ವಿದ್ಯುತ್ ಶಾಕಿಂಗ್ ಸ್ಥಳಗಳ ಮುಕ್ತಿಗೆ ಕ್ರಮ
Team Udayavani, Oct 6, 2018, 10:01 AM IST
ಮಹಾನಗರ: ನಗರ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ವಿದ್ಯುತ್ ಸಂಪರ್ಕ ಹಾಗೂ ಸರಬರಾಜು ಅವ್ಯವಸ್ಥೆಯನ್ನು ತುರ್ತಾಗಿ ಸರಿಪಡಿಸುವುದಕ್ಕೆ ಸಂಬಂಧಪಟ್ಟ ಇಲಾಖೆಗಳ ಸಹಕಾರದೊಂದಿಗೆ ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ (ಮೆಸ್ಕಾಂ) ಮುಂದಾಗಿದ್ದು, ಈ ಸಂಬಂಧ ಶುಕ್ರವಾರ ಮೆಸ್ಕಾಂ ಹಿರಿಯ ಅಧಿಕಾರಿಗಳು ಪಾಲಿಕೆಯ ಆಯುಕ್ತರನ್ನು ಭೇಟಿಯಾಗಿ ಅಗತ್ಯ ಕ್ರಮ ತೆಗೆದುಕೊಂಡಿದೆ.
ಮಂಗಳೂರು ನಗರ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ವಿದ್ಯುತ್ ಸಂಪರ್ಕ ಹಾಗೂ ಸರಬರಾಜು ವ್ಯವಸ್ಥೆಯಲ್ಲಿ ಕೆಲವು ಕಡೆ ಕಂಡುಬಂದಿರುವ ಅವ್ಯವಸ್ಥೆಗಳ ವಾಸ್ತವಾಂಶ ಹಾಗೂ ಅವುಗಳನ್ನು ಸರಿಪಡಿಸಲು ಮೆಸ್ಕಾಂ ವತಿಯಿಂದ ಈಗ ತೆಗೆದುಕೊಳ್ಳುತ್ತಿರುವ ಪೂರಕ ಕ್ರಮಗಳ ಕುರಿತ ವರದಿಯೊಂದನ್ನು ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಅವರಿಗೆ ಮೆಸ್ಕಾಂ ಅಧಿಕಾರಿಗಳು ಶುಕ್ರವಾರ ಸಲ್ಲಿಸಿದ್ದಾರೆ. ಆ ಮೂಲಕ, ನಗರ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜು ಸಂಬಂಧ ಕೆಲವು ಕಡೆಗಳಲ್ಲಿ ಸಂಬಂಧಪಟ್ಟವರ ಗಮನಕ್ಕೆ ಬಾರದೆ ಹಾಗೂ ನಿರ್ಲಕ್ಷ್ಯಕ್ಕೆ ಒಳಗಾಗಿರುವ ವಿದ್ಯುತ್ ಶಾಕಿಂಗ್ ಸ್ಪಾಟ್‌ಗಳನ್ನು ತುರ್ತಾಗಿ ಸರಿಪಡಿಸಿ ಸಾರ್ವಜನಿಕರ ಸುರಕ್ಷೆ ಕಡೆಗೆ ಹೆಚ್ಚಿನ ಗಮನಹರಿಸಲು ಮೆಸ್ಕಾಂ ಸಹಿತ ಸಂಬಂಧಪಟ್ಟ ಇಲಾಖೆಗಳು ಮುಂದಾಗಿರುವುದು ಗಮನಾರ್ಹ.
ಈ ಹಿನ್ನೆಲೆಯಲ್ಲಿ ಐದು ದಿನಗಳಿಂದ ನಗರದ ಸಾರ್ವಜನಿಕ ಸ್ಥಳಗಳಲ್ಲಿ ವಿದ್ಯುತ್ ಸಂಪರ್ಕ ಹಾಗೂ ಸರಬರಾಜು ವ್ಯವಸ್ಥೆ ಯಲ್ಲಿ ಅಸಮರ್ಪಕ ನಿರ್ವಹಣೆಯಿಂದ ಸಾರ್ವಜನಿಕರಿಗೆ ಎದುರಾಗಿರುವ ಅಪಾಯದ ಬಗ್ಗೆ ಸಂಬಂಧ ಪಟ್ಟವರ ಗಮನಸೆಳೆಯಲು ಸುದಿನ ಕೈಗೊಂಡಿದ್ದ ವಿದ್ಯುತ್ -ಆಪತ್ತು ಇರಲಿ ಎಚ್ಚರ ಜಾಗೃತಿ ಅಭಿಯಾನವು ಫಲಶ್ರುತಿ ನೀಡಿರುವುದು ಶ್ಲಾಘನೀಯ.
ಅಲ್ಲದೆ, ಮೆಸ್ಕಾಂ, ಪಾಲಿಕೆ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳು ಕೂಡ ಸಾರ್ವಜನಿಕರು ವಿದ್ಯುತ್ ಸರಬರಾಜು ವ್ಯವಸ್ಥೆಯಲ್ಲಿ ಎದುರಿಸುತ್ತಿರುವ ಈ ಮಾದರಿಯ ಸಮಸ್ಯೆ ಸರಿಪಡಿಸುವಂತೆ ಈ ಅಭಿಯಾನದಲ್ಲಿ ಉಲ್ಲೇಖಿಸಿರುವ ವಿಚಾರವಾಗಿ ತಮ್ಮ ಬದ್ಧತೆ ಪ್ರದರ್ಶಿಸಿರುವುದು ಕೂಡ ಅಭಿನಂದನೀಯ. ಈ ಬಗ್ಗೆ ಸಾರ್ವಜನಿಕರಿಂದ ಬಹಳಷ್ಟು ದೂರುಗಳು ವ್ಯಕ್ತವಾಗಿದ್ದವು. ಅಭಿಯಾನಕ್ಕೆ ತುರ್ತು ಸ್ಪಂದಿಸಿರುವ ಮೆಸ್ಕಾಂ ಈ ನಿಟ್ಟಿನಲ್ಲಿ ಅವಶ್ಯ ಕ್ರಮಗಳನ್ನು ಕೈಗೊಂಡಿದೆ.
ಮೇಲ್ನೋಟಕ್ಕೆ ವಿದ್ಯುತ್ ಸರಬರಾಜಿನ ಹೊಣೆಯನ್ನು ಮೆಸ್ಕಾಂ ವಹಿಸಿಕೊಂಡಿದ್ದರೂ ನಗರದಲ್ಲಿ ಬೀದಿ ದೀಪಗಳ ನಿರ್ವಹಣೆ, ಅವುಗಳಿಗೆ ವಿದ್ಯುತ್ ಸರಬರಾಜಿಗೆ ಅಳವಡಿಸಿರುವ ತಂತಿ, ಎಲ್‌ಟಿಡಿ ಬಾಕ್ಸ್ ಸೇರಿದಂತೆ ಅವುಗಳ ಸುರಕ್ಷತೆ ನಿರ್ವಹಣೆಯನ್ನು ಪಾಲಿಕೆ ನೋಡಿಕೊಳ್ಳುತ್ತಿದೆ. ಪಾರ್ಕ್‌ಗಳಲ್ಲಿ ವಿದ್ಯುತ್ ಸರಬರಾಜಿನ ವ್ಯವಸ್ಥೆಯನ್ನು ತೋಟಗಾರಿಕೆ ಇಲಾಖೆ ನೋಡಿಕೊಳ್ಳುತ್ತಿದೆ. ಈ ರೀತಿ, ಮೂರ್‍ನಾಲ್ಕು ಇಲಾಖೆಗಳು ಒಟ್ಟಾಗಿ ಕ್ರಮಗಳನ್ನು ತೆಗೆದುಕೊಂಡರೆ ಮಾತ್ರ ಸಮಸ್ಯೆಗೆ ಪರಿಹಾರ ಸಿಗಲು ಸಾಧ್ಯ ಎನ್ನುವುದು ಮೆಸ್ಕಾಂನವರ ವಾದ.
ಪಾಲಿಕೆಯಿಂದ ತತ್‌ಕ್ಷಣ ಕ್ರಮ
ನಗರದಲ್ಲಿ ಪ್ರಮುಖವಾಗಿ ಬೀದಿದೀಪಗಳು ಪಾಲಿಕೆಯಿಂದ ನಿರ್ವಹಣೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೆಸ್ಕಾಂ ಮಂಗಳೂರು ವಲಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂಜಿನಿಯರ್ ಅವರು ಪಾಲಿಕೆ ಆಯುಕ್ತರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದು ಕೆಲವು ಕಡೆಗಳಲ್ಲಿ ಬೀದಿದೀಪಗಳ ಕಂಟ್ರೋಲ್ ಪಾಯಿಂಟ್‌ಗಳಲ್ಲಿ ಇರುವ ಲೋಪಗಳನ್ನು ಗಮನಕ್ಕೆ ತಂದಿದ್ದಾರೆ. ಇದಕ್ಕೆ ತತ್‌ಕ್ಷಣ ಸ್ಪಂದಿಸಿರುವ ಪಾಲಿಕೆ ಆಯುಕ್ತರು ಕೂಡಲೇ ಕಾರ್ಯೋನ್ಮುಖವಾಗಿ ಲೋಪಕಂಡು ಬಂದಿರುವ ಬೀದಿದೀಪ ಕಂಟ್ರೋಲ್ ಪಾಯಿಂಟ್‌ಗಳನ್ನು ಬದಲಾಯಿಸುವ ಹಾಗೂ ದುರಸ್ತಿ ಪಡಿಸುವ ಕಾರ್ಯ ಒಂದು ವಾರದೊಳಗೆ ಪೂರ್ತಿಗೊಳಿಸುವುದಾಗಿ ತಿಳಿಸಿದ್ದಾರೆ. ಆದರಂತೆ ಈ ಕಾರ್ಯ ಈಗಾಗಲೇ ಆರಂಭಗೊಂಡಿದೆ.
ಮೆಸ್ಕಾಂ ತುರ್ತು ಅಧಿಕಾರಿಗಳಿಗೆ ಸೂಚನೆ
ಮೆಸ್ಕಾಂ ಸಾರ್ವಜನಿಕ ಸ್ಥಳಗಳಲ್ಲಿ ವಿದ್ಯುತ್ ಸಂಪರ್ಕ ಹಾಗೂ ಸರಬರಾಜು ವ್ಯವಸ್ಥೆ ನಿರ್ವಹಣೆಯಲ್ಲಿರುವ ಲೋಪಗಳನ್ನು ಪತ್ತೆ ಹಚ್ಚಿ ಸರಿಪಡಿಸುವ ನಿಟ್ಟಿನಲ್ಲಿ ಮೆಸ್ಕಾಂ ವಲಯ ಮುಖ್ಯ ಎಂಜಿನಿಯರ್ ಅವರು ನಗರದ ಎಲ್ಲ ಮೆಸ್ಕಾಂ ಅಧಿಕಾರಿಗಳ ತುರ್ತು ಸಭೆಯನ್ನು ಗುರುವಾರ ನಡೆಸಿದ್ದಾರೆ. ತತ್‌ಕ್ಷಣದಿಂದಲೇ ಮಂಗಳೂರು ನಗರದಲ್ಲಿ ಅಪಾಯಕಾರಿಯಾಗಿರುವ ಲೈನ್‌ಗಳನ್ನು ಗುರುತಿಸಿ ದುರಸ್ತಿಗೊಳಿಸಲು ಕ್ರಮವಹಿಸುವಂತೆ ಸೂಚಿಸಿದ್ದಾರೆ.
5.5 ಅಡಿ ಎತ್ತರಕ್ಕೆ ಎಲ್‌ಟಿಡಿ ಬಾಕ್ಸ್
ಮೆಸ್ಕಾಂ ನಿಯಮದಂತೆ ಬೀದಿದೀಪಗಳ ಕಂಟ್ರೋಲ್ ಪಾಯಿಂಟ್ ಗಳು ನೆಲದಿಂದ 5.5 ಅಡಿ ಎತ್ತರದಲ್ಲಿರಬೇಕು ಎಂಬ ನಿಯಮವಿದೆ. ಇದರಂತೆ ಕಡಿಮೆ ಎತ್ತರದಲ್ಲಿರುವ ಎಲ್ಲ ಪಾಯಿಂಟ್‌ಗಳನ್ನು ನಿಗದಿತ ಎತ್ತರದಲ್ಲಿರುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯ ಎಂಜಿನಿಯರ್ ಮಂಜಪ್ಪ ಅವರು ತಿಳಿಸಿದ್ದಾರೆ.
15 ಲಕ್ಷ ರೂ.ಮಂಜೂರು
ಪಾಲಿಕೆಯು ನಗರದ ಪ್ರಮುಖ ಬೀದಿಗಳಲ್ಲಿರುವ ಡಿವೈಡರ್‌ಗಳಲ್ಲಿನ ಅಸಮರ್ಪಕ ಬೀದಿ ದೀಪದ ನಿರ್ವಹಣೆಗೆಂದು ಪಾಲಿಕೆಯ ಸಾಮಾನ್ಯ ನಿಧಿಯಿಂದ 15 ಲಕ್ಷ ರೂ. ಮಂಜೂರು ಮಾಡಿದೆ. ಒಟ್ಟು ಮೂರು ಹಂತದಲ್ಲಿ ನಿರ್ವಹಣೆ ನಡೆಯಲಿದೆ. ಮೊದಲನೇ ಹಂತದಲ್ಲಿ ನಗರದಲ್ಲಿ ಪ್ರಮುಖ ಬೀದಿಗಳಲ್ಲಿ ಮತ್ತು ಜಂಕ್ಷನ್ ಗಳ ಬೀದಿ ದೀಪ ಜಂಕ್ಷನ್ ಪೆಟ್ಟಿಗೆಗಳನ್ನು ಬದಲಾಯಿಸಲಾಗುವುದು.
– ದೇವರಾಜ್,
ಪಾಲಿಕೆ ಸಹಾಯಕ ಕಾರ್ಯನಿರ್ವಾಹಕ
ಅಭಿಯಂತರ
ವಾರದೊಳಗೆ ದುರಸ್ತಿ
ಮಂಗಳೂರು ನಗರದಲ್ಲಿ ಬೀದಿದೀಪಗಳ ವಿದ್ಯುತ್ ಸಂಪರ್ಕ ವ್ಯವಸ್ಥೆಯಲ್ಲಿ ಅಳವಡಿಸಿರುವ ಕಂಟ್ರೋಲ್ ಪಾಯಿಂಟ್‌ಗಳಲ್ಲಿ ಕೆಲವು ಕಡೆ ಕಂಡುಬಂದಿರುವ ಅವ್ಯವಸ್ಥೆಗಳನ್ನು ಪಾಲಿಕೆ ಆಯುಕ್ತರ ಗಮನಕ್ಕೆ ತರಲಾಗಿದೆ. ಇದಕ್ಕೆ ಸ್ಪಂದಿರುವ ಆಯುಕ್ತರು ಒಂದು ವಾರದೊಳಗೆ ಇವುಗಳನ್ನು ಸರಿಪಡಿಸುವುದಾಗಿ ತಿಳಿಸಿದ್ದಾರೆ. ಅಪಾಯಕಾರಿ ಸ್ಥಿತಿಯಲ್ಲಿರುವ ವಿದ್ಯುತ್ ತಂತಿಗಳನ್ನು ಗುರುತಿಸಿ ತತ್‌ಕ್ಷಣ ಸರಿಪಡಿಸುವಂತೆ ಸೂಚನೆ ನೀಡಲಾಗಿದೆ. ನಗರಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು ವಿದ್ಯುತ್ ವ್ಯವಸ್ಥೆಯ ಸ್ಥಿತಿ ಹಾಗೂ ಅಪಾಯಕಾರಿ ಎಂದು ವರದಿಯಾಗಿರುವ ಸ್ಥಳಗಳು ಹಾಗೂ ಮೆಸ್ಕಾಂ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಯವರಿಗೂ ಶುಕ್ರವಾರ ವರದಿ ಸಲ್ಲಿಸಲಾಗಿದೆ.
- ಮಂಜಪ್ಪ, ಮುಖ್ಯ ಕಾರ್ಯನಿರ್ವಾಹಕ
ಎಂಜಿನಿಯರ್ ,
ಮೆಸ್ಕಾಂ ಮಂಗಳೂರು ವಲಯ
ಕೇಶವ ಕುಂದರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.