ಚತುಷ್ಪಥ ರಸ್ತೆ ಅಭಿವೃದಿಗೆ ಮರು ಜೀವ
Team Udayavani, Jun 11, 2018, 10:06 AM IST
ಮಹಾನಗರ: ನಗರದಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಏರ್‌ಪೋರ್ಟ್ ರಸ್ತೆಯಲ್ಲಿ ಮರವೂರು ಸೇತುವೆ ಭಾಗದಿಂದ ಹೊಸದಾಗಿ ನಿರ್ಮಿಸಲು ಉದ್ದೇಶಿಸಿರುವ ಸುಮಾರು 2 ಕಿ.ಮೀ. ಉದ್ದದ ಚತುಷ್ಪಥ ರಸ್ತೆ ನಿರ್ಮಾಣ ಯೋಜನೆಯು ಮರುಜೀವ ಪಡೆದುಕೊಂಡಿದೆ.
ಏಕೆಂದರೆ, ಈ ಯೋಜನೆ ಅನುಷ್ಠಾನದ ಹಳೆಯ ಡಿಪಿಆರ್ (ವಿಸ್ತೃತ ಯೋಜನ ವರದಿ) ರದ್ದುಗೊಂಡಿರುವ ಹಿನ್ನೆಲೆಯಲ್ಲಿ ಈಗ ಹೊಸ ಡಿಪಿಆರ್ ಸಿದ್ಧಪಡಿಸಿ ಸರಕಾರಕ್ಕೆ ಕಳುಹಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈ ಸಂಬಂಧ ಈಗಾಗಲೇ ಮರವೂರು ಸೇತುವೆ ಹಾಗೂ ರೈಲ್ವೇ ಸೇತುವೆ ಸರ್ವೆ ನಡೆದಿದ್ದು, ಅದರ ಬಳಿಕ ಡಿಪಿಆರ್ ಸಿದ್ಧಪಡಿಸಿ ಸರಕಾರದ ಒಪ್ಪಿಗೆ ಪಡೆದು ಕಾಮಗಾರಿ ಆರಂಭಗೊಳ್ಳುವ ಸಾಧ್ಯತೆ ಇದೆ.
ರಾಜ್ಯ ಸರಕಾರದಿಂದ ಈಗಾಗಲೇ ಈ ಯೋಜನೆಗಾಗಿ 58 ಕೋಟಿ ರೂ. ಗಳನ್ನು 2017- 18ರ ಬಜೆಟ್‌ನಲ್ಲಿ ನಿಗದಿಪಡಿಸಲಾಗಿತ್ತು. ಅದರಂತೆ ಲೋಕೋಪಯೋಗಿ ಇಲಾಖೆ ಮೊದಲ ಹಂತದಲ್ಲಿ ಡಿಪಿಆರ್ ಸಿದ್ಧಪಡಿಸಿ ಸರಕಾರದ ಒಪ್ಪಿಗೆಗೆ ಕಳುಹಿಸಿತ್ತು. ಆದರೆ ವೆಚ್ಚ ಅಧಿಕಗೊಂಡ ಅಂಶವನ್ನು ಪರಿಗಣಿಸಿದ ರಾಜ್ಯ ಸರಕಾರ ಅದನ್ನು ರದ್ದುಗೊಳಿಸಿ ಹೊಸ ಡಿಪಿಆರ್ ಕಳುಹಿಸುವಂತೆ ಸೂಚಿಸಿತ್ತು. ಅದರಂತೆ, ಪುನರ್ ಸರ್ವೆ ನಡೆಸಿ ಈಗ ಹೊಸ
ಡಿಪಿಆರ್ ಸಿದ್ಧಪಡಿಸುವ ಕಾರ್ಯ ಪ್ರಗತಿಯಲ್ಲಿದೆ. ಮಳೆ ಮುಗಿದ ಅನಂತರ ಮರವೂರು ಸೇತುವೆಯ ಪುನರ್ ಸರ್ವೆ ನಡೆಸಿ ಪೂರ್ಣ ಪ್ರಮಾಣದ ಡಿಪಿಆರ್ ಸಿದ್ಧಗೊಳಿಸಲು ನಿರ್ಧರಿಸಲಾಗಿದೆ.
ಮರವೂರಿನಲ್ಲಿ ಹೊಸ ಸೇತುವೆ
ಮಂಗಳೂರಿನಿಂದ ಬಜಪೆ ವಿಮಾನ ನಿಲ್ದಾಣಕ್ಕೆ ತೆರಳುವಾಗ ಕುಂಜತ್ತಬೈಲು ದಾಟಿ, ಮರವೂರು ಸೇತುವೆಗಿಂತ ಮೊದಲು ಮಂಗಳೂರು ಮಹಾನಗರ ಪಾಲಿಕೆಯ ದ್ವಾರ ಸಿಗುತ್ತದೆ. ಅಲ್ಲಿ ತನಕ ಪಾಲಿಕೆ ವತಿಯಿಂದ ನಿರ್ಮಿಸಿದ ಚತುಷ್ಪಥ ಕಾಂಕ್ರೀಟ್ ರಸ್ತೆಯಿದೆ. ಆದರೆ ದ್ವಾರದ ಅನಂತರದಿಂದ ಮರವೂರು ಸೇತುವೆ, ರೈಲ್ವೇ ಬ್ರಿಡ್ಜ್ ದಾಟಿ ಮಂಗಳೂರು ವಿಮಾನ ನಿಲ್ದಾಣ ಪ್ರವೇಶದ ವ್ಯಾಪ್ತಿಯಲ್ಲಿ ದ್ವಿಪಥ ರಸ್ತೆಯಿದೆ. ಈ ವ್ಯಾಪ್ತಿಯ ರಸ್ತೆಯನ್ನು ಚತುಷ್ಪಥ ಮಾಡುವುದು ಈಗಿನ ಯೋಜನೆ. ಈಗ ಇರುವ ರಸ್ತೆಯ ಮಧ್ಯದಿಂದ ಅಕ್ಕಪಕ್ಕದ ಎರಡೂ ಭಾಗಕ್ಕೆ ತಲಾ ಎರಡೆರಡು ಲೈನ್ ಮಾಡಿ ಚತುಷ್ಪಥ ಮಾಡಲು ನಿರ್ಧರಿಸಲಾಗಿದೆ.
ರೈಲ್ವೇ ಬ್ರಿಡ್ಜ್ ಜಾಗ ನೋಡಿ ಮರವೂರು ಸೇತುವೆ
ಮರವೂರು ಸೇತುವೆ ಹಾಗೂ ರೈಲ್ವೇ ಸೇತುವೆಯ ಎರಡು ಕಾಮಗಾರಿಗಳು ಈ ಭಾಗದಲ್ಲಿ ಬಹುಮುಖ್ಯವಾದದ್ದು. ಮರವೂರು ಸೇತುವೆಯ ಪಕ್ಕದಲ್ಲಿ ಇನ್ನೊಂದು ಸೇತುವೆ ಯಾವ ಕಡೆ ನಿರ್ಮಿಸುವುದು ಎಂಬ ಸರ್ವೇ ಈಗಾಗಲೇ ಲೋಕೋಪಯೋಗಿ ಇಲಾಖೆಯಿಂದ ನಡೆಯುತ್ತಿದೆ. ಆದರೆ ಸಮೀಪದಲ್ಲಿರುವ ರೈಲ್ವೇ ಸೇತುವೆಯ ಹತ್ತಿರ ಹೊಸ ಸೇತುವೆ ನಿರ್ಮಾಣ ಮಾಡುವ ಕಾರಣ ಅದು ಯಾವ ಭಾಗದಲ್ಲಿ ನಿರ್ಮಿಸಬೇಕು ಎಂಬುದನ್ನು ರೈಲ್ವೇ ಇಲಾಖೆ ನಿರ್ಧರಿಸಬೇಕಿದೆ. ಹೀಗಾಗಿ ರೈಲ್ವೇ ಇಲಾಖೆಯ ನಿರ್ಧಾರದ ಬಳಿಕ ಮರವೂರು ಹೊಸ ಸೇತುವೆಯ ದಿಕ್ಕು ಗೊತ್ತಾಗಲಿದೆ ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ರವಿ ಕುಮಾರ್ ತಿಳಿಸಿದರು.
ಆತ್ರಾಡಿ-ಏರ್‌ಪೋರ್ಟ್ ರಸ್ತೆ; ಮೂಲೆ ಸೇರಿದ ಪ್ರಸ್ತಾವನೆ
ರಾಜ್ಯ ಹೆದ್ದಾರಿ 67ನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಆತ್ರಾಡಿವರೆಗೆ ಚತುಷ್ಪಥವಾಗಿ ಪರಿವರ್ತಿಸುವ ಯೋಜನೆಗೆ ಇನ್ನೂ ಸಾಕಾರ ಭಾಗ್ಯ ಬಂದಿಲ್ಲ. ದಶಕದ ಹಿಂದೆಯೇ ಪ್ರಸ್ತಾವನೆ ರೂಪುಗೊಂಡು 2012ರ ಫೆಬ್ರವರಿಯಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಸಾಧ್ಯತಾ ವರದಿ (ಯೋಜನ ವರದಿ) ಕರ್ನಾಟಕ ಮೂಲ ಸೌಕರ್ಯ ಇಲಾಖೆಗೆ ಸಲ್ಲಿಕೆಯಾಗಿದೆ. ಆದರೆ ಅಲ್ಲಿಂದ ಮುಂದೆ ಯೋಜನೆಗೆ ಸಂಬಂಧಪಟ್ಟಂತೆ ಯಾವುದೇ ಪ್ರಗತಿ ಕಂಡುಬಂದಿಲ್ಲ. ಆತ್ರಾಡಿಯಿಂದ ಬಜಪೆ ವಿಮಾನ ನಿಲ್ದಾಣದವರೆಗೆ 55.95 ಕಿ.ಮೀ. ರಸ್ತೆಯನ್ನು ಚತುಷ್ಪಥವಾಗಿ ಉನ್ನತೀಕರಿಸುವ ಯೋಜನೆ ಇದಾಗಿದೆ. ಮರವೂರಿನಿಂದ ಸಂಕಲಕರಿಯದವರೆಗೆ ಹಾಗೂ ಸಂಕಲಕರಿಯದಿಂದ ಆತ್ರಾಡಿವರೆಗೆ ಒಟ್ಟು 2ಹಂತಗಳಲ್ಲಿ ಯೋಜನೆ ಕೈಗೆತ್ತಿಕೊಳ್ಳುವ ಪ್ರಸ್ತಾವನೆ ರೂಪಿಸಲಾಗಿತ್ತು. ಈ ಯೋಜನೆಗೆ ತಗಲುವ ವೆಚ್ಚ 580 ಕೋ.ರೂ. ಎಂದು 2012ರಲ್ಲಿ ಅಂದಾಜಿಸಲಾಗಿತ್ತು. ಆದರೆ, ಈ ಯೋಜನೆ ಮತ್ತೆ ಜೀವ ಪಡೆಯಲೇ ಇಲ್ಲ
ಏರ್‌ಪೋರ್ಟ್ ರಸ್ತೆಗೆ ಫ್ಲೈಓವರ್ ಕನೆಕ್ಟ್
ಬಜಪೆಗೆ ತೆರಳುವ ಚತುಷ್ಪಥ ರಸ್ತೆಯನ್ನು, ಮಂಗಳೂರು ವಿಮಾನ ನಿಲ್ದಾಣದ ಬಲಭಾಗದ ಪ್ರವೇಶ ರಸ್ತೆಗೆ ಸಂಪರ್ಕ
ಕಲ್ಪಿಸಲು ಫ್ಲೈಓವರ್ ನಿರ್ಮಿಸುವ ಬಗ್ಗೆ ಪ್ರಸ್ತಾವನೆ ಇದೆ. ಈ ಮೂಲಕ ಮಂಗಳೂರಿನಿಂದ ವಿಮಾನ ನಿಲ್ದಾಣಕ್ಕೆ ಆಗಮಿಸುವ ವಾಹನಗಳು ಫ್ಲೈಓವರ್ ಮೂಲಕವೇ ಯಾವುದೇ ಅಡೆತಡೆ ಇಲ್ಲದೆ ನೇರವಾಗಿ ವಿಮಾನ ನಿಲ್ದಾಣಕ್ಕೆ ತೆರಳಲು ಸಾಧ್ಯವಾಗುತ್ತದೆ. ಇದರ ಅಂಡರ್‌ಪಾಸ್‌ನಲ್ಲಿ ಎಂದಿನಂತೆ ವಾಹನಗಳು ನೇರವಾಗಿ ಬಜಪೆಗೆ ತೆರಳಲು ಅವಕಾಶವಿದೆ. ಬಜಪೆ ಭಾಗದಿಂದ ವಿಮಾನ ನಿಲ್ದಾಣಕ್ಕೆ ಆಗಮಿಸುವ ವಾಹನಗಳು ಅಂಡರ್‌ಪಾಸ್ ಮೂಲಕವೇ ಎಡಭಾಗಕ್ಕೆ ತಿರುಗಿ ಮುಂದೆ ಸಾಗಲು ಅವಕಾಶವಿರುತ್ತದೆ. ಪ್ಲೈಓವರ್ ನಿರ್ಮಾಣದ ಸಂಬಂಧ ಡಿಪಿಆರ್‌ನಲ್ಲಿ ಸೇರ್ಪಡೆಗೊಳಿಸಲು ಚಿಂತಿಸಲಾಗಿದೆ.
ಹೊಸ ಡಿಪಿಆರ್‌ಗೆ ಸಿದ್ಧತೆ
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ನೆಲೆಯಲ್ಲಿ ಸುಮಾರು 2 ಕಿ.ಮೀ. ವ್ಯಾಪ್ತಿಯಲ್ಲಿ ಬಾಕಿಯಿರುವ ರಸ್ತೆಯನ್ನು ಚತುಷ್ಪಥ ಮಾಡುವ ಯೋಜನೆ ಇದೀಗ ಅಂತಿಮ ಹಂತದಲ್ಲಿದೆ. ಹೊಸ ಡಿಪಿಆರ್ ಸಿದ್ಧಪಡಿಸಿ ಆ ಮೂಲಕ ಯೋಜನೆ ಕೈಗೆತ್ತಿಕೊಳ್ಳುವ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು. ಮರವೂರು ಸೇತುವೆ ಹಾಗೂ ರೈಲ್ವೇ ಬ್ರಿಡ್ಜ್ ಕಾಮಗಾರಿ ಇದರಲ್ಲಿ ಬಹುಮುಖ್ಯವಾಗಿ ನಡೆಯಬೇಕಿದೆ.
- ಗಣೇಶ್ ಅರಳೀಕಟ್ಟೆ, ಕಾರ್ಯಪಾಲಕ ಅಭಿಯಂತರರು,
ಲೋಕೋಪಯೋಗಿ ಇಲಾಖೆ
ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಅಕಾಡೆಮಿ ಯಕ್ಷಗಾನ ಕಲಾವಿದರಿಗೆ ಶಕ್ತಿ ತುಂಬುವ ಕೆಲಸ ಮಾಡಲಿ: ಡಾ.ಶಿವರಾಮ ಶೆಟ್ಟಿ
Kaup: ಉದ್ಯಾವರ: ಮಹಿಳೆ ಮಲಗಿದ ಸ್ಥಿತಿಯಲ್ಲೇ ಸಾವು
Udupi: ಗೀತಾರ್ಥ ಚಿಂತನೆ-99: ತಿಳಿದುಕೊಂಡವರ ಹಾಗಿದ್ದ ಅರ್ಜುನ
Puttur: ಕಾಸರಗೋಡು ಮೂಲದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ; ಪೋಕ್ಸೊ ಕೇಸು
Bengaluru: ಇವಿ ಬೈಕ್ ಶೋ ರೂಮ್‌ನಲ್ಲಿ ಬೆಂಕಿ: ಯುವತಿ ದಾರುಣ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.