‘ನದಿ ಉತ್ಸವ’ದ ಲಾಂಛನ ಬಿಡುಗಡೆ
Team Udayavani, Jan 2, 2019, 5:06 AM IST
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನದಿ ಮತ್ತು ನದಿ ಕಿನಾರೆಗಳನ್ನು ಅಭಿವೃದ್ಧಿಪಡಿಸಲು ಹಾಗೂ ಪ್ರವಾಸೋದ್ಯಮ ತಾಣವಾಗಿ ಆಕರ್ಷಿಸಲು ರಿವರ್ ಫೆಸ್ಟಿವಲ್ ನಡೆಸಲು ನಿರ್ಧರಿಸಲಾಗಿದೆ ಎಂದು ಸಚಿವ ಯು.ಟಿ. ಖಾದರ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ನದಿ ಉತ್ಸವದ ಲೋಗೋ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಜ.12 ಮತ್ತು 13 ರಂದು ಉತ್ಸವವು ಮೂರು ಕಿನಾರೆಗಳಲ್ಲಿ ನಡೆಯಲಿದೆ. ನದಿ ತೀರಗಳನ್ನು, ದ್ವೀಪಗಳನ್ನು ಹೊಂದಿರುವ ತಾಲೂಕು ಮಟ್ಟದಲ್ಲೂ ಉತ್ಸವಗಳನ್ನು ನಡೆಸಲು ಜಿಲ್ಲಾ ಮಟ್ಟದ ಕಾರ್ಯಕ್ರಮ ಮಾದರಿಯಾಗಿರಲಿ ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್ ಮಾತನಾಡಿ, ಬಂಗ್ರಕೂಳೂರಿನಲ್ಲಿರುವ 20 ಎಕರೆ ಸರಕಾರಿ ಭೂಮಿಯನ್ನು ನದಿ ಉತ್ಸವಕ್ಕಾಗಿ ಗುರುತಿಸಲಾಗಿದೆ. ಅಲ್ಲಿಗೆ ಸುಲ್ತಾನ್ ಬತ್ತೇರಿ, ತಣ್ಣೀರು ಬಾವಿ ಮತ್ತು ಕೂಳೂರಿನಿಂದ ಜೆಟ್ಟಿ ಮತ್ತು ದೋಣಿಗಳ ಮೂಲಕ ಸಂಪರ್ಕ ಕಲ್ಪಿಸಲಾಗುವುದು. ಜೆಟ್ಟಿಗಳಿಗಾಗಿ ಪ್ರವಾಸೋದ್ಯಮ ಇಲಾಖೆಗೆ ಬೇಡಿಕೆ ಸಲ್ಲಿಸಲಾಗಿದೆ ಎಂದರು.
ಉತ್ಸವದ ಸ್ಥಳಕ್ಕೆ ಒಂದು ಕಡೆಯಿಂದ ರಸ್ತೆ ಸಂಪರ್ಕ ಇದೆಯಾದರೂ ವಾಹನ ಪ್ರವೇಶ ನಿಷೇಧಿಸಲಾಗುವುದು. ಒಂದು ಬಸ್ಸನ್ನು ಜಿಲ್ಲಾಡಳಿತದ ವತಿಯಿಂದ ಓಡಾಟಕ್ಕೆ ನಿಯೋಜಿಸಲಾಗುವುದು. ಜತೆಗೆ ಪಿಲಿಕುಳದ ಬ್ಯಾಟರಿ ಚಾಲಿತ ವಾಹನಗಳನ್ನು ಬಳಸಿಕೊಳ್ಳಲಾಗುತ್ತದೆ. ನಡೆದು ಅಥವಾ ಸೈಕಲ್ ಮೂಲಕವೂ ಉತ್ಸವ ಸ್ಥಳಕ್ಕೆ ತಲುಪಬಹುದು ಎಂದರು.
ಉತ್ಸವದಲ್ಲಿ ಜಲ ಸಾಹಸ ಕ್ರೀಡೆಗಳು, ವಿವಿಧ ಮಳಿಗೆಗಳಿರುತ್ತವೆ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಜತೆಗೆ ನದಿ ಗಳ ಕುರಿತಾಗಿ ಚಿತ್ರೋತ್ಸವ ಇರುತ್ತದೆ. ಸರಕಾರ 25 ಲಕ್ಷ ರೂ.ವನ್ನು ‘ನದಿ ಉತ್ಸವ’ಕ್ಕೆ ಒದಗಿಸಿದೆ. ಪ್ರಾಯೋಜಕರ ಬೆಂಬಲವನ್ನು ಕೂಡ ಪಡೆಯಲಾಗುತ್ತಿದೆ ಎಂದರು.
ಜಿ.ಪಂ. ಸಿಇಒ ಡಾ| ಆರ್. ಸೆಲ್ವಮಣಿ, ಅಪರ ಜಿಲ್ಲಾಧಿಕಾರಿ ಕುಮಾರ್, ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ಮಂಗಳೂರು ಮನಪಾ ಆಯುಕ್ತ ಮೊಹಮ್ಮದ್ ನಝೀರ್, ಪೊಲೀಸ್ ಉಪ ಆಯುಕ್ತೆ ಉಮಾ ಪ್ರಶಾಂತ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.