ಜೋಡು ಹಣ್ಣುಕಾಯಿಗೂ ತಗ್ಗಲಿಲ್ಲ ತೋಡಿನ ಮುನಿಸು!
ಮುನಿಸಿಹೋದ ಪ್ರಕೃತಿಯೆದುರು ಮರುನಿರ್ಮಾಣದ ಶ್ರಮ
Team Udayavani, Aug 27, 2019, 5:53 AM IST
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೆಲವು ಗ್ರಾಮಗಳು ಈ ಬಾರಿಯ ನೆರೆಯಲ್ಲಿ ಕೊಚ್ಚಿ ಹೋಗಿವೆ. ಆ ಗ್ರಾಮಗಳನ್ನು ಪುನರ್‌ರೂಪಿಸುವುದು, ಸಂತ್ರಸ್ತರಿಗೆ ಬದುಕನ್ನು ಕಟ್ಟಿಕೊಡುವುದು ಎಲ್ಲರ ಹೊಣೆಗಾರಿಕೆ. ಸರಕಾರ, ಜನಪ್ರತಿನಿಧಿಗಳು, ಸಂಘ -ಸಂಸ್ಥೆಗಳು ನೊಂದವರ ಬದುಕ ಕಟ್ಟಲು ಹೊರಟಿವೆ. ಬನ್ನಿ , ಜತೆಗೂಡೋಣ.
ಬೆಳ್ತಂಗಡಿ: ಪ್ರತೀ ವರ್ಷವೂ ನೀರು ಉಕ್ಕಿ ಹರಿದಾಗ ಹೊಳೆಯ ಬದಿಗೆ ಬಂದು ದೇವರನ್ನು ಪ್ರಾರ್ಥಿಸಿ ಹಣ್ಣುಕಾಯಿ ಮಾಡುತ್ತಿದ್ದೆವು, ಸ್ವಲ್ಪ ಹೊತ್ತಿನ ಬಳಿಕ ನೀರು ಇಳಿಯುತ್ತಿತ್ತು. ಆದರೆ ಈ ಬಾರಿ ಹಾಗಾಗಲಿಲ್ಲ; ಎರಡೆರಡು ಬಾರಿ ಹಣ್ಣುಕಾಯಿ ಮಾಡಿದರೂ ಸಾಕಾಗಲಿಲ್ಲವೇನೋ! ಪ್ರವಾಹ ನಮ್ಮ ಜೀವನಾಧಾರವಾಗಿದ್ದ ತೋಟವನ್ನೇ ಸೆಳೆದೊಯ್ದಿದೆ ಎಂದು ಪ್ರಕೃತಿಯ ಮುನಿಸನ್ನು ವಿವರಿಸಿ
ದರು ದಿಡುಪೆ ಪಲಂದೂರು ನಿವಾಸಿ ಕೃಷ್ಣಪ್ಪ ಗೌಡ.ಗೌಡರ ಮನೆಯ ಪಕ್ಕದಲ್ಲೇ ಇದೆ ಆನಡ್ಕ ಹೊಳೆ. ಪ್ರವಾಹ ಇವರಿಗೆ ಹೊಸದಲ್ಲ. ಆದರೆ ಈ ಬಾರಿಯದು ಮಾತ್ರ ಬಲು ಭೀಕರ. ಗೌಡರ 25 ಸೆಂಟ್ಸ್ ಜಾಗ, ಅಲ್ಲಿದ್ದ ಅಡಿಕೆ, ತೆಂಗಿನ ಮರಗಳು ಹೊಳೆಯ ಪಾಲಾಗಿವೆ. ಪಕ್ಕದ ಮನೆಯ ದಿನೇಶ್ ಗೌಡ ದಡ್ಡುಗದ್ದೆ, ಕೆಂಪಯ್ಯ ಗೌಡ ಅವರ ಜಮೀನುಗಳನ್ನೂ ಉಕ್ಕೇರಿದ ಹೊಳೆ ಒರೆಸಿ ಹಾಕಿದೆ.
ದಿಡುಪೆ ಭಾಗದಲ್ಲಿ ಹತ್ತಾರು ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದ್ದು, ನೂರಾರು ಎಕರೆ ಕೃಷಿ ಭೂಮಿ ಸಂಪೂರ್ಣ ನಾಶವಾಗಿದೆ. ಹೆಚ್ಚಿನ ಕಡೆ ಹೂಳು ತುಂಬಿದೆ. ಕೆಲವೆಡೆ ಗುಡ್ಡ ಕುಸಿತದ ಭೀತಿ ಈಗಲೂ ಇದೆ; ಜನ ಇನ್ನೂ ಆತಂಕದಿಂದ ಹೊರಬಂದಿಲ್ಲ.
ಪುತ್ರಶೋಕದ ಬಳಿಕ ನೆರೆಯ ಆಘಾತ
ಕೃಷ್ಣಪ್ಪ ಗೌಡ-ಮೀನಾಕ್ಷಿ ಗಣೇಶನಗರ ಗುಂಡೇರಿಯ ವೃದ್ಧ ದಂಪತಿ. ಇವರ
ಪುತ್ರ ಉಮೇಶ್ ಕಾಯಿಲೆಯಿಂದ ಮೃತಪಟ್ಟು ಏಳು ತಿಂಗಳಾಗಿದೆಯಷ್ಟೆ. ಆ ಆಘಾತಕರ ಅಗಲುವಿಕೆಯ ವರ್ಷ ಪೂರ್ತಿಗೂ ಮುನ್ನ ಅಪ್ಪಳಿಸಿದ ನೆರೆಯ ಆಘಾತ ವೃದ್ಧ ದಂಪತಿಯನ್ನು ಹಣ್ಣು ಮಾಡಿದೆ. ಎರಡು ದುರ್ಘಟನೆಗಳನ್ನು ನೆನಪಿಸಿಕೊಂಡು ಕಣ್ಣೀರಿಡುವುದಷ್ಟೇ ಅವರ ಪಾಲಿಗೆ ಉಳಿದಿದೆ.
ಇವರ ಮನೆಯ ಹಿಂಬದಿಯೇ ಇದೆ ಸಣ್ಣ ತೋಡು. ಆ. 9ರಂದು ಮಧ್ಯಾಹ್ನದ ವೇಳೆಗೆ ಭೀಕರ ಶಬ್ದದೊಂದಿಗೆ ಸ್ಫೋಟ ಸಂಭವಿಸಿ ಭಾರೀ ನೀರು ಹರಿದು ಬಂದಿತ್ತು. ಏನಾಯಿತು ಎಂದು ಮನೆಯ ಹಿಂಬದಿಗೆ ಧಾವಿಸುವಷ್ಟರಲ್ಲಿ ಪ್ರವಾಹದ ಜತೆಗೆ ಕಲ್ಲುಬಂಡೆಗಳು, ಮಣ್ಣು, ಬೃಹತ್ ಗಾತ್ರದ ಮರಗಳು ಉರುಳಿ ಬರುವುದು ಕಂಡಿತು.ಮೊದಲಿಗೆ ಆ ಜಲಪ್ರಳಯಕ್ಕೆ ಸಿಲುಕಿದ್ದು ಮನೆಯ ಹಿಂಬದಿಯ ಸಣ್ಣ ಗುಡಿಸಲು. ಬಳಿಕ ಶೌಚಾಲಯ, ಬಚ್ಚಲು ಮನೆ ನಾಶವಾಯಿತು. ಮನೆಯ ಗೋಡೆಗಳು ಮಣ್ಣಿನವು, ಕುಸಿಯುವ ಭೀತಿ ಇದೆ. ಮುಂದೇನು ಎಂದು ಕುಟುಂಬ ಆತಂಕದಲ್ಲಿದೆ.
ನಿರಂತರ ಪುನರ್ ನಿರ್ಮಾಣ ಕಾರ್ಯ
ದಿಡುಪೆ ಪರಿಸರವನ್ನು ಮರಳಿ ಕಟ್ಟುವುದಕ್ಕಾಗಿ ನಿರಂತರ ಶ್ರಮದಾನ ನಡೆಯುತ್ತಿದೆ. ಶನಿವಾರ ಬೆಳ್ತಂಗಡಿಯ ಡಿಕೆಆರ್‌ಡಿಎಸ್ ಸಂಸ್ಥೆ, ಸ್ನೇಹಜ್ಯೋತಿ ಮಹಿಳಾ ಒಕ್ಕೂಟ, ಸಂತ ಥಾಮಸ್ ವಿದ್ಯಾಸಂಸ್ಥೆಯ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ದಿಡುಪೆ ರಮೇಶ್ ಗೌಡ ಅವರ ಮನೆಯ ಸಮೀಪ ಬಾವಿಯ ಹೂಳು ತೆಗೆದಿದ್ದಾರೆ, ತೋಟದಲ್ಲಿ ತುಂಬಿಕೊಂಡಿದ್ದ ಮಣ್ಣನ್ನೆತ್ತಿದ್ದಾರೆ.
ಹೊಳೆಯಲ್ಲಿ ಅಗಾಧ ನೀರಿನ ಜತೆಗೆ ಹರಿದು ಬಂದ ಕಸಕಡ್ಡಿ, ಹೂಳು ತುಂಬಿದ್ದು, ಅದನ್ನು ಜೆಸಿಬಿಗಳ ಮೂಲಕ ಎತ್ತಿ ತೆಗೆದು ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಿಕೊಡಲಾಗಿದೆ. ಸಂಪರ್ಕ ಕಡಿದುಹೋಗಿದ್ದ ಕೆಲವು ಮನೆಗಳಿಗೆ ರಸ್ತೆಗಳನ್ನು ರಚಿಸಿ ಕೊಡಲಾಗಿದೆ. ದಿಡುಪೆಯ ಪುನರ್ ನಿರ್ಮಾಣಕ್ಕಾಗಿ ಟೀಮ್ ದಿಡುಪೆಯ ಸುಮಾರು 60ಕ್ಕೂ ಅಧಿಕ ಸದಸ್ಯರು ಹತ್ತಾರು ದಿನಗಳಿಂದ ಬೆವರೊರೆಸಿಕೊಳ್ಳದೆ ಶ್ರಮಿಸುತ್ತಿದ್ದಾರೆ.
“ಬೇರೆ ಬೇರೆ ಸಂಘ-ಸಂಸ್ಥೆಗಳು ದಿಡುಪೆಗೆ ಶ್ರಮದಾನಕ್ಕಾಗಿ ಆಗಮಿಸುತ್ತಿದ್ದು, ಅವರಿಗೆ ಎಲ್ಲಿ, ಯಾವ ಕೆಲಸ ಮಾಡಬೇಕು ಎಂಬ ಮಾರ್ಗದರ್ಶನವನ್ನು ನೀಡುತ್ತಿದ್ದೇವೆ. ಜತೆಗೆ ಅವರ ಊಟೋಪಚಾರದ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ’ ಎಂದು ಟೀಮ್ ದಿಡುಪೆಯ ಸಂತೋಷ್ ದಿಡುಪೆ ಹೇಳುತ್ತಾರೆ.
ಹೇಗೋ ಬದುಕಿಕೊಂಡೆವು
ಒಟ್ಟು 58 ಸೆಂಟ್ಸ್ ಜಾಗದಲ್ಲಿದ್ದ ತೋಟವೇ ನಮಗೆ ಜೀವನಾಧಾರವಾಗಿತ್ತು. ಈಗ ಸುಮಾರು 25 ಸೆಂಟ್ಸ್ ಹೊಳೆಯ ಪಾಲಾಗಿದೆ. ನೀರು ಉಕ್ಕೇರಿ ಬರುತ್ತಿದ್ದಾಗ ಮನೆಯವರನ್ನು ರಕ್ಷಿಸಿಕೊಳ್ಳುವುದೇ ಮಹತ್ಕಾರ್ಯವಾಗಿತ್ತು. ಮಾತು ಬಾರದ ತಾಯಿ, ಇಬ್ಬರು ಸಣ್ಣ ಮಕ್ಕಳನ್ನು ಹೇಗೋ ಪಾರು ಮಾಡಿ ಬದುಕಿಕೊಂಡಿದ್ದೇವೆ.
– ವಸಂತ ಗೌಡ ಪಲಂದೂರು
ಅಡಿಕೆ ಮರ ಹಿಡಿದು ಪಾರಾದೆವು
ಮಧ್ಯಾಹ್ನ 2.30ರ ವೇಳೆಗೆ ಭೀಕರ ಪ್ರವಾಹ ಬಂದು ಮನೆಯ ಸುತ್ತ ನೀರು ಆವರಿಸಿತ್ತು. ಜೀವ ಉಳಿಸಿಕೊಳ್ಳಲೂ ಸಾಧ್ಯವಿಲ್ಲದ ಪರಿಸ್ಥಿತಿ. ಸಣ್ಣ ಮಗು, ವೃದ್ಧ ತಾಯಿಯನ್ನು ರಕ್ಷಿಸುವುದೇ ದೊಡ್ಡ ಸವಾಲಾಗಿತ್ತು. ಅಡಿಕೆ ಮರಗಳನ್ನು ಆಧರಿಸಿ ಹಿಡಿದುಕೊಂಡು ಪರದಾಡುತ್ತ ಸಾಗಿ ಜೀವ ಉಳಿಸಿಕೊಂಡೆವು.
– ದಿನೇಶ್ ಗೌಡ ದಡ್ಡುಗದ್ದೆ
ಅನ್ನ ತುಂಬಿದ್ದ ಪಾತ್ರೆಯನ್ನೂ ಸೆಳೆದೊಯ್ದಿತು ಮಧ್ಯಾಹ್ನದ ಅಡುಗೆ ಮಾಡಿದ್ದೆ, ಮನೆ ಹಿಂಬದಿಯ ಗುಡಿಸಿಲಿನ ಒಲೆಯಲ್ಲಿ ಅನ್ನ ಬೆಂದಿತ್ತು. ಅಷ್ಟು ಹೊತ್ತಿಗೆ ಮನೆಯ ಮೇಲ್ಭಾಗದಿಂದ ಭಾರೀ ಸ್ಫೋಟದ ಸದ್ದು ಕೇಳಿಸಿತು. ನೋಡಿದರೆ ಪ್ರಳಯಾಂತಕ ಸ್ವರೂಪದಲ್ಲಿ ನೀರು ಹರಿದು ಬರುತ್ತಿತ್ತು. ಬೆಂದ ಅನ್ನವಿದ್ದ ಪಾತ್ರೆಯೂ ಗುಡಿಸಲೂ ಕಣ್ಣೆದುರೇ ನೀರು ಪಾಲಾದವು.
– ಮೀನಾಕ್ಷಿ ಕೃಷ್ಣಪ್ಪ ಗುಂಡೇರಿ
ಹೊಸ ಮನೆಗೂ ಹಾನಿ
ಊಟ ಮಾಡಿ ಮಲಗಿದ್ದಾಗ ಆನಡ್ಕ ಹೊಳೆಯಲ್ಲಿ ಭಾರೀ ನೀರು ಹರಿದು ಬಂತು. ನೋಡ ನೋಡುತ್ತಿದ್ದಂತೆ ಮನೆಯ ಒಳಗೇ ನುಗ್ಗಿತು. ಮನೆಯ ಮುಂಭಾಗದಲ್ಲಿದ್ದ
ತೆಂಗು, ಅಡಿಕೆ ಮರಗಳು ಬುಡಸಹಿತ ಕಿತ್ತುಕೊಂಡು ಹೋಗಿವೆ. ನಮ್ಮ ಹೊಸ ಮನೆಗೂ ಹಾನಿಯಾಗಿದೆ.
– ರವಿಚಂದ್ರ ಹೂರ್ಜೆ
“ನೆರೆಯ ಪರಿಣಾಮವಾಗಿ ನನ್ನ ಮನೆ ಕುಸಿಯುವ ಆತಂಕ ಎದುರಾಗಿದ್ದು, 25 ಸೆಂಟ್ಸ್ ಜಾಗ ಹೊಳೆಯ ಪಾಲಾಗಿದೆ’ ಎನ್ನುತ್ತಾರೆ ಕೆಂಪಯ್ಯ ಗೌಡ. “ಪ್ರವಾಹಕ್ಕೆ ಸಿಲುಕಿ ನಿರ್ಮಾಣ ಹಂತದ ಮನೆಯಲ್ಲಿ ಶೇಖರಿಸಿ ಇರಿಸಿದ್ದ ಮರಮಟ್ಟುಗಳು, ಪೈಂಟ್ ತುಂಬಿದ ಡಬ್ಬಗಳು, ವಯರಿಂಗ್ ಸೊತ್ತುಗಳು ನೀರು ಪಾಲಾಗಿವೆ. ನಾಶವಾಗಿರುವ ಸೊತ್ತುಗಳ ಮೌಲ್ಯ 5 ಲಕ್ಷ ರೂ.ಗಳಿಗಿಂತಲೂ ಹೆಚ್ಚು’ -ದಿಡುಪೆ ನಿವಾಸಿ ರಮೇಶ್ ಗೌಡ ಹೇಳುತ್ತಾರೆ.
- ಕಿರಣ್ ಸರಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.