ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ
Team Udayavani, May 3, 2018, 10:49 AM IST
ಮಹಾನಗರ: ಪ್ರಯಾಣಿಕರೋರ್ವರು ರಿಕ್ಷಾದಲ್ಲಿ ಮರೆತು ಹೋಗಿದ್ದ ಬೆಲೆಬಾಳುವ ಮೊಬೈಲನ್ನು ರಿಕ್ಷಾ ಚಾಲಕ ಪೊಲೀಸರಿಗೊಪ್ಪಿಸಿ ಪ್ರಾಮಾಣಿಕತೆ ಮೆರೆದ ಘಟನೆ ಸೋಮವಾರ ನಡೆದಿದೆ. ಕಳೆದ ನಾಲ್ಕು ದಶಕಗಳಿಂದ ಆಟೋ ಚಾಲಕರಾಗಿರುವ ಆ್ಯಂಡ್ರ್ಯೂ ಸಿಪ್ರಿಯನ್ ಡಿ’ಸೋಜಾ ಅವರ ವಾಹನದಲ್ಲಿ, ರಿಕ್ಷಾ ಇಳಿದ ಪ್ರಯಾಣಿಕರೋರ್ವರು ಸುಮಾರು 15 ಸಾವಿರ ರೂ. ಬೆಲೆಬಾಳುವ ಮೊಬೈಲ್ ಫೋನ್ ಮರೆತು ಹೋಗಿದ್ದರು.
ಇದನ್ನು ಗಮನಿಸಿದ ಆ್ಯಂಡ್ರ್ಯೂ ಅವರು ಮೊಬೈಲನ್ನು ತಂದು ಪೊಲೀಸ್ ಠಾಣೆಗೆ ನೀಡಿದರು. ಬಳಿಕ ಠಾಣೆಯ ಇನ್ಸ್‌ಪೆಕ್ಟರ್ ಯೋಗೀಶ್ ಕುಮಾರ್ ಬಿ.ಸಿ. ಅವರು ವಾರೀಸುದಾರರನ್ನು ಕರೆಸಿ ಚಾಲಕ ಆ್ಯಂಡ್ರ್ಯೂ ಮೂಲಕವೇ ಮೊಬೈಲನ್ನು ಹಸ್ತಾಂತರಿಸಿ ಆಟೋ ಚಾಲಕನ ಪ್ರಾಮಾಣಿಕತೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.