“ನ್ಯಾಯ ಸಮ್ಮತ ಚುನಾವಣೆಗೆ ರೆಡಿ; ನೀವೆಲ್ಲ ತಪ್ಪದೇ ಮತದಾನ ಮಾಡಿ’
ಪಾಲಿಕೆ ಚುನಾವಣಾಧಿಕಾರಿಗಳೊಂದಿಗೆ "ಸುದಿನ' ಸಂವಾದ
Team Udayavani, Nov 10, 2019, 6:03 AM IST
ಚುನಾವಣ ಸಂಬಂಧ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ, ಸಂತೋಷ್ ಕುಮಾರ್ ಆವರು ಪಾಲ್ಗೊಂಡರು.
ಮನಪಾ ಚುನಾವಣೆಗೆ ಒಂದು ದಿನವಷ್ಟೇ ಬಾಕಿಯಿದ್ದು, ಮುಕ್ತ, ನ್ಯಾಯ ಸಮ್ಮತ ಚುನಾವಣೆಯಲ್ಲಿ ಮತದಾರರಿಗೆ ಹಕ್ಕು ಚಲಾಯಿಸುವುದಕ್ಕೆ ಇದೀಗ ಅಂತಿಮ ಹಂತದ ತಯಾರಿ ನಡೆಯುತ್ತಿದೆ. ಮತದಾರರು ತಪ್ಪದೇ ಮತದಾನ ಮಾಡುವ ಮೂಲಕ ನಗರದ ಸಮಗ್ರ ಅಭಿವೃದ್ಧಿಗೆ ಪೂರಕವಾಗುವ ಸುಭದ್ರ ಆಡಳಿತ ವ್ಯವಸ್ಥೆ ನೆಲೆಗೊಳ್ಳಬೇಕೆನ್ನುವುದು ಉದಯವಾಣಿ ಸುದಿನ ಆಶಯ. ಈ ಹಿನ್ನೆಲೆಯಲ್ಲಿ ಪತ್ರಿಕೆಯ ಮಂಗಳೂರು ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಚುನಾವಣ ಸಂವಾದದಲ್ಲಿ ಪಾಲಿಕೆ ಚುನಾವಣ ಅಧಿಕಾರಿಗಳಾದ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ, ಸಂತೋಷ್ ಕುಮಾರ್ ಪಾಲ್ಗೊಂಡು ಚುನಾವಣ ಪ್ರಕ್ರಿಯೆ, ಮತದಾರರ ಸಂದೇಹ ಬಗೆಹರಿಸುವ ಪ್ರಯತ್ನ ಮಾಡಿದ್ದಾರೆ.
ಮಹಾನಗರ: ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ ಸಮರ್ಪಕ, ನ್ಯಾಯ ಸಮ್ಮತ, ಶಾಂತಿ ಯುತವಾಗಿ ನಡೆಯುವ ನಿಟ್ಟಿನಲ್ಲಿ ರಾಜ್ಯ ಚುನಾವಣ ಆಯೋಗ ಸರ್ವ ಸಿದ್ಧತೆ ಮಾಡಿಕೊಂಡಿದ್ದು, ಪ್ರತಿಯೋರ್ವ ಮತದಾರರು ಮತ ದಾನ ಮಾಡಿ ತಮ್ಮ ಸಂವಿಧಾನಿಕ ಹಕ್ಕನ್ನು ಜವಾಬ್ದಾರಿಯುತವಾಗಿ ಚಲಾಯಿಸಬೇಕು ಎಂದು ಚುನಾವಣಾಧಿಕಾರಿ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ, ಉಪ ಆಯುಕ್ತ, ಮನಪಾ ಚುನಾವಣೆ ನೋಡಲ್ ಅಧಿಕಾರಿ ಸಂತೋಷ್ ಕುಮಾರ್ ಕೋರಿದ್ದಾರೆ.
ಮಂಗಳೂರು ಪಾಲಿಕೆಗೆ ನ. 12ರಂದು ನಡೆಯುವ ಚುನಾವಣೆಗೆ ರಾಜ್ಯ ಚುನಾವಣ ಆಯೋಗದ ನಿರ್ದೇಶನದಂತೆ, ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿಯವರ ಮಾರ್ಗದರ್ಶನದಲ್ಲಿ ಎಲ್ಲ ಪೂರ್ವ ತಯಾರಿ ಮಾಡಲಾಗಿದೆ. ಪ್ರತಿ 5 ವಾರ್ಡ್‌ಗೊಂದರಂತೆ ಓರ್ವ ಚುನಾವಣಾಧಿಕಾರಿ, ಓರ್ವ ಉಪ ಚುನಾವಣಾಧಿಕಾರಿಗಳನ್ನು ನಿಯೋಜನೆ ಗೊಳಿಸಲಾಗಿದೆ. ಪಾಲಿಕೆಯಲ್ಲಿ 60 ವಾರ್ಡ್ ಗಳಿಗೆ ಒಟ್ಟು 12 ಚುನಾವಣಾಧಿಕಾರಿ, 12 ಉಪ ಚುನಾವಣಾಧಿಕಾರಿಗಳಿದ್ದಾರೆ. ಒಟ್ಟು 448 ಬೂತ್‌ಗಳಿದ್ದು ಇದಕ್ಕೆ 485 ಪ್ರತಿಯೊಂದು ಬೂತ್‌ಗೂ ತಲಾ ಒಬ್ಬರಂತೆ ಮತಗಟ್ಟೆ ಅಧ್ಯಕ್ಷ ಅಧಿಕಾರಿ (ಪಿಆರ್‌ಒ), ಸಹಾಯಕ ಅಧ್ಯಕ್ಷಾಧಿಕಾರಿಗಳನ್ನು (ಎಪಿಆರ್‌ಒ) ನೇಮಕ ಮಾಡಲಾಗಿದೆ. ಇದಲ್ಲದೆ ಹೆಚ್ಚುವರಿಯಾಗಿ ಶೇ.30ರಷ್ಟು ಅಧಿಕಾರಿಗಳನ್ನು, ಸಿಬಂದಿಯನ್ನು ಕಾಯ್ದಿರಿ ಸಲಾಗಿದೆ. ಇದೆಲ್ಲ ಒಟ್ಟು ಸೇರಿಸಿ 990 ಮತಗಟ್ಟೆ ಅಧಿಕಾರಿಗಳಿರುತ್ತಾರೆ.
ಬೆಳಗ್ಗೆ 7ರಿಂದ ಮತದಾನ
ಮತದಾನ ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಒಟ್ಟು 448 ಮತಗಟ್ಟೆಗಳಿವೆ. ಅಲ್ಲಿ ಸುಗಮ ಮತದಾನಕ್ಕೆ ಅವಶ್ಯವಿರುವ ಎಲ್ಲ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಅಂಗವಿಕಲ ಮತದಾರರಿಗೆ ಗಾಲಿ ಕುರ್ಚಿ, ರ್‍ಯಾಂಪ್ ವ್ಯವಸ್ಥೆ ಮಾಡಲಾಗುವುದು.
ಮನೆ-ಮನೆಗೆ ವೋಟರ್‌ಸ್ಲಿಪ್
ಮತದಾರರರಿಗೆ ವೋಟರ್ ಸ್ಲಿಪ್‌ಗ್ಳನ್ನು ಬೂತ್‌ಮಟ್ಟದ ಬಿಎಲ್‌ಒಗಳ ಮೂಲಕ ವಿತರಿಸಲಾಗುತ್ತಿದೆ. ಒಂದೊಮ್ಮೆ ಸ್ಲಿಪ್‌ಗ್ಳು ಲಭ್ಯವಾಗದಿದ್ದರೆ ಮತದಾನದ ದಿನದಂದು ಮತಗಟ್ಟೆಗಳಲ್ಲಿ ಬಿಎಲ್‌ಒಗಳ ನೀಡುತ್ತಾರೆ. ಮತದಾರರು ತಮ್ಮ ಗುರುತು ವಿವರ ನೀಡಿದರೆ ಮತಗಟ್ಟೆ ಅಧಿಕಾರಿಗಳು ಮತದಾರ ಪಟ್ಟಿ ಪರಿಶೀಲಿಸಿ ವೋಟರ್‌ಸ್ಲಿಪ್ ನೀಡುತ್ತಾರೆ. ಮತದಾರನ ಎಡಗೈ ಉಂಗುರ ಬೆರಳಿಗೆ ಗುರುತುಶಾಯಿ ಹಾಕಲಾಗುತ್ತದೆ.
ಮತಯಂತ್ರ
ಬ್ಯಾಲೆಟ್ ಯೂನಿಟ್, ಕಂಟ್ರೋಲ್ ಯೂನಿಟ್‌ಗಳನ್ನು ಪರಿಶೀಲನೆ ನಡೆಸಿ ಸಿದ್ಧಪಡಿಸಲಾಗಿದೆ. ಒಟ್ಟು 611 ಬ್ಯಾಲೆಟ್ ಹಾಗೂ ಕಂಟ್ರೋಲ್ ಯೂನಿಟ್‌ಗಳನ್ನು ಬಳಸಲಾಗುತ್ತದೆ. ಮತದಾನದ ವೇಳೆ ಯಾವುದಾದರೂ ಮತಯಂತ್ರದಲ್ಲಿ ಯಾವುದೇ ದೋಷ ಕಂಡುಬಂದರೆ ಅದಕ್ಕೆ ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗಿದೆ. ಇದಕ್ಕೆ ತಂತ್ರಜ್ಞರು ಇರುತ್ತಾರೆ. ಒಂದೊಮ್ಮೆ ಗಂಭೀರ ಸಮಸ್ಯೆಗಳಿದ್ದರೆ ಅವುಗಳಿಗೆ ಬದಲಿ ಮತಯಂತ್ರಗಳನ್ನು ಸಿದ್ಧಪಡಿಸಿಡಲಾಗಿದೆ.
ಮತ ಎಣಿಕೆ
ಮತಎಣಿಕೆ ಸ್ಟೇಟ್‌ಬ್ಯಾಂಕ್ ಬಳಿಯ ರೋಸಾರಿಯೋ ಹೈಸ್ಕೂಲ್‌ನಲ್ಲಿ ನ. 14ರಂದು ನಡೆಯಲಿದೆ. ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಾರಂಭವಾಗಲಿದ್ದು ಮಧ್ಯಾಹ್ನ 1 ಗಂಟೆಯ ವೇಳೆ ಎಣಿಕೆ ಪ್ರಕ್ರಿಯೆ ಪೂರ್ಣಗೊಂಡು ಎಲ್ಲ 60 ವಾರ್ಡ್‌ಗಳ ಫಲಿತಾಂಶ ಘೋಷಣೆಯಾಗುವ ಸಾಧ್ಯತೆಗಳಿವೆ. ಪ್ರತಿ 5 ವಾರ್ಡ್‌ಗಳಿಗೆ ಒಂದರಂತ ಎಣಿಕೆ ಕೊಠಡಿಗಳನ್ನು ನಿಗದಿಪಡಿಸಿ ಎಣಿಕೆ ಟೇಬಲ್‌ಗಳನ್ನು ಹಾಕಲಾಗುತ್ತದೆ. ಇದಕ್ಕೆ ಓರ್ವ ಚುನಾವಣಾಧಿಕಾರಿ, 4 ಮಂದಿ ಅಧಿಕಾರಿ, 4ಮಂದಿ ಸಹಾಯಕರು ಹಾಗೂ 4 ಮಂದಿ ಗ್ರೂಪ್ ಡಿ ಸಿಬಂದಿಯಂತೆ ಒಟ್ಟು 300 ಮಂದಿ ಅಧಿಕಾರಿ, ಸಿಬಂದಿ ಇರುತ್ತಾರೆ.ಇವರಿಗೆ ತರಬೇತಿ ನೀಡಲಾಗಿದೆ.
ರಾಜಕೀಯ ಪಕ್ಷಗಳಿಂದ ನಿಯೋಜನೆ ಗೊಂಡಿರುವ, ಚುನಾವಣ ಆಯೋಗದಿಂದ ಅಧಿಕೃತವಾಗಿ ಗುರುತುಪತ್ರ ಪಡೆದಿರುವ ಎಣಿಕೆ ಎಜೆಂಟರ್‌ಗಳಿಗೆ ಮತಎಣಿಕೆ ಕೇಂದ್ರ ದಲ್ಲಿರಲು ಅವಕಾಶವಿದೆ. ಅಭ್ಯರ್ಥಿಗಳು ಕೂಡ ಎಣಿಕೆಯನ್ನು ವೀಕ್ಷಿಸಬಹುದು. ಸಾರ್ವಜನಿಕರಿಗೆ ಕೇಂದ್ರದ 100 ಮೀಟರ್ ವ್ಯಾಪ್ತಿಯೊಳಗೆ ಪ್ರವೇಶವಿಲ್ಲ. ಫಲಿತಾಂಶದ ಬಗ್ಗೆ ಕೇಂದ್ರದ ಹೊರಭಾಗದಲ್ಲಿ ಮಾಹಿತಿ ಕೇಂದ್ರ ತೆರೆಯಲಾಗುವುದು.
ನಕಲಿ ಮತದಾನ ತಪ್ಪಿಸಲು ಮಾಕ್ಡ್ ಕಾಪಿ
ನಕಲಿ ಮತದಾನಕ್ಕೆ ಸರ್ವ ಜಾಗೃತಿ ವಹಿಸಲಾಗಿದೆ. ಬಿಎಲ್‌ಒಗಳು ಈಗಾಗಲೇ ಮನೆ-ಮನೆಗೆ ತೆರಳಿ ಮತದಾರರ ಪಟ್ಟಿಯಲ್ಲಿ ಸೇರಿಸುವ ಸಂಬಂಧ ಸೂಕ್ತ ಪರಿಶೀಲಿಸದ ಅನಂತರ ಎಲ್ಲ ಕಡೆಗೂ ಅಂತಿಮ ಮತದಾರರ ಪಟ್ಟಿ ತಯಾರಿಸಲಾಗಿದೆ. ಆ ಮೂಲಕ ಈ ಹಿಂದೆ ಮತದಾನದ ವೇಳೆ ಏನಾದರೂ ಗೊಂದಲವಾಗಿದ್ದರೆ ಸರಿಪಡಿಸಲು ಪ್ರಯತ್ನಸಿಸಲಾಗುವುದು. ಇನ್ನು ಗೊಂದಲ ಆಗಬಾರದೆಂದು ಪ್ರತಿ ಪುಟಗಳನ್ನು ಪರಿಶೀಲಿಸಿ ಪರಿಷ್ಕೃತ ಪಟ್ಟಿಯನ್ನು ತಯಾರಿಸಿ ಮಾಕ್ಡ್ì ಕಾಪಿ ಮಾಡಿ ಆರ್‌ಓಗಳಿಗೆ ಹಸ್ತಾಂತರಿಸಲಾಗಿದೆ. ಮತದಾರರು ಈ ಬಗ್ಗೆ ಸಂದೇಹಗಳಿದ್ದರೆ, ರಾಜಕೀಯ ಪಕ್ಷಗಳಿಂದ ಬೂತ್ ಬಳಿ ನಿಯೋ ಜನೆಗೊಂಡಿರುವ ಮತಗಟ್ಟೆ ಏಜೆಂಟ್ ಅನ್ನು ಪ್ರಶ್ನಿಸಬಹುದು. ಆಗ ಅಲ್ಲಿನ ಚುನಾವಣಾಧಿಕಾರಿಯವರು ಈ ಆಕ್ಷೇಪವನ್ನು ಪರಿಶೀಲಿಸುತ್ತಾರೆ. ಒಂದುವೇಳೆ ನಕಲಿ ಮತದಾನಕ್ಕೆ ಬಂದಿರುವುದು ಗೊತ್ತಾದಲ್ಲಿ ತತ್‌ಕ್ಷಣವೇ ಪೊಲೀಸರಿಗೆ ಆ ವ್ಯಕ್ತಿಯನ್ನು ಹಸ್ತಾಂತರಿಸಲಾಗುತ್ತದೆ. ಹೀಗಾಗಿ, ಮತದಾನದ ವೇಳೆ ಏನು ಸಮಸ್ಯೆ-ಗೊಂದಲ ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗಿದೆ.
ಕರ್ತವ್ಯನಿರತ ಸಿಬಂದಿಗೆ 200 ರೂ.!
ಮತದಾನದ ದಿನ ಅಂಗವಿಕಲ ಮತದಾರರಿಗೆ ಸುಲಭವಾಗಲು ವೀಲ್‌ಚೇರ್ ವ್ಯವಸ್ಥೆ ಮಾಡಲಾಗಿದೆ. ಬೂತ್‌ಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಫ್ಯಾನ್, ಸೂಕ್ತ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ನಗರ ವ್ಯಾಪ್ತಿಯಲ್ಲಿ ಚುನಾವಣೆ ನಡೆಯುವುದರಿಂದ ಅಲ್ಲಲ್ಲಿ ಹೋಟೆಲ್ ಇರುತ್ತದೆ. ಚುನಾವಣ ಕರ್ತವ್ಯದಲ್ಲಿರುವ ಸಿಬಂದಿಗೆ ಸರಿಯಾದ ಸಮಯಕ್ಕೆ ಊಟೋಪಹಾರದ ವ್ಯವಸ್ಥೆಯೊಂದಿಗೆ ಹೆಚ್ಚುವರಿ 200 ರೂ.ಗಳನ್ನು ನೀಡಲಾಗುತ್ತಿದ್ದು, ಈ ಹಣದಲ್ಲಿ ತಮ್ಮ ಅನುಕೂಲದಂತೆ ಸನಿಹದ ಹೊಟೇಲ್‌ನಲ್ಲಿ ಆಹಾರ ಸೇವಿಸಬಹುದು.
“ಮ’ದ ಮಹತ್ವದಡಿ ಮತ ನೀಡಿ
“ಮ’ದಿಂದ ಪ್ರಾರಂಭವಾಗುವ ಪದಗಳಿಗೆ ತುಂಬಾ ಮಹತ್ವವಿದೆ. ಕುಟುಂಬದ “ಮ’ಮತೆ ಒಂದು ದಿನ ಕಳೆದು ಹೋದಲ್ಲಿ ಆ ದಿನ ಹಾಳಾಗುತ್ತದೆ. “ಮ’ಳೆ ಕಡಿಮೆ ಅಥವಾ ಹೆಚ್ಚಾದಲ್ಲಿ ವರ್ಷವಿಡೀ ಅತಿವೃಷ್ಟಿ, ಅನಾವೃಷ್ಟಿಗೆ ಕಾರಣವಾಗುತ್ತದೆ. “ಮ’ದುವೆ ಮುರಿದು ಬಿದ್ದಲ್ಲಿ ಅಥವಾ ಸೂಕ್ತವಾದ ಆಯ್ಕೆ ಇಲ್ಲವಾದಲ್ಲಿ ಜೀವನವೇ ಹಾಳಾಗುತ್ತದೆ. ಹಾಗೆಯೇ ಸಮರ್ಥ ಅಭ್ಯರ್ಥಿಗೆ “ಮ’ತ ಹಾಕದೇ ಇದ್ದಲ್ಲಿ 5 ವರ್ಷ ಆ ಕ್ಷೇತ್ರದ ಅಭಿವೃದ್ಧಿ ಮರೀಚಿಕೆಯಾಗುತ್ತದೆ. ಅದಕ್ಕಾಗಿ ಪ್ರತಿಯೊಬ್ಬರೂ ಮತದಾನದ ಮಹತ್ವವರಿತು ಚುನಾವಣ ಹಬ್ಬದಲ್ಲಿ ಪಾಲ್ಗೊಳ್ಳಬೇಕು. ಶಾಂತಿಯುತ ಮತದಾನದಲ್ಲಿ ನಾವೆಲ್ಲರೂ ಪಾಲುದಾರರಾಗೋಣ.
ಕಳೆದ ಬಾರಿ ಕಡಿಮೆ ಮತದಾನವಾದ ಕಡೆಯಲ್ಲಿ ಯಾವುದೇ ವಿಶೇಷ ಜಾಗೃತಿ ಕೆಲಸ ಮಾಡಿಲ್ಲ. ಮತದಾನ ಮಾಡುವಂತದ್ದು ಪ್ರತಿಯೊಬ್ಬರ ಕರ್ತವ್ಯ. ಮತ ಹಾಕದಿದ್ದಲ್ಲಿ ಏನಾಗುತ್ತದೆ, ಮತ ಹಾಕುವುದರಿಂದ ಏನು ಲಾಭವಾಗುತ್ತದೆ ಎಂಬುದನ್ನು ಅವರ ಗಮನಕ್ಕೆ ತರುವ ಪ್ರಯತ್ನ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಜನ ತಿಳಿವಳಿಕೆಯುಳ್ಳವರಾದ್ದರಿಂದ ಸ್ವೀಪ್‌ನಂತಹ ಜಾಗೃತಿ ಕಾರ್ಯಕ್ರಮಗಳು ಸ್ಥಳೀಯ ಚುನಾವಣೆಗೆ ಅಗತ್ಯ ಇರುವುದಿಲ್ಲ.
ಈ ಬಾರಿ ಪರಿಸರಸ್ನೇಹಿ ಚುನಾವಣೆ
ಮೊದಲ ಬಾರಿಗೆ ಪರಿಸರಸ್ನೇಹಿ ಚುನಾವಣೆಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಅದರಂತೆ ಪಾಲಿಕೆ ಚುನಾವಣೆ ಘೋಷಣೆಯಾದ 24 ಗಂಟೆಯೊಳಗೆ ನಗರದಲ್ಲಿ ಎಲ್ಲ ಬ್ಯಾನರ್, ಬಂಟಿಂಗ್ಸ್ ಗಳನ್ನು ತೆಗೆಯಲಾಗಿದ್ದು, ಅನಂತರ ಯಾವುದೇ ಬ್ಯಾನರ್, ಬಂಟಿಂಗ್ಸ್‌ಗಳು ಕಂಡು ಬಂದಿಲ್ಲ. ಕೆಲವರು ಫ್ಲೆಕ್ಸ್ ಅಳವಡಿಸಲು ಅನುಮತಿ ಕೇಳಿದ್ದರೂ ಅನುಮತಿ ನಿರಾಕರಿಸಲಾಗಿದೆ. ಪರಿಸರಸ್ನೇಹಿ ಚುನಾವಣೆ ನಡೆಸಲು ಎಲ್ಲ ಅಭ್ಯರ್ಥಿಗಳೂ ಸಹಕರಿಸಿರುವುದರಿಂದ ಯಾವುದೇ ಸಮಸ್ಯೆ ಉಂಟಾಗಿಲ್ಲ. ಪ್ಲಾಸ್ಟಿಕ್ ಬಳಕೆಯೂ ಇರುವುದಿಲ್ಲ.
ಅಭ್ಯರ್ಥಿಗಳು ಖರ್ಚು-ವೆಚ್ಚ ವಿವರ ನೀಡಿ
ಅಭ್ಯರ್ಥಿಗಳು ತಮ್ಮ ಚುನಾವಣ ಖರ್ಚು ವೆಚ್ಚಗಳ ವಿವರಗಳನ್ನು ನಿಗದಿತ ಅವಧಿಯೊಳಗೆ ವೆಚ್ಚ ವೀಕ್ಷಕರಿಗೆ ನೀಡುತ್ತಿರಬೇಕು. ಮೂವರು ಚುನಾವಣ ವೆಚ್ಚ ವೀಕ್ಷಕರನ್ನು ನೇಮಕ ಮಾಡಲಾಗಿದ್ದು, ಅವರು ನಿರಂತರವಾಗಿ ನಿಗಾ ವಹಿಸುತ್ತಿದ್ದಾರೆ. ಹೊಸ ಅಭ್ಯರ್ಥಿಗಳಿಗೆ ಈ ಬಗ್ಗೆ ಮಾಹಿತಿ ಕೊರತೆ ಇದ್ದರೆ, ಸಂಬಂಧಪಟ್ಟವರಲ್ಲಿ ಮಾಹಿತಿ ಪಡೆದುಕೊಂಡು ನಿಗದಿತ ಸಮಯದೊಳಗೆ ಖರ್ಚು ವೆಚ್ಚಗಳ ಮಾಹಿತಿ ಒಪ್ಪಿಸಬೇಕಾಗುತ್ತದೆ. ಇಲ್ಲದಿದ್ದರೆ ನಿಯಮಾನುಸಾರ ಕ್ರಮ ಜರಗಿಸಲಾಗುವುದು.
ಮೊದಲ ಬಾರಿ ನೋಟಾ ಅವಕಾಶ
ಲೋಕಸಭಾ, ವಿಧಾನಸಭಾ ಚುನಾವಣೆಯಂತೆ ಪಾಲಿಕೆ ಚುನಾವಣೆಯಲ್ಲಿಯೂ ಇದೇ ಮೊದಲ ಬಾರಿಗೆ ನೋಟಾ ಪರಿಚಯಿಸಲಾಗಿದೆ. ಹಾಗಾಗಿ, ಮತದಾರರಿಗೆ “ನೋಟಾ’ ಆಯ್ಕೆಗೆ ಅವಕಾಶವಿದೆ. ಅಲ್ಲದೆ, ಮೊದಲ ಬಾರಿಗೆ ಮತ ಯಂತ್ರದಲ್ಲಿ ಅಭ್ಯರ್ಥಿಗಳ ಹೆಸರು ಮತ್ತು ಚಿಹ್ನೆಯೊಂದಿಗೆ ಅಭ್ಯರ್ಥಿಗಳ ಭಾವ ಚಿತ್ರವನ್ನೂ ನಮೂ ದಿಸ ಲಾಗಿದೆ. ಇದರಿಂದ ಮತ ಚಲಾಯಿಸಲು ಮತದಾರರಿಗೆ ಸುಲಭವಾಗಲಿದೆ.
ವಿವಿ ಪ್ಯಾಟ್ ವ್ಯವಸ್ಥೆ ಇಲ್ಲ
ರಾಜ್ಯ ಚುನಾವಣ ಆಯೋಗದ ನಿರ್ದೇಶನದ ಪ್ರಕಾರ ಈ ಬಾರಿಯ ಚುನಾವಣೆಗೆ ವಿವಿ ಪ್ಯಾಟ್ ಇರುವುದಿಲ್ಲ. ಹಾಗಾಗಿ ಮತದಾನದ ಅನಂತರ ಮತ ಚಲಾಯಿಸಿದ್ದರ ಬಗ್ಗೆ ಖಾತ್ರಿ ಪಡಿಸಿಕೊಳ್ಳಲು ಆಗುವುದಿಲ್ಲ. ಚುನಾವಣೆಗೆ ಇವಿಎಂ ಮತಯಂತ್ರ ಬಳಕೆ ಇದೇ ಮೊದಲಲ್ಲ. ಈ ಹಿಂದಿನ ಚುನಾವಣೆಗಳಲ್ಲಿಯೂ ಬಳಸಲಾಗಿದೆ. ಹಾಗಾಗಿ ವಿವಿ ಪ್ಯಾಟ್ ಇಲ್ಲದಿದ್ದರೂ ಮತದಾರರಿಗೆ ಗೊಂದಲವಾಗದು. ಆದರೆ ಸರಿಯಾಗಿ ನೋಡಿಕೊಂಡು ಮತ ಚಲಾಯಿಸಬೇಕು.
60 ವಾರ್ಡ್‌ಗಳಲ್ಲಿ ಚುನಾವಣೆ
180 ಅಭ್ಯರ್ಥಿಗಳ ಸ್ಪರ್ಧೆ
21 ವಾರ್ಡ್‌ಗಳಲ್ಲಿ ನೇರಸ್ಪರ್ಧೆ
24 ವಾರ್ಡ್‌ಗಳಲ್ಲಿ
ತ್ರಿಕೋನ ಸ್ಪರ್ಧೆ
9 ವಾರ್ಡ್‌ನಲ್ಲಿ
ಚತುಷ್ಕೋನ ಸ್ಪರ್ಧೆ
6 ಕ್ಷೇತ್ರಗಳಲ್ಲಿ ಪಂಚಕೋನ ಸ್ಪರ್ಧೆ
ನೀತಿಸಂಹಿತೆ ಉಲ್ಲಂಘನೆ
ಒಟ್ಟು ನಾಲ್ಕು ಪ್ರಕರಣ
ಒಂದು ಪ್ರಕರಣಕ್ಕೆ ನೊಟೀಸ್
ಒಂದು ಪ್ರಕರಣ ವಿಲೇವಾರಿ
2 ಪ್ರಕರಣ ಇತ್ಯರ್ಥಕ್ಕೆ ಬಾಕಿ
“ಉದಯವಾಣಿ’ಯಿಂದ ಮತ ಜಾಗೃತಿ
ಪಾಲಿಕೆ ಚುನಾವಣೆಯ ಬಗ್ಗೆ ವಿಸ್ತೃತ ವರದಿ ಪ್ರಕಟಿಸುತ್ತಿರುವ “ಉದಯವಾಣಿ- ಸುದಿನ’ವು ಮತದಾರರಲ್ಲಿ ಮತ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಸ್ಥಳೀಯ ಚುನಾವಣೆಯಾದರೂ ಮಾಧ್ಯಮದ ಮೂಲಕ ಆ ಚುನಾವಣೆಯ ಬಗ್ಗೆ ವರದಿಗಳನ್ನು ಪ್ರಕಟಿಸುವುದರಿಂದ ಜನರಿಗೆ ಮತದಾನದ ಮಹತ್ವ ಅರಿವಾಗುತ್ತದೆ. ಈ ನಿಟ್ಟಿನಲ್ಲಿ ಇಂಥ ಸಂವಾದ ಕೂಡ ಆಯೋಜಿಸಿರುವುದು ಮತದಾರರ ಹಿತದೃಷ್ಟಿಯಿಂದ ಔಚಿತ್ಯಪೂರ್ಣ ಕಾರ್ಯ ಎನಿಸಿದೆ.
ಅಜಿತ್ ಕುಮಾರ್ ಹೆಗ್ಡೆ ಶಾನಾಡಿ, ಪಾಲಿಕೆ ಚುನಾವಣಾಧಿಕಾರಿ
ಶೇ. 1ರಷ್ಟು ಹೊಸ ಮತದಾರರು
ಕಳೆದ ಲೋಕಸಭೆ ಚುನಾವಣೆಯ ಮತದಾರರ ಪಟ್ಟಿಯಂತೆಯೇ ಈ ಬಾರಿ ಚುನಾವಣೆ ನಡೆಯುತ್ತಿದ್ದರೂ, ಶೇ.1ರಿಂದ 2ರಷ್ಟು ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ. ಕಳೆದ ವರ್ಷ 17 ವರ್ಷವಾಗಿದ್ದು, ಈ ವರ್ಷಕ್ಕೆ 18 ತುಂಬಿದವರು ಈಗಾಗಲೇ ತಮ್ಮ ಮತದಾರರ ಗುರುತಿನ ಚೀಟಿಯನ್ನು ಮಾಡಿಸಿಕೊಂಡಿದ್ದು, ಅಂತಹವರಿಗೆ ಈ ಬಾರಿ ಮತದಾನಕ್ಕೆ ಅವಕಾಶವಿದೆ. ಅಲ್ಲದೆ, ವಿಳಾಸ ಬದಲಾವಣೆಯಿಂದ ಕೆಲವು ಬೂತ್‌ಗಳಲ್ಲಿ ಮತದಾರರ ಸೇರ್ಪಡೆ, ತೆಗೆದು ಹಾಕುವ ಪ್ರಕ್ರಿಯೆ ನಡೆದಿದೆ. ಹೊಸ ಮತದಾರರಿಗೆ ಕೆಲವು ಕಾಲೇಜುಗಳಲ್ಲಿ ಅಧಿಕಾರಿಗಳು ಮತದಾನದ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ
- ಸಂತೋಷ್ ಕುಮಾರ್, ಮನಪಾ ಚುನಾವಣೆ ನೋಡಲ್ ಅಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.