ತಗ್ಗಿದ ಪ್ರವಾಹ; ಸಹಜ ಸ್ಥಿತಿಯತ್ತ ಜನಜೀವನ
Team Udayavani, Aug 12, 2019, 6:19 AM IST
ಬೆಳ್ತಂಗಡಿ / ಬಂಟ್ವಾಳ/ ಮಂಗಳೂರು: ಕಳೆದವಾರ ಭಾರೀ ಮಳೆ ಮತ್ತು ಅಬ್ಬರಿಸುವನೆರೆಯಿಂದ ತತ್ತರಿಸಿದ್ದ ಕರಾವಳಿಯಲ್ಲಿ ರವಿವಾರ ಮಳೆ ಕೊಂಚ ಕಡಿಮೆಯಾಗಿದ್ದು, ನೆರೆಯೂ ಇಳಿಯುತ್ತ ಬಂದಿದೆ. ಜನಜೀವನ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ.
ಅತಿಹೆಚ್ಚು ಹಾನಿ, ನಷ್ಟ ಅನುಭವಿಸಿದ ಬೆಳ್ತಂಗಡಿಯ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಗಳಲ್ಲಿ ಪ್ರವಾಹ ಕಡಿಮೆಯಾಗಿತ್ತು. ಪ್ರವಾಹ ಉಂಟು ಮಾಡಿದ ಅನಾಹುತಗಳು ನಿಧಾನವಾಗಿಬೆಳಕಿಗೆ ಬರುತ್ತಿವೆ. ಸಂತ್ರಸ್ತರು ಪರಿಹಾರ ಕೇಂದ್ರಗಳಲ್ಲಿ ವಾಸ್ತವ್ಯ ಮುಂದುವರಿಸಿದ್ದಾರೆ. ತಾಲೂಕಿನ ವಿವಿಧ ಭಾಗಗಳಲ್ಲಿ ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್, ಸಂಸದ ನಳಿನ್‌ಕುಮಾರ್ ಕಟೀಲು, ಮೇಲ್ಮನೆ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಹರೀಶ್ ಪೂಂಜಾ ಮತ್ತು ಅಧಿಕಾರಿಗಳು ಸಂಚರಿಸಿ ನೆರೆಹಾನಿಯ ಸಮೀಕ್ಷೆ ನಡೆಸಿ ಸಂತ್ರಸ್ತರಲ್ಲಿ ಧೈರ್ಯ ತುಂಬಿದರು.
ದ.ಕ. ಜಿಲ್ಲೆಯಲ್ಲಿ ಇಂದೂ ರೆಡ್ ಅಲರ್ಟ್
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಮತ್ತೆ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಜಿಲ್ಲಾಡಳಿತ ರೆಡ್ ಅಲರ್ಟ್ ಘೋಷಣೆ ಮಾಡಿದೆ.
ಮುನ್ನೆಚ್ಚರಿಕೆ ದೃಷ್ಟಿಯಿಂದ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಅಗ್ನಿಶಾಮಕ ದಳಕಾರ್ಯಪ್ರವೃತ್ತವಾಗಿವೆ. 5 ಕೋಸ್ಟ್‌ಗಾರ್ಡ್ ತಂಡ ಸನ್ನದ್ಧವಾಗಿವೆ. ಜಿಲ್ಲೆಯ ಪ್ರತೀ ತಾಲೂಕಿನಲ್ಲೂ 2 ಹೋಮ್‌ಗಾರ್ಡ್ ತಂಡ ಸಿದ್ಧವಾಗಿವೆ.
ಶುಚಿಗೊಳಿಸುವುದೇ ಸವಾಲು
ಬಂಟ್ವಾಳ: ಇತ್ತ ಪ್ರವಾಹದಿಂದ ತತ್ತರಿಸಿದ್ದ ಬಂಟ್ವಾಳದಲ್ಲಿಯೂ ಜನಜೀವನ ನಿಧಾನಗತಿಯಲ್ಲಿ ಸಹಜಸ್ಥಿತಿಯತ್ತ ಮರಳುತ್ತಿದ್ದು, ರವಿವಾರ ಜಲಾವೃತ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯ ಭರದಿಂದ ನಡೆದಿದೆ. ನೇತ್ರಾವತಿಯಲ್ಲಿ ನೀರಿನ ಮಟ್ಟ ಕೂಡ ಅಪಾಯಕ್ಕಿಂತ ಕೆಳಗಿಳಿದಿದ್ದು, ಸಂಜೆಯ ವೇಳೆಗೆ 6.9 ಮೀ. ತಲುಪಿತ್ತು.
ಪ್ರವಾಹದಿಂದಾಗಿ ಕೊಳಚೆ ಯಂತಾಗಿದ್ದ ಬಂಟ್ವಾಳ ಪೇಟೆ, ಪಾಣೆಮಂಗಳೂರು ಮೊದಲಾದ ಪ್ರದೇಶಗಳಲ್ಲಿ ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿದ್ದರು. ಜತೆಗೆ ಜಲಾವೃತಗೊಂಡ ಮನೆಯವರೂ ಶುಚಿಗೊಳಿಸುವ ಕೆಲಸ ನಡೆಸಿದ್ದಾರೆ. ಬಂಟ್ವಾಳ ಪುರಸಭೆಯ ಪೌರ ಕಾರ್ಮಿಕರು ಸ್ವಚ್ಛತೆಯಲ್ಲಿ ಸಹಕರಿ ಸಿದ್ದಾರೆ. ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕಾಡ್ಲೋರ್ ಸತ್ಯನಾರಾಯಣಾಚಾರ್ಯ ಮತ್ತು ಬಂಟ್ವಾಳದ ನ್ಯಾಯಾಧೀಶರು ಪ್ರವಾಹದ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿ, ಸಹಾಯಕ ಕಮಿಷನರ್ ರವಿಚಂದ್ರ ನಾಯಕ್, ತಹಶೀಲ್ದಾರ್ ರಶ್ಮಿ ಎಸ್.ಆರ್. ಕೂಡ ಪರಿಶೀಲನೆಯಲ್ಲಿ ಪಾಲ್ಗೊಂಡರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.