ಸೌಹಾರ್ದದ ಕೊಂಡಿಯಾಯ್ತು ಕಿಂಡಿ ಅಣೆಕಟ್ಟು
Team Udayavani, Dec 29, 2018, 5:17 AM IST
ಬಡಗನ್ನೂರು: ಸುಮಾರು 15 ವರ್ಷಗಳಿಂದ ಪಾಳು ಬಿದ್ದಿದ್ದ ಬಡಗನ್ನೂರಿನ ಕಿಂಡಿ ಅಣೆಕಟ್ಟು ಗ್ರಾಮಸ್ಥರ ಒಗ್ಗೂಡುವಿಕೆಯಿಂದ ಪುನರ್ ನಿರ್ಮಾಣಗೊಂಡಿದೆ. ಮಾಣಿ ಮೈಸೂರು ಹೆದ್ದಾಯ ಪಕ್ಕದಲ್ಲೇ ಇರುವ ಹೊಳೆಗೆ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದೆ. ಕಿಂಡಿ ಅಣೆಕಟ್ಟಿನಲ್ಲಿ ನೀರಿನ ಶೇಖರಣೆಯಾಗುತ್ತಿದ್ದು, ಇದೊಂದು ಸೌಹಾರ್ದದ ಕೊಂಡಿಯಾಗಿದೆ ಎಂದರೆ ತಪ್ಪಲ್ಲ.
ಸರಿಸುಮಾರು 20 ವರ್ಷದ ಹಿಂದೆ ಅಂದಿನ ಜಿಲ್ಲಾ ಪರಿಷತ್ ವತಿಯಿಂದ ಕಿಂಡಿಯನ್ನು ನಿರ್ಮಿಸಲಾಗಿತ್ತು. ಹೊಸ ಕಿಂಡಿ ನಿರ್ಮಾಣವಾದ ಬಳಿಕ ಕೇವಲ ಎರಡು ವರ್ಷ ಮಾತ್ರ ಇದರಲ್ಲಿ ನೀರು ಸಂಗ್ರಹಿಸಲಾಗಿತ್ತು. ಮೂರನೇ ವರ್ಷಕ್ಕೆ ಕಿಂಡಿ ಜೋಡಿಸಲು ಹಲಗೆಯೇ ಇಲ್ಲಿರಲಿಲ್ಲ.
ಒಂದೂವರೆ ದಶಕದ ಬಳಿಕ
ಸುಮಾರು 15 ವರ್ಷಗಳ ಕಾಲ ಪಾಳು ಬಿದ್ದಿದ್ದ ಕಿಂಡಿ ಅಣೆಕಟ್ಟನ್ನು ಮತ್ತೆ ಜೀವಂತಗೊಳಿಸಿದವರು ಶೇಕಮಲೆ ಮಸೀದಿ ಆಡಳಿತ ಮಂಡಳಿ ಮತ್ತು ಸ್ಥಳೀಯರಾದ ಚಂದ್ರಶೇಖರ್ ರೈ ಅವರು. ಶಿಥಿಲಗೊಂಡಿದ್ದ ಕಿಂಡಿ ಅಣೆಕಟ್ಟಿನ ಸುತ್ತ ಆವರಣ ಗೋಡೆ ಹಾಗೂ ಇತರ ಭಾಗಗಳನ್ನು ಸಂಪೂರ್ಣವಾಗಿ ದುರಸ್ತಿ ಮಾಡಲಾಯಿತು.
ದುರಸ್ತಿಯ ಬಳಿಕ ಮಸೀದಿಯಿಂದ ಹಾಗೂ ಇತರ ದಾನಿಗಳ ನೆರವಿನಿಂದ ಹೊಸದಾದ ಹಲಗೆಗಳನ್ನು ತರಲಾಯಿತು. ಶೇಖರ್ ಅವರು ಮುಂಚೂಣಿಯಲ್ಲಿ ನಿಂತು ಕಾಮಗಾರಿಯನ್ನು ನಡೆಸಿದರು. ಸ್ವಂತವಾಗಿ ಕಿಂಡಿ ಅಣೆಕಟ್ಟಿಗೆ ಹಣ ಖರ್ಚು ಮಾಡಿದರು. ಮೂರು ವರ್ಷಗಳಿಂದ ಶೇಖರ್ ಅವರ ನೇತೃತ್ವದಲ್ಲೇ ಕಿಂಡಿ ಅಣೆಕಟ್ಟಿಗೆ ಹಲಗೆ ಜೋಡಿಸುವ ಕಾರ್ಯ ನಡೆಯುತ್ತಿದೆ. ಡಿಸೆಂಬರ್ ಕೊನೇ ವಾರದಲ್ಲಿ ಹಲಗೆ ಜೋಡಿಸಿದರೆ ನಾಲ್ಕು ತಿಂಗಳುಗಳ ಕಾಲ ಇದರಲ್ಲಿ ನೀರು ಸಂಗ್ರಹಗೊಳ್ಳುತ್ತದೆ. ಅಂತರ್ಜಲ ಮಟ್ಟ ಹೆಚ್ಚಾಗಿ ಸ್ಥಳೀಯ ಕೆರೆ, ಬಾವಿಗಳಲ್ಲೂ ನೀರು ತುಂಬಿಕೊಳ್ಳುತ್ತದೆ.
ಕೊಂಡಿಯಾದ ಕಿಂಡಿ
ಕಿಂಡಿ ಅಣೆಕಟ್ಟು ಬಹುತೇಕ ಕಡೆಗಳಲ್ಲಿ ನಿರ್ಮಿಸಲಾಗಿದೆ. ಕೆಲವೊಂದು ಕಡೆಗಳಲ್ಲಿ ಸೂಕ್ತ ನಿರ್ವಹಣೆ ಇಲ್ಲದೆ ಪಾಳುಬಿದ್ದ ಕಿಂಡಿಗಳೂ ಇವೆ. ಆದರೆ ಶೇಕಮಲೆಯ ಕಿಂಡಿ ಅಣೆಕಟ್ಟು ಎಲ್ಲದಕ್ಕಿಂತಲೂ ಭಿನ್ನ. ಇದು ಸ್ಥಳೀಯ ಹಿಂದೂ ಮುಸ್ಲಿಂ ಏಕತೆಯ ಕೊಂಡಿಯಾಗಿದೆ. ಕಿಂಡಿಗೆ ಹಲಗೆ ಜೋಡಿಸುವ ವೇಳೆ ಇಲ್ಲಿ ಎಲ್ಲರೂ ಒಟ್ಟು ಸೇರುತ್ತಾರೆ. ಕೆಲಸ ಮಾಡಿಸುವುದು ಶೇಖರ್ ಅವರಾದರೂ ಅವರಿಗೆ ಬೆನ್ನೆಲುಬಾಗಿ ನಿಲ್ಲುವವರು ಶೇಕಮಲೆ ಜಮಾತರು ಮತ್ತು ಜಮಾಅತ್ ಅಧ್ಯಕ್ಷ ಸಿದ್ದಿಕ್ ಶೇಕಮಲೆ. ಕಿಂಡಿ ಅಣೆಕಟ್ಟು ವ್ಯರ್ಥವಾಗಬಾರದು. ನೀರು ಎಲ್ಲರಿಗೂ ಬೇಕಾಗುವ ಕಾರಣ ಎಲ್ಲರೂ ಸೇರಿ ಇದಕ್ಕೆ ಮರುಜೀವ ನೀಡಿದ್ದೇವೆ. ಎಲ್ಲರಿಗೂ ಈ ನೀರಿನ ಪಾಲು ಇದೆ. ಕಿಂಡಿಯ ಮೂಲಕ ನಾವು ಕೊಂಡಿಗಳಾಗಿದ್ದು ಸಂತೋಷದ ವಿಚಾರ ಎನ್ನುತ್ತಿದ್ದಾರೆ ಮಸೀದಿ ಅಧ್ಯಕ್ಷ ಸಿದ್ದಿಕ್ ಅವರು.
ಮೂರು ಲಕ್ಷ ರೂ. ವೆಚ್ಚದಲ್ಲಿ ಹಲಗೆ ಖರೀದಿ
ಮೂರು ವರ್ಷಗಳ ಹಿಂದೆ ಚಂದ್ರಶೇಖರ್ ರೈ, ಸಿದ್ದಿಕ್ ಶೇಕಮಲೆ ಮತ್ತು ಶೇಕಮಲೆ ಮಸೀದಿಯವರು ಒಟ್ಟು ಸೇರಿ ಮೂರು ಲಕ್ಷ ರೂ. ಮೊತ್ತದ ಹಲಗೆಗಳನ್ನು ಖರೀದಿ ಮಾಡಿದ್ದರು. ಹಲಗೆ ಕೊಡಿ ಎಂದು ಇಲಾಖೆಗೆ ಮನವಿ ಮಾಡಿದ್ದರೂ ಹಳೆಯ ಕಿಂಡಿಯಾದ ಕಾರಣ ಅದಕ್ಕೆ ಅನುದಾನ ಇಲ್ಲ ಎಂದು ಇಲಾಖೆ ತಿಳಿಸಿತ್ತು. ಬಳಿಕ ಸ್ಥಳೀಯ ಗ್ರಾ.ಪಂ. ಮೂಲಕವೂ ಹಲಗೆಗಾಗಿ ಪ್ರಯತ್ನಪಟ್ಟರೂ ಕೊನೆಯ ಹಂತದಲ್ಲಿ ಅದೂ ವಿಫಲವಾಯಿತು. ಕೊನೆಗೆ ಗ್ರಾಮಸ್ಥರೇ ಹಣ ಸಂಗ್ರಹಿಸಿ, ಹಲಗೆಗಳನ್ನು ಖರೀದಿಸಿದ್ದಾರೆ.
ಒಗ್ಗಟ್ಟಾದರೆ ಅಭಿವೃದ್ಧಿ ಸಾಧ್ಯ
ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಿಸಿದ್ದ ಕಿಂಡಿ ಅಣೆಕಟ್ಟು ವ್ಯರ್ಥವಾಗಿ ಹಾಳಾಗುತ್ತಿರುವುದನ್ನು ಕಂಡು ನಾವೆಲ್ಲರೂ ಸೇರಿ ಒಟ್ಟಾಗಿ ಅದಕ್ಕೆ ಪುನರ್ಜನ್ಮ ನೀಡಿದ್ದೇವೆ. ಮೂರು ವರ್ಷಗಳಿಂದ ಬೇಸಗೆಯಲ್ಲಿ ಹಲಗೆಗಳನ್ನು ಜೋಡಿಸಿ ನೀರು ಬಳಕೆ ಮಾಡುತ್ತಿದ್ದೇವೆ. ಊರಿನವರ ಸಹಕಾರವೂ ಇದೆ. ಗ್ರಾಮ ಅಭಿವೃದ್ಧಿಯಾಗಬೇಕಾದರೆ ಊರಿನ ಜನ ಸೌಹಾರ್ದತೆಯಿಂದ ಒಗ್ಗಟ್ಟಾಗಬೇಕು ಎನ್ನುವುದು ಶೇಕಮಲೆಯಲ್ಲಿ ಸಾಬೀತಾಗಿದೆ.
- ಚಂದ್ರಶೇಖರ ರೈ, ಸ್ಥಳೀಯರು
ಎಲ್ಲ ಕಡೆಯೂ ನಡೆಯಲಿ
ನಮ್ಮ ಕೆಲಸ ಸೌಹಾರ್ದದ ಕೊಂಡಿಯಾಗಿದೆ. ಸ್ಥಳೀಯ ಮಸೀದಿ, ಅದರ ಅಧ್ಯಕ್ಷರು, ನೆರೆಯ ಸಹೋದರರು ಸೇರಿಕೊಂಡು ನಿರ್ಮಿಸಿದ ಕಿಂಡಿ ಅಣೆಕಟ್ಟು ಜಲ ಸಮೃದ್ಧಿಯ ಜತೆಗೆ ಊರಿನ ಸೌಹಾರ್ದಕ್ಕೂ ಕಾರಣವಾಗಿದೆ. ಇಂತಹ ಪ್ರಯತ್ನಗಳು ಎಲ್ಲೆಡೆ ನಡೆಯಲಿ.
– ಎಸ್.ಪಿ. ಬಶೀರ್ ಶೇಕಮಲೆ,
ಮಸೀದಿ ಕಾರ್ಯದರ್ಶಿ
ವಿಶೇಷ ವರದಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.