ಅಕ್ಕಿ ಮಾತ್ರ ಕೊಟ್ಟು ಸೀಮೆಎಣ್ಣೆ, ಗೋಧಿ ರಶೀದಿಗೂ ಗ್ರಾಹಕರ ಸಹಿ?
Team Udayavani, Apr 14, 2020, 9:21 AM IST
ಹಳೆಯಂಗಡಿ: ಕೋವಿಡ್ ನಿಯಂತ್ರಣಕ್ಕಾಗಿ ಕೈಗೊಂಡಿರುವ ಲಾಕ್‌ಡೌನ್‌ನಂತಹ ಕಠಿನ ಕ್ರಮಗಳಿಂದ ಬಡವರು ಪರಿತಪಿಸಬಾರದು ಎಂಬ ಉದ್ದೇಶದಿಂದ ಬಿಪಿಎಲ್ ಪಡಿತರ ಚೀಟಿದಾರರಿಗೆ ಎಪ್ರಿಲ್, ಮೇ ತಿಂಗಳ ಪಡಿತರವನ್ನು ಒಟ್ಟಾಗಿ ನೀಡಲಾಗಿದೆ.
ಆದರೆ, ಓರ್ವ ಸದಸ್ಯನಿಗೆ ತಲಾ 10 ಕೆ.ಜಿ. ಅಕ್ಕಿ ಮಾತ್ರ ಕೊಟ್ಟಿದ್ದು, ಸೀಮೆಎಣ್ಣೆ ಹಾಗೂ ಗೋಧಿ ಕೊಟ್ಟಿದ್ದೇವೆ ಎಂದು ರಶೀದಿ ನೀಡುತ್ತಿರುವುದು ಬೆಳಕಿಗೆ ಬಂದಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಆಗ್ರಹಿಸಿದ್ದಾರೆ.
ದ.ಕ. ಜಿಲ್ಲೆ ಸೀಮೆಎಣ್ಣೆ ಮುಕ್ತವಾಗಿದ್ದರೂ ಸೀಮೆಎಣ್ಣೆ ನೀಡಲಾಗುತ್ತಿದೆ ಎಂದು ದಾಖಲೆ ಹೇಳುತ್ತಿದೆ. ಗೋಧಿ ವಿತರಿಸದಿದ್ದರೂ ರಶೀದಿ ನೀಡುತ್ತಿರುವುದೇಕೆ ಎನ್ನುವುದು ಗ್ರಾಹಕರ ಆಕ್ಷೇಪ. ಈ ಕುರಿತು ಕೆಪಿಸಿಸಿ ಸದಸ್ಯ ಎಚ್. ವಸಂತ ಬೆರ್ನಾಡ್ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದಾಖಲೆಗಳೊಂದಿಗೆ ದೂರು ನೀಡಿದ್ದರು. ಸಿದ್ದರಾಮಯ್ಯ ಅವರು ಹಳೆಯಂಗಡಿ ಸೊಸೈಟಿಯ ರಶೀದಿಯೊಂದಿಗೆ ಟ್ವೀಟ್ ಮಾಡಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯ ಮಟ್ಟದಲ್ಲಿ ಒಂದೇ ಸಾಫ್ಟ್ ವೇರ್ ಇದೆ. ತಿಂಗಳಿಗೆ ಒಂದೇ ಪಡಿತರದ ಬಿಲ್ ಮಾಡಬಹುದು. ಅಕ್ಕಿ, ಗೋಧಿಗೆ ಪ್ರತ್ಯೇಕ ಬಿಲ್ ಮಾಡಲು ಸಾಧ್ಯವಿಲ್ಲ. ಕೆಲವು ಜಿಲ್ಲೆಗಳು ಸೀಮೆಎಣ್ಣೆ ಮುಕ್ತವಾಗಿದ್ದರೂ ಸಾಫ್ಟ್ ವೇರ್‌ನಲ್ಲಿ ಆ ಆಯ್ಕೆ ಇಲ್ಲದ ಕಾರಣ ತೊಡಕಾಗಿದೆ. ಆದರೆ, ಪಡಿತರ ಚೀಟಿದಾರರಿಗೆ ಅನ್ಯಾಯವಾಗುವುದಿಲ್ಲ ಎಂದು ಇಲಾಖೆ ಹೇಳಿದೆ.
ಗೊಂದಲ ನಿವಾರಿಸಲಿ
ರಾಜ್ಯದಲ್ಲಿ ಒಂದೇ ರೀತಿಯ ವ್ಯವಸ್ಥೆ ಇದೆ. ನಾವು ಪ್ರತ್ಯೇಕವಾಗಿ ರಶೀದಿ ನೀಡಲು ಸಾಧ್ಯವಿಲ್ಲ. ಎಲ್ಲವೂ ಆನ್‌ಲೈನ್ ಮೂಲಕ ನಿರ್ವಹಣೆ ಇರುವುದರಿಂದ ಗ್ರಾಹಕರ ಪ್ರಶ್ನೆಗಳಿಗೆ ಆಹಾರ ಇಲಾಖೆಯ ಅಧಿಕಾರಿಗಳಿಂದಲೇ ಸ್ಪಷ್ಟನೆ ನೀಡಬೇಕು. ದಕ್ಷಿಣ ಕನ್ನಡ ಜಿಲ್ಲೆ ಸೀಮೆಎಣ್ಣೆ ಮುಕ್ತವಾಗಿದೆ. ಒಂದು ವರ್ಷದಿಂದ ಪೂರೈಸುತ್ತಿಲ್ಲ. ಹೀಗಾಗಿ, ಕೂಡಲೇ ಸಾಫ್ಟ್ವೇರ್ ಬದಲಾಯಿಸಬೇಕು.
– ಎಸ್.ಎಸ್. ಸತೀಶ್ ಭಟ್ ಅಧ್ಯಕ್ಷರು, ಪಡುಪಣಂಬೂರು ವ್ಯ.ಸೇ.ಸ. ಬ್ಯಾಂಕ್, ಹಳೆಯಂಗಡಿ
ಮೇ ತಿಂಗಳಲ್ಲಿ ಗೋಧಿ
ರಾಜ್ಯಮಟ್ಟದಲ್ಲಿ ಏಕರೂಪದ ಸಾಫ್ಟ್ವೇರ್ ಇದೆ. ಈ ಕುರಿತು ಗೊಂದಲ ಅಗತ್ಯವಿಲ್ಲ. ಜಿಲ್ಲಾವಾರು ಸಾಫ್ಟ್ವೇರ್ ಪ್ರತ್ಯೇಕಿಸಿದಲ್ಲಿ ಸೀಮೆಎಣ್ಣೆ ನೀಡುವ ದಾಖಲೆ ಪರಿಷ್ಕರಿಸಲು ಸಾಧ್ಯವಿದೆ. ಎಲ್ಲ ನ್ಯಾಯಬೆಲೆ ಅಂಗಡಿಗಳಿಗೆ ಗೋಧಿ ದಾಸ್ತಾನು ತಲುಪಿಸಲಾಗುತ್ತಿದೆ. ಗ್ರಾಹಕರು ಎಪ್ರಿಲ್‌ನಲ್ಲಿ ಅಕ್ಕಿ ಪಡೆದಿದ್ದು, ಮೇ ತಿಂಗಳ ಆರಂಭದಲ್ಲಿ ಎರಡೂ ತಿಂಗಳ ಗೋಧಿಯನ್ನು ವಿತರಿಸಲಾಗುತ್ತದೆ.
– ಎಂ.ಕೆ. ಮಂಜುನಾಥನ್, ಜಂಟಿ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ದ.ಕ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.