ಏರುತ್ತಿದೆ ಜ್ವರ ಪೀಡಿತರ ಸಂಖ್ಯೆ; ಕಾಡುತ್ತಿದೆ ಸೌಕರ್ಯದ ಕೊರತೆ
Team Udayavani, Jun 8, 2017, 3:12 PM IST
ಪುತ್ತೂರು: ಸಾಂಕ್ರಾಮಿಕ ರೋಗಗಳ ಹಾವಳಿಗೆ ತತ್ತರಿಸುವ ತಾಲೂಕುಗಳ ಪಟ್ಟಿಗೆ ಪುತ್ತೂರು ಕೂಡ ಸೇರಿದೆ. ಇಲ್ಲಿನ ಶತಮಾನದ ಇತಿಹಾಸ ಹೊಂದಿರುವ ಸರಕಾರಿ ಸಾರ್ವಜನಿಕ ಆಸ್ಪತ್ರೆಯ 112 ಮಂಜೂರಾತಿ ಹುದ್ದೆಗಳ ಪೈಕಿ, 63 ಹುದ್ದೆಗಳು ಇನ್ನೂ ಭರ್ತಿ ಆಗಿಲ್ಲ. ದಿನೇ-ದಿನೇ ಜ್ವರ ಬಾಧಿತರ ಸಂಖ್ಯೆ ವೃದ್ಧಿ ಆಗುತ್ತಿದ್ದು, ಆಸ್ಪತ್ರೆಗಳ ಮೂಲ ಸೌಕರ್ಯಗಳ ಕೊರತೆಯೂ ಜನರನ್ನು ಬಾಧಿಸುತ್ತಿದೆ.
ಚಿಕಿತ್ಸೆಯ ವಿವರ
ಒಟ್ಟು 100 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಯಲ್ಲಿ 97 ಹಾಸಿಗೆ ಒಳರೋಗಿಗಳಿಗೆ ಹಾಗೂ 3 ಹಾಸಿಗೆಗಳನ್ನು ವಿಶೇಷ ವಾರ್ಡ್‌ಗಳಿಗೆ ಮೀಸಲಿಡಲಾಗಿದೆ. ಸರಾಸರಿ ಅಂಕಿ-ಅಂಶದಂತೆ ಆಸ್ಪತ್ರೆಗೆ 500 ಮಂದಿ ಹೊರ ರೋಗಿಗಳು ಭೇಟಿ ನೀಡುತ್ತಾರೆ. ಸಾಂಕ್ರಾಮಿಕ ರೋಗದ ಸಂದರ್ಭ ಆ ಸಂಖ್ಯೆ 700ರಿಂದ 1,000 ತನಕವೂ ಏರುತ್ತದೆ. ಸರಾಸರಿ 80ಕ್ಕೂ ಅಧಿಕ ಮಂದಿ ಒಳರೋಗಿಗಳಾಗಿ ಚಿಕಿತ್ಸೆಗೆ ದಾಖಲಾಗುತ್ತಿದ್ದಾರೆ.
ಡೆಂಗ್ಯೂ, ಮಲೇರಿಯಾ ಪ್ರಕರಣ
2016 ನೇ ಸಾಲಿನಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾದ ಪ್ರಕರಣಗಳು ಇಂತಿವೆ. ಮಲೇರಿಯಾ-68, ಡೆಂಗ್ಯೂ-116. 2017 ರಲ್ಲಿ ಜನವರಿಯಿಂದ ಎಪ್ರಿಲ್ 30 ತನಕ ಮಲೇರಿಯಾ-30, ಡೆಂಗ್ಯೂ-2 ಪ್ರಕರಣ ವರದಿಯಾಗಿವೆ. ಆದರೆ ಡೆಂಗ್ಯೂ ಜ್ವರ ಸಂಬಂಧಿಸಿ ನೂರಾರು ಅನುಮಾನಾಸ್ಪದವಾದ ಪ್ರಕರಣಗಳು ಕಂಡುಬಂದಿದ್ದು, ಜಿಲ್ಲಾ ಕೇಂದ್ರದಲ್ಲಿ ರಕ್ತ ತಪಾಸಣೆ ವರದಿ ಬಂದ ಅನಂತರ ರೋಗದ ಬಗ್ಗೆ ಖಾತರಿಯಾಗಲಿದೆ.
ವೈದ್ಯರ ಕೊರತೆ..!
ಆಸ್ಪತ್ರೆಯಲ್ಲಿ ಹೆರಿಗೆ ಮತ್ತು ಸ್ತ್ರೀ ರೋಗ, ವೈದ್ಯಕೀಯ ವಿಭಾಗ, ಕಣ್ಣಿನ ಪರೀಕ್ಷೆ, ಎಲುಬು ಮತ್ತು ಕೀಲು ಪರೀಕ್ಷೆ, ಕಿವಿ, ಮೂಗು, ಗಂಟಲು ಪರೀಕ್ಷೆ, ದಂತ ಆರೋಗ್ಯಾಧಿಕಾರಿ ವಿಭಾಗ, ಆಯುಷ್ ವೈದ್ಯಾಧಿಕಾರಿ ಸೇವೆ, ಜನರಲ್ ಸರ್ಜರಿ ವಿಭಾಗ, ಪಿಸಿಯೋಥೆರಪಿ ವಿಭಾಗ, ಶಸ್ತ್ರ ಚಿಕಿತ್ಸೆ/ಅರಿವಳಿಕೆ ಸೇವಾ ವಿಭಾಗಗಳಿವೆ. ಮಂಜೂರಾತಿಗೊಂಡಿರುವ 15 ಹುದ್ದೆಗಳಲ್ಲಿ 6 ವೈದ್ಯ ಹುದ್ದೆ ಖಾಲಿ ಇವೆ. ಪ್ರಮುಖವಾಗಿ ಸರ್ಜನ್, ಮುಖ್ಯ ಆರೋಗ್ಯಾಧಿಕಾರಿ, ಫಿಜಿಷಿಯನ್, ಇಎನ್‌ಟಿ, ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ ಸ್ಥಾನ ಇನ್ನೂ ಭರ್ತಿ ಆಗಿಲ್ಲ.
ಪ್ರಸೂತಿ ತಜ್ಞೆ ಹುದ್ದೆ ಖಾಲಿ
ಪ್ರತಿ ತಿಂಗಳು ಸರಾಸರಿ ಅಂಕಿ ಅಂಶದ ಪ್ರಕಾರ 75 ಸಾಮಾನ್ಯ ಹೆರಿಗೆಗಳು ಮತ್ತು 30 ಸಿಸೇರಿಯನ್ ಶಸ್ತ್ರ ಚಿಕಿತ್ಸೆ ಹೆರಿಗೆ ಆಗುತ್ತಿದ್ದರೂ, ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಹುದ್ದೆಗೆ ನೇಮಕವಾಗಿಲ್ಲ. ಆಸ್ಪತ್ರೆಗೆ ಮಂಜೂರಾತಿಗೊಂಡ 2 ಅಡುಗೆ ಸಹಾಯಕರ ಹುದ್ದೆ ಖಾಲಿ ಇವೆ. 34 ಗ್ರೂಪ್ ಡಿ ಸಿಬಂದಿ ಪೈಕಿ 31 ಹುದ್ದೆ ಭರ್ತಿ ಆಗಿಲ್ಲ. 25 ಶುಶ್ರೂಷಕಿ ಹುದ್ದೆಗಳ ಪೈಕಿ ಮೂರು ಹುದ್ದೆಗಳು ಖಾಲಿಯಿವೆ. ಡಯಾಲಿಸಿಸ್ ಘಟಕ ಇದ್ದು, ಇನ್ನೆರಡು ಘಟಕಕ್ಕೆ ಬೇಡಿಕೆ ಸಲ್ಲಿಸಲಾಗಿದೆ.
ಶತಮಾನದ ಇತಿಹಾಸ
1828ರಲ್ಲಿ ಮಂಡಲ ಉಸ್ತುವಾರಿಯಲ್ಲಿ ಸಂಚಾರಿ ಆಸ್ಪತ್ರೆಯಾಗಿ ಆರಂಭಗೊಂಡು, 1928ರಲ್ಲಿ 25 ಬೆಡ್‌ಗಳ ಸರಕಾರಿ ಆಸ್ಪತ್ರೆಯಾಗಿ ಕಾರ್ಯ ಆರಂಭಿಸಿತ್ತು. 1942ರಲ್ಲಿ 33 ಬೆಡ್‌ಗೆ ಏರಿಸಲಾಯಿತು. 1950 ರಲ್ಲಿ 20 ಹಾಸಿಗೆಯನ್ನು ಕಲ್ಪಿಸಿ, 53 ಬೆಡ್‌ಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಲಾಯಿತು. 2000 ನೇ ವರ್ಷದಲ್ಲಿ 100 ಬೆಡ್‌ಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿತ್ತು. ಪ್ರಸ್ತುತ ಸರಕಾರಿ ಮೆಡಿಕಲ್ ಕಾಲೇಜು ಮಂಜೂರಾತಿಗೆ ಪೂರಕವಾಗಿ 300 ಬೆಡ್‌ಗಳಿಗೆ ಏರಬೇಕೆಂಬ ಬೇಡಿಕೆ ಸರಕಾರಕ್ಕೆ ಸಲ್ಲಿಸಲಾಗಿದೆ.
ಶುಚಿತ್ವಕ್ಕೆ ಸವಾಲು..!
ಆಸ್ಪತ್ರೆಯಲ್ಲಿ ತ್ಯಾಜ್ಯ ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಪರಿಣಾಮ ಸೊಳ್ಳೆ ಉತ್ಪಾದನಾ ಕೇಂದ್ರವಾಗುವ ಭೀತಿಯಿದೆ. ಶವಾಗಾರದ ಹಿಂಬದಿಯಲ್ಲಿ ತ್ಯಾಜ್ಯದ ಹೊಂಡ ತುಂಬಿದ್ದು, ಅಪಾಯವನ್ನು ಆಹ್ವಾನಿಸಿದೆ. ಒಳಚರಂಡಿ ಸೌಲಭ್ಯ ಒದಗಿಸುವ ಬಗ್ಗೆ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ವೈದ್ಯಾಧಿಕಾರಿಗಳು ನಗರಸಭೆಯ ಪೌರಾಯುಕ್ತರಿಗೆ ಮನವಿ ಮಾಡಿದ್ದರು. ಜತೆಗೆ ಜನರೇಟರ್ ಸಮಸ್ಯೆ, ಆ್ಯಂಬುಲೆನ್ಸ್ ಸಂಖ್ಯೆ ಹೆಚ್ಚಳದ ಬೇಡಿಕೆಯೂ ಇದೆ.
ರೋಗ ನಿಯಂತ್ರಣಕ್ಕೆ ಕ್ರಮ
ತಾಲೂಕಿನಲ್ಲಿ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಪೂರಕವಾಗಿ ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಸಹಾಯಕಿಯರು ಮನೆಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸುತ್ತಿದ್ದಾರೆ. ಸೊಳ್ಳೆ ನಾಶಕ್ಕೆ ಫಾಗಿಂಗ್, ನೀರು ನಿಲ್ಲದಂತೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಪ್ರತಿ ಆರೋಗ್ಯ ಕೇಂದ್ರಕ್ಕೆ ತೆರಳಿ ಅಲ್ಲಿ ಸಭೆ ನಡೆಸಿ, ಸೂಚನೆ ನೀಡಲಾಗಿದೆ. ಮುಂಜಾಗ್ರತಾ ಕರ ಪತ್ರಗಳನ್ನು ಹಂಚಲಾಗುತ್ತಿದೆ.
– ಡಾ| ಅಶೋಕ್ ಕುಮಾರ್ ರೈ
ತಾಲೂಕು ಆರೋಗ್ಯಧಿಕಾರಿ, ಪುತ್ತೂರು
ಕ್ಯೂ ಸಿಸ್ಟಮ್ ಬೇಕು
ಆಸ್ಪತ್ರೆಗೆ ಭೇಟಿ ನೀಡಿ ಹೊರ ರೋಗಿಗಳು ವೈದ್ಯರನ್ನು ಭೇಟಿ ಮಾಡಲು ಟೋಕನ್ ವ್ಯವಸ್ಥೆಯನ್ನು ಸಮರ್ಪಕವಾಗಿ ಜಾರಿ ಮಾಡಬೇಕು. ಇಲ್ಲದಿದ್ದರೆ ಬೆಳಗ್ಗೆಯಿಂದ ಕಾದು ಕುಳಿತವರು ಅಲ್ಲೇ ಬಾಕಿ ಆಗುತ್ತಾರೆ. ಹೊಸದಾಗಿ ಆರಂಭಗೊಂಡಿರುವ ಜನೌಷಧ ಕೇಂದ್ರದಲ್ಲಿ ಆವಶ್ಯಕ ಔಷಧ ಸಿಗುತ್ತಿಲ್ಲ.
- ಉಮೇಶ್ ಡಿ.
ಆಸ್ಪತ್ರೆಗೆ ಭೇಟಿ ನೀಡಿದವರು
ಮತ್ತೆ ಮಳೆಗಾಲ ಆರಂಭವಾಗಿದೆ. ಗ್ರಾಮೀಣ ಪ್ರದೇಶದ ಆರೋಗ್ಯ ಕೇಂದ್ರಗಳಿರುವುದು ಸಾರ್ವಜನಿಕರ ತುರ್ತು ಯೋಗಕ್ಷೇಮವನ್ನು ನೋಡಿಕೊಳ್ಳಲಿಕ್ಕೆ. ಅವುಗಳೇ ಹಲವು ಬಾರಿ ತುರ್ತು ಸ್ಥಿತಿಯಲ್ಲಿರುತ್ತವೆ. ಪುತ್ತೂರು ಭಾಗದಲ್ಲಿ ಡೆಂಗ್ಯೂನಂಥ ಸಮಸ್ಯೆ ಇದೆ. ಈ ಹಿನ್ನೆಲೆಯಲ್ಲೇ ನಮ್ಮೂರಿನ ಆರೋಗ್ಯ ಕೇಂದ್ರಗಳು ಮಳೆಗಾಲವನ್ನು ಎದುರಿಸಲು ಹೇಗೆ ಸಜ್ಜಾಗಿವೆ ಎಂಬುದನ್ನು ತಿಳಿಯಲೆಂದೇ ಈ ಸರಣಿ ಲೇಖನ.
ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.