲ್ಲಿ ವಿಳಂಬವಾಗಿತ್ತು. ಇದೀಗ ಗ್ರಾಮಲೆಕ್ಕಿಗರಿಗೆ ಈ ಕಾರ್ಯ ವಹಿಸಿ ಕೊಡಲಾಗಿದ್ದು ಈಗಾಗಲೇ ಕಂದಾಯ ಇಲಾಖೆಯಿಂದ ಸುತ್ತೋಲೆ ಹೋಗಿದೆ ಎಂದರು.
ಕ್ರಿಮಿನಲ್ ಮೊಕದ್ದಮೆ
7 ಎಕ್ರೆಗಿಂತ ಹೆಚ್ಚು ಜಾಗ ಇರಬಾರದು, ಸ್ವಂತ ಕಾರು ಹೊಂದಿರಬಾರದು ಹಾಗೂ ಸರಕಾರಿ ನೌಕರರಾಗಿರಬಾರದು ಎಂಬ ಮಾನದಂಡಗಳ ಬಗ್ಗೆ ಸುಳ್ಳು ಮಾಹಿತಿ ಒದಗಿಸಿರುವುದು ಕಂಡುಬಂದರೆ ಅಂಥವರ ಪಡಿತರ ಚೀಟಿಯನ್ನು ರದ್ದುಗೊಳಿಸಲಾಗುವುದು ಹಾಗೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂಬ ಷರತ್ತು ಪಡಿತರ ಚೀಟಿಯಲ್ಲಿರುತ್ತದೆ. ಸುಳ್ಳು ಮಾಹಿತಿ ಬಗ್ಗೆ ಯಾರಾದರೂ ಇಲಾಖೆಗೆ ಮಾಹಿತಿ ನೀಡಿದರೆ ಅಂಥವರಿಗೆ 400 ರೂ. ನಗದು ಪುರಸ್ಕಾರ ನೀಡಲಾಗುವುದು ಎಂದು ಸಚಿವರು ತಿಳಿಸಿದರು. ಮೇಯರ್ ಕವಿತಾ ಸನಿಲ್, ಕಾರ್ಪೊರೇಟರ್‌ಗಳಾದ ಮಹಾಬಲ ಮಾರ್ಲ, ಅಬ್ದುಲ್ ಲತೀಫ್, ರಾಧಾಕೃಷ್ಣ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.