ಪಾಠ ಹೇಳಲು ರೆಡಿ, ಮಕ್ಕಳನ್ನು ಕೊಡಿ!
Team Udayavani, Jun 4, 2018, 12:38 PM IST
ಸುಬ್ರಹ್ಮಣ್ಯ : ಪಾಠ ಹೇಳಿ ಕೊಡಲು ನಾವು ಸಿದ್ಧರಿದ್ದೇವೆ. ಮಕ್ಕಳನ್ನು ಕಳುಹಿಸಿಕೊಡಿ ಎಂದು ಹರಿಹರ – ಪಳ್ಳತ್ತಡ್ಕ ಪ.ಪೂ. ಕಾಲೇಜಿನ ಪ್ರೌಢಶಾಲೆ ಮತ್ತು ಪಿಯು ವಿಭಾಗದ ಶಿಕ್ಷಕರು ಮತ್ತು ಉಪನ್ಯಾಸಕರು ಮನವಿ ಮಾಡುತ್ತಿದ್ದಾರೆ.
ಹರಿಹರ ಪಳ್ಳತ್ತಡ್ಕ ಸುಳ್ಯ ತಾಲೂಕು ಕೇಂದ್ರದಿಂದ 45 ಕಿ.ಮೀ. ದೂರದಲ್ಲಿದೆ. ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗ ಬಾರದು ಎಂಬ ಕಾರಣಕ್ಕೆ 1981ರಲ್ಲಿ ಇಲ್ಲಿ ಪ್ರೌಢಶಾಲೆ ತೆರೆಯಲಾಗಿದೆ. ಬಳಿಕ ಹಳೆಯ ಖಾಸಗಿ ಕಟ್ಟಡದಿಂದ ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು. ಇತ್ತೀಚಿನ ವರ್ಷಗಳ ತನಕ ಕಲಿಕೆಗೇನೂ ಅಡ್ಡಿ ಇರಲಿಲ್ಲ. ಮಕ್ಕಳ ಸಂಖ್ಯೆಯೂ ಇತ್ತು. ಈ ವರ್ಷದಲ್ಲಿ ಮಕ್ಕಳ ಕೊರತೆ ಉಂಟಾಗಿದೆ.
ಪ್ರೌಢಶಾಲೆಯ ಎಸೆಸೆಲ್ಸಿಯಲ್ಲಿ 14, 9ನೇ ತರಗತಿಯಲ್ಲಿ 13 ಹಾಗೂ 8ನೇ ತರಗತಿಯಲ್ಲಿ ಇಬ್ಬರು ವಿದ್ಯಾರ್ಥಿಗಳಿದ್ದಾರೆ. ಈ ಸಲ ಎಸೆಸೆಲ್ಸಿಯಲ್ಲಿ ಶೇ. 61.2 ಫಲಿತಾಂಶ ಬಂದಿತ್ತು. ಆದರೂ 8ನೇ ತರಗತಿಗೆ ಮಕ್ಕಳ ದಾಖಲಾತಿ ಕಡಿಮೆಯಾಗಿದೆ. ಶಾಲೆಯಲ್ಲಿ ಖಾಯಂ ಶಿಕ್ಷಕರ ಕೊರತೆ, ನೀರಿನ ಸಮಸ್ಯೆ ಹೊರತುಪಡಿಸಿದರೆ ಬೇರೆಲ್ಲ ವ್ಯವಸ್ಥೆಗಳಿವೆ.ಮಕ್ಕಳೇ ಇಲ್ಲದಿದ್ದರೆ ನಾವೇನು ಮಾಡುವುದು ಎನ್ನುತ್ತಾರೆ ಶಿಕ್ಷಕರು.
ಪ್ರೌಢಶಾಲೆ ಪಕ್ಕದಲ್ಲೆ 2006ರಲ್ಲಿ ಆರಂಭಗೊಂಡು ಪ.ಪೂ. ಕಾಲೇಜು ನಡೆಯುತ್ತಿದೆ. ಇಲ್ಲಿ ಕಲಾ ವಿಭಾಗ ಮಾತ್ರವಿದ್ದು, ಕೇವಲ ಇಬ್ಬರು ವಿದ್ಯಾರ್ಥಿಗಳು ದಾಖಲಾತಿ ಪಡೆದು ಕೊಂಡಿದ್ದಾರೆ. ದ್ವಿತೀಯ ಪಿಯುದಲ್ಲಿ ಆರು ವಿದ್ಯಾರ್ಥಿಗಳಿದ್ದು, ಶಿಕ್ಷಕರ ಕೊರತೆ ತೀವ್ರವಾಗಿ ಕಾಡುತ್ತಿದೆ. ಪ್ರಭಾರ ಪ್ರಾಂಶುಪಾಲ ಸಹಿತ ಐವರು ಅತಿಥಿ ಶಿಕ್ಷಕರ ವ್ಯವಸ್ಥೆ ಕಲ್ಪಿಸಿಕೊಳ್ಳುವ ಅವಕಾಶವಿದೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ಕಾಲೇಜಿಗೆ ಶೇ. 100 ಫಲಿತಾಂಶವೂ ಲಭ್ಯವಾಗಿತ್ತು.
ಗ್ರಾಮೀಣ ಭಾಗದಲ್ಲಿ ಕಾರ್ಯಾಚರಿಸುತ್ತಿರುವ ಈ ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ. ಸ್ಥಳೀಯ ಮಟ್ಟದಲ್ಲಿ ಅವಕಾಶ ಸಿಗದೆ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ಭಾರೀ ಹೋರಾಟ ನಡೆಸಿ ಪ್ರೌಢಶಾಲೆಗೆ ನೂತನ ಕಟ್ಟಡ ಹಾಗೂ ಕಾಲೇಜು ಆರಂಭ ಮಾಡಿಸಲಾಗಿತ್ತು. ಈಗ ಎರಡೂ ಸಂಸ್ಥೆಗಳಲ್ಲಿ ಮಕ್ಕಳೇ ಇಲ್ಲದಿರುವುದು ಶಿಕ್ಷಕರು, ಶಿಕ್ಷಣ ಇಲಾಖೆ ಹಾಗೂ ಊರವರಿಗೆ ದೊಡ್ಡ ತಲೆನೋವಾಗಿದೆ.
ಪಕ್ಕದ ಗ್ರಾಮ ಕೊಲ್ಲಮೊಗ್ರುನಲ್ಲಿ ಪ್ರೌಢಶಾಲೆ ಇದೆ. ಅದು ಬಿಟ್ಟರೆ ಕಾಲೇಜುಗಳಿರುವುದು ಗುತ್ತಿಗಾರು ಹಾಗೂ ಸುಬ್ರಹ್ಮಣ್ಯದಲ್ಲಿ. ಎಸೆಸೆಲ್ಸಿ ತೇರ್ಗಡೆಯಾದ ವಿದ್ಯಾರ್ಥಿಗಳು ಕಲೆ ಅಲ್ಲದೆ ಬೇರೆ ವಿಭಾಗ ಆಯ್ಕೆ ಮಾಡಿಕೊಂಡಲ್ಲಿ ಬೇರೆ ಕಾಲೇಜಿಗೆ ತೆರಳುವುದು ಅನಿವಾರ್ಯ. ಕೆಲವು ವಿದ್ಯಾರ್ಥಿಗಳು ಹಾಗೂ ಹೆತ್ತವರು ಆಂಗ್ಲ ಮಾಧ್ಯಮದ ಮೋಹಕ್ಕೆ ಒಳಗಾಗುತ್ತಿದ್ದಾರೆ. ಇದು ಈ ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳ ಕೊರತೆಗೆ ಗಂಭೀರ ಕಾರಣ ಎಂದು ಹೇಳಲಾಗುತ್ತಿದೆ. ಸರಕಾರಿ ಶಾಲೆ, ಕಾಲೇಜುಗಳಿಗೆ ಮೂಲಸೌಕರ್ಯ ಒದಗಿಸಲು ಶಿಕ್ಷಣ ಇಲಾಖೆ ಮುತುವರ್ಜಿ ವಹಿಸಿದರೂ ಜನರೇ ತಮ್ಮ ಮಕ್ಕಳನ್ನು ಖಾಸಗಿ ಹಾಗೂ ಆಂಗ್ಲ ಮಾಧ್ಯಮ ಶಾಲೆಗಳಿಗೆ ಕಳುಹಿಸಿ, ಸರಕಾರಿ ಶಿಕ್ಷಣ ಸಂಸ್ಥೆಗಳು ಮುಚ್ಚುವಂತೆ ಮಾಡುತ್ತಿದ್ದಾರೆ. ಈ ಕುರಿತು ಈಗಲೇ ಎಚ್ಚೆತ್ತುಕೊಂಡರೆ ಶಿಕ್ಷಣಕ್ಕೆ ಅರ್ಥ ಬರುತ್ತದೆ ಎಂದು ಶಿಕ್ಷಣ ಪ್ರೇಮಿಗಳು ಹೇಳಿದ್ದಾರೆ.
ಮಕ್ಕಳ ನಿರೀಕ್ಷೆಯಲ್ಲಿದ್ದೇವೆ
ಎಸೆಸೆಲ್ಸಿ ಪೂರಕ ಪರೀಕ್ಷೆ ಶೀಘ್ರದಲ್ಲಿ ನಡೆಯಲಿದೆ. ಬಳಿಕ ಒಂದಷ್ಟು ಮಕ್ಕಳ ದಾಖಲಾತಿ ಆಗುವ ಕುರಿತು ನಿರೀಕ್ಷೆ ಹೊಂದಿದ್ದೇವೆ.
- ಗೋಪಾಲಕೃಷ್ಣ
ಪ್ರಭಾರ ಪ್ರಾಂಶುಪಾಲರು
ಪರಿಣಾಮ ಬೀರದಂತೆ ಎಚ್ಚರ
ಮಕ್ಕಳ ಪ್ರಮಾಣ ಕಡಿಮೆ ಇರುವುದಕ್ಕೆ ಬೇಸರವಾಗುತ್ತದೆ. ಎಂಟನೆ ತರಗತಿಗೆ ಮಕ್ಕಳ ಕೊರತೆ ಇದೆ. ಕೊರತೆ ಎಂಬುದು ಇರುವ ಬೆರಳೆಣಿಕೆಯ ಮಕ್ಕಳ ಮೇಲೆ ಯಾವುದೇ ಪರಿಣಾಮ ಬೀರದಂತೆ ಎಚ್ಚರ ವಹಿಸಿ ಶಿಕ್ಷಣ ನೀಡುತ್ತೇವೆ.
- ರಾಮಚಂದ್ರ ಗೌಡ
ಮುಖ್ಯ ಶಿಕ್ಷಕರು, ಪ್ರೌಢಶಾಲಾ
ವಿಭಾಗ
ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.