ರವಿ ಪೂಜಾರಿ ಬೆರಳಚ್ಚು ಮ್ಯಾಚ್: ಶೀಘ್ರ ಗಡೀಪಾರು?
Team Udayavani, Feb 2, 2019, 12:30 AM IST
ಮಂಗಳೂರು: ಪಶ್ಚಿಮ ಆಫ್ರಿಕಾದ ಸೆನಗಲ್‌ನಲ್ಲಿ ಬಂಧನಕ್ಕೊಳಗಾಗಿರುವ ಭೂಗತ ಪಾತಕಿ ಉಡುಪಿ ಮೂಲದ ರವಿ ಪೂಜಾರಿಯ ಚಹರೆ ಯನ್ನು ಆತನ ಬೆರಳಚ್ಚು ದಾಖಲೆಗಳು ದೃಢಪಡಿಸಿದ್ದು, ಆತ ಶೀಘ್ರದಲ್ಲೇ ಭಾರತಕ್ಕೆ ಗಡೀಪಾರು ಆಗುವ ಸಾಧ್ಯತೆಯಿದೆ. “ಉದಯವಾಣಿ’ಗೆ ಸದ್ಯ ಲಭ್ಯವಾಗಿರುವ ಉನ್ನತ ಮೂಲಗಳ ಮಾಹಿತಿ ಪ್ರಕಾರ, ರವಿ ಪೂಜಾರಿ ಆಫ್ರಿಕಾದ ಸೆನಗಲ್‌ನಲ್ಲಿ ಇಂಡಿಯನ್ ರೆಸ್ಟೋರೆಂಟ್ ನಡೆಸುತ್ತಿದ್ದು, ಅಲ್ಲಿಗೆ ಆಗಾಗ ಬಂದು ಹೋಗುತ್ತಿದ್ದ. ಅದರಂತೆ ಆತನ ಚಲನವಲನಗಳನ್ನು ಇಂಟರ್‌ಪೋಲ್ ಮೂಲಕ ಬೆನ್ನು ಹತ್ತಿದ್ದ ಕರ್ನಾಟಕ ಹಾಗೂ ಭಾರತದ ವಿದೇಶಿ ಗುಪ್ತಚರ ಸಂಸ್ಥೆ ಅಧಿಕಾರಿಗಳು, ಸೆನಗಲ್ ದೇಶದ ಪೊಲೀಸರ ನೆರವಿನೊಂದಿಗೆ ರವಿ ಪೂಜಾರಿಯನ್ನು ಖೆಡ್ಡಾಕ್ಕೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.
ರವಿ ಪೂಜಾರಿಯನ್ನು ಎರಡು ವಾರಗಳ ಮೊದಲೇ ಅಂದರೆ ಜ. 21ರಂದು ಬರ್ಕಿನೋ ಪಾಸೊದಿಂದ ಸೆನಗಲ್‌ಗೆ ಆಗಮಿಸುತ್ತಿದ್ದ ವೇಳೆ ಬಂಧಿಸಲಾಗಿದೆ. ಆಗ ಆತ ಶ್ರೀಲಂಕಾ ದೇಶದ ನಕಲಿ ಪಾಸ್‌ಪೋರ್ಟ್ ಹೊಂದಿದ್ದ. ಈ ಹಿನ್ನೆಲೆಯಲ್ಲಿ ಆತನನ್ನು ಇಂಟರ್ ಪೋಲ್ ಮೂಲಕ ಭಾರತಕ್ಕೆ ಗಡೀಪಾರು ಮಾಡಬೇಕಾದರೆ ಮೊದಲಿಗೆ ಶ್ರೀಲಂಕಾದ ರಾಯಭಾರ ಕಚೇರಿಯನ್ನು ಸಂಪರ್ಕಿಸ ಬೇಕಾಗುತ್ತದೆ ಎಂದು ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.
ಬೆರಳಚ್ಚು ಖಾತ್ರಿ
ಸಾಮಾನ್ಯವಾಗಿ ತಲೆಮರೆಸಿ ಕೊಂಡಿರುವ ನಮ್ಮ ದೇಶದ ಯಾವುದೇ ಆರೋಪಿಗಳು ಅದರಲ್ಲಿಯೂ ಭೂಗತ ಪಾತಕಿಗಳು ಹೊರ ದೇಶಗಳಲ್ಲಿ ಬಂಧನಕ್ಕೆ ಒಳಗಾಗುವ ವೇಳೆ ಆತನ ಚಹರೆಯನ್ನು ದೃಢಪಡಿಸಿಕೊಳ್ಳುವುದಕ್ಕೆ ಬೇಕಾದ ಸೂಕ್ತ ದಾಖಲೆಗಳನ್ನು ಅಲ್ಲಿನ ಪೊಲೀಸರಿಗೆ ಇಂಟರ್ ಪೋಲ್ ಮೂಲಕ ಕಳುಹಿಸಬೇಕಾಗುತ್ತದೆ. ಆ ಪ್ರಕಾರ ರವಿ ಪೂಜಾರಿಯ ಬೆರಳಚ್ಚು ಮಾದರಿಯನ್ನು ಈಗಾಗಲೇ ಇಂಟರ್ ಪೋಲ್ ಮೂಲಕ ಸೆನಗಲ್ ಪೊಲೀಸರಿಗೆ ಕಳುಹಿಸಲಾಗಿದೆ. ಅಲ್ಲದೆ ಆತನ ಬಂಧನವಾಗಿ ಈಗಾಗಲೇ ಎರಡು ವಾರ ಕಳೆದಿರುವ ಕಾರಣ ದೇಶದ ಉನ್ನತ ಪೊಲೀಸ್ ಅಧಿಕಾರಿಗಳ ತಂಡ ಸೆನಗಲ್‌ಗೆ ತೆರಳಿ ಗಡೀಪಾರು ಮಾಡಿಸಿಕೊಳ್ಳಲು ಬೇಕಾದ ಕಾನೂನು ಪ್ರಕ್ರಿಯೆ ನಡೆಸುತ್ತಿರಬಹುದು ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಮಂಗಳೂರು ಪೊಲೀಸರ ನೆರವು
ರವಿ ಪೂಜಾರಿ ಬಂಧನದಲ್ಲಿ ಮಂಗಳೂರು ನಗರ ಪೊಲೀಸರ ತಂಡವೂ ಮುಖ್ಯ ಪಾತ್ರ ವಹಿಸಿದೆ. 2013ರಲ್ಲಿ ದುಬಾೖಯಲ್ಲಿ ಆತನನ್ನು ಬಂಧಿಸುವುದಕ್ಕೆ ಇಂಟರ್ ಪೋಲ್ ಮೂಲಕ ಎಲ್ಲ ರೀತಿಯ ಸಿದ್ಧತೆ ನಡೆದಿತ್ತು. ಆದರೆ ಅಂತಿಮ ಹಂತದಲ್ಲಿ ಭಾರತೀಯ ವಿದೇಶಿ ಗುಪ್ತಚರ ತಂಡದ ಅಂದಿನ ಪ್ರಯತ್ನ ವಿಫಲವಾಗಿತ್ತು. ಆ ಬಳಿಕ 5 ವರ್ಷಗಳಿಂದೀಚೆಗೆ ರವಿ ಪೂಜಾರಿಯ ಚಲನ-ವಲನದ ಮೇಲೆ ಭಾರತೀಯ ವಿದೇಶಿ ಗುಪ್ತಚರ ಸಂಸ್ಥೆ ನಿಗಾ ವಹಿಸಿತ್ತು. ಅದರಂತೆ ಆತನ ಬಂಧನಕ್ಕೆ ಬೇಕಾಗುವ ಕೆಲವೊಂದು ಸುಳಿವು, ದಾಖಲೆಗಳನ್ನು ಬೆಂಗಳೂರು ಹಾಗೂ ಮಂಗಳೂರಿನ ಪೊಲೀಸರು ಒದಗಿಸಿದ್ದರು. ಹೀಗೆ ಹಲವು ವರ್ಷಗಳ ಸತತ ಪ್ರಯತ್ನದ ಬಳಿಕ ಇದೀಗ ಭೂಗತ ಪಾತಕಿ ರವಿ ಪೂಜಾರಿಯನ್ನು ಬಂಧಿಸುವಲ್ಲಿ ರಾಜ್ಯದ ಪೊಲೀಸರು ಕೂಡ ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನಲಾಗಿದೆ.
ಬಂಧನ ಸುಳಿವು ಇತ್ತು !
ಮಂಗಳೂರಿನಲ್ಲಿ ಪ್ರಮುಖ ಚಿನ್ನಾಭರಣ ಮಾರಾಟ ಉದ್ಯಮಿಯೊಬ್ಬರಿಗೆ ರವಿ ಪೂಜಾರಿ ಹಾಗೂ ಆತನ ಸಹಚರರಿಂದ ಹಫ್ತಾ ನೀಡುವಂತೆ ಕಳೆದ ತಿಂಗಳು ಬೆದರಿಕೆ ಕರೆ ಬಂದಿದ್ದು, ನಗರ ಪೊಲೀಸರಿಗೆ ದೂರು ನೀಡಿದ್ದರು. ಇದೇ ವೇಳೆ ಮಂಗಳೂರು ಪೊಲೀಸರು ಕರಾವಳಿಯಲ್ಲಿ ರವಿ ಪೂಜಾರಿ ಹೊಂದಿರುವ ಭೂಗತ ನೆಟ್‌ವರ್ಕ್‌ಗಳ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದರು. ಜತೆಗೆ ಜೈಲಿನಲ್ಲಿರುವ ಭೂಗತ ಪಾತಕಿ ಬನ್ನಂಜೆ ರಾಜ ಕೂಡ ಸುಮಾರು 100 ಕೋಟಿ ರೂ. ಹಫ್ತಾ ವಸೂಲಿ ಮಾಡಿರುವ ಬಗ್ಗೆಯೂ ತನಿಖೆ ನಡೆಸುತ್ತಿದ್ದರು. ಈ ವಿಚಾರಗಳ ಬೆನ್ನು ಹತ್ತಿದ “ಉದಯವಾಣಿ’ಗೆ ಭೂಗತ ಪಾತಕಿಯ ಬಂಧನವಾಗುವ ಬಗ್ಗೆ ಮುನ್ಸೂಚನೆ ಲಭ್ಯವಾಗಿತ್ತು.
ಆ ಬಗ್ಗೆ ಪೊಲೀಸ್ ಅಧಿಕಾರಿಗಳಲ್ಲಿ ವಿಚಾರಿಸಿದಾಗ “ತನಿಖೆ ದೃಷ್ಟಿಯಿಂದ ಈಗ ಏನೂ ಬರೆಯಬೇಡಿ’ ಎಂದು ಕೋರಿದ್ದರು. ಆ ಕಾರಣದಿಂದಾಗಿ ಕರಾವಳಿ ಭೂಗತ ಪಾತಕಿಗಳ ಬಗ್ಗೆ ಜ. 24ರಂದು “ಉದಯವಾಣಿ’ ಪತ್ರಿಕೆ ಪ್ರಕಟಿಸಿದ್ದ ವಿಶೇಷ ವರದಿಯಲ್ಲಿ ರವಿ ಪೂಜಾರಿ ಬಂಧನಕ್ಕೆ ಬಲೆಬೀಸಿರುವ ವಿಚಾರವನ್ನು ಉಲ್ಲೇಖೀಸಿರಲಿಲ್ಲ.
ಮಂಗಳೂರು: 32, ಉಡುಪಿ: 10 ಪ್ರಕರಣ
ಮಂಗಳೂರು/ಉಡುಪಿ,: ರವಿ ಪೂಜಾರಿ ಮೇಲೆ ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲೇ 32 ಮತ್ತು ಉಡುಪಿ ಜಿಲ್ಲೆಯಲ್ಲಿ 10 ಪ್ರಕರಣಗಳು ದಾಖಲಾಗಿವೆ. ಪಡುಬಿದ್ರಿ, ಕಾರ್ಕಳ, ಬ್ರಹ್ಮಾವರ ಮತ್ತು ಉಡುಪಿ ಠಾಣೆಗಳಲ್ಲಿ ಹಫ್ತಾ ವಸೂಲಿ ಮತ್ತು ಜೀವಬೆದರಿಕೆ ಕುರಿತು ಪ್ರಕರಣಗಳಿವೆ. ಆತನ ವಿರುದ್ಧ 2012ರಲ್ಲಿ ರೆಡ್‌ಕಾರ್ನರ್ ನೋಟಿಸ್ ಜಾರಿಗೊಳಿಸಲಾಗಿತ್ತು. ಈ ನೋಟಿಸ್ ಐದು ವರ್ಷಗಳಿಗೊಮ್ಮೆ ನವೀಕರಣಗೊಳ್ಳುತ್ತಿದ್ದು, 2017ರಲ್ಲಿ ನವೀಕರಣಗೊಂಡಿತ್ತು ಎಂದು ನಗರ ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್ ತಿಳಿಸಿದ್ದಾರೆ.
ರವಿ ಪೂಜಾರಿ ಉಡುಪಿ ಜಿಲ್ಲೆಯ ಕಟಪಾಡಿ ಮೂಲದವನಾಗಿದ್ದಾನೆ. ಆತನ ಇಬ್ಬರು ಸೋದರಿಯರು ಈ ಹಿಂದೆ ಮುಂಬಯಿಯಲ್ಲಿದ್ದು, ರವಿ ಪೂಜಾರಿಯ ಪತ್ತೆಗೆ ಸಂಬಂಧಿಸಿ ಪೊಲೀಸರು ಪದೇ ಪದೇ ಅವರ ಬಳಿ ಹೋಗಿ ವಿಚಾರಿಸುತ್ತಿದ್ದ ಹಿನ್ನೆಲೆಯಲ್ಲಿ ಅವರಿಬ್ಬರೂ ತಮ್ಮ ವಾಸ್ತವ್ಯವನ್ನು ಬೇರೆ ಕಡೆಗೆ ಸ್ಥಳಾಂತರಿಸಿದ್ದಾರೆ ಎಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.